ಅಪಘಾತದಲ್ಲಿ ಗಾಯಗೊಂಡರು ಆಕೆಯನ್ನು ಚಿಕಿತ್ಸೆಗೆ ಕರೆದೊಯ್ಯದೇ ಸ್ಥಳದಲ್ಲಿಯೇ ಬಿಟ್ಟಿ ಹೋದ ಪೊಲೀಸರ ನಡೆಗೆ ಇದೀಗ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. 

ಬೆಂಗಳೂರು [ಅ.15]:  ಅಪಘಾತಕ್ಕೀಡಾದ ಗಾಯಾಳು ರಕ್ಷಣೆಗೆ ಧಾವಿಸದೆ ನಿರ್ಲಕ್ಷ್ಯಿಸಿ ಘಟನಾ ಸ್ಥಳದಿಂದ ತೆರಳಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರು ರಸ್ತೆಯ ಮೇಲ್ಸೇತುವೆಯಲ್ಲಿ ಸೋಮವಾರ ಮಧ್ಯಾಹ್ನ ಬೈಕ್‌ ಅಪಘಾತಕ್ಕೀಡಾಗಿ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಆಗ ಕೆಳಗೆ ಬಿದ್ದಿದ್ದ ಮಹಿಳೆ ರಕ್ಷಣೆಗೆ ಇತರೆ ವಾಹನಗಳ ಸವಾರರು ಧಾವಿಸಿದ್ದಾರೆ. ಅದೇ ಹೊತ್ತಿಗೆ ಪೊಲೀಸ್‌ ಅಧಿಕಾರಿಯೊಬ್ಬರ ವಾಹನವೊಂದು ಸಹ ಬಂದಿದೆ. ಆದರೆ ಕೆಲ ಸೆಕೆಂಡ್‌ಗಳು ವಾಹನ ನಿಲ್ಲಿಸಿದ ಚಾಲಕ, ತಕ್ಷಣವೇ ಅಲ್ಲಿಂದ ಹೊರಟು ಹೋಗಿದ್ದಾನೆ.

ಜನರು ಗಾಯಾಳು ರಕ್ಷಣೆಗೆ ಬರುವಂತೆ ಮನವಿ ಮಾಡಿದರೂ ಸಹ ಆ ಪೊಲೀಸ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಅಪಘಾತ ಕ್ಕೀಡಾದವರ ರಕ್ಷಣೆಗೆ ಧಾವಿಸುವಂತೆ ಸಾರ್ವಜನಿಕರಿಗೆ ಬುದ್ದಿ ಹೇಳುವ ಪೊಲೀಸರೇ ಹೀಗೆ ಮಾಡಿದರೆ ಹೇಗೆ? ಜನರಿಗೆ ಅವರು ನೀಡುವ ಸಂದೇಶವೇನು? ಮಾನವೀಯತೆ ಬೇಡವೇ ಎಂದು ಕಟುವಾಗಿ ನಾಗರಿಕರು ಟೀಕಿಸಿದ್ದಾರೆ. ಆದರೆ ಈ ಅಪಘಾತ ಸಂಬಂಧ ಪೊಲೀಸ್‌ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೋವನ್ನು ಸಂಚಾರ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಆ ವಿಡಿಯೋದಲ್ಲಿ ಕಂಡು ಬಂದ ಕಾರು ಬಿಎಂಟಿಎಫ್‌ ಪೊಲೀಸರಿಗೆ ಸೇರಿದ್ದಾಗಿದೆ. ಆದರೆ ಈ ಘಟನೆ ನಡೆದ ವೇಳೆ ಕಾರಿನಲ್ಲಿ ಹಿರಿಯ ಅಧಿಕಾರಿ ಇದ್ದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ವಿವರ ಕಲೆ ಹಾಕುತ್ತಿದ್ದೇವೆ. ಗಾಯಾಳು ನೋಡಿಯೂ ಉದಾಸೀನತೆ ತೋರಿಸಿದ ಕಾರು ಚಾಲಕನ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುತ್ತದೆ ಎಂದು ಸಂಚಾರ ಪೊಲೀಸರು ಹೇಳಿದ್ದಾರೆ.