Asianet Suvarna News Asianet Suvarna News

ಹುಳಿಮಾವು ಕೆರೆ ಏರಿ ದುರಂತಕ್ಕೆ ಬಿಡಿಎ ಹೊಣೆ?

ಕೆರೆ ಏರಿ ದುರಂತಕ್ಕೆ ಬಿಡಿಎ ಹೊಣೆ?| ಮಳೆಯಿಂದಾಗಿ ತುಂಬಿದ್ದ ಹುಳಿಮಾವು ಕೆರೆ| ಅಭಿವೃದ್ಧಿ ಕಾಮಗಾರಿಗೆ ಅಡ್ಡಿ ಎಂದು ನೀರು ಹೊರ ತೆಗೆಯಲು ಬಿಡಿಎ ಯತ್ನ| ಕೆರೆ ಕೋಡಿ ಪ್ರದೇಶ ಬಿಟ್ಟು ಏರಿಯಲ್ಲಿ ನೀರು ಹೊರ ಹಾಕಲು ಯತ್ನಿಸಿದಾಗ ಏಕಾಏಕಿ ನುಗ್ಗಿದ ನೀರು| ಸ್ಥಳೀಯರ ಆರೋಪ

BDA Is Responsible For Hulimavu Lake Tragedy
Author
Bangalore, First Published Nov 25, 2019, 10:20 AM IST

ಬೆಂಗಳೂರು[ನ.25]: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆರೆ ಏರಿ ಒಡೆದು ಸಾವಿರಾರು ಮನೆಗಳಿಗೆ ನೀರು ನುಗ್ಗಿ ಅನಾಹುತ ಉಂಟಾಗಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.

ಕೆರೆಯನ್ನು ಅಭಿವೃದ್ಧಿ ಪಡಿಸುವುದಕ್ಕೆ ಬಿಡಿಎ ಅಧಿಕಾರಿಗಳು ಮುಂದಾಗಿದ್ದರು. ಮಳೆ ಬಂದು ಭಾರೀ ಪ್ರಮಾಣದಲ್ಲಿ ನೀರು ಕೆರೆಯಲ್ಲಿ ತುಂಬಿಕೊಂಡಿದ್ದರಿಂದ ಕಾಮಗಾರಿ ನಡೆಸುವುದಕ್ಕೆ ತೊಂದರೆ ಉಂಟಾಗುತ್ತಿದೆ ಎಂಬ ಕಾರಣಕ್ಕೆ ಬಿಡಿಎ ಅಧಿಕಾರಿಗಳು ನೀರನ್ನು ಹೊರ ಹರಿಸುವುದಕ್ಕೆ ಮುಂದಾದ ವೇಳೆ ಈ ಘಟನೆ ನಡೆದಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪ ಮಾಡಿದ್ದಾರೆ.

ಮೇಯರ್‌ಗೆ ಏನು ಗೊತ್ತಿಲ್ಲ: ಪಾಲಿಕೆ ಸದಸ್ಯೆ

ಇನ್ನು ಕೆರೆ ಏರಿ ಒಡೆದ ಪ್ರದೇಶಕ್ಕೆ ಭಾನುವಾರ ಭೇಟಿ ನೀಡಿದ ವೇಳೆ ಮೇಯರ್‌ ಗೌತಮ್‌ ಕುಮಾರ್‌ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ‘ಸ್ಥಳೀಯರು ಯಾರೋ ಕೆರೆ ಏರಿ ಒಡೆದು ಹಾಕಿದ್ದಾರೆ’ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದರು. ಆದರೆ, ಅದನ್ನು ಒಪ್ಪದ ಅರಕೆರೆ ವಾರ್ಡ್‌ನ ಪಾಲಿಕೆ ಸದಸ್ಯೆ ಭಾಗ್ಯಲಕ್ಷ್ಮೇ, ‘ಮೇಯರ್‌ ಗೌತಮ್‌ ಕುಮಾರ್‌ ಈಗ ಇಲ್ಲಿಗೆ ಬಂದಿದ್ದಾರೆ. ಅವರಿಗೆ ಕೆರೆ ಏರಿ ಒಡೆದಿರುವ ಬಗ್ಗೆ ಏನು ಗೊತ್ತಿಲ್ಲ. ಹಾಗಾಗಿ ಸ್ಥಳೀಯರು ಕೆರೆ ಏರಿ ಒಡೆದಿದ್ದಾರೆ ಎಂದು ಹೇಳಿದ್ದಾರೆ. ಬಿಡಿಎ ಗುತ್ತಿಗೆದಾರ ಕಾರ್ತಿಕ್‌ ಎಂಬುವವರು ಕೆರೆ ಏರಿ ಒಡೆದಿದ್ದಾರೆ’ ಎಂದು ಸ್ಪಷ್ಟನೆ ನೀಡಿದರು.

ಸರ್ಕಾರ ಆದೇಶಿಸಿದರೂ ಹಸ್ತಾಂತರಿಸದ ಬಿಡಿಎ?:

ಸುಮಾರು 140 ಎಕರೆ ಪ್ರದೇಶದಲ್ಲಿರುವ ಹುಳಿಮಾವು ಕೆರೆಯನ್ನು ಬಿಬಿಎಂಪಿಗೆ ಹಸ್ತಾಂತರಿಸುವಂತೆ ರಾಜ್ಯ ಸರ್ಕಾರ 2016ರಲ್ಲಿ ಆದೇಶ ಮಾಡಿತ್ತು. ಆದರೆ, ಬಿಡಿಎ ಕೆರೆ ಒತ್ತುವರಿ, ಜಲಾನಯ ಪ್ರದೇಶ, ಸರಹದ್ದು ಸರ್ವೇ ಮಾಡಿ ಬಿಬಿಎಂಪಿಗೆ ಹಸ್ತಾಂತರ ಮಾಡಬೇಕಿತ್ತು. ಆದರೆ, ಈವರೆಗೂ ಮಾಡಿಲ್ಲ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸೋಮವಾರ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮಾಹಿತಿ ಪಡೆದುಕೊಳ್ಳುವುದಾಗಿ ಮೇಯರ್‌ ಗೌತಮ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

6 ಕೋಟಿ ಮೀಸಲು:

ಇನ್ನು ಬಿಡಿಎ ಅಧೀನದಲ್ಲಿದ್ದ ಹುಳಿಮಾವು ಕೆರೆಯನ್ನು 2016ರಲ್ಲಿ ರಾಜ್ಯ ಸರ್ಕಾರ ಬಿಬಿಎಂಪಿಗೆ ಹಸ್ತಾಂತರಿಸಿದೆ. ಕೆರೆ ಅಭಿವೃದ್ಧಿಗೆ ಬಿಬಿಎಂಪಿ .6 ಕೋಟಿಗಳನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದ್ದು, ಈವರೆಗೂ ಯಾವುದೇ ಕಾಮಗಾರಿ ಕೈಗೊಂಡಿಲ್ಲ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ತಿಳಿಸಿದ್ದಾರೆ.

Follow Us:
Download App:
  • android
  • ios