ತನ್ನ ಬಾರ್‌ಗೆ ತಾನೇ ಕನ್ನ ಹಾಕಿದ ಮಾಲೀಕ: ಕಾರಣ?
ಬಾರ್ ಮಾಲೀಕನೇ ರಾಜಾರೋಷವಾಗಿ ಬೀಗ ಕಿತ್ತು ಮದ್ಯ ಮಾರಾಟ| ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಾಗಿಸುತ್ತಿದ್ದ ವೇಳೆ ವಶ| ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದ ಪೊಲೀಸರು|
ಬಾಗೇಪಲ್ಲಿ(ಏ.20): ಲಾಕ್‌ಡೌನ್ ಸಮಯದಲ್ಲಿ ಮದ್ಯ ಮಾರಾಟ ನಿಷೇಧಿಸಿ ಸರ್ಕಾರ ಆದೇಶ ನೀಡಿದೆ. ಆದರೆ ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಬಾರ್ ಮಾಲೀಕನೇ ರಾಜಾರೋಷವಾಗಿ ಬೀಗ ಕಿತ್ತು ಮದ್ಯ ಸಾಗಿಸುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಪಟ್ಟಣದ ಎಸ್‌ಬಿಎಂ ರಸ್ತೆಯ ಚಿತ್ರಾವತಿ ನದಿ ದಡದಲ್ಲಿರುವ ದೀಪಿಕಾ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕ ನಾರಾಯಣಸ್ವಾಮಿ ಎಂಬುವರ ಮಗ ಮನೋಜ್ ಎಂಬಾತ ಶನಿವಾರ ರಾತ್ರಿ ಸುಮಾರು 9 ಗಂಟೆ ಸಮಯದಲ್ಲಿ ಬಾರ್‌ಗೆ ಅಬಕಾರಿ ಇಲಾಖೆ ಅಧಿಕಾರಿಗಳು ಹಾಕಿದ್ದ ಸೀಲ್ ಕಿತ್ತು ಮದ್ಯವನ್ನು ಆಕ್ರಮವಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಾಗಿಸುತ್ತಿದ್ದ ವೇಳೆ ಖಚಿತ ಮಾಹಿತಿ ಪಡೆದ ಸರ್ಕಲ್ ಇನ್ಸ್‌ಪೆಕ್ಟರ್ ನಯಾಜ್ ಬೇಗ್, ಸಬ್‌ಇನ್ಸ್‌ಪೆಕ್ಟರ್ ಜಿ.ಕೆ. ಸುನಿಲ್ ಕುಮಾರ್ ದಾಳಿ ನಡೆಸಿದ್ದು, ಆರೋಪಿ ಸ್ಥಳದಲ್ಲಿಯೇ ಸಿಕ್ಕಿಬಿದ್ದಿದ್ದಾನೆ.
ಎಣ್ಣೆ ಕದಿಯದ ಕುಡುಕರು: 'ಮಾಲೀಕರಿಂದಲೇ ಮದ್ಯದಂಗಡಿ ಕಳವು'
ಸ್ಥಳದಲ್ಲಿಯೇ ಇದ್ದ ಆತನ ಬುಲೆಟ್ ವಾಹನ (ಕೆಎ40 ಇಬಿ 0103)ವನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದಿದ್ದಾರೆ. ಲಾಕ್‌ಡೌನ್ ಆದಾಗಿನಿಂದ ಇಲ್ಲಿನ ಬಹುತೇಕ ಬಾರ್ ಮಾಲೀಕರು ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದರೂ ಅಬಕಾರಿ ಇಲಾಖೆ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಬಹುತೇಕ ಬಾರ್ ಮಾಲೀಕರಿಗೆ ಲಾಕ್‌ಡೌನ್ ಜಾರಿಯಾಗಿರುವುದು ವರದಾನವಾಗಿದ್ದರೆ, ಮದ್ಯ ಪ್ರಿಯರು ತೀವ್ರ ನರಕ ಅನುಭವಿಸುತ್ತಿದ್ದಾರೆ.
ಇನ್ನು ಕೆಲ ಬಾರ್‌ಗಳಿಗೆ ಕನ್ನ ಹಾಕಿರುವ ಘಟನೆಗಳೂ ನಡೆಯುತ್ತಿದ್ದು, ಬಾರ್ ಮಾಲೀಕರು ಹಣ ಮಾಡುವ ಉದ್ಧೇಶದಿಂದ ತಮ್ಮ ಬಾರ್‌ಗಳಿಗೆ ತಾವೇ ಬೀಗ ಕಿತ್ತುಹಾಕುವುದು ಅಥವಾ ಕನ್ನ ಕೊರೆಯುವ ಸಾಹಸ ಮಾಡಿ, ನಂತರ ಬಾರಿನಲ್ಲಿ ಕಳುವಾಗಿದೆ ಎಂದು ದೂರು ನೀಡುವ ಕೆಲಸಕ್ಕೂ ಹಲವರು ಮುಂದಾಗಿರಬಹುದು ಎಂಬ ಅನುಮಾನಗಳು ಕಾಡತೊಡಗಿವೆ.