ಕೈ, ಜೆಡಿಎಸ್ ಎಡವಟ್ಟಿಂದ ಬಿಜೆಪಿಗೆ ಭರ್ಜರಿ ಬೋನಸ್
ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಮಾಡಿಕೊಂಡ ಎಡವಟ್ಟಿನಿಂದಾಗಿ ಬಿಜೆಪಿ ಬಂಪರ್ ಪಡೆಯುವಂತಾಯ್ತು. ಪಕ್ಷದಲ್ಲೇ ಇರುವ ಸಮಸ್ಯೆಗಳೇ ಮುಳುವಾದವು
ಎಚ್.ಕೆ.ಅಶ್ವಥ್, ಸಿಂಗನಹಳ್ಳಿ ಸುರೇಶ್
ಕೆ.ಆರ್.ಪೇಟೆ [ಡಿ.19]: ಕೆ.ಆರ್. ಪೇಟೆ ವಿಧಾನಸಭೆ ಉಪಚುನಾವಣೆ ಫಲಿತಾಂಶ ಬಂದ ಮೇಲೆ ಕ್ಷೇತ್ರದಲ್ಲಿ ಬಿಜೆಪಿ ವಲಯದಲ್ಲಿ ಉತ್ಸಾಹದ ಅಲೆ ಹೆಚ್ಚಾಗಿದೆ. ಗೆದ್ದೇ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸದಲ್ಲಿದ್ದ ಜೆಡಿಎಸ್ ಸೋಲಿನ ಆಘಾತದಿಂದ ಇನ್ನೂ ಹೊರಬಂದಿಲ್ಲ. ಇನ್ನೂ 3ನೇ ಸ್ಥಾನಕ್ಕೆ ತಳಲ್ಪಟ್ಟ ಕಾಂಗ್ರೆಸ್‌ನಲ್ಲಿ ಸೂತಕದ ವಾತಾವರಣ ಕಾಣಿಸಿಕೊಂಡಿದೆ.
ಉಪಚುನಾವಣೆ ಫಲಿತಾಂಶಕ್ಕಾಗಿ ಡಿ.9ರಂದು ಮತ ಎಣಿಕೆ ನಡೆಯಿತು. ಅಂತಿಮವಾಗಿ ಬಿಜೆಪಿಯ ಕೆ.ಸಿ.ನಾರಾಯಣಗೌಡ 66,087 ಮತ, ಜೆಡಿಎಸ್‌ನ ಬಿ.ಎಲ್.ದೇವರಾಜು 56,359 ಹಾಗೂ ಕಾಂಗ್ರೆಸ್‌ನ ಕೆ.ಬಿ.ಚಂದ್ರಶೇಖರ್ 41,663 ಮತಗಳನ್ನು ಪಡೆದಿದ್ದರು. ಕೆ.ಸಿ.ನಾರಾಯಣಗೌಡರು ಬಿ.ಎಲ್ .ದೇವರಾಜು ವಿರುದ್ಧ 9728 ಮತಗಳಿಂದ ಗೆಲುವು ಸಾಧಿಸಿದ್ದರು.
ಕುರುಬ, ದಲಿತ, ಒಕ್ಕಲಿಗರ ಮತಗಳು ವಿಭಜನೆ:
ಕ್ಷೇತ್ರದಲ್ಲಿ ನಾಯಕ, ಈಡಿಗ, ಮಡಿವಾಳ, ಗಾಣಿಗ, ಕುಂಬಾರ, ಕುರುಹಿನಶೆಟ್ಟಿ, ದೇವಾಂಗ ಮುಂತಾದ ತಳ ಸಮುದಾಯದ ಮತಗಳನ್ನು ಕ್ರೋಡೀಕರಿಸಿದ್ದು ಮಾತ್ರವಲ್ಲದೇ ಕುರುಬ, ದಲಿತ ಮತ್ತು ಒಕ್ಕಲಿಗರ ಮತಗಳನ್ನು ಯಶಸ್ವಿಯಾಗಿ ವಿಭಜಿಸಿದರ ಪರಿಣಾಮ ಶಾಸಕ ಕೆ.ಸಿ.ನಾರಾಯಣಗೌಡ ಗೆಲುವು ಸಾಧಿಸಲು ಸಾಧ್ಯವಾಗಿದೆ ಎಂದು ಹೇಳಲಾಗುತ್ತಿದೆ. ಜೆಡಿಎಸ್ ಭದ್ರಕೋಟೆಯಾಗಿದ್ದ ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಪಕ್ಷದ ಸ್ಥಳೀಯ ನಾಯಕರು ನೀಡಿದ ಒಳೇಟು ಪಕ್ಷದ ಅಭ್ಯರ್ಥಿ ಬಿ.ಎಲ್ ದೇವರಾಜು ಸೋಲಿಗೆ ಪ್ರಮುಖ ಕಾರಣ ಎನ್ನುವ ಅಂಶವನ್ನು ಇದೀಗ ಜೆಡಿಎಸ್ ಕಾರ್ಯಕರ್ತರು ಬಿಚ್ಚಿಡುತ್ತಿದ್ದಾರೆ. ಇತ್ತೀಚೆಗೆ ಪಕ್ಷದ ಆತ್ಮಾವಲೋಕನ ಸಭೆಯಲ್ಲಿ ಪಕ್ಷದ ಕಾರ್ಯಕರ್ತರು ಮುಖಂಡರ ಒಳೇಟಿನ ಬಗ್ಗೆ ಕಾರ್ಯಕರ್ತರು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು.
ಕ್ಷೇತ್ರದಲ್ಲಿ ಒಕ್ಕಲಿಗರು ಪ್ರಾಬಲ್ಯ ಹೊಂದಿದ್ದಾರೆ. 90 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಒಕ್ಕಲಿಗ ಮತದಾರರಿದ್ದಾರೆ. ಯಾವುದೇ ದೃಷ್ಟಿಕೋನದಿಂದ ಲೆಕ್ಕ ಹಾಕಿದರೂ ಇಲ್ಲಿ ಜೆಡಿಎಸ್ ಗೆಲುವು ನಿರಾಯಾಸ. ಆದರೆ ಒಕ್ಕಲಿಗರ ಭದ್ರಕೋಟೆಯನ್ನು ಛಿದ್ರಗೊಳಿಸಿದ ಬಿಜೆಪಿ ಮುಖಂಡರು ಇಲ್ಲಿ ಕಮಲ ಅರಳಿಸಿರುವುದು ಮೂಲ ಜೆಡಿಎಸ್ ಕಾರ್ಯಕರ್ತರಲ್ಲಿ ಭ್ರಮಾನಿರಸನ ಉಂಟುಮಾಡಿದೆ.
ಲೀಡ್ ಕೊಡಿಸಲು ವಿಫಲರಾದ ಸ್ಥಳೀಯ ಜನಪ್ರತಿನಿಧಿಗಳು:
ಕ್ಷೇತ್ರದಲ್ಲಿ ಜೆಡಿಎಸ್‌ನ ನಾಲ್ವರು ಜಿಲ್ಲಾ ಪಂಚಾಯಿತಿ, 16 ತಾಲೂಕು ಪಂಚಾಯತಿ ಸದಸ್ಯರನ್ನು ಹೊಂದಿದೆ. ಜೆಡಿಎಸ್ ಪಕ್ಷದ ಜಿಪಂ ಸದಸ್ಯರಾದ ಗಾಯಿತ್ರಿ ರೇವಣ್ಣ, ಜೆ.ಪ್ರೇಮಕುಮಾರಿ, ರಾಮದಾಸ್ ತಮ್ಮ ತಮ್ಮ ಸ್ವ ಗ್ರಾಮಗಳಲ್ಲಿಯೇ ಜೆಡಿಎಸ್ ಪಕ್ಷಕ್ಕೆ ಲೀಡ್ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ಟಿಕೆಟ್ ಆಕಾಂಕ್ಷಿಯಾಗಿದ್ದ ಮತ್ತೊಬ್ಬ ಜಿಪಂ ಸದಸ್ಯ ಎಚ್.ಟಿ.ಮಂಜು ಪ್ರತಿನಿಧಿಸುವ ಶೀಳನೆರೆ ಹೋಬಳಿ ತಾಲೂಕಿನಲ್ಲಿಯೇ ಅತ್ಯಧಿಕ ಒಕ್ಕಲಿಗ ಮತದಾರರನ್ನು ಹೊಂದಿದ್ದ ಈ ಹೋಬಳಿ, ಇಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹಿಡಿತವಿದೆ. ಆದರೆ, ಈ ಹೋಬಳಿಯಲ್ಲೂ ಬಿಜೆಪಿ ಲೀಡ್ ಪಡೆದು ದಾಖಲೆ ಬರೆದಿದೆ.
ಇನ್ನೂ ತಾಲೂಕು ಪಂಚಾಯತಿ ಸದಸ್ಯರ ಕ್ಷೇತ್ರ ಹಾಗೂ ಜೆಡಿಎಸ್ ಪಕ್ಷದ ಪದಾಧಿಕಾರಿಗಳ ಗ್ರಾಮಗಳಲ್ಲಿಯೂ ಪಕ್ಷದ ಅಭ್ಯರ್ಥಿಗೆ ಲೀಡ್ ಕೊಡಿಸಿಕೊಡುವಲ್ಲಿ ವಿಫಲರಾಗಿದ್ದಾರೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಅತ್ಯಧಿಕ ಮತಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸಕ್ತ ಉಪಚುನಾವಣೆಯನ್ನು ಬಿಜೆಪಿ ವರಿಷ್ಠರು ಸವಾಲಾಗಿ ತೆಗೆದುಕೊಂಡರು. ತಳ ಸಮುದಾಯವನ್ನು ಪ್ರತಿನಿಧಿಸುವ ರಾಜ್ಯ ಮಟ್ಟದ ವಿವಿಧ ಜಾತಿಗಳ ಮುಖಂಡರು ಕ್ಷೇತ್ರದಲ್ಲಿ ನೆಲೆನಿಂತು ತಮ್ಮ ತಮ್ಮ ಸಮುದಾಯಗಳ ಸಮಾವೇಶ ನಡೆಸಿ ತಳ ಸಮುದಾಯಗಳ ಮತಗಳನ್ನು ಬಿಜೆಪಿಯತ್ತ ಸೆಳೆಯುವಲ್ಲಿ ಯಶಸ್ವಿಯಾದರು.
ನಾಯಕರು ರೋಡ್ ಶೋ, ಬಹಿರಂಗ ಸಭೆಗಳಿಗೆ ಸೀಮಿತ:
ಆದರೆ, ಜೆಡಿಎಸ್ ನಾಯಕರು ಕ್ಷೇತ್ರದ ಉಸ್ತುವಾರಿ ವಹಿಸಿದ್ದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ದೇವೇಗೌಡರ ಕುಟುಂಬಕ್ಕೆ ಸೇರಿದ ಮಾಜಿ ಸಚಿವ ಎಚ್.ಡಿ.ರೇವಣ್ಣ, ನಿಖಿಲ… ಕುಮಾರಸ್ವಾಮಿ, ಜಿಲ್ಲೆಯ ಶಾಸಕರು ಸೇರಿದಂತೆ ಬಹುತೇಕರು ಕೇವಲ ರೋಡ್ ಶೋ ಮತ್ತು ಬಹಿರಂಗ ಸಭೆಗಳಿಗೆ ಸೀಮಿತರಾದರೇ ಹೊರತು ಕ್ಷೇತ್ರದಲ್ಲಿ ನೆಲೆನಿಂತು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಅಗತ್ಯ ಮಾರ್ಗದರ್ಶನ ಮಾಡಿ ಗೆಲುವಿನ ತಂತ್ರ ರೂಪಿಸಲಿಲ್ಲ.
ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಬರಲು ಸಿದ್ಧರಿದ್ದ ಜಿಪಂ ಮಾಜಿ ಸದಸ್ಯ ಶೀಳನೆರೆ ಅಂಬರೀಶ್, ಅಘಲಯ ಮಂಜುನಾಥ್ ಸೇರಿದಂತೆ ಹಲವು ಮುಖಂಡರನ್ನು ಜೆಡಿಎಸ್ ಪಕ್ಷಕ್ಕೆ ಸೇರಿಸಿಕೊಳ್ಳದಂತೆ ಕೆಲವರು ತಡೆದರು. ಇದರ ಲಾಭವನ್ನು ಬಿಜೆಪಿ ಶಾಸಕ ನಾರಾಯಣಗೌಡ ಪಡೆದುಕೊಂಡರು.
ಕಾಂಗ್ರೆಸ್‌ನಲ್ಲಿ ಸೂತಕದ ಛಾಯೆ:
ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸ್ಥಿತಿ ಇದಕ್ಕಿಂತ ಭಿನ್ನವಾಗಿದೆ. 3ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡ ಕಾಂಗ್ರೆಸ್‌ನಲ್ಲಿ ಸೂತಕದ ವಾತಾವರಣ ಕಾಣಿಸಿಕೊಂಡಿದೆ. ಪ್ರತಿಯೊಂದು ಚುನಾವಣೆಯಲ್ಲೂ ಜೆಡಿಎಸ್‌ಗೆ ತಕ್ಕ ಪೈಪೋಟಿ ನೀಡುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿಗಳು ಈ ಬಾರಿ ಮೂರನೇ ಸ್ಥಾನಕ್ಕೆ ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ.
ಕಳೆದ ಹಲವು ಚುನಾವಣೆಗಳಲ್ಲಿ ಜೆಡಿಎಸ್‌ಗೆ ಪ್ರಬಲ ಎದುರಾಳಿಯಾಗಿತ್ತು. ಆದರೆ, ಈ ಬಾರಿ ಕಾಂಗ್ರೆಸ್‌ನ ಕೆ.ಬಿ.ಚಂದ್ರಶೇಖರ್ 41,663 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ. ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಕೆ.ಬಿ.ಚಂದ್ರಶೇಖರ್ 70,627 ಮತಗಳನ್ನು ಪಡೆದುಕೊಂಡಿದ್ದರು.
ನಿರೀಕ್ಷಿತ ಮತ ಕೊಡಿಸಲು ವಿಫಲ:
ಉಪಚುನಾವಣೆ ಉಸ್ತುವಾರಿ ವಹಿಸಿದ್ದ ಮಾಜಿ ಸಚಿವ ಎನ್. ಚಲುವರಾಯಸ್ವಾಮಿ, ಮಾಜಿ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ ತಮ್ಮ ಅಭ್ಯರ್ಥಿ ಗೆಲುವಿಗೆ ಹೋರಾಟ ನಡೆಸಿದರೂ ನಿರೀಕ್ಷಿತ ಮಟ್ಟದಲ್ಲಿ ಮತ ಕೊಡಿಸಲು ವಿಫಲರಾದರು. ಚುನಾವಣೆ ಪ್ರಚಾರದ ವೇಳೆ ಜೆಡಿಎಸ್ ನಾಯಕರು ಚಲುವರಾಯಸ್ವಾಮಿ ಮತ್ತು ಅವರ ಬೆಂಬಲಿಗರು ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುತ್ತಿದ್ದಾರೆ ಎಂದು ಬಹಿರಂಗವಾಗಿಯೇ ಆರೋಪಿಸಿದ್ದರು.
ಪ್ರಚಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಪ್ರಮುಖ ನಾಯಕರು ಪ್ರಚಾರಕ್ಕೆ ಬಂದರೂ ಕ್ಷೇತ್ರ ಮತದಾರರು ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಕೈ ಹಿಡಿಯಲಿಲ್ಲ. ಕ್ಷೇತ್ರದಲ್ಲಿ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಇಳಿದಿರುವುದರಿಂದ ಮೂಲ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಲ್ಲಿ ಸೂತಕದ ಛಾಯೆ ಆವರಿಸಿದೆ. ಪಕ್ಷವನ್ನು ಹೇಗೆ ಸಂಘಟಿಸಬೇಕು ಎಂಬ ಚಿಂತೆ ಕಾಡುತ್ತಿದೆ.
ಸಿಎಂ ಕರೆಗೆ ಓಗೊಟ್ಟಮತದಾರರು
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಟ್ಟಣದಲ್ಲಿ ಚುನಾವಣಾ ಪ್ರಚಾರದ ವೇಳೆ ವೀರಶೈವ ಬಂಧುಗಳು ಒಂದೇ ಒಂದು ಮತವನ್ನೂ ಬಿಜೆಪಿ ಹೊರತು ಪಡಿಸಿ ಮತ್ಯಾವುದೇ ಪಕ್ಷಕ್ಕೆ ಚಲಾಯಿಸಬಾರದೆಂದು ಕರೆ ನೀಡಿದರು. ಈ ಹೇಳಿಕೆಯನ್ನು ಪಾಲಿಸಿರುವ ಕ್ಷೇತ್ರದ ಲಿಂಗಾಯುತ ಮತದಾರರು ತಮ್ಮ ನಾಯಕನ ಅಣತಿಯನ್ನು ಸಂಪೂರ್ಣವಾಗಿ ಪಾಲಿಸಿದ್ದಾರೆ. ತಾಲೂಕಿನಲ್ಲಿ ವೀರಶೈವ ಮತದಾರರೇ ಅಧಿಕವಾಗಿರುವ ಸಾಸಲು, ಗೋವಿಂದನಹಳ್ಳಿ, ಗೋವಿಂದನಹಳ್ಳಿ ಕೊಪ್ಪಲು, ಅಂಚನಹಳ್ಳಿ, ಮೋದೂರು, ದೊಡ್ಡಯಾಚೇನಹಳ್ಳಿ, ಮೇಳ್ಳಹಳ್ಳಿ, ತಗಡೂರು, ಬೊಮ್ಮಲಾಪುರ, ಚೋಕನಹಳ್ಳಿ, ಬೂಕಹಳ್ಳಿ, ಚೌಡಸಮುದ್ರ, ಗುಬ್ಬಹಳ್ಳಿ, ದುಡುಕನಹಳ್ಳಿ, ಬಸವನಹಳ್ಳಿ, ಸೋಮನಾಥಪುರ, ಕೆ.ಆರ್.ಪೇಟೆ ಪಟ್ಟಣದ ಈಶ್ವರ ದೇವಾಲಯದ ಬೂತ್ ಹಾಗೂ ಬೂಕನಕೆರೆ 1 ಮತ್ತು 2ನೇ ಮತಗಟ್ಟೆಯಿಂದ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ 7882 ಮತಗಳಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಬಿ.ಎಲ….ದೇವರಾಜು ಕೇವಲ 1546 ಮತಗಳನಷ್ಟೆಪಡೆದಿದ್ದಾರೆ. ಲಿಂಗಾಯಿತ ಸಮುದಾಯದ ಪ್ರಾಬಲ್ಯದ ನೆಲದಲ್ಲಿ ಬಿಜೆಪಿ 6336 ಮತಗಳ ಲೀಡ್ ಪಡೆದಿದೆ. ಇದರಿಂದ ಕೆ.ಸಿ.ನಾರಾಯಣಗೌಡ 9728 ಸಾವಿರಕ್ಕೂ ಅಧಿಕ ಬಹುಮತದಿಂದ ಚುನಾಯಿತರಾಗಲು ಕಾರಣವಾಗಿದೆ.