ಕಪಿಲ್ ಮಿಶ್ರಾಗೆ 48 ಗಂಟೆ ಪ್ರಚಾರ ನಡೆಸದಂತೆ ಆಯೋಗದ ನಿರ್ಬಂಧ!
ದೆಹಲಿ ಚುನಾವಣೆಯನ್ನು ಭಾರತ-ಪಾಕ್ ನಡುವಿನ ಕದನ ಎಂದಿದ್ದ ಕಪಿಲ್ ಮಿಶ್ರಾ| ಕಪಿಲ್ ಮಿಶ್ರಾ ಚುನಾವಣೆ ಪ್ರಚಾರದ ಮೇಲೆ 48 ಗಂಟೆಗಳ ನಿರ್ಬಂಧ ಹೇರಿದ ಚುನಾವಣಾ ಆಯೋಗ| ಕಪಿಲ್ ಮಿಶ್ರಾ ವಿವಾದಾತ್ಮಕ ಟ್ವೀಟ್ ಡಿಲೀಟ್ ಮಾಡಿದ ಟ್ವಿಟ್ಟರ್| ಮಾಡೆಲ್ ಟೌನ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಪಿಲ್ ಮಿಶ್ರಾ|
ನವದೆಹಲಿ(ಜ.25): ದೆಹಲಿ ವಿಧಾನಸಭೆ ಚುನಾವಣೆಯನ್ನು ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷಕ್ಕೆ ಹೋಲಿಸಿ ಟ್ಟೀಟ್ ಮಾಡಿದ್ದ ಬಿಜೆಪಿ ಅಭ್ಯರ್ಥಿ ಕಪಿಲ್ ಮಿಶ್ರಾ ಅವರಿಗೆ 48 ಗಂಟೆಗಳ ಕಾಲ ಚುನಾವಣಾ ಪ್ರಚಾರ ನಡೆಸದಂತೆ ಚುನಾವಣಾ ಆಯೋಗ ನಿರ್ಬಂಧ ಹೇರಿದೆ.
ಈ ಕುರಿತು ಮಾಹಿತಿ ನೀಡಿರುವ ಚುನಾವಣಾ ಆಯೋಗ, ಇಂದು ಸಂಜೆ 5 ಗಂಟೆಯಿಂದ ಮುಂದಿನ 48ಗಂಟೆಗಳ ಕಾಲ ಚುನಾವಚಣಾ ಪ್ರಚಾರ ನಡೆಸಬಾರದು ಎಂದು ಕಪಿಲ್ ಮಿಶ್ರಾ ಅವರಿಗೆ ತಾಕೀತು ಮಾಡಲಾಗಿದೆ ಎಂದು ಹೇಳಿದೆ.
ಕಪಿಲ್ ಮಿಶ್ರಾ ಟ್ವೀಟ್ ಡಿಲೀಟ್ ಮಾಡಲು ಟ್ವಿಟ್ಟರ್‌ಗೆ ಆಯೋಗದ ಆದೇಶ!
ಇನ್ನು ಮಿಶ್ರಾ ವಿವಾದಾತ್ಮಕ ಟ್ಟೀಟ್‌ನ್ನು ಡಿಲೀಟ್ ಮಾಡುವಂತೆ ಚುನಾವಣಾ ಆಯೋಗ ಸೂಚಿಸಿದ ಬೆನ್ನಲ್ಲೇ, ಟ್ಟಿಟ್ಟರ್ ಮಿಶ್ರಾ ಟ್ಟೀಟ್‌ನ್ನು ಡಿಲೀಟ್ ಮಾಡಿದೆ.
ಮಾಡೆಲ್ ಟೌನ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕಪಿಲ್ ಮಿಶ್ರಾ, ದೆಹಲಿಯ ಚುನಾವಣೆ ಭಾರತ(ಬಿಜೆಪಿ) ಹಾಗೂ ಪಾಕಿಸ್ತಾನ(ಆಪ್) ನಡುವಿನ ಕದನ ಎಂದು ವಿವಾದಾತ್ಮಕ ಟ್ವೀಟ್ ಮಾಡಿದ್ದರು.
ಇಷ್ಟೇ ಅಲ್ಲದೇ ದೆಹಲಿಯ ಶಾಹಿನ್ ಬಾಗ್, ಚಾಂದ್ ಬಾಗ್ ಪ್ರದೇಶಗಳಲ್ಲಿ ಮಿನಿ ಪಾಕಿಸ್ತಾನ ಸೃಷ್ಟಿಯಾಗಿದ್ದು, ರಸ್ತೆಗಳನ್ನು ಪಾಕಿಸ್ತಾನ ಪರ ಗಲಭೇಕೋರರು ಆಕ್ರಮಿಸಿಕೊಂಡಿದ್ದಾರೆ ಎಂದೂ ಮಿಶ್ರಾ ಟ್ವೀಟ್ ಮಾಡಿದ್ದರು.
ಸದ್ಯ ಮಿಶ್ರಾ ವಿವಾದಾತ್ಮಕ ಹೇಳಿಕೆ ಸಂಬಂಧ ಅವರ ವಿರುದ್ಧ ದೂರು ದಾಖಲಾಗಿದ್ದು, ಇದೀಗ ಚುನಾವಣಾ ಆಯೋಗ ಕೂಡ ಅವರ ಪ್ರಚಾರದ ಮೇಲೆ 48ಗಂಟೆಗಳ ನಿರ್ಬಂಧ ವಿಧಿಸಿದೆ.