ಸಾಮಾಜಿಕ ಜಾಲತಾಣದಲ್ಲಿ 'ಗೋ ಬ್ಯಾಕ್ ಮೋದಿ' ಟ್ರೆಂಡ್: ಕಾರಣಗಳು ಹಲವು!
ಪ್ರಧಾನಿ ಮೋದಿ ಕರ್ನಾಟಕ ಭೇಟಿ ಹಿನ್ನೆಲೆ| ತುಮಕೂರಿನ ಸಿದ್ಧಗಂಗಾ ಮಠಕ್ಕೆ ಪ್ರಧಾನಿ ಮೋದಿ ಭೇಟಿ| ಸಾಮಾಜಿಕ ಜಾಲತಾಣದಲ್ಲಿ 'ಗೋ ಬ್ಯಾಕ್ ಮೋದಿ' ಟ್ರೆಂಡ್| ಪ್ರಧಾಣಿ ಮೋದಿ ಕರ್ನಾಟಕ ಭೇಟಿಯನ್ನು ಪ್ರಶ್ನಿಸಿದ ನೆಟ್ಟಿಗರು| ನೆರೆ ಪರಿಹಾರ ವಿಳಂಬದ ವಿರುದ್ಧ ಆಕ್ರೋಶ| ಮೋದಿಗೆ ತುಮಕೂರು ಜಿಲ್ಲೆಯ ಅಭಿವೃದ್ಧಿಯ ಪ್ರತಿಜ್ಞೆ ನೆನೆಪಿಸಿದ ಕಾಂಗ್ರೆಸ್|
ಬೆಂಗಳೂರು(ಜ.02): ಪ್ರಧಾನಿ ನರೇಂದ್ರ ಮೋದಿ ಇಂದು ತುಮಕೂರಿನ ಸಿದ್ಧಗಂಗಾ ಮಠಲಕ್ಕೆ ಖಾಸಗಿ ಭೇಟಿ ನೀಡಿದ್ದು, ಮಠದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ.
ಈ ಮಧ್ಯೆ ಪ್ರಧಾನಿ ಮೋದಿ ಕರ್ನಾಟಕ ಭೇಟಿ ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಟ್ವಿಟ್ಟರ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ 'ಗೋ ಬ್ಯಾಕ್ ಮೋದಿ' ಟ್ರೆಂಡ್ ಆಗಿದೆ.
ತುಮಕೂರಿಗೆ ಪ್ರಧಾನಿ ಮೋದಿ : ಸಿದ್ಧಗಂಗಾ ಮಠಕ್ಕೆ ಭೇಟಿ
ಪ್ರಮುಖವಾಗಿ ನೆರೆ ಪರಿಹಾರದಲ್ಲಿ ವಿಳಂಬ, ಕಳಸಾ ಬಂಡೂರಿ ವಿವಾದ ಹಾಗೂ ಬೆಳಗಾವಿ ಗಡಿ ವಿವಾದ ಸೇರಿದಂತೆ ರಾಜ್ಯ ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಕೇಂದ್ರ ಧ್ವನಿಯಾಗದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಇತ್ತೀಚಿಗೆ ಸಂಭವಿಸಿದ ಭೀಕರ ಪ್ರವಾಹಕ್ಕೆ ಉತ್ತರ ಕರ್ನಾಟಕ ತತ್ತರಿಸಿತ್ತು. ಆದರೆ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರ ವಿಳಂಬ ಧೋರಣೆ ಅನುಸರಿಸಿದೆ ಎಂದು ಕೆಲವರು ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳನ್ನು ತ್ಯಜಿಸಿ ಬಿಜೆಪಿ ಸೇರಿದ ಶಾಸಕರಿಗೆ ತಲಾ 100 ಕೋಟಿ ರೂ. ನೀಡಲಾಗಿದೆ. ಅಂದರೆ 15 ಶಾಸಕರಿಗೆ ಒಟ್ಟು 1,500 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಆದರೆ ನೆರೆಪರಿಹಾರಕ್ಕೆ 8 ಲಕ್ಷಕ್ಕೂ ಅಧಿಕ ಜನಸಂಖ್ಯೆಗೆ ಕೇವಲ 1,800 ಕೋಟಿ ರೂ. ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಇದೇ ವೇಳೆ ಕೆಪಿಸಿಸಿ ಕೂಡ ಪ್ರಧಾನಿ ಮೋದಿ ಅವರ ರಾಜ್ಯ ಪ್ರವಾಸವನ್ನು ವಿರೋಧಿಸಿದ್ದು, ತುಮಕೂರಿಗೆ ಭೇಟಿ ನೀಡಿರುವ ಪ್ರಧಾನಿ ಜಿಲ್ಲೆಯ ಅಭಿವೃದ್ಧಿಗಾಗಿ ಈ ಹಿಂದೆ ನೀಡಿದ್ದ ಭರವಸೆಗಳು ಏನಾದವು ಎಂದು ಪ್ರಶ್ನಿಸಿದೆ.
ಪ್ರಧಾನಿ ಮೋದಿ ಈ ಹಿಂದೆ ತಮಿಳುನಾಡಿಗೂ ಭೇಟಿ ನೀಡಿದ್ದಾಗ 'ಗೋ ಬ್ಯಾಕ್ ಮೋದಿ' ಅಭಿಯಾನ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.