'ಅಖಂಡ ಭಾರತ ಎರಡಾಗಲು ಜವಾಹರಲಾಲ್ ನೆಹರು ಮನೆತನವೇ ಕಾರಣ'

ರಾಜ್ಯಸಭೆಯಲ್ಲಿ ಪಾಸ್ ಆದ ಬಿಲ್‌ಗೆ ವಿರೋಧಿಸಿ ಪ್ರಯೋಜನವಿಲ್ಲ| ಇನ್ನಾದ್ರೂ ಕಾಂಗ್ರೆಸ್ ಸೇರಿದಂತೆ ಇತರೆ ವಿರೋಧಿಗಳು ಇದನ್ನು ಅರಿತುಕೊಳ್ಳಬೇಕು| ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಯಾರ್ಯಾರು ಪೌರತ್ವ ಕಾಯ್ದೆ ವಿರೋಧಿಸುತ್ತಾರೆ ಅವರೆಲ್ಲರೂ ಪಾಕಿಸ್ತಾನದ ಏಜಂಟರಾಗಿದ್ದಾರೆ|

MLA Basanagouda Patil Yatnal Talks Over Partition of India

ವಿಜಯಪುರ(ಜ.20): ಡಾ. ಬಿ.ಆರ್‌. ಅಂಬೇಡ್ಕರ್ ರಚಿಸಿದ ಸಂವಿಧಾನದ ಪ್ರಕಾರವೇ ಪೌರತ್ವ(CAA) ಕಾಯ್ದೆ ಜಾರಿಯಾಗಿದೆ. ಸಂವಿಧಾನ, ಅಂಬೇಡ್ಕರ್ ಅವರ ಮೇಲೆ ಗೌರವ ಇದ್ದವರು ಪೌರತ್ವ ಕಾಯ್ದೆಯನ್ನ ಒಪ್ಪಿಕೊಳ್ಳಬೇಕು. ಇದರ ವಿರುದ್ಧ ಹೋರಾಟ ನಡೆಸಿದರೆ ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಹಾಗೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ. 

ಪೌರತ್ವ ಕಾಯ್ದೆ ವಿರೋಧಿಸಿ ಕಾಂಗ್ರೆಸ್‌ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೋರಾಟ ನಡೆಸುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಬಸನಗೌಡ ಪಾಟೀಲ್ ಯತ್ನಾಳ, ಒಮ್ಮೆ ಲೋಕಸಭೆ, ರಾಜ್ಯಸಭೆಯಲ್ಲಿ ಪಾಸ್ ಆದ ಬಿಲ್‌ಗೆ ವಿರೋಧಿಸಿ ಪ್ರಯೋಜನವಿಲ್ಲ. ಇನ್ನಾದ್ರೂ ಕಾಂಗ್ರೆಸ್ ಸೇರಿದಂತೆ ಇತರೆ ವಿರೋಧಿಗಳು ಇದನ್ನು ಅರಿತುಕೊಳ್ಳಬೇಕು. ಇಷ್ಟಾಗಿಯೂ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಯಾರ್ಯಾರು ಪೌರತ್ವ ಕಾಯ್ದೆ ವಿರೋಧಿಸುತ್ತಾರೆ ಅವರೆಲ್ಲರೂ ಪಾಕಿಸ್ತಾನದ ಏಜಂಟರಾಗಿದ್ದಾರೆ ಎಂದು ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬೇರೆಡೆ ದೌರ್ಜನ್ಯಕ್ಕೆ ಒಳಗಾದವರಿಗೆ ನೆಲೆ ಕಲ್ಪಿಸುವ ಕೆಲಸ ಭಾರತ ಮಾಡಿದೆ, ಇದನ್ನು ವಿರೋಧಿಸುವವರು ಪಾಕಿಸ್ತಾನದ ಏಜಂಟರು ಎಂದು ನಾನು ನೇರವಾಗಿ ಹೇಳುತ್ತೇನೆ ಎಂದು ಹೇಳಿದ್ದಾರೆ. ಬಿ. ಎಸ್. ಯಡಿಯೂರಪ್ಪ ನಿವೃತ್ತಿ ವಿಚಾರದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆಯನ್ನ ಸಮರ್ಥಿಸಿಕೊಂಡ ಯತ್ನಾಳ, ಭಟ್ ಅವರು ಹಿರಿಯ ಸಂಘ ಜೀವಿಗಳು ಅವರು ಸಹಜವಾಗಿ ಬಿಜೆಪಿ ಸಿದ್ಧಾಂತಗಳ ಬಗ್ಗೆ ಹೇಳಿದ್ದಾರೆ. ಪಕ್ಷದ ಸಿದ್ಧಾಂತದ ಪ್ರಕಾರ 75 ವರ್ಷಕ್ಕೆ ಚುನಾವಣೆಯಿಂದ ಹಿಂದೆ ಸರಿಯುತ್ತಾರೆ ಎಂಬುದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ತಿಳಿಸಿದ್ದಾರೆ. 

75 ವರ್ಷ ದಾಟಿದವರನ್ನು ಪಕ್ಷ ರಾಜ್ಯಪಾಲರನ್ನಾಗಿಸಬಹುದು ಅಥವಾ ಬೇರೆ ಹುದ್ದೆ ಕೊಡಬಹುದು. ಮುಂದೆ ಕೂಡ ನಾವೇ ಅಧಿಕಾರಕ್ಕೆ ಬರುತ್ತೇವೆ. ಯಾರು ಸಿಎಂ, ಪಿಎಂ ಆಗಬೇಕು ಎನ್ನುವುದನ್ನು ಪಕ್ಷ ನಿರ್ಣಯ ಮಾಡುತ್ತದೆ ಎಂದಿದ್ದಾರೆ. 

ಅನರ್ಹರಿಂದ ಅರ್ಹರಾಗಿರುವವರು ಸಚಿವರಾಗುತ್ತಾರೆ. ಆಕಾಂಕ್ಷಿಗಳ‌ ಪಟ್ಟಿ ದೊಡ್ಡದಿದೆ, ಆದರೆ ಸಂದರ್ಭ ಪರಿಸ್ಥಿತಿಯನ್ನ ನೋಡಿಕೊಳ್ಳಬೇಕಾಗುತ್ತದೆ. ಎಲ್ಲರಿಗೂ ಸಚಿವರಾಗುವ ಭಾವನೆ ಇರುತ್ತದೆ. ಸಂದರ್ಭ ನೋಡಿಕೊಳ್ಳಬೇಕಾಗುತ್ತದೆ. ಯಾರ್ಯಾರು ಸಚಿವರಾಗಬೇಕು ಎಂಬುದು ಪಕ್ಷ ನಿರ್ಧರಿಸುತ್ತದೆ. ನಾನೂ ಒಬ್ಬ ಸಾಮಾನ್ಯ ಶಾಸಕ ಅಷ್ಟೆ, ನಾವು ಆಡಳಿತಕ್ಕೆ ಬರುತ್ತಿರಲಿಲ್ಲ, ಅಂಥಹವರು ಈಗ ಆಡಳಿತದಲ್ಲಿ ಇದ್ದೇವೆ ಎಂದು ತಿಳಿಸಿದ್ದಾರೆ. 

ಸಚಿವ ಈಶ್ವರಪ್ಪ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಸಮಾಗಮ ವಿಚಾರದ ಬಗ್ಗೆ ಮಾತನಾಡಿದ ಅವರು, ಅವರೆಲ್ಲರೂ ಅವರ ಪಕ್ಷಗಳ ತತ್ವ ಸಿದ್ಧಾಂತಕ್ಕೆ ಬದ್ಧರಾವಾಗಿದ್ದಾರೆ. ಸಮುದಾಯ ಕಾರ್ಯಕ್ರಮಗಳೇ ಬೇರೆ, ಹಾಗಾಗಿ ಭಾಗವಹಿಸಿರುತ್ತಾರೆ ಎಂದು ಹೇಳಿದ್ದಾರೆ. 

ಭಾರತ ಹಿಂದೂ ರಾಷ್ಟ್ರ ಆಗೋಕೆ ಬಿಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಹಿಂದೂ ರಾಷ್ಟ್ರ ಮಾಡದೆ ಮತ್ತೇನು ಪಾಕಿಸ್ತಾನ ಮಾಡ್ತೀರಾ? ಹಿಂದೂಗಳು ಹೆಚ್ಚು ಇರುವ ದೇಶ ಹಿಂದೂ ರಾಷ್ಟ್ರವೇ ಆಗುತ್ತೆ, ಕಾಂಗ್ರೆಸ್‌ನವರು ಪಾಕಿಸ್ತಾನ ಬೇರ್ಪಡಿಸಿದ ಉದ್ದೇಶವೇನು? ಜವಾಹರಲಾಲ್ ನೆಹರು ಪ್ರಧಾನ ಮಂತ್ರಿ ಆಗಬೇಕು ಎಂಬ ಸ್ವಾರ್ಥದಿಂದ ಪಾಕಿಸ್ತಾನ ಇಬ್ಭಾಗವಾಯಿತು. ನಮ್ಮ ದೇಶ ಒಡೆಯಲು ನೆಹರು ಮನೆತನವೇ ಕಾರಣ ಎಂದು ಹೇಳಿದ್ದಾರೆ. 

ಮಹಮ್ಮದ್‌ ಅಲಿ ಜಿನ್ನಾ ಅವರೂ ಪ್ರಧಾನಿ ಬೇಡಿಕೆ ಇಟ್ಟಿದ್ರು, ಇತ್ತ ನೆಹರೂ ಅವರು ನನ್ನ ಮಗನನ್ನು ಭಾರತದ ಮೊದಲ ಪ್ರಧಾನಿ‌ ಮಾಡಬೇಕು ಎಂದು ಮಹಾತ್ಮಾ ಗಾಂಧಿ ಅವರ ಬಳಿ ಮಾತು(ಭಾಷೆ) ತೆಗೆದುಕೊಂಡಿದ್ದರು. ಆ ಋಣ ತೀರಿಸಲು ಮಹಾತ್ಮಾ ಗಾಂಧಿ ನೆಹರು ಅವರನ್ನು ಪ್ರಧಾನಿ‌ ಮಾಡಿದ್ದರು. ಇಲ್ಲದಿದ್ದರೆ ನೇತಾಜಿ‌ ಸುಭಾಶ್‌ಚಂದ್ರ ಭೋಸ್‌ ಪ್ರಧಾನಿ ಆಗಬೇಕಿತ್ತು, ಅವರ ಬಳಿಕ ಸರ್ದಾರ ವಲ್ಲಭಭಾಯಿ ಪಟೇಲ್ ಆಗಬೇಕಿತ್ತು. ದೇಶದ ದುರಂತವೆಂದರೆ ಜವಾಹರಲಾಲ್ ನೆಹರು ಅವರಂಥ ವಿಲಾಸಿ ಜೀವನ‌ ನಡೆಸಿದವರು ಪ್ರಧಾನಿ‌ ಆದರು ಎಂದು ಹೇಳಿದ್ದಾರೆ. 

ಶಿವಸೇನೆಗೆ ಹಿಂದೂತ್ವ ಕೈಯಿಂದ ಹೋಗಿದೆ, ಹಾಗಾಗಿ‌ ಗಡಿ ಕ್ಯಾತೆ, ಶಿರಡಿ ಸಾಯಿಬಾಬ ವಿಚಾರ ಸೇರಿದಂತೆ ಮುಖ್ಯವಾಹಿನಿಗೆ ಬರಲು ಹೀಗೆ ಮಾಡುತ್ತಿದೆ. ಮಹಾರಾಷ್ಟ್ರ ಕರ್ನಾಟಕದ ಒಂದು ಭಾಗವೇ ಆಗಿದೆ. ಮಹಾಜನ್ ವರದಿ ಒಪ್ಪಿಕೊಂಡು ಬೆಳಗಾವಿ ಕರ್ನಾಟಕದಲ್ಲಿ ಇದ್ರೂ ಏನು ತೊಂದರೆ ಇಲ್ಲ. ಜನರು ಕರ್ನಾಟಕ ಮಹಾರಾಷ್ಟ್ರ ಬಿಟ್ಟು ಬಿಜೆಪಿಗೆ ಮತ ಹಾಕುತ್ತಿದ್ದಾರೆ, ಎಂಇಎಸ್ ಅನ್ನು ಮುಗಿಸಿಬಿಟ್ಟಿದ್ದಾರೆ ಎಂದು ಹೇಳಿದ್ದಾರೆ.

ವಿಧಾನಪರಿಷತ್ ಸದಸ್ಯ ಎಸ್ ಆರ್ ಪಾಟೀಲ್ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಏನಾದ್ರೂ ಆಸೆ ಇಟ್ಕೊಬೇಕಲ್ಲ, ಬರೋದಿಲ್ಲ‌‌ ಅಂದ್ರೆ ಯಾರೂ ಅವರ ಮುಂದೆ ಬರೋದಿಲ್ಲ. ಗೂಳಿಯಿಂದ ಈಗ ಬರುತ್ತೆ(ಸೆಗಣಿ) ಬರುತ್ತೆ ಅಂತ ಕಾಯ್ತಾರೆ, ಅದು ಬಿಜೆಪಿ ಜೊತೆಗೆ ಗಟ್ಟಿಯಾಗಿದೆ ಎಂದು ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios