Asianet Suvarna News Asianet Suvarna News

ಮಂಗ ಓಡಿಸಲು ಕರಡಿಯಾದ ವಿಮಾನ ನಿಲ್ದಾಣ ಸಿಬ್ಬಂದಿ!

ಎಲೆ ಮರೆಯ ಕಾಯಿಯಂತೆ ದುಡಿಯುವ ಕಾಯಕ ಯೋಗಿಗಳು| ಮಂಗಗಳನ್ನು ಓಡಿಸಲು ಕರಡಿ ವೇಷ ತೊಡುವ ಸಿಬ್ಬಂದಿ| ಗುಜರಾತ್‌ನ ಅಹಮದಾಬಾದ್‌ನ ಸರ್ದಾರ್ ವಲ್ಲಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ| ರನ್‌ ವೇಯಲ್ಲಿ ಗುಂಪು ಸೇರುವ ಮಂಗಗಳನ್ನು ಕರಡಿ ವೇಷ ತೊಟ್ಟು ಓಡಿಸುವ ಸಿಬ್ಬಂದಿ| ಸುಗಮ ವಿಮಾನ ಸಂಚಾರಕ್ಕಾಗಿ ಸಿಬ್ಬಂದಿಯಿಂದ ಕರಡಿ ವೇಷ|

Gujarat Airport Official Dressed As A Bear Chases Away Monkeys
Author
Bengaluru, First Published Feb 7, 2020, 7:38 PM IST

ಅಹಮದಾಬಾದ್(ಫೆ.07): ಈ ದೇಶವನ್ನು ಸೈನಿಕರು ಕಾಯುತ್ತಾರೆ. ಸಮಾಜ ರಕ್ಷಣೆಯಲ್ಲಿ ಪೊಲೀಸರು ನಿರತರಾಗಿದ್ದಾರೆ. ಶಾಸನಗಳನ್ನು ಜಾರಿಗೆ ತಂದು ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವುದು ಸರ್ಕಾರಗಳ ಜವಾಬ್ದಾರಿ.

ಆದರೆ ದೇಶದ ದೈನಂದಿನ ಕೆಲಸ ಕಾರ್ಯಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಎಲೆ ಮರೆಯ ಕಾಯಿಗಳಂತೆ ದುಡಿಯುವ ಸರ್ಕಾರಿ ನೌಕರರು ಹಾಗೂ ಇತರ ಸಿಬ್ಬಂದಿ ಹೆಗಲ ಮೇಲಿದೆ.

ಸರ್ಕಾರಿ ನೌಕರ ಎಂದಾಕ್ಷಣ ಲಂಚಗುಳಿತನ, ಭ್ರಷ್ಟಾಚಾರ ಕೇವಲ ಇವುಗಳೇ ತಲೆಗೆ ಬರುತ್ತವೆ. ಆದರೆ ಅಧಿಕ ಸಂಖ್ಯೆಯ ಸರ್ಕಾರಿ ನೌಕರರು ಹಾಗೂ ಸಿಬ್ಬಂದಿ ನಿಸ್ಸಂದೇಹವಾಗಿಯೂ ಈ ದೇಶದ ದೈನಂದಿನ ಚಟುವಟಿಕೆಗಳನ್ನು ನಿಭಾಯಿಸುವ ಛಾತಿಯುಳ್ಳವರು ಎಂಬುದು ದಿಟ.

ಇದಕ್ಕೆ ಪುಷ್ಠಿ ಎಂಬಂತೆ ಮಂಗಗಳ ಕಾಟ ಎದುರಿಸುತ್ತಿದ್ದ ಗುಜರಾತ್‌ನ ಅಹಮದಾಬಾದ್‌ನ ಸರ್ದಾರ್ ವಲ್ಲಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ,  ಸಿಬ್ಬಂದಿಯೊಬ್ಬರು ಕರಡಿ ವೇಷ ತೊಟ್ಟು ಮಂಗಗಳನ್ನು ಓಡಿಸಿದ್ದಾರೆ.

ಸುಗಮ ವಿಮಾನ ಸಂಚಾರಕ್ಕೆ ಕಂಟಕವಾಗಿದ್ದ ಮಂಗಗಳನ್ನು ಓಡಿಸಲು, ಸಿಬ್ಬಂದಿ ಕಳೆದೊಂದು ವಾರದಿಂದ ಕರಡಿ ವೇಷ ತೊಟ್ಟು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ವಿಮಾನ ನಿಲ್ದಾಣದ ಡೈರೆಕ್ಟರ್ ಮನೋಜ್ ಗಂಗಲ್, ಗುಂಪು ಗುಂಪಾಗಿ ರನ್ ವೇಯಲ್ಲಿ ಬಂದು ಸೇರುತ್ತಿದ್ದ ಮಂಗಗಳು ವಿಮಾನ ಹಾರಾಟಕ್ಕೆ ಅಡ್ಡಿಯನ್ನುಂಟು ಮಾಡುತ್ತಿದ್ದವು. ಈ ಕಾರಣಕ್ಕೆ ನಮ್ಮ ಸಿಬ್ಬಂದಿ ಕಳೆದೊಂದು ವಾರದಿಂದ ಕರಡಿ ವೇಷ ತೊಟ್ಟು ಮಂಗಗಳನ್ನು ಓಡಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಸುಗಮ ವಿಮಾನ ಹಾರಾಟಕ್ಕೆ ಕರಡಿ ವೇಷ ತೊಟ್ಟು ಮಂಗಗಳನ್ನು ಓಡಿಸುತ್ತಿರುವ ಸಿಬ್ಬಂದಿಯ ಕಾರ್ಯಕ್ಕೆ ಎಲ್ಲರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Follow Us:
Download App:
  • android
  • ios