ಬಜೆಟ್‌ನಲ್ಲಿ ಮೋದಿ ಭರವಸೆ ಈಡೇರಿಸಿಲ್ಲ: ಈಶ್ವರ ಖಂಡ್ರೆ

ಕೇಂದ್ರ ಸರ್ಕಾರದ ಪ್ರಸ್ತುತ ಬಜೆಚ್‌ ಸುಳ್ಳಿನಿಂದ ಕೂಡಿದ್ದು, ಇದರಿಂದ ಯಾವ ಬಡವರಿಗೂ ಉಪಯೋಗವಿಲ್ಲ, ಈ ಹಿಂದೆ ಪ್ರಧಾನಿ ಮೋದಿ ಅವರು ನೀಡಿದ್ದ ಯಾವುದೇ ಭರವಸೆಗಳೂ ಬಜೆಟ್‌ನಲ್ಲಿ ಈಡೇರಿಸಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದ್ದಾರೆ.

Modi not kept his promise in union budget 2020 says Eshwara Khandre

ಚಿಕ್ಕಬಳ್ಳಾಪುರ(ಫೆ.02): ಕೇಂದ್ರ ಸರ್ಕಾರದ ಪ್ರಸ್ತುತ ಬಜೆಚ್‌ ಸುಳ್ಳಿನಿಂದ ಕೂಡಿದ್ದು, ಇದರಿಂದ ಯಾವ ಬಡವರಿಗೂ ಉಪಯೋಗವಿಲ್ಲ, ಈ ಹಿಂದೆ ಪ್ರಧಾನಿ ಮೋದಿ ಅವರು ನೀಡಿದ್ದ ಯಾವುದೇ ಭರವಸೆಗಳೂ ಬಜೆಟ್‌ನಲ್ಲಿ ಈಡೇರಿಸಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದರು.

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿದ ಕೇಂದ್ರ ಸರ್ಕಾರ, ರೈತರಿಗೆ ಏನೂ ನೀಡಲಿಲ್ಲ, ಕೇಂದ್ರದ ಬಜೆಟ್‌ ನಿರಾಶಾದಾಯಕವಾಗಿದ್ದು, ಸುಳ್ಳಿನಿಂದ ಕೂಡಿದ ಬಜೆಟ್‌ ಆಗಿದೆ. ಜೊತೆಗೆ ಉದ್ಯೋಗ ಸೃಷ್ಟಿಸುವ ಯಾವುದೇ ಕಾರ್ಯಕ್ರಮ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೆಪಿಸಿಸಿಗೆ ಶೀಘ್ರದಲ್ಲೇ ನೂತನ ಅಧ್ಯಕ್ಷ

ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಪ್ರಸ್ತುತ ಹೈಕಮಾಂಡ್‌ ಅಂಗಳದಲ್ಲಿದೆ. ದೆಹಲಿ ಚುನಾವಣೆ ನಂತರ ಕೆಪಿಸಿಸಿಗೆ ನೂತನ ಸಾರಥಿ ಆಯ್ಕೆಯಾಗಲಿದ್ದಾರೆ. ಕಾಂಗ್ರೆಸ್‌ ಮುಳುಗುವ ಹಡುಗಲ್ಲ, ಕಾಂಗ್ರೆಸ್‌ ಮುಗಿಸಲು ಯಾರಿಂದಲೂ ಸಾಧ್ಯವೂ ಇಲ್ಲ. ದೇಶದ ನಾನಾ ರಾಜ್ಯಗಳಲ್ಲಿ ಇತ್ತೀಚಿಗೆ ನಡೆದ ಚುನಾವಣೆಗಳೇ ಇದಕ್ಕೆ ಸಾಕ್ಷಿ. ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ. ದೆಹಲಿ ಚುನಾವಣೆಯಲ್ಲಿಯೂ ಬಿಜೆಪಿ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ಕಾಂಗ್ರಸ್‌ ಭದ್ರಕೋಟೆಯಾಗಿದ್ದು, ಲೋಕಸಭೆ ಮತ್ತು ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿನಿಂದ ಕಾರ್ಯಕರ್ತರು ಎದೆಗುಂದಬೇಕಾದ ಅಗತ್ಯವಿಲ್ಲ. ಬೇರು ಮಟ್ಟದಲ್ಲಿ ಪಕ್ಷ ಭದ್ರವಾಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಗತ ವೈಭವ ಮೆರೆಯಲಿದೆ ಎಂದು ಭವಿಷ್ಯ ನುಡಿದರು.

ನಗರಸಭೆಯಲ್ಲೂ ಗೆಲವು

ಡಿ.9ರಂದು ನಡೆಲಿರುವ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಕಾಂಗ್ರೆಸ್‌ ಸ್ಪಷ್ಟಬಹುಮತದೊಂದಿಗೆ ಗೆಲವು ಸಾಧಿಸಲಿದೆ ಎಂದು ಈಶ್ವರ ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದರು. ನಗರಸಭೆಯಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆಲವು ಸಾಧಿಸುವ ಮೂಲಕ ಮತ್ತೆ ಕಾಂಗ್ರೆಸ್‌ ಅಧಿಕಾರ ಹಿಡಿಯಲಿದೆ ಎಂದು ಹೇಳಿದರು.

ಪ್ರಧಾನಿ ಮೋದಿ ಅವರು ಜಾರಿಗೊಳಿಸುತ್ತಿರುವ ಕಾನೂನುಗಳು ದೇಶದ ಪ್ರಜೆಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದಕ್ಕೆ ತರುವ ರೀತಿಯಲ್ಲಿದ್ದು, ಸಂವಿಧಾನ ಉಳಿಸಲು ಎಲ್ಲರೂ ಒಂದಾಗಬೇಕಿದೆ. ಚಿಕ್ಕಬಳ್ಳಾಪುರ ನಗರಸಭೆ ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಮತ್ತೆ ವಿಜಯಪತಾಕೆ ಹಾರಿಸಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್‌ ಮುಖಂಡರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios