ಬೆಂಗಳೂರಿನ ಹಲವು ರಸ್ತೆಗಳಿಗೆ ಇದೀಗ ಕಂಟಕವೊಂದು ಎದುರಾಗಿದೆ. ಸರ್ಕಾರದ ಈ ಯೋಜನೆಯೊಂದರಿಂದ ರಸ್ತೆಗಳು ವಿರೂಪಗೊಳ್ಳಲು ಸಿದ್ಧವಾಗಿವೆ.
ಬೆಂಗಳೂರು : ಬಿಬಿಎಂಪಿಯು ನೂರಾರು ಕೋಟಿ ರುಪಾಯಿ ವೆಚ್ಚ ಮಾಡಿ ವೈಟ್ ಟಾಪಿಂಗ್ ಮಾಡಿದ ರಸ್ತೆಗಳಿಗೆ ಎಲಿವೆಟೇಡ್ ಕಾರಿಡಾರ್ ಯೋಜನೆ ಕಂಟಕದ ರೂಪದಲ್ಲಿ ಎದುರಾಗಿದೆ. ಏಕೆಂದರೆ, ಈ ಕಾರಿಡಾರ್ ಸಾಗುವ ಹಾದಿಯಲ್ಲಿ ಹಲವು ರಸ್ತೆಗಳು ಈಗಷ್ಟೇ ವೈಟ್‌ಟಾಪಿಂಗ್ ಆಗಿದ್ದು, ಕಾರಿಡಾರ್‌ಗಾಗಿ ಶೀಘ್ರವೇ ವಿರೂಪಗೊಳ್ಳಲಿವೆ!
ಅಷ್ಟೇ ಅಲ್ಲ, ಯೋಜನೆಗೆ ನೂರಾರು ಖಾಸಗಿ ಆಸ್ತಿಗಳ ಜೊತೆಗೆ, ಬಸ್‌ನಿಲ್ದಾಣ, ಉದ್ಯಾನ, ಆಟದ ಮೈದಾನ ಸೇರಿದಂತೆ ಹಲವು ಸಾರ್ವಜನಿಕ ಆಸ್ತಿ ಪಾಸ್ತಿಗಳ ಸ್ವಾಧೀನಗೊಳ್ಳಲಿವೆ. ವಿಪರ್ಯಾಸ ಎಂದರೆ ಇಷ್ಟುದೊಡ್ಡ ಯೋಜನೆಯನ್ನು ಕೈಗೆತ್ತಿಕೊಂಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಆರ್‌ಐಡಿಎಲ್) ಮೊದಲ ಹಂತದ ಯೋಜನೆಗೆ ಟೆಂಡರ್ ಕರೆದಿದ್ದರೂ ಎಲಿವೇಟೆಡ್ ಕಾರಿಡಾರ್‌ನಿಂದ ಆಸ್ತಿ ಕಳೆದುಕೊಳ್ಳುವ ಮಾಲೀಕರಿಗಾಗಲಿ, ಸಾರ್ವಜನಿಕವಾಗಿಯಾಗಲಿ ಮಾಹಿತಿ ಬಹಿರಂಗಪಡಿಸಿಯೇ ಇಲ್ಲ. ಸದ್ದಿಲ್ಲದೆ ಎಷ್ಟುಆಸ್ತಿ ಸ್ವಾಧೀನಪಡಿಸಿ ಕೊಳ್ಳಬೇಕಾಗುತ್ತದೆ ಎಂಬ ಬಗ್ಗೆ ಸರ್ವೆ ನಡೆಸಿ, ಸಂಬಂಧಿಸಿದ ಕಟ್ಟಡಗಳ ಮೇಲೆ ನಂಬರ್ ಹಾಕಲಾಗಿದೆ. ಇದನ್ನು ನೋಡಿ, ಸ್ಥಳೀಯ ಆಸ್ತಿ ಮಾಲೀಕರು ಆತಂಕಕ್ಕೀಡಾಗಿದ್ದಾರೆ.
ಎಲಿವೇಟೆಡ್ ಕಾರಿಡಾರ್ ಯೋಜನೆ ಕುರಿತು ಬಸ್ ಪ್ರಯಾಣಿಕರ ವೇದಿಕೆ (ಬಿಬಿವಿಪಿ), ಸಿಟಿಝನ್ಸ್ ಫಾರ್ ಬೆಂಗಳೂರು (ಸಿಎಫ್‌ಬಿ) ಮತ್ತು ದಿ ಸ್ಟುಡೆಂಟ್ ಔಟ್‌ಪೋಸ್ಟ್ (ಟಿಎಸ್‌ಒ) ಮತ್ತು ಬೆಂಗಳೂರು ಸುದ್ದಿ ಸಂಘಟನೆಗಳು ನಡೆಸಿದ ಸರ್ವೆಯಲ್ಲಿ ಇಂತಹ ಹಲವು ವಿಚಾರಗಳು ಬೆಳಕಿಗೆ ಬಂದಿವೆ.
ತರಾತುರಿ ಟೆಂಡರ್: ನಗರದ ಸಂಚಾರ ದಟ್ಟಣೆ ತಗ್ಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಬರೋಬ್ಬರಿ .26,690 ಕೋಟಿ ವೆಚ್ಚದಲ್ಲಿ 87.87 ಕಿ.ಮೀ. ಉದ್ದದ ಮಹತ್ವಾಕಾಂಕ್ಷಿ ಪೂರ್ವ- ಪಶ್ಚಿಮ, ಉತ್ತರ- ದಕ್ಷಿಣ, ಕೇಂದ್ರ ಎಲಿವೇಟೆಡ್ ಕಾರಿಡಾರ್ ಯೋಜನೆ ರೂಪಿಸಿದೆ. ಹೆಬ್ಬಾಳ ಬಾಪ್ಟಿಸ್ಟ್ ಆಸ್ಪತ್ರೆಯಿಂದ ಮೇಕ್ರಿ ವೃತ್ತ, ಶಾಂತಿನಗರ ಮಾರ್ಗವಾಗಿ ಸೆಂಟ್ರಲ್ ಸಿಲ್‌್ಕಬೋರ್ಡ್‌ವರೆಗಿನ 28 ಕಿ.ಮೀ. ಉದ್ದದ ಯೋಜನೆಗೆ ತರಾತುರಿಯಲ್ಲಿ ಟೆಂಡರ್ ಕರೆಯಲಾಗಿದೆ. ಇದನ್ನು ಪ್ರಶ್ನಿಸಿ ನಮ್ಮ ಬೆಂಗಳೂರು ಪ್ರತಿಷ್ಠಾನ ಮತ್ತು ಸಿಡಿಜನ್ ಆ್ಯಕ್ಷನ್ ಫೋರಂ ಸಂಘಟನೆಗಳು ಹೈಕೋರ್ಟ್ ಮೆಟ್ಟಿಲೇರಿದ್ದು, ಬಿಬಿಎಂಪಿಯ ಚುನಾಯಿತ ಕಾರ್ಪೊರೇಟರ್‌ಗಳು, ಮೆಟ್ರೋ ಪಾಲಿಟನ್ ಪ್ಲಾನಿಂಗ್ ಸಮಿತಿ ಸಮ್ಮುಖದಲ್ಲಿ ಈ ಯೋಜನೆಯ ನಿರ್ಧಾರ ಆಗಬೇಕಿತ್ತು. ತರಾತುರಿಯಲ್ಲಿ ಯೋಜನೆಗೆ ಟೆಂಡರ್ ಕರೆಯಲಾಗಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿವೆ. ಅರ್ಜಿ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ಇಡೀ ಯೋಜನೆಗೆ ಸದ್ಯ ತಡೆಯಾಜ್ಞೆ ನೀಡಿದೆ.
ವೈಟ್‌ಟಾಪಿಂಗ್ ಕತ್ತರಿಸಿ ಪಿಲ್ಲರ್ ನಿರ್ಮಾಣ:
ಇದರ ನಡುವೆ, ಬಿಬಿವಿಪಿ, ಸಿಎಫ್‌ಬಿ ಸೇರಿದಂತೆ ಕೆಲ ಸಂಘಟನೆಗಳು ಯೋಜನೆಯ ಮಾರ್ಗದಲ್ಲಿ ಸರ್ವೆ ಕಾರ್ಯ ಆರಂಭಿಸಿವೆ. ಯೋಜನೆಗೆ ಎಷ್ಟುಮರಗಳು, ಖಾಸಗಿ ಹಾಗೂ ಸಾರ್ವಜನಿಕ ಕಟ್ಟಡಗಳು, ವೈಟ್‌ಟಾಪಿಂಗ್ ರಸ್ತೆಗಳು ಸೇರಿದಂತೆ ಮೂಲಭೂತಸೌಲಭ್ಯಗಳಿಗೆ ಹಾನಿಯಾಗಲಿದೆ ಎಂಬ ಬಗ್ಗೆ ಸ್ವಯಂ ಪ್ರೇರಿತ ಸರ್ವೆ ನಡೆಸುತ್ತಿವೆ. ಮೊದಲ ಹಂತದ ಯೋಜನೆಯಲ್ಲಿ ಬನ್ನೇರುಘಟ್ಟರಸ್ತೆ ವರೆಗೆ ಎರಡು ಹಂತದ ಸರ್ವೆ ನಡೆಸಲಾಗಿದೆ. ಈ ವೇಳೆ, ಎಲಿವೇಟೆಡ್ ಕಾರಿಡಾರ್ ಹಾದು ಹೋಗುವ ಶಾಂತಿನಗರದ ಬಿಟಿಎಸ್ ರಸ್ತೆ, ಲಷ್ಕರ್ ಹೊಸೂರು ರಸ್ತೆ, ಜಯಮಹಲ್ ರಸ್ತೆಗಳಲ್ಲಿ ಬಿಬಿಎಂಪಿ ನೂರಾರು ಕೋಟಿ ರು. ವೆಚ್ಚ ಮಾಡಿ ವೈಟ್‌ಟಾಪಿಂಗ್ ಮಾಡಿದೆ. ಎಲಿವೇಟೆಡ್ ಕಾರಿಡಾರ್ ಪಿಲ್ಲರ್‌ಗಳ ನಿರ್ಮಾಣಕ್ಕೆ ಈ ರಸ್ತೆಗಳಲ್ಲಿ ನಿರ್ಧಿಷ್ಟಅಳತೆಗೆ ವೈಟ್‌ಟಾಪಿಂಗ್ ಕತ್ತರಿಸಿಯೇ ಭೂಮಿ ಅಗೆಯಬೇಕಾಗುತ್ತದೆ. ಬಿಬಿಎಂಪಿ, ಕೆಆರ್‌ಡಿಸಿಎಲ್, ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನಡುವಿನ ಸಮನ್ವಯ ಕೊರತೆಯಿಂದ ಅಭಿವೃದ್ಧಿಗೊಂಡಿರುವ ಕಟ್ಟಡ, ರಸ್ತೆಯಂತಹ ಸರ್ಕಾರಿ ಆಸ್ತಿ, ಮೂಲ ಸೌಲಭ್ಯಗಳು ಎಲಿವೇಟೆಡ್ ಕಾರಿಡಾರ್‌ಗೆ ಬಲಿಯಾಗಲಿದ್ದು, ಸಾವಿರಾರ ಕೋಟಿ ರು. ನಷ್ಟವಾಗುತ್ತದೆ ಎಂದು ಬಸ್ ಪ್ರಯಾಣಿಕರ ವೇದಿಕೆ ಸದಸ್ಯ ವಿನಯ್ ಶ್ರೀನಿವಾಸ ಹೇಳುತ್ತಾರೆ.
ಇದು, ಕೇವಲ ಮೊದಲ ಯೋಜನೆ. ಇನ್ನೂ ಏಳು ಹಂತದ ಎಲಿವೇಟೆಡ್ ಕಾರಿಡಾರ್ ಯೋಜನೆಯಲ್ಲಿ ಇನ್ನಷ್ಟುವೈಟ್‌ಟಾಪಿಂಗ್ ರಸ್ತೆಗಳು ಬರಬಹುದು. ಹಾಗಾಗಿ ಬಿಟಿಎಸ್ ರಸ್ತೆಯಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕನಿಷ್ಠ ಅಂತಹ ರಸ್ತೆಗಳಲ್ಲಿ ಕಾಮಗಾರಿ ತಾತ್ಕಾಲಿಕವಾಗಿ ನಿಲ್ಲಿಸಬಹುದು. ಜೊತೆಗೆ ಎಲಿವೇಟೆಡ್ ರಸ್ತೆ ಹಾದು ಹೋಗುವ ಇತರೆ ಯಾವುದೇ ರಸ್ತೆಗಳು ವೈಟ್‌ಟಾಪಿಂಗ್‌ಗೆ ಆಯ್ಕೆಯಾಗಿದ್ದರೆ ಅವುಗಳನ್ನು ಕೈಬಿಡಬಹುದು. ಆದರೂ, ಬಿಬಿಎಂಪಿ ಅಧಿಕಾರಿಗಳು ಅದನ್ನು ನಿಲ್ಲಿಸದೆ ಹಣ ಪೋಲು ಮಾಡಲು ಹೊರಟಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
250 ಆಸ್ತಿಗಳಿಗೆ ಹಾನಿ
ಮೊದಲ ಹಂತದ ಈ ಯೋಜನೆಯಲ್ಲಿ ಶಾಂತಿನಗರದ ಬಿಟಿಎಸ್ ರಸ್ತೆಯಲ್ಲಿ 12 ಮೀಟರ್ ಅಗಲದ ರಸ್ತೆ ನಿರ್ಮಿಸುವುದಾಗಿ ಹೇಳಲಾಗಿತ್ತು. ಈಗ ಅದನ್ನು 19 ಮೀಟರ್‌ಗೆ ಹೆಚ್ಚಿಸಲಾಗಿದೆ. ಇದರಿಂದ ಶಾಂತಿನಗರ ಬಿಎಂಟಿಸಿ ಬಸ್‌ನಿಲ್ದಾಣ ಮತ್ತು ಕ್ವಾಟ್ರರ್ಸ್‌ನ ಭಾಗಶಃ ಕಟ್ಟಡ ಸೇರಿದಂತೆ ಕೆಲ ಸಾರ್ವಜನಿಕ ಆಸ್ತಿಗಳೂ ಸೇರಿದಂತೆ ಸುಮಾರು 250ಕ್ಕೂ ಹೆಚ್ಚು ಖಾಸಗಿ ಆಸ್ತಿಗಳಿಗೆ ಹಾನಿಯಾಗುವುದು ಸರ್ವೆಯಲ್ಲಿ ಕಂಡುಬಂದಿದೆ. ಇಂತಹ ಆಸ್ತಿಗಳನ್ನು ಯೋಜನೆಗೆ ಸ್ವಾಧೀನ ಪಡಿಸಿಕೊಳ್ಳಬೇಕಾಗುತ್ತದೆ. ವಿಪರ್ಯಾಸ ಎಂದರೆ ಯೋಜನೆಗೆ ಟೆಂಡರ್ ಕರೆದಾಗಿದ್ದರೂ ಸಂಬಂಧಿಸಿದ ಆಸ್ತಿ ಮಾಲೀಕರಿಗೆ ಒಮ್ಮೆಯೂ ನೋಟಿಸ್ ಕೂಡ ನೀಡಿಲ್ಲ. ಬಹಳಷ್ಟುಜನರಿಗೆ ಯೋಜನೆ ಬಗ್ಗೆ ಮಾಹಿತಿಯೇ ಇಲ್ಲ. ಅಲ್ಲಿನ ಜನರು ರಸ್ತೆ ಮೇಲೆ ಮಾತ್ರ ಎಲಿವೇಟೆಡ್ ಕಾರಿಡಾರ್ ಹಾದುಹೋಗುತ್ತದೆ ಎಂದುಕೊಂಡಿದ್ದಾರೆ. ಆದರೆ ಸದ್ದಿಲ್ಲದೆ ಸ್ವಾಧೀನಪಡಿಸಿಕೊಳ್ಳಬೇಕಾಗಬಹುದಾದ ಆಸ್ತಿಗಳನ್ನು ನಂಬರ್ ಹಾಕಿ ಮಾರ್ಕ್ ಮಾಡಿದ್ದಾರೆ. ಇದನ್ನು ನೋಡಿ ಆಸ್ತಿ ಮಾಲೀಕರು ಆತಂಕಗೊಂಡಿರುವುದು ಕಂಡುಬಂದಿದೆ ಎಂದು ಸಿಟಿಜನ್ಸ್ ಫಾರ್ ಬೆಂಗಳೂರಿನ ಸಂಚಾಲಕರಾದ ಪ್ರಭಾದೇವಿ ತಿಳಿಸಿದ್ದಾರೆ.
ರಾಜಕಾಲುವೆ ಮಧ್ಯೆ ಪಿಲ್ಲರ್!
ಇನ್ನು ಬಿಟಿಎಸ್ ರಸ್ತೆ ಬಳಿ ರಾಜಕಾಲುವೆಯಲ್ಲೇ ಎಲಿವೇಟೆಡ್ ಕಾರಿಡಾರ್ ಪಿಲ್ಲರ್‌ಗಳ ನಿರ್ಮಾಣ ಮಾಡುವ ಲೆಕ್ಕಾಚಾರ ನಡೆದಿದೆ. ಹಾಗೇನಾದರೂ ಆದರೆ, ರಾಜಕಾಲುವೆ ಜಾಗದಲ್ಲಿ ಅಥವಾ ಸುತ್ತಮುತ್ತಲ ಬಫರ್ ಝೋನ್ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಬಾರದೆಂಬ ರಾಷ್ಟ್ರೀಯ ಹಸಿರು ನ್ಯಾಯಪೀಠ (ಎನ್‌ಜಿಟಿ) ಮತ್ತು ಹೈಕೋರ್ಟ್ ಆದೇಶದ ಉಲ್ಲಂಘನೆಯಾಗುತ್ತದೆ ಎಂಬುದು ಸಂಘಟನೆಗಳ ಪ್ರತಿನಿಧಿಗಳ ಆರೋಪ.
ಯಾವುದೇ ಬೃಹತ್ ಯೋಜನೆಗಳನ್ನು ಕೈಗೊಳ್ಳುವ ಮುನ್ನ ಸರ್ಕಾರ, ಸ್ಥಳೀಯ ಸಂಸ್ಥೆಗಳು ಸಾರ್ವಜನಿಕ ಅಭಿಪ್ರಾಯ ಪಡೆದು ನಂತರ ಅಂತಿಮಗೊಳಿಸಬೇಕು. ಆದರೆ, ರಾಜ್ಯ ಸರ್ಕಾರ ಎಲಿವೇಟೆಡ್ ಕಾರಿಡಾರ್ ವಿಚಾರದಲ್ಲಿ ನಿಯಮ ಉಲ್ಲಂಘಿಸಿದೆ. ಅಲ್ಲದೆ, ಬಿಬಿಎಂಪಿ ವ್ಯಾಪ್ತಿಯಲ್ಲಿನ ಇಂತಹ ಬೃಹತ್ ಯೋಜನೆಯನ್ನು ಕಾನೂನು ಮೀರಿ ಕೆಆರ್‌ಡಿಸಿಎಲ್‌ಗೆ ಕೊಟ್ಟಿರುವುದು ಕೂಡ ಸರಿಯಲ್ಲ. ಯೋಜನೆಗೆ ಕೇವಲ ಪರಿಸರದ ಮೇಲಾಗುವ ಪರಿಣಾಮಗಳ ಅಧ್ಯಯನ ನಡೆದಿದೆ. ಆದರೆ, ಸಾಮಾಜಿಕವಾಗಿ ಆಗುವ ಪರಿಣಾಮಗಳ ಬಗ್ಗೆ ಯಾವುದೇ ಅಧ್ಯಯನ ನಡೆಸದೆ ಸರ್ಕಾರ ಕೈಗೆತ್ತಿಕೊಂಡಿದೆ. ಇದು ಹೊಸ ಭೂ ಸ್ವಾಧೀನ ಕಾಯ್ದೆ 2013ರ ನಿಯಮಗಳ ಉಲ್ಲಘನೆಯಾಗಿದೆ. ಸರ್ಕಾರ ಸಮೀಕ್ಷೆ ಮಾಡದ ಕಾರಣ ನಮ್ಮ ಸಂಘದಿಂದ ಹಂತ ಹಂತವಾಗಿ ಸ್ವಯಂ ಪ್ರೇರಿತವಾಗಿ ಸಮೀಕ್ಷೆ ಮಾಡಲಾಗುತ್ತಿದೆ. ಎರಡು ಹಂತದ ಸಮೀಕ್ಷೆ ಮುಗಿದಿದ್ದು, ಶಾಂತಿನಗರ ಕೆಎಸ್‌ಆರ್‌ಟಿಸಿ ನಿಲ್ದಾಣದೊಳಗಿನ 60 ಮರ ಸೇರಿ 214 ಮರಗಳು ಬಲಿಯಾಗಲಿವೆ ಎನುತ್ತಾರೆ ಸಂಘಟನೆಗಳ ಪ್ರತಿನಿಧಿಗಳು.
ಎಲಿವೇಟೆಡ್ ಕಾರಿಡಾರ್‌ನಂತಹ ದೊಡ್ಡ ಯೋಜನೆಗಳನ್ನು ಕೈಗೊಂಡಾಗ ಪರಿಸರ ಮೇಲಾಗುವ ಪರಿಣಾಮದ ಅಧ್ಯಯನ ನಡೆಸುವುದಷ್ಟೇ ಅಲ್ಲ. ಹೊಸ ಭೂಸ್ವಾಧೀನ ಕಾಯ್ದೆ 2013 ಅನುಸಾರ ಭೂ ಸ್ವಾಧೀನ ಮಾಡಿಕೊಳ್ಳಬೇಕು. ಕಾಯ್ದೆಯನುಸಾರ ಸಾರ್ವಜನಿಕ ಆಸ್ತಿ, ಪಾಸ್ತಿ, ಸಾರ್ವಜನಿಕ ಮೂಲಸೌಕರ್ಯಗಳ ಮೇಲಾಗುವ ಪರಿಣಾಮವನ್ನೂ ಅಧ್ಯಯನ ನಡೆಸಬೇಕು. ಆದರೆ, ಸರ್ಕಾರ ಇದನ್ನು ಮಾಡುತ್ತಿಲ್ಲ. ಹಾಗಾಗಿ ನಮ್ಮ ಸಂಘಟನೆಗಳಿಂದ ಈ ಕೆಲಸ ಮಾಡುತ್ತಿದ್ದೇವೆ.
-ವಿನಯ್ ಶ್ರೀನಿವಾಸ, ಬಸ್ ಪ್ರಯಾಣಿಕರ ವೇದಿಕೆ ಸದಸ್ಯ.
ಎಲಿವೇಟೆಡ್ ಕಾರಿಡಾರ್ ಕೆಲ ವೈಟ್‌ಟಾಪಿಂಗ್ ರಸ್ತೆಗಳ ಮೇಲೆ ಹಾದು ಹೋಗುವ ಬಗ್ಗೆ ಕೆಆರ್‌ಡಿಸಿಎಲ್ ಅಧಿಕಾರಿಗಳು ಚರ್ಚಿಸಿದ್ದಾರೆ. ನಮ್ಮ ವೈಟ್‌ಟಾಪಿಂಗ್ ರಸ್ತೆಗಳು ಸುಮಾರು 152 ರಿಂದ 200 ಮಿ.ಮೀನಷ್ಟುತಿಕ್ನೆಸ್‌ನಿಂದ ಕೂಡಿವೆ. ಹೊಸ ತಂತ್ರಜ್ಞಾನ ಬಳಸಿ ವೈಟ್‌ಟಾಪಿಂಗ್ ರಸ್ತೆಯನ್ನು ಎಲಿವೇಟೆಡ್ ಕಾರಿಡಾರ್ ಪಿಲ್ಲರ್‌ಗಳ ಅಳವಡಿಕೆಗೆ ಎಷ್ಟುಬೇಕೋ ಅಷ್ಟುಮೀಟರ್‌ನಷ್ಟುಮಾತ್ರ ಕತ್ತರಿಸಬಹುದು. ಇದರಿಂದ ಹೆಚ್ಚಿನ ರಸ್ತೆಗೇನೂ ಹಾನಿಯಾಗುವುದಿಲ್ಲ. ಕೋಟ್ಯಾಂತರ ರು.ನಷ್ಟುಹಣವೇನೂ ನಷ್ಟವಾಗುವುದಿಲ್ಲ.-ಕೆ.ಟಿ.ನಾಗರಾಜ್, ಬಿಬಿಎಂಪಿ ಮುಖ್ಯ ಎಂಜಿನಿಯರ್ (ಯೋಜನೆ-ಕೇಂದ್ರ)
ವೈಟ್‌ಟಾಪಿಂಗ್ ರಸ್ತೆಗಳಲ್ಲಿ ಎಲಿವೇಟೆಡ್ ಕಾರಿಡಾರ್ ಹಾದು ಹೋಗುವುದು, ಮೊದಲ ಹಂತದ ಎಲಿವೇಟೆಡ್ ಕಾರಿಡಾರ್ ಹಾದುಹೋಗುವ ಭಾಗದಲ್ಲಿ ಭೂಸ್ವಾಧೀನ ಅಗತ್ಯವಿರುವ ಆಸ್ತಿದಾರರಿಗೆ ನೋಟಿಸ್ ನೀಡುವುದು ಸೇರಿದಂತೆ ವಿವಿಧ ಸಂಸ್ಥೆಗಳು ನಡೆಸಿರುವ ಸರ್ವೆಯಲ್ಲಿನ ಅಂಶಗಳಿಗೆ ಶುಕ್ರವಾರ ಮಾಧ್ಯಮ ಪ್ರಕಟಣೆ ಮೂಲಕ ಉತ್ತರ ನೀಡಲಾಗುವುದು.
-ಬಿ.ಎಸ್.ಶಿವಕುಮಾರ್, ಕೆಆರ್‌ಡಿಸಿಎಲ್ ವ್ಯವಸ್ಥಾಪಕ ನಿರ್ದೇಶಕ.
ವರದಿ : ಲಿಂಗರಾಜು ಕೋರಾ
