ಬೆಂಗಳೂರಿನ ಆರ್‌ವಿ ರಸ್ತೆ-ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ರೈಲಿನ ಪರೀಕ್ಷಾರ್ಥ ಸಂಚಾರ ನಡೆಯಿತು. ಮೆಟ್ರೋ ರೈಲು ಸುರಕ್ಷತಾ ಆಯುಕ್ತರ ತಂಡವು ಹಳದಿ ಮಾರ್ಗದಲ್ಲಿ ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್‌ನಿಂದ ತರಿಸಲಾದ ರೈಲುಗಳ ತಪಾಸಣೆ ನಡೆಸಿತು.

ಬೆಂಗಳೂರು (ಫೆ.24): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಲವು ದಿನಗಳಿಂದ ಭಾರೀ ನಿರೀಕ್ಷೆ ಹುಟ್ಟಿಸಿರುವ ಆರ್‌ವಿ ರಸ್ತೆ-ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಶೀಘ್ರವೇ ಆರಂಭವಾಗಲಿದೆ. ಈ ಅಂಗವಾಗಿ ಸೋಮವಾರ (ಫೆ.24) ಮಧ್ಯಾಹ್ನ ಚೀನಾದಿಂದ ಇತ್ತೀಚೆಗೆ ತರಿಸಲಾದ ಚಾಲಕ ರಹಿತ ಮೆಟ್ರೋ ರೈಲಿನ ಪರೀಕ್ಷಾರ್ಥ ಸಂಚಾರ ಮಾಡಲಾಯಿತು.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿ. (ಬಿಎಂಆರ್‌ಸಿಎಲ್) ಹಳದಿ ಮಾರ್ಗದಲ್ಲಿ ಸೋಮವಾರದಂದು ಚಾಲಕ ರಹಿತ ಮೆಟ್ರೋ ರೈಲು ಪರೀಕ್ಷಾರ್ಥ ಸಂಚಾರ ಆಯೋಜನೆ ಮಾಡಲಾಗಿತ್ತು. ಈ ವೇಳೆ ಮೆಟ್ರೋ ರೈಲು ಸುರಕ್ಷತಾ ಆಯುಕ್ತ (CMRS) ಆಯುಕ್ತ ಎ.ಎಂ. ಚೌಧರಿ ನೇತೃತ್ವದ ತಂಡದಿಂದ RV ರಸ್ತೆ ಮತ್ತು ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ (CRRC)ಯಿಂದ ತರಿಸಲಾದ ಚಾಲಕರಹಿತ ರೈಲುಗಳ ಶಾಸನಬದ್ಧ ತಪಾಸಣೆಯನ್ನು ನಡೆಸಲಾಯಿತು. ಹೊಸ ರೋಲಿಂಗ್ ಸ್ಟಾಕ್/ರೈಲಿನ ಅನುಮೋದನೆಗಾಗಿ ರೈಲ್ವೆ ಸಚಿವಾಲಯವನ್ನು ಸಂಪರ್ಕಿಸುವ ಮೊದಲು ಇದು ಕಡ್ಡಾಯ ಅವಶ್ಯಕತೆಯಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ಬೆಂಗಳೂರು ಅಭಿವೃದ್ಧಿ ವಿಚಾರದಲ್ಲಿ ಕನಕಪುರ ಬಂಡೆಗೆ ಡಿಚ್ಚಿ ಹೊಡೆದ ಉದ್ಯಮಿ ಮೋಹನ್‌ದಾಸ್ ಪೈ!

ರೋಲಿಂಗ್ ಸ್ಟಾಕ್/ರೈಲು ಅನುಮೋದನೆಯನ್ನು ರೈಲ್ವೇ ಮಂಡಳಿ ಸ್ವೀಕರಿಸಿದ ನಂತರ ಮತ್ತು ಈ ಮಾರ್ಗದಲ್ಲಿ ಸಿಗ್ನಲಿಂಗ್ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಸಿಗ್ನಲಿಂಗ್ ಪರೀಕ್ಷೆ ಯಶಸ್ವಿಯಾದ ನಂತರ ಸಂಪೂರ್ಣ ಹಳದಿ ಮಾರ್ಗ R-5 ವಿಭಾಗದ ಪರಿಶೀಲನೆಗಾಗಿ ಮತ್ತೊಮ್ಮೆ ಮೆಟ್ರೋ ರೈಲು ಸುರಕ್ಷತಾ ಆಯುಕ್ತರನ್ನು (CMRS) ಬೆಂಗಳೂರಿಗೆ ಕರೆಸಲಾಗುತ್ತದೆ. ಅವರು ಬಂದು ಪರಿಶೀಲನೆ ಮಾಡಿ ಅನುಮೋದನೆ ನೀಡಿದ ನಂತರ ಈ ಮಾರ್ಗವನ್ನು ವಾಣಿಜ್ಯ ಸೇವೆ ನೀಡಲು ಕಾರ್ಯಾಚರಣೆಗೆ ಮುಕ್ತಗೊಳಿಸಲಾಗುತ್ತದೆ.