ಹುಬ್ಬಳ್ಳಿಯಲ್ಲಿ ಅಮಿತ್ ಶಾ ಘರ್ಜನೆ: ಸಿಎಎ ಜಾರಿ ನಮ್ಮೆಲ್ಲರ ಹೊಣೆ!
ಹುಬ್ಬಳ್ಳಿಯಲ್ಲಿ ಘರ್ಜಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ| ಸಿಎಎ ವಿರೋಧಿಸುವವರಿಗೆ ದೇಶದ ಇತಿಹಾಸದ ಅರಿವಿಲ್ಲ ಎಂದ ಶಾ| ದೇಶ ವಿಭಜನೆಗೆ ಕಾಂಗ್ರೆಸ್ ಕಾರಣ ಎಂದು ಆರೋಪಿಸಿದ ಗೃಹ ಸಚಿವ| ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಸಿಎಎ ವಿರೋಧಿಸುತ್ತಿದೆ ಎಂದ ಅಮಿತ್ ಶಾ| ಎಷ್ಟೇ ವಿರೋಧ ಇದ್ದರೂ ಸಿಎಎ ಜಾರಿ ಶತಸಿದ್ಧ ಎಂದ ಗೃಹ ಸಚಿವ| ನವಭಾರತದ ನಿರ್ಮಾಣಕ್ಕೆ ಪ್ರಧಾನಿ ಮೋದಿ ಕೈಜೋಡಿಸುವಂತೆ ಶಾ ಮನವಿ| ಸಿಎಂ ಯಡಿಯೂರಪ್ಪ ಸೇರಿದಂತೆ ರಾಜ್ಯದ ಪ್ರಮುಖ ಬಿಜೆಪಿ ನಾಯಕರು ಭಾಗಿ|
ಹುಬ್ಬಳ್ಳಿ(ಜ.18): ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯನ್ನು ವಿರೋಧಿಸುತ್ತಿರುವ ಜನರಿಗೆ ಈ ದೇಶದ ಇತಿಹಾಸದ ಅರಿವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಡುಗಿದರು.
ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಪೌರತ್ವ ಕಾಯ್ದೆ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅಮಿತ್ ಶಾ, ಕಾಂಗ್ರೆಸ್ ಸೇರಿದಂತೆ ಪ್ರಮುಖ ವಿಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿವೆ ಎಂದು ಹರಿಹಾಯ್ದರು.
ಧರ್ಮದ ಆಧಾರದ ಮೇಲೆ ಈ ದೇಶವನ್ನು ಒಡೆಯಲಾಗಿದ್ದು, ಇದಕ್ಕೆ ಕಾಂಗ್ರೆಸ್ ಪ್ರಮುಖ ಕಾರಣ ಎಂದು ಅಮಿತ್ ಶಾ ಈ ವೇಳೆ ಗಂಭೀರ ಆರೋಪ ಮಾಡಿದರು.
ಹುಬ್ಬಳ್ಳಿಯಲ್ಲಿ 'ಗೋ ಬ್ಯಾಕ್ ಅಮಿತ್ ಶಾ' ಕೂಗು; SDPI ಕಾರ್ಯಕರ್ತರ ಬಂಧನ
ನೆರೆಯ ರಾಷ್ಟ್ರಗಳಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರು ಸಾಕಷ್ಟು ನೋವು ಅನುಭವಿಸಿದ್ದು, ನೊಂದ ಸಹೋದರರನ್ನು ಬರಮಾಡಿಕೊಳ್ಳುವುದು ಭಾರತೀಯರ ಕರ್ತವ್ಯ ಎಂದು ಗೃಹ ಸಚಿವರು ಅಭಿಪ್ರಾಯಪಟ್ಟರು.
ಪಾಕಿಸ್ತಾನದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ಅದೆಷ್ಟು ದೌರ್ಜನ್ಯ ನಡೆಯುತ್ತಿದೆ ಎಂದರೆ, ಈ ಹಿಂದೆ ಅಲ್ಲಿನ ಮಂತ್ರಿಯೊಬ್ಬರು ಭಾರತಕ್ಕೆ ವಾಪಸ್ ಬಂದಿದ್ದರು ಎಂದು ಅಮಿತ್ ಶಾ ಹೇಳಿದರು.
ಕಾಂಗ್ರೆಸ್’ಗೆ ವೋಟ್’ಬ್ಯಾಂಕ್ ರಾಜಕಾರಣ ಅನಿವಾರ್ಯವಾಗಿದ್ದು, ಇದೇ ಕಾರಣಕ್ಕೆ ಅದು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿದೆ. ಇವರು ನಿಜವಾದ ಗಾಂಧಿ ಭಕ್ತರಾಗಿದ್ದರೆ, ಅವರ ಆಶಯದಂತೆ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಲಿ ಎಂದು ಶಾ ಸವಾಲು ಹಾಕಿದರು.
ಯಾರು ಎಷ್ಟೇ ವಿರೋಧ ಮಾಡಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿ ಮಾಡಿಯೇ ಸಿದ್ಧ ಎಂದಿರುವ ಅಮಿತ್ ಶಾ, ರಾಹುಲ್ ಬಾಬಾ(ರಾಹುಲ್ ಗಾಂಧಿ)ಕಿರುಚುತ್ತಿರಲಿ ನಾವು ಸಿಎಎ ಜಾರಿಗೆ ತರುತ್ತೇವೆ ಎಂದು ವ್ಯಂಗ್ಯವಾಡಿದರು.
ಕರುನಾಡಿಗೆ 'ಚಾಣಕ್ಯ' ನ ಸವಾರಿ; ಸ್ವಾಗತಕ್ಕೆ ಸಜ್ಜಾಗಿದೆ ವಾಣಿಜ್ಯ ನಗರಿ
ಪ್ರಧಾನಿ ನರೇಂದ್ರ ಮೋದಿ ಹಗಲಿರುಳು ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ಅವರಿಗೆ ಬಲ ತುಂಬುವ ಮೂಲಕ ನವಭಾರತದ ನಿರ್ಮಾಣ ಕಾರ್ಯಕ್ಕೆ ಕೈಜೋಡಿಸುವಂತೆ ಅಮಿತ್ ಶಾ ಮನವಿ ಮಾಡಿದರು.
ಇದಕ್ಕೂ ಮೊದಲು ಮಾತನಾಡಿದ ಸಿಎಂ ಯಡಿಯೂರಪ್ಪ, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಿಂದ ಅಲ್ಪಸಂಖ್ಯಾತರಿಗೆ ತೊಂದರೆಯಾಗಲಿದೆ ಎಂದು ಕಾಂಗ್ರೆಸ್ ಸುಳ್ಳು ಹೇಳುತ್ತಿದೆ ಎಂದು ಹರಿಹಾಯ್ದರು.