ಕೊರೋನಾ ಪೀಡಿತರ ಸಹಾಯಕ್ಕೆ ತಮ್ಮ ಪಿಗ್ಗಿ ಹಣವನ್ನು ನೀಡಿದ ಮಕ್ಕಳು!
ಕೊರೋನಾ ಪೀಡಡಿತರ ನೆರವಿಗೆ ಮಕ್ಕಳ ಸಹಾಯ| ಹೆತ್ತವರು ಕೊಟ್ಟ ಹಣವನ್ನು ಕೂಡಿಟ್ಟು ಪೀಡಿತರ ಸಹಾಯಕ್ಕೆಂದುಉ ಕೊಟ್ಟ ಮಕ್ಕಳು| ಪುಟ್ಟ ಮಕ್ಕಳ ವಿಡಿಯೋ ವೈರಲ್
ಲಕ್ನೋ(ಮಾ.30): ನೆರೆ ರಾಷ್ಟ್ರ ಚೀನಾದಲ್ಲಿ ಹುಟ್ಟಿಕೊಂಡ ಮಾರಕ ವೈರಸ್ ನೋಡ ನೋಡುತ್ತಿದ್ದಂತೆ ನಮ್ಮ ದೇಶಕ್ಕೂ ಲಗ್ಗೆ ಇಟ್ಟಿದೆ. ಸೋಂಕಿತರ ಸಂಖ್ಯೆ ಒಂದು ಸಾವಿರ ದಾಟಿದೆ. ಹೀಗಿರುವಾಗ ಇಡೀ ದೇಶವನ್ನೇ ಸಂಪೂರ್ಣವಾಗಿ ಲಾಕ್‌ಡೌನ್ ಮಾಡಲಾಗಿದೆ. ಹೀಗಿದ್ದರೂ ಸೋಂಕಿತರ ಸಂಖ್ಯೆ ಇಳಿಮುಖವಾಗಿಲ್ಲ. ಸದ್ಯ ಕೊರೋನಾ ಪೀಡಿತರ ನೆರವಿಗೆ ಕೈಲಾದಷ್ಟು ಸಹಾಯ ಮಾಡುವಂತೆ ಪಿಎಂ ಮನವಿ ಮಾಡಿದ್ದು, ಚಿತ್ರನಟರು, ಕ್ರಿಕೆಟಿಗರು ಸೇರಿದಂತೆ ಜನಸಾಮಾನ್ಯರೂ ಹಣ ನೀಡಿ ಧನ ಸಹಾಯ ಮಾಡಿದ್ದಾರೆ. ಹೀಗಿರುವಾಗ ಕೆಲ ಮಕ್ಕಳು ಹೆತ್ತವರು ತಮ್ಮ ತಿಂಡಿಗೆಂದು ನೀಡಿದ್ದ ಹಣವನ್ನು ಕೂಡಿಟ್ಟು ಅದನ್ನೇ ಕೊರೋನಾ ಪೀಡಿತರ ನೆರವಿಗೆ ನೀಡಿದ್ದಾರೆ.
ಹೌದು ಸಹಾಯ ಮಾಡಲು ಹೃದಯವಂತರಾಗಿರಬೇಕು. ಅಂತಹ ನಿಸ್ವಾರ್ಥ ಹಾಗೂ ನಿಷ್ಕಲ್ಮಶ ಮನಸ್ಸು, ಹೃದಯ ಪುಟ್ಟ ಮಕ್ಕಳಲ್ಲಿ ಮಾತ್ರ ಇರಲು ಸಾಧ್ಯ. ಇದಕ್ಕೆ ಸಾಕ್ಷಿ ಎಂಬಂತಿದೆ ಉತ್ತರ ಪ್ರದೇಶದ ನೀಮಚ್ ಜಿಲ್ಲೆಯಲ್ಲಿ ನಡೆದ ಘಟನೆ. ಇಲ್ಲಿನ ಇಬ್ಬರು ಪುಟ್ಟ ಮಕ್ಕಳು ತಮ್ಮ ತಂದೆ ತಾಯಿ ತಿಂಡಿಗೆಂದು ನೀಡಿದ್ದ ಹಣವನ್ನು ಏನಾದರೂ ಕೊಂಡುಕೊಳ್ಳಬೇಕೆಂದು ಕೂಡಿಟ್ಟಿದ್ದರು. ಆದರೀಗ ಕೊರೋನಾ ಹಾವಳಿ ಹೆಚ್ಚಿದ್ದು, ಪೀಡಿತರ ಸಹಾಯಕ್ಕೆ ಹಣದ ಅಗತ್ಯವಿದೆ. ಹೀಗರುವಾಗ ಪಿಎಂ ಮನವಿ ಆಲಿಸಿದ ಈ ಪುಟ್ಟ ಮಕ್ಕಳು ತಾವು ಕೂಡಿಟ್ಟಿದ್ದ ಹಣವನ್ನು ತೆಗೆದುಕೊಂಡು ನೇರವಾಗಿ ಪೊಲೀಸ್ ಠಾಣೆಗೆ ಆಗಮಿಸಿ ಅದನ್ನು ಪರಿಹಹಾರ ನಿಧಿಗೆ ಕಳುಹಿಸಿ ಕೊಡುವಂತೆ ಪೊಲೀಸ್ ಅಧಿಕಾರಿಯ ಬಳಿ ಮನವಿ ಮಾಡಿಕೊಂಡಿದ್ದಾರೆ.
ಮಕ್ಕಳ ಈ ನಡೆಯನ್ನು ಕಂಡು ಅಚ್ಚರಿಗೀಡಾದ ಪೊಲೀಸ್ ಅಧಿಕಾರಿ ಈ ಹಣ ನೀವೇ ಇಟ್ಟುಕೊಳ್ಳಿ, ನಿಮ್ಮ ಪಾಲಿನ ಹಣವನ್ನು ನಾನೇ ನೀಡುತ್ತೇನೆ ಎಂದಿದ್ದಾರೆ. ಆದರೆ ಅಧಿಕಾರಿಯ ಈ ಮಾತಿಗೆ ಒಪ್ಪಿಕೊಳ್ಳದ ಮಕ್ಕಳು ತಾವು ಕೊಡುವ ಹಣವನ್ನು ಸ್ವೀಕರಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಅಂತಿಮವಾಗಿ ಬೇರೆ ಹಾದಿ ಇಲ್ಲದ ಅಧಿಕಾರಿ ಅದನ್ನು ಪಡೆದಿದ್ದಾರೆ.
ಸದ್ಯ ಈ ವಿಡಿಯೋ ಭಾರೀ ವೈರಲ್ ಆಗುತ್ತಿದ್ದು, ನೆಟ್ಟಿಗರ ಮನ ಗೆದ್ದಿದೆ.