Asianet Suvarna News Asianet Suvarna News

1 ರಾಜ್ಯ, 3 ರಾಜಧಾನಿ: ಇದು ಜಗನ್‌ ಐಡಿಯಾ

ಒಂದು ರಾಜ್ಯಕ್ಕೆ ಒಂದು ರಾಜಧಾನಿ ಇರುವುದು ಸಾಮಾನ್ಯ. ಆದರೆ, ಆಂಧ್ರಪ್ರದೇಶದಲ್ಲಿ ಮೂರು ರಾಜಧಾನಿಗಳನ್ನು ಸ್ಥಾಪಿಸಲು ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಸರ್ಕಾರ ಮುಂದಾಗಿದೆ. ಈ ಮೂಲಕ ಅಧಿಕಾರ ವಿಕೇಂದ್ರೀಕರಣ ಮಾಡಿ ಆಂಧ್ರದ ಉತ್ತರ, ದಕ್ಷಿಣ ಕರಾವಳಿ ಮತ್ತು ರಾಯಲಸೀಮೆ ಪ್ರದೇಶಗಳ ಅಭಿವೃದ್ಧಿ ಸಾಧಿಸುವ ಪಣ ತೊಟ್ಟಿದೆ.

CM Jagan Mohan Reddy 3 capital plan for Andhra legislative hurdle
Author
Bengaluru, First Published Jan 19, 2020, 4:07 PM IST

ಒಂದು ರಾಜ್ಯಕ್ಕೆ ಒಂದು ರಾಜಧಾನಿ ಇರುವುದು ಸಾಮಾನ್ಯ. ಆದರೆ, ಆಂಧ್ರಪ್ರದೇಶದಲ್ಲಿ ಮೂರು ರಾಜಧಾನಿಗಳನ್ನು ಸ್ಥಾಪಿಸಲು ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಸರ್ಕಾರ ಮುಂದಾಗಿದೆ. ಈ ಮೂಲಕ ಅಧಿಕಾರ ವಿಕೇಂದ್ರೀಕರಣ ಮಾಡಿ ಆಂಧ್ರದ ಉತ್ತರ, ದಕ್ಷಿಣ ಕರಾವಳಿ ಮತ್ತು ರಾಯಲಸೀಮೆ ಪ್ರದೇಶಗಳ ಅಭಿವೃದ್ಧಿ ಸಾಧಿಸುವ ಪಣ ತೊಟ್ಟಿದೆ.

1 ರಾಜ್ಯ, 3 ರಾಜಧಾನಿ: ಇದು ಜಗನ್‌ ಐಡಿಯಾ

ಆಂಧ್ರದ ಉತ್ತರ ಮತ್ತು ದಕ್ಷಿಣ ಕರಾವಳಿ ಹಾಗೂ ರಾಯಲಸೀಮೆ ಪ್ರದೇಶಗಳ ಅಭಿವೃದ್ಧಿಗಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ಮೋಹನ್‌ ರೆಡ್ಡಿ 3 ರಾಜಧಾನಿಗಳನ್ನು ನಿರ್ಮಿಸಲು ಮುಂದಾಗಿದ್ದಾರೆ. ಆಡಳಿತಕ್ಕೆ ಒಂದು ರಾಜಧಾನಿ, ನ್ಯಾಯಾಂಗಕ್ಕೆ ಒಂದು ರಾಜಧಾನಿ ಹಾಗೂ ಶಾಸಕಾಂಗಕ್ಕೆ ಇನ್ನೊಂದು ರಾಜಧಾನಿ - ಹೀಗೆ 3 ರಾಜಧಾನಿಗಳನ್ನು ಪ್ರತ್ಯೇಕಿಸಿದ್ದಾರೆ.

ಬಿಜೆಪಿ - ಜನಸೇನಾ ಮೈತ್ರಿ?ಪವನ್ ಕಲ್ಯಾಣ್ ಜೊತೆ ಮಾತುಕತೆಗೆ ಕನ್ನಡಿಗರ ಸಾರಥ್ಯ..!

ಇದು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದರೆ ಅಮರಾವತಿಯಿಂದ ಮುಖ್ಯಮಂತ್ರಿ ಕಾರಾರ‍ಯಲಯ ಸೇರಿದಂತೆ ಹಲವು ಇಲಾಖೆಗಳ ಕಚೇರಿಗಳು, ರಾಜಭವನ ಮತ್ತು ಸಚಿವಾಲಯಗಳು ವಿಶಾಖಪಟ್ಟಣಂಗೆ ಸ್ಥಳಾಂತರಗೊಳ್ಳಲಿವೆ. ಆಂಧ್ರಪ್ರದೇಶದ ಹೈಕೋರ್ಟ್‌ ಕರ್ನೂಲ್‌ಗೆ ಸ್ಥಳಾಂತರಗೊಳ್ಳಲಿದೆ. ಅಮರಾವತಿಯು ವಿಧಾನಸಭೆಯನ್ನು ಹೊಂದಿರುವ ಶಾಸಕಾಂಗ ರಾಜಧಾನಿಯಾಗಿ ಉಳಿಯಲಿದೆ.

ಕರ್ನೂಲ್‌ (ರಾಯಲಸೀಮೆ)- ನ್ಯಾಯಿಕ ರಾಜಧಾನಿ (ಹೈಕೋರ್ಟ್‌, ನ್ಯಾಯಾಂಗಕ್ಕೆ ಸಂಬಂಧಪಟ್ಟಎಲ್ಲಾ ಕಚೇರಿಗಳು ಇಲ್ಲಿರುತ್ತವೆ)

ಅಮರಾವತಿ (ದಕ್ಷಿಣ ಕರಾವಳಿ)- ಶಾಸಕಾಂಗ ರಾಜಧಾನಿ (ಮುಖ್ಯಮಂತ್ರಿ ಸೇರಿದಂತೆ ಸಚಿವರು ಮತ್ತು ಶಾಸಕರು ಇರುವ ಸ್ಥಳ)

ವಿಶಾಖಪಟ್ಟಣಂ (ಉತ್ತರ ಕರಾವಳಿ)- ಆಡಳಿತಾತ್ಮಕ ರಾಜಧಾನಿ (ವಿವಿಧ ಇಲಾಖೆಗಳು ಹಾಗೂ ಅಧಿಕಾರಿಗಳು ಇರುವ ಸ್ಥಳ)

ರಾಜಧಾನಿ ಸ್ಥಳಾಂತರ ಏಕೆ ಬಹು ದುಬಾರಿ?

ರಾಜಧಾನಿ ಸ್ಥಳಾಂತರ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗುವ ಗಂಭೀರ ವಿಷಯ. ವಿಶಾಖಪಟ್ಟಣಂನಿಂದ ಕರ್ನೂಲ್‌ಗೆ 700 ಕಿ.ಮೀ. ದೂರವಿವೆ. ರಾಜಧಾನಿ ಬದಲಾಗುವುದರಿಂದ ಸಾವಿರಾರು ಸರ್ಕಾರಿ ಅಧಿಕಾರಿಗಳು ಅಲ್ಲಿಂದಿಲ್ಲಿಗೆ ಸ್ಥಳಾಂತರಗೊಳ್ಳಬೇಕಾಗುತ್ತದೆ. ರಾಜ್ಯವು ಈಗಾಗಲೇ ಆರ್ಥಿಕ ನಷ್ಟದಲ್ಲಿರುವುದರಿಂದ ಇದು ಬಹುದೊಡ್ಡ ಹೊರೆ ಮತ್ತು ಅಪಾಯಕಾರಿ ನಿರ್ಣಯ ಎಂಬ ಮಾತುಗಳಿವೆ.

ಅಧಿಕಾರಿಗಳು ವಿಶಾಖಪಟ್ಟಣಂನಿಂದ ಕರ್ನೂಲ್‌, ವಿಶಾಖಪಟ್ಟಣಂನಿಂದ ಅಮರಾವತಿಗೆ ತೆರಳುವುದು ಒಂದು ರೀತಿಯ ಸವಾಲು. ಹಾಗೆಯೇ ಹೊಸ ರಾಜಧಾನಿಗಳಲ್ಲಿ ಅಧಿಕೃತ ಕಚೇರಿಗಳನ್ನು ನಿರ್ಮಿಸುವವರೆಗೆ ಸರ್ಕಾರವು ಕಚೇರಿಗಳನ್ನು ಬಾಡಿಗೆಗೆ ಪಡೆಯಬೇಕಾಗುತ್ತದೆ. ಇದು ಅನುಷ್ಠಾನಕ್ಕೆ ಬಂದರೆ ಅಮರಾವತಿಯಲ್ಲಿ ಈಗಾಗಲೇ ಸಾವಿರಾರು ಕೋಟಿ ಖರ್ಚುಮಾಡಿ ನಿರ್ಮಿಸಿರುವ ಕಟ್ಟಡಗಳು ವ್ಯರ್ಥವಾಗುತ್ತವೆ.

ಆಂಧ್ರದಲ್ಲಿ 12 ಹೊಸ ಜಿಲ್ಲೆ ರಚನೆಗೆ ಜಗನ್‌ ರೆಡ್ಡಿ ಸರ್ಕಾರ ಚಿಂತನೆ!

ನಾಯ್ಡು ಅಮರಾವತಿ ಕನಸಿಗೆ ಎಳ್ಳುನೀರು

ಹಲವಾರು ದಶಕಗಳಿಂದಲೂ ಆಂಧ್ರಪ್ರದೇಶಕ್ಕೆ ರಾಜಧಾನಿಯ ಸಮಸ್ಯೆ ಕಾಡುತ್ತಿದೆ. ಪ್ರತಿ ಬಾರಿ ರಾಜ್ಯದ ಗಡಿ ಬದಲಾದಾಗಲೂ ಆಂಧ್ರ ತನ್ನ ರಾಜಧಾನಿ ಕಳೆದುಕೊಳ್ಳುತ್ತಿದೆ. 1953ರಲ್ಲಿ ಆಂಧ್ರ ಮತ್ತು ತಮಿಳುನಾಡು ಮರುವಿಂಗಡಣೆಯಾದ ಬಳಿಕ ಆಂಧ್ರಪ್ರದೇಶ ಮದ್ರಾಸನ್ನು ಕಳೆದುಕೊಂಡಿತು. 2004ರಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣ ವಿಭಜನೆಯಾದಾಗ ಆಂಧ್ರ ತನ್ನ ರಾಜಧಾನಿಯಾಗಿದ್ದ ಹೈದರಾಬಾದನ್ನು ಕಳೆದುಕೊಂಡಿತು. ನಂತರ ಅಧಿಕಾರಕ್ಕೆ ಬಂದ ಎನ್‌.ಚಂದ್ರಬಾಬು ನಾಯ್ಡು ಸರ್ಕಾರ ವಿಜಯವಾಡಕ್ಕೆ ಹೊಂದಿಕೊಂಡಂತೆ ಅಮರಾವತಿಯಲ್ಲಿ ಶಾಶ್ವತ ರಾಜಧಾನಿ ನಿರ್ಮಿಸುವ ಬೃಹತ್‌ ಯೋಜನೆ ರೂಪಿಸಿತು.

ಇದಕ್ಕಾಗಿ ಸಿಂಗಾಪುರ ಸರ್ಕಾರದೊಂದಿಗೆ ಕೈಜೋಡಿಸಿ ಪುರಾತನ ಕಾಲದ ಸಂಸ್ಕೃತಿ, ಕಲೆ, ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುವ ‘ಗ್ರೀನ್‌ ಕ್ಯಾಪಿಟಲ್‌’ ನಿರ್ಮಿಸಲು ಆರಂಭಿಸಿತು. ರೈತರಿಂದ 33,000 ಎಕರೆ ಜಮೀನು ಖರೀದಿಸಲು ಒಪ್ಪಂದ ಮಾಡಿಕೊಂಡಿತು. ಆದರೆ ನಂತರ ಬಂದ ಜಗನ್‌ ಮೋಹನ್‌ ರೆಡ್ಡಿ ಸರ್ಕಾರ ಈ ಎಲ್ಲಾ ಒಪ್ಪಂದಗಳನ್ನೂ ರದ್ದು ಮಾಡಿದೆ. ಅಮರಾವತಿಯು ಆಂಧ್ರದ ಶಾಸಕಾಂಗ ರಾಜಧಾನಿಯಾಗಿ ಮುಂದುವರೆದರೂ ಅಧಿಕಾರ ವಿಕೇಂದ್ರೀಕರಣ ಆಗುವುದರಿಂದ ಅದು ಒಂದು ಬಲಶಾಲಿ ರಾಜಧಾನಿಯಾಗುವುದಿಲ್ಲ.

ಅಮರಾವತಿಗೆ ಸುರಿದ ಹಣವೆಷ್ಟು?

.5500 ಕೋಟಿ- ಜಗನ್‌ ಸರ್ಕಾರದ ಪ್ರಕಾರ ಅಮರಾವತಿಯಲ್ಲಿ ಮೂಲಭೂತ ಸೌಕರ‍್ಯಗಳ ನಿರ್ಮಾಣಕ್ಕೆ ಈಗಾಗಲೇ ಖರ್ಚು ಮಾಡಿರುವ ಹಣ.

.10000 ಕೋಟಿ- ಚಂದ್ರಬಾಬು ನಾಯ್ಡು ಅವರ ಪಕ್ಷ ಟಿಡಿಪಿ ಪ್ರಕಾರ ಈಗಾಗಲೇ ಅಮರಾವತಿಗೆ ಸರ್ಕಾರದಿಂದ ಇಷ್ಟುಹಣ ವ್ಯಯಿಸಲಾಗಿದೆ.

.33,000 ಕೋಟಿ- ಯೋಜನೆ ಪೂರ್ಣಗೊಳ್ಳಲು ಬೇಕಾಗಿರುವ ಅಂದಾಜು ಮೊತ್ತ. ಆದರೆ ಈಗಾಗಲೇ ಹಲವು ಮೂಲಗಳು ಹಣ ಬಿಡುಗಡೆ ನಿಲ್ಲಿಸಿವೆ.

ರಾಜಧಾನಿ ಹೊಯ್ದಾಟಕ್ಕೆ ಜಾತಿ, ವಾಸ್ತು ಕಾರಣ?

ಆಂಧ್ರದ ಎರಡು ಪ್ರಬಲ ಪ್ರಾದೇಶಿಕ ಪಕ್ಷಗಳಾದ ವೈಎಸ್‌ಆರ್‌ಸಿಪಿ ಮತ್ತು ಟಿಡಿಪಿ ಎರಡೂ ಜಾತಿ ಆಧಾರದಲ್ಲಿ ರಾಜಧಾನಿ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿಕೊಂಡಿವೆ. ನಾಯ್ಡು ಮತ್ತು ಜಗನ್‌ ಮೋಹನ್‌ ರೆಡ್ಡಿ ಇಬ್ಬರೂ 1953ರಿಂದಲೂ ಆಂಧ್ರ ರಾಜಕಾರಣದ ಮೇಲೆ ಪ್ರಭಾವ ಬೀರುತ್ತಿರುವ ಪ್ರಬಲ ಸಮುದಾಯಕ್ಕೆ ಸೇರಿದವರು. ಅಮರಾವತಿಯಲ್ಲಿ ನಾಯ್ಡು ಅವರ ಸಮುದಾಯ ಪ್ರಬಲವಾಗಿದೆ. ಹಾಗಾಗಿ ಅಮರಾವತಿ ಕನಸಿನ ರಾಜಧಾನಿಗೆ ಜಗನ್‌ ಅವರ ಸಮುದಾಯ ವಿರೋಧಿಸುತ್ತಿದೆ.

ಹಾಗೆಯೇ ಹೊಸ ರಾಜಧಾನಿ ನಿರ್ಮಾಣದಲ್ಲಿ ವಾಸ್ತು ಕೂಡ ಪ್ರಭಾವ ಬೀರಿದೆ ಎನ್ನಲಾಗುತ್ತಿದೆ. ಈ ಹಿಂದೆ ನಾಯ್ಡು ಅಮರಾವತಿಯ ಉತ್ತರ ಭಾಗಕ್ಕೆ ಕೃಷ್ಣಾ ನದಿ ಇದೆ ಎಂದು ರಾಜಧಾನಿಯಾಗಿ ಆಯ್ಕೆ ಮಾಡಿದ್ದರು. ಈಗ ಜಗನ್‌ ಕೂಡ ಇನ್ನೊಬ್ಬ ಸ್ವಾಮೀಜಿಯ ಸಲಹೆಯಂತೆ ರಾಜಧಾನಿ ಸ್ಥಳಾಂತರಿಸುತ್ತಿದ್ದಾರೆ ಎಂದು ಟಿಡಿಪಿ ಆರೋಪಿಸಿದೆ.

ಒಂದಕ್ಕಿಂತ ಹೆಚ್ಚು ರಾಜಧಾನಿ ಹೊಂದಿರುವ ದೇಶಗಳು

ಜಗತ್ತಿನಲ್ಲಿ ಒಂದಕ್ಕಿಂತ ಹೆಚ್ಚು ರಾಜಧಾನಿಗಳಿರುವ ಹಲವು ದೇಶಗಳಿವೆ. ದಕ್ಷಿಣ ಆಫ್ರಿಕಾ ಮೂರು ರಾಜಧಾನಿಯನ್ನು ಹೊಂದಿದೆ. ಪ್ರಿಟೋರಿಯಾ ಕಾರಾರ‍ಯಂಗ ರಾಜಧಾನಿಯಾಗಿದ್ದರೆ, ಕೇಪ್‌ಟೌನ್‌ ಶಾಸಕಾಂಗ ರಾಜಧಾನಿ ಮತ್ತು ಬ್ಲೋಯೆಮ್‌ಫೋಂಟೈನ್‌ ನ್ಯಾಯಾಂಗ ರಾಜಧಾನಿ. ಶ್ರೀಲಂಕಾದಲ್ಲಿ ಜಯವರ್ಧನಪುರ ಕೋಟೆ ಶಾಸಕಾಂಗ ರಾಜಧಾನಿಯಾಗಿದ್ದರೆ, ಕೊಲಂಬೋ ಆಡಳಿತಾತ್ಮಕ ಮತ್ತು ನ್ಯಾಯಾಂಗ ರಾಜಧಾನಿ. ಮಲೇಷ್ಯಾದಲ್ಲಿಯೂ ಕೌಲಾಲಂಪುರ ರಾಯಲ್‌ ಕ್ಯಾಪಿಟಲ್‌ ಆಗಿದ್ದರೆ, ಪುತ್ರಜಯ ಆಡಳಿತಾತ್ಮಕ ಮತ್ತು ನ್ಯಾಯಾಂಗ ರಾಜಧಾನಿ. ಬೊಲಿವಿಯಾ, ಚಿಲಿ, ನೆದರ್ಲೆಂಡ್‌, ದಕ್ಷಿಣ ಕೊರಿಯಾ, ಸ್ವಿಜರ್‌ಲೆಂಡ್‌, ತಾಂಜೇನಿಯಾ ಸೇರಿದಂತೆ ಅನೇಕ ದೇಶಗಳು ಒಂದಕ್ಕಿಂತ ಹೆಚ್ಚು ರಾಜಧಾನಿಯನ್ನು ಹೊಂದಿವೆ.

ಭಾರತದಲ್ಲಿ 3 ರಾಜಧಾನಿ ಯಾವ ರಾಜ್ಯಕ್ಕೂ ಇಲ್ಲ

ಭಾರತದ ರಾಜ್ಯಗಳ ಪೈಕಿ ಮಹಾರಾಷ್ಟ್ರವು ಮುಂಬೈ ಮತ್ತು ನಾಗ್ಪುರ (ಇಲ್ಲಿ ರಾಜ್ಯ ವಿಧಾನಸಭೆಯ ಚಳಿಗಾಲದ ಅಧಿವೇಶನ ನಡೆಯುತ್ತದೆ) ಎರಡನ್ನೂ ರಾಜಧಾನಿಗಳನ್ನಾಗಿ ಮಾಡಿಕೊಂಡಿದೆ. ಹಾಗೆಯೇ ಹಿಮಾಚಲ ಪ್ರದೇಶವೂ ಶಿಮ್ಲಾ ಮತ್ತು ಧರ್ಮಶಾಲಾ (ಚಳಿಗಾಲದ ರಾಜಧಾನಿ)ವನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದೆ. ಈ ಹಿಂದೆ ರಾಜ್ಯವಾಗಿದ್ದ (ಈಗ ಕೇಂದ್ರಾಡಳಿತ ಪ್ರದೇಶ) ಜಮ್ಮು ಮತ್ತು ಕಾಶ್ಮೀರವೂ ಶ್ರೀನಗರ ಮತ್ತು ಜಮ್ಮುವನ್ನು (ಚಳಿಗಾಲದ ರಾಜಧಾನಿ) ರಾಜಧಾನಿ ಮಾಡಿಕೊಂಡಿತ್ತು.

Follow Us:
Download App:
  • android
  • ios