ಗೋಕಾಕ್‌ ಜನರ ಸಮಸ್ಯೆ ಕೇಳಬೇಕಿದ್ದ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಅಮೆರಿಕ ಪ್ರವಾಸ ಮಾಡುತ್ತಿದ್ದಾರೆ| ನಾವೇ ಗೋಕಾಕ್‌ ಕ್ಷೇತ್ರದ ಜನರ ಸಮಸ್ಯೆ ಆಲಿಸುತ್ತಿದ್ದೇವೆ ಎಂದ ಶಾಸಕ ಸತೀಶ ಜಾರಕಿಹೊಳಿ| ಗೋಕಾಕ ನಗರಸಭೆಯಲ್ಲಿ ನಡೆದ ಅವ್ಯವಹಾರ ಕುರಿತು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ| ಭ್ರಷ್ಟಾಚಾರದಲ್ಲಿ ತಾಪಂ ಇಒರಿಂದ ರಮೇಶ್‌ ಜಾರಕಿಹೊಳಿ ಬೆಂಬಲಿಗರ ಪಾಲಿದೆ| ಗೋಕಾಕನಲ್ಲಿ ನಡೆದ ಭ್ರಷ್ಟಾಚಾರ ಕುರಿತು ಹಂತ ಹಂತವಾಗಿ ತೆರದಿಡುತ್ತೇವೆ| ರಮೇಶ ಜಾರಕಿಹೊಳಿ ಅಳಿಯ ಅಂಬಿರಾವ್‌ ಪಾಟೀಲ ನಿಯಂತ್ರಣ ತಪ್ಪಿಸಲು ನಮ್ಮ ಹೋರಾಟ|

ಬೆಳಗಾವಿ[ಅ.15]: ಗೋಕಾಕ್‌ ಜನರ ಸಮಸ್ಯೆ ಕೇಳಬೇಕಿದ್ದ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಅಮೆರಿಕ ಪ್ರವಾಸ ಮಾಡುತ್ತಿದ್ದಾರೆ. ಆದ್ದರಿಂದ ನಾವೇ ಗೋಕಾಕ್‌ ಕ್ಷೇತ್ರದ ಜನರ ಸಮಸ್ಯೆ ಆಲಿಸುತ್ತಿದ್ದೇವೆ ಎಂದು ಶಾಸಕ ಸತೀಶ ಜಾರಕಿಹೊಳಿ ತರಾಟೆಗೆ ತೆಗೆದುಕೊಂಡಿದ್ದಾರೆ. 

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಕಾಕ್‌ ಅನ್ನು ಅಂಬಿರಾವ್‌ ಮತ್ತು ಅಧಿಕಾರಿಗಳು ನೋಡಿಕೊಳ್ಳುತ್ತಾರೆ. ಗೋಕಾಕ್‌ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅಂಬಿರಾವ್‌ ಪಾಟೀಲ್‌ ಅಳಿಯ. ಟೀಂ ಅವರದ್ದೇ ಇದೆ. ಹೀಗಾಗಿ ಅವರನ್ನು ಗೋಕಾಕ್‌ನಿಂದ ಹೊರ ಹಾಕಬೇಕಿರುವುದರಿಂದ ಗೋಕಾಕ್‌ನ ಕೆಲವು ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಚುನಾವಣೆ ಆಯೋಗಕ್ಕೆ ಪತ್ರ ಬರೆಯಲಾಗಿದೆ. ಈ ಕುರಿತಂತೆ ಈಗಾಗಲೇ ಚುನಾವಣೆ ಆಯೋಗವು ಜಿಲ್ಲಾಧಿಕಾರಿಯಿಂದ ವರದಿ ಕೇಳಿದೆ ಎಂದು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗೋಕಾಕ ನಗರಸಭೆಯಲ್ಲಿ ನಡೆದ ಅವ್ಯವಹಾರ ಕುರಿತು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಭ್ರಷ್ಟಾಚಾರದಲ್ಲಿ ತಾಪಂ ಇಒರಿಂದ ರಮೇಶ್‌ ಜಾರಕಿಹೊಳಿ ಬೆಂಬಲಿಗರ ಪಾಲಿದೆ. ಆದ್ದರಿಂದ ಗೋಕಾಕನಲ್ಲಿ ನಡೆದ ಭ್ರಷ್ಟಾಚಾರ ಕುರಿತು ಹಂತ ಹಂತವಾಗಿ ತೆರದಿಡುತ್ತೇವೆ. ರಮೇಶ ಜಾರಕಿಹೊಳಿ ಅಳಿಯ ಅಂಬಿರಾವ್‌ ಪಾಟೀಲ ನಿಯಂತ್ರಣ ತಪ್ಪಿಸಲು ನಮ್ಮ ಹೋರಾಟ ಎಂದು ಹೇಳಿದ್ದಾರೆ. 

ಅಣ್ಣ ತಮ್ಮಂದಿರು ರಾಜಕೀಯವಾಗಿ ಭಿನ್ನ

ರಾಜಕೀಯ ವಿಚಾರದಲ್ಲಿ ನಾನು ಮತ್ತು ರಮೇಶ್‌ ಒಂದಾಗಿ ಇಲ್ಲ. ಎಂದೆಂದಿಗೂ ಭಿನ್ನ ಎಂದು ಸತೀಶ್‌ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಜಾರಕಿಹೊಳಿ ಸಹೋದರರು ಎಲ್ಲರೂ ಒಂದೇ ಇದ್ದಾರೆ ಎಂಬ ಮಾತು ಕೇಳಿ ಬರುತ್ತಿರುವುದರ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಜಾರಕಿಹೊಳಿ ಅಣ್ಣ ತಮ್ಮಂದಿರು ಒಂದೇ ಅಂತಾರೆ. ಜನರಲ್ಲಿ ಈ ಬಗ್ಗೆ ಭ್ರಮೆ ಜನರಲ್ಲಿ ಇದೆ. ಗೋಕಾಕ್‌ನಲ್ಲಿ ವಸ್ತು ಸ್ಥಿತಿ ಬೇರೆ ಇದೆ. ನಾವು ಒಂದಿಲ್ಲ ಎಂದು ತೋರಿಸಲು ಹೋರಾಟ ಮಾಡುತ್ತಿದ್ದೇವೆ. ಜನರ ಬಳಿ ಹೋಗಿ ರಮೇಶ ಮತ್ತು ನಾವು ಬೇರೆ ಬೇರೆ ಅಂತಾ ಹೇಳುವ ಸರ್ಕಸ್‌ ಮಾಡುತ್ತಿದ್ದೇವೆ ಎಂದರು.