ಅಯೋಧ್ಯೆ ಹೊರ ಭಾಗದಲ್ಲಿ ಮಸೀದಿಗೆ ಜಾಗ ನೀಡಿ, ಸರ್ಕಾರಕ್ಕೆ ವಿಹಿಂಪ ಒತ್ತಾಯ!
ಮಸೀದಿ ನಿರ್ಮಾಣದ 5 ಎಕ್ರೆ ಜಮೀನು| ರಾಮ ಜನ್ಮಭೂಮಿ ಬಳಿ ಇರಬಾರದು!| ಸರ್ಕಾರಕ್ಕೆ ವಿಶ್ವ ಹಿಂದೂ ಪರಿಷತ್ ಮುಖಂಡರ ಒತ್ತಾಯ
ನವದೆಹಲಿ[ನ.17]: ಸುಪ್ರೀಂಕೋರ್ಟ್ ಆದೇಶದಂತೆ ಮಸೀದಿ ನಿರ್ಮಾಣಕ್ಕೆ ಅಯೋಧ್ಯೆಯಲ್ಲಿ ನೀಡಲಾಗುವ 5 ಎಕರೆ ಜಮೀನು ರಾಮ ಜನ್ಮಭೂಮಿ ಭೂಮಿ ಅಯೋಧ್ಯೆಯಿಂದ 15-20 ಕಿ.ಮೀ ದೂರದಲ್ಲಿರಬೇಕು ಎಂದು ವಿಶ್ವ ಹಿಂದೂ ಪರಿಷತ್ ಒತ್ತಾಯಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವ ಹಿಂದೂ ಪರಿಷತ್ ಪ್ರಾಂತೀಯ ವಕ್ತಾರ ಶರದ್ ವರ್ಮಾ, ‘ನಾವು ಈ ಹಿಂದಿನಿಂದಲೂ ಮೊಘಲ್ ದೊರೆ ಬಾಬರ್ ಹೆಸರಿನಲ್ಲಿ ಯಾವುದೇ ಮಸೀದಿ ನಿರ್ಮಾಣ ಮಾಡಬಾರದೆಂದು ಒತ್ತಾಯಿಸುತ್ತಾ ಬಂದಿದ್ದೇವೆ. ಅದೇ ರೀತಿ ಇದೀಗ ಅಯೋಧ್ಯೆಯಲ್ಲಿ ನಿರ್ಮಾಣವಾಗುವ ಮಸೀದಿಯು ಚೌಧಾ ಕೋಶಿ ಪರಿಕ್ರಮ ಪ್ರದೇಶದಿಂದ ಹೊರಗಿರಬೇಕು’ ಎಂದು ಹೇಳಿದ್ದಾರೆ.
ರಾಮ ಜನ್ಮಭೂಮಿ ಅಥವಾ ಕೋಶಿ ಪರಿಕ್ರಮ ಪ್ರದೇಶದಿಂದ 14 ಕಿ. ಮೀ ದೂರದಲ್ಲಿರುವ ಸದಾರ್ ತಾಲೂಕಿನ ಶನವಾ ಗ್ರಾಮದಲ್ಲಿ ಮಸೀದಿ ನಿರ್ಮಾಣಕ್ಕೆ ಸ್ಥಳ ಗುರುತಿಸಬಹುದು. ಅಲ್ಲದೆ, ಈ ಸ್ಥಳವು ಬಾಬರ್‌ನ ಕಮಾಂಡರ್ ಮೀರ್ ಬಕ್ ಸಮಾಧಿ ಸಹ ಇಲ್ಲೇ ಇದೆ ಎಂಬುದು ವಿಎಚ್‌ಪಿ ನಾಯಕರ ಪ್ರತಿಪಾದನೆ.
ಅಯೋಧ್ಯೆಯ ರಾಮ ಜನ್ಮಭೂಮಿ ಹಿಂದೂಗಳಿಗೆ ಸೇರಿದ್ದು ಎಂದು ತೀರ್ಪು ಪ್ರಕಟಿಸಿದ್ದ ಸುಪ್ರೀಂ ಕೋರ್ಟ್, ಮಸೀದಿ ಕಟ್ಟಲು ಅಯೋಧ್ಯೆಯಲ್ಲೇ ಮುಸ್ಲಿಮರಿಗೆ ಪ್ರತ್ಯೇಕ 5 ಎಕ್ರೆ ಜಮೀನು ನೀಡಬೇಕು ಎಂದು ಹೇಳಿತ್ತು.