Asianet Suvarna News Asianet Suvarna News

ಕಾವೇರಿ ವಿವಾದದ ಬಗ್ಗೆ ತಮಿಳುನಾಡಿಗೆ ಬುದ್ದಿಹೇಳಿ ಬಹಿರಂಗ ಪತ್ರ ಬರೆದ ತಮಿಳು ಮಹಿಳೆ

Tamilian Lady Open Letter to TamilNadu on Cauvery Issue

ಕಾವೇರಿ ವಿವಾದ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಸಂಘರ್ಷ ಹುಟ್ಟುಹಾಕಿರುವ ಸಮಯದಲ್ಲೇ ತಮಿಳುನಾಡಿನ ಅನಾಮಿಕ ಮಹಿಳೆಯೊಬ್ಬರು ವಾಟ್ಸ್ ಆ್ಯಪ್ ಮೂಲಕ ಹರಿಬಿಟ್ಟ ಮಾತು ಎಲ್ಲೆಡೆ ವೈರಲ್ ಆಗಿದೆ. ತಮಿಳು ಭಾಷೆಯಲ್ಲಿರುವ ಈ ‘ಬುದ್ಧಿಮಾತು’ ತಮಿಳುನಾಡಿನ ಜನರ ಆತ್ಮಸಾಕ್ಷಿಯನ್ನು ಕೆಣಕಿದೆ. ಮಾತ್ರವಲ್ಲ, ಕರ್ನಾಟಕದ ಜನರ ಸಾಕ್ಷಿಪ್ರಜ್ಞೆಗೂ ಸವಾಲೊಡ್ಡಿದೆ

***

ಕೋಮಲವಳ್ಳಿ (ಹೆಸರು ಬದಲಾಯಿಸಲಾಗಿದೆ)

ಎಲ್ಲ ತಮಿಳುನಾಡಿನ ಮಕ್ಕಳಿಗೆ ನಮಸ್ಕಾರ,

ಇಂದು ವಾಟ್ಸ್ ಆ್ಯಪ್‌ನಲ್ಲಿ ವಾದ ಮಾಡುತ್ತಿರುವವರು, ಫೇಸ್‌ಬುಕ್‌ನಲ್ಲಿ ಅಬ್ಬರಿಸುತ್ತಿರುವವರು, ಟ್ವಿಟರ್‌ನಲ್ಲಿ ಟ್ರೆಂಡ್ ಮಾಡುತ್ತಿರುವವರು ‘ಪೀಸ್ ಫಾರ್ ಕಾವೇರಿ, ಸೇವ್ ಕಾವೇರಿ’ ಅಂತೆಲ್ಲ ಹೇಳುತ್ತಿರುವವರಲ್ಲಿ ನಾನು ಕೇಳುವುದು ಒಂದೇ, ಯಾಕಾಗಿ ಪರರ ಬಳಿ ಹೋಗಿ ಭಿಕ್ಷೆ ಬೇಡುತ್ತೀರಿ? ಒಂದೇ ವಿಷಯ-ಕಳೆದ ವರ್ಷ ತಮಿಳುನಾಡಿಲ್ಲಿ 100 ವರ್ಷಗಳಲ್ಲಿ ಆಗದಷ್ಟು ದೊಡ್ಡ ಪ್ರಮಾಣದ ಮಳೆ ಸುರಿಯಿತು, ಆಗ ಎಷ್ಟು ಟಿಎಂಸಿ ನೀರನ್ನು ಎತ್ತಿಕೊಂಡು ಹೋಗಿ ನದಿಯಲ್ಲಿ ಬಿಟ್ಟಿದ್ದೀರಿ? ಭಗವಂತ ಕೊಟ್ಟ ನೀರನ್ನು ಹೇಗೆ ಬಳಸಿಕೊಳ್ಳಬೇಕೆಂದು ಯೋಚಿಸದೆ ಯಾರಲ್ಲೋ ಭಿಕ್ಷೆಗೆ ನಿಂತಿರುವುದು ತೀರಾ ಅವಮಾನಕಾರಿ ಸಂಗತಿ. ಕಾವೇರಿ ನೀರು ಬೇಕು, ಕಾವೇರಿ ನೀರು ಬೇಕು ಅಂತೀರಾ. ಪ್ರತಿ ಬಾರಿಯೂ ಬರುವ ಮಳೆ ನೀರನ್ನು ಹಾಗೆ ಬಿಟ್ಟು ಹಾಳು ಮಾಡುತ್ತಿದ್ದೀರಿ. ಆದರೆ ವೇಸ್ಟ್ ಆಗಿ ಹರಿದುಹೋಗುತ್ತಿರುವ ಮಳೆಯ ನೀರನ್ನು ಒಂದು ಕಡೆ ನಿಲ್ಲಿಸುವುದಕ್ಕೆ ನಮ್ಮೂರಿನಲ್ಲಿ ಒಂದೂ ಅಣೆಕಟ್ಟು ಇಲ್ಲ.

‘ಕರ್ನಾಟಕದಲ್ಲಿ ನಮ್ಮವರನ್ನು ಹೊಡೆದಿದ್ದಾರೆ; ಈಗ ನಾವು ಕನ್ನಡಿಗರನ್ನು ಹೊಡೆಯಬೇಕು’ ಅಂತಿದ್ದೀರಿ. ಅಷ್ಟಕ್ಕೂ ತಿರುಗಿ ಹೊಡೆಯಬೇಕು ಅನಿಸಿದರೆ ನಮ್ಮೂರಿನ ಪಂಚಾಯಿತಿ ಅಧ್ಯಕ್ಷರನ್ನು ಕಾಲರ್ ಹಿಡಿದು ಪ್ರಶ್ನಿಸಿ, ‘‘ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಎಷ್ಟು ಕರೆ ಕಟ್ಟಿಸಿದ್ದೀರಿ? ಮಳೆನೀರನ್ನು ಸಂಗ್ರಹಿಸುವುದಕ್ಕೆ ಯಾವ ಕ್ರಮ ಕೈಗೊಂಡಿದ್ದೀರಿ,’’ ಅಂತ. ಇನ್ನೆರಡು ಮೂರು ತಿಂಗಳಲ್ಲಿ ಮಳೆ ಶುರುವಾಗುತ್ತದೆ. ಖಂಡಿತ ನೀರು ಬರುತ್ತದೆ. ಎಲ್ಲಿಂದ? ಕಾವೇರಿಯಿಂದ ಬರುತ್ತೋ ಇಲ್ವೋ? ನೀರಂತೂ ಸಿಗುತ್ತದೆ. ಅದು ವರುಣನ ಕೃಪೆ. ಆದರೆ ಪ್ರಕೃತಿ ಕೊಟ್ಟ ಈ ನೀರನ್ನು ನಾವು ಹಿಡಿದಿಡುವುದಕ್ಕೆ ನಮ್ಮಲ್ಲಿ ಕೆರೆಗಳು, ಅಣೆಕಟ್ಟೆಗಳು ಉಂಟಾ ಅಂತ ಹೇಳಿ ನೋಡೋಣ. ಸರಿ, ಅದು ಬಿಡಿ. ಈ ಬಗ್ಗೆ ಒಬ್ಬೇ ಒಬ್ಬ ಯಾರಾದರೂ ಎದ್ದು ಪಂಚಾಯಿತಿ ಅಧ್ಯಕ್ಷ, ವಾರ್ಡ್ ಸದಸ್ಯನನ್ನು ಪ್ರಶ್ನಿಸಿದ್ದೀರಾ? ಕೌನ್ಸಿಲರ್‌ನನ್ನು ನಿಲ್ಲಿಸಿ ಕೇಳಿದ್ದೀರಾ? ಯಾರ ಬಳಿಯೂ ಏನೂ ಕೇಳಲ್ಲ ನೀವು.

ಯಾವಾಗಲೂ ಪಕ್ಕದವರು ಬದುಕಬಾರದು; ಕೇರಳದಲ್ಲಿ ಅಣೆಕಟ್ಟೆ ಕಟ್ಟಬಾರದು, ಕರ್ನಾಟಕ, ಆಂಧ್ರದಲ್ಲೂ ಅಣೆಕಟ್ಟು ಮಾಡಬಾರದು ಎಂದೆನ್ನುತ್ತೀರಿ. ಆದರೂ ಪೆಪ್ಸಿ ತಯಾರಿಕೆಗೆ ಮಾತ್ರ ನೀರು ಕೊಡುತ್ತೀರಿ. ಆದರೂ ಆ ಬಗ್ಗೆ ಯಾರು ಕೇಳಲ್ಲ, ಹೋರಾಟ ಮಾಡಲ್ಲ... ನಮ್ಮೂರಿನಲ್ಲಿ ನಾವು ಪೆಪ್ಸಿ, ಕೋಕ ಕೋಲಾಗೆ ಕೊಡುತ್ತಿರುವ ನೀರಿನಲ್ಲಿ ಅರ್ಧದಷ್ಟಾದರೂ ವ್ಯವಸಾಯಕ್ಕೆ ಕೊಡುವುದಕ್ಕೆ ಆಗಲ್ವೇ? ಓದಿಕೊಂಡಿರುವ ಮೂರ್ಖರನ್ನು ಒಳಗೊಂಡಿರುವ ಊರು ತಮಿಳುನಾಡು. ಆದರೂ ನಾವು ಎಲ್ಲಿ ಬೇಕಾದರೂ ಓದಿದ್ದೇವೆ, ಬುದ್ದಿವಂತರಾಗಿದ್ದೇವೆ. ಆದ್ರೆ ನಮ್ಮ ತಮಿಳ ವೀರ ಪ್ರಭಾಕರನ್ ಸತ್ತ, ಕರ್ಮವೀರ ಕಾಮರಾಜನ್... ಹೀಗೆ ಯಾವಾಗಲೂ ಸತ್ತವರ ಬಗ್ಗೆಯೇ ಮಾತನಾಡಿಕೊಂಡಿರುತ್ತೀರಿ. ಯಾವತ್ತಾದರೂ ಯಾರಾದರೂ ಈಗಿನ ಪರಿಸ್ಥಿತಿ ಬಗ್ಗೆ ಮಾತನಾಡಿದ್ದೀರಾ?

ಕರ್ನಾಟಕದವರು ತುಳಿಯುತ್ತಿದ್ದಾರೆ ಅಂತ ಯಾವಾಗಲೂ ಮಾತನಾಡುತ್ತಿದ್ದೀರಿ, ನಿಮ್ಮ ಊರಿನಲ್ಲಿ ಏನಾಗುತ್ತಿದೆ ಅಂತ ಗೊತ್ತಾ? ಆ ಬಗ್ಗೆ ಮಾತನಾಡುವುದು ಬಿಟ್ಟು ಡೈರೆಕ್ಟ್ ಆಗಿ ಕಾವೇರಿ ತೀರದ ಪ್ರದೇಶದಲ್ಲಿರುವ ರೈತರು ಸಾಯುತ್ತಿದ್ದಾರೆಂದು ಮೆಸೇಜ್‌ಗಳನ್ನು ಹಾಕುತ್ತಿದ್ದೀರಿ. ಆದರೆ ನಿಜ ಏನು? ಕರ್ನಾಟಕದವರು ನೀರು ಕೊಡಲ್ಲ ಅಂತ ಹೇಳುವುದಕ್ಕೆ ಕಾರಣ ಏನು? ನೀರು ಕೊಟ್ಟರೂ ನೀವು ಏನೂ ಮಾಡುವ ಸ್ಥಿತಿಯಲ್ಲಿ ಇಲ್ಲ. ಪ್ರತಿವರ್ಷ ಬೀಳುವ ಮಳೆ ಹೆಚ್ಚಾಗುತ್ತಲೇ ಇದೆ. ಹಿಂಗಾರು, ಮುಂಗಾರು ಮಳೆ ಬರುತ್ತಲೇ ಇದೆ. ನಾವು ಅದನ್ನು ಸೇವ್ ಮಾಡಲಿಕ್ಕೆ ಆಗದೆ ಸಮುದ್ರಕ್ಕೆ ಬಿಡುತ್ತಿದ್ದೇವೆ. ಇಷ್ಟೆಲ್ಲ ಮಾಡಿ ನೀರು ಬೇಕು ಅಂತ ಭಿಕ್ಷೆಗೆ ನಿಂತಿರುವುದು ಅವಮಾನ ಅನಿಸುತ್ತಿಲ್ಲವೇ? ‘ಕಲ್ಲು, ಮಣ್ಣು, ನೀರು ಹುಟ್ಟುವುದಕ್ಕಿಂತ ಮುಂಚೆಯೇ ನಾವು ಹುಟ್ಟಿದ್ದು’ ಎಂಬ ತಮಿಳು ಕವಿತೆಯನ್ನು ನಾನು ಒಪ್ಪಿಕೊಳ್ಳುವೆ. ಆದರೆ ಇಷ್ಟು ವರ್ಷಗಳ ಇತಿಹಾಸ ಇರುವ ನಾವು ಬೇರೊಬ್ಬರ ಬಳಿ ನೀರಿಗಾಗಿ ಸ್ವಾಭಿಮಾನ ಬಿಟ್ಟು ಬೀದಿಯಲ್ಲಿ ನಿಂತುಕೊಳ್ಳುವುದನ್ನು ಬಹುಶಃ ಕಾಮರಾಜಯ್ಯ ಇದ್ದಿದ್ದರೆ ನೋಡಿ ಎಷ್ಟು ಸಂಕಟಪಡುತ್ತಿದ್ದರೋ? ಯಾಕೆಂದರೆ, ನೀವು ಪಡಕೊಂಡು ಬಂದಿರುವ ವಿದ್ಯೆಯನ್ನು ಬೀದಿಗೆ ಬಿಟ್ಟಿದ್ದೀರಿ. ಅಂದು ಯಾವೊಬ್ಬ ನಟನ ಕಟೌಟ್ ಆಗಲೀ, ಹಾಲಿನ ಅಭಿಷೇಕವಾಗಲಿ ನಡೆಯುತ್ತಿರಲಿಲ್ಲ. ಅಂದು ಯಾವ ನಾಯಕ, ಯಾವ ಲೀಡರ್ ಅಂತ ದೊಡ್ಡ ಪ್ರಶ್ನೆಯೇ ಇರುತ್ತಿರಲಿಲ್ಲ. ಏಕೆಂದರೆ ಎಂಜಿಆರ್, ಶಿವಾಜಿ ಇದ್ದರು. ಅವರಿಗೂ ಸ್ಪರ್ಧಿಗಳಿದ್ದರು. ಆದರೂ ತಲೈವಾ ಅವರಾ ಅಥವಾ ದಳಪತಿಯಾ? ಎನ್ನುವ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಹುಟ್ಟಿಕೊಳ್ಳಲಿಲ್ಲ. ಆದರೆ ಈಗ ಏನಾಗಿದೆ ನೋಡಿ! ಯಾರು ನಮ್ಮ ಹೀರೋ?

ಟ್ವಿಟರ್‌ನಲ್ಲಿ ಟ್ರೆಂಡ್ ಹುಟ್ಟುಹಾಕುವ ಬುದ್ದಿಯನ್ನು ಯಾಕೆ ನಿಮ್ಮ ನಿಮ್ಮ ಏರಿಯಾ, ಊರುಗಳಲ್ಲಿ ಒಂದು ನಲ್ಲಿ ಹಾಕಿಸಿಕೊಳ್ಳುವುದಕ್ಕೆ ಬಳಸುತ್ತಿಲ್ಲ! ಒಂದು ಕೆರೆ ಕಟ್ಟಿಸಿ ಅಂತ ನಿಮ್ಮೂರಿನ ನಾಯಕರನ್ನು ಏಕೆ ಕೇಳುತ್ತಿಲ್ಲ? ವಿದ್ಯಾವಂತ ಯುವಕರು ಅಂದ್ರೆ ಹೀಗೇನಾ ವರ್ತಿಸುವುದು? ಕರ್ನಾಟಕದವರು ನಮ್ಮನ್ನು ಅವಮಾನ ಮಾಡುತ್ತಿದ್ದಾರೆ ಅಂತ ಅಬ್ಬರಿಸುವುದನ್ನು ನಿಲ್ಲಿಸಿ ಕೂತು ಮನುಷ್ಯರಂತೆ ಯೋಚಿಸಿ. ಎಷ್ಟು ಜನ ನಿಮ್ಮ-ನಿಮ್ಮ ಮನೆಗಳಲ್ಲಿ ಮಳೆನೀರನ್ನು ಶೇಖರಿಸುವ ತೊಟ್ಟಿಗಳನ್ನು ಕಟ್ಟಿಸಿದ್ದೀರಿ? ಒಂದು ಊರಿನಲ್ಲಿ ಕನಿಷ್ಠ 10 ಮಳೆನೀರಿನ ತೊಟ್ಟಿಗಳಿದ್ದರೆ ಪ್ರತಿ ಮಳೆ ಬಂದುಹೋದ ನಂತರ ಭೂಮಿ ಕನಿಷ್ಠ 25ರಿಂದ 30 ಅಡಿ ತೇವಗೊಳ್ಳುತ್ತದೆ. ಇದರಿಂದ ಅಂತರ್ಜಲ ಹೆಚ್ಚುತ್ತದೆ. ಅಂತರ್ಜಲ ಹೆಚ್ಚಾದರೆ ಊರುಗಳಲ್ಲಿ ಬೋರ್‌ವೆಲ್ ಹಾಕಿಸಿಕೊಂಡು ನಲ್ಲಿಗಳನ್ನು ನಿರ್ಮಾಣ ಮಾಡಿಕೊಳ್ಳಬಹುದು. ಒಂದು ಕುಟುಂಬ 10 ಲೀಟರ್ ನೀರು ಶೇಖರಿಸಿದರೆ ಪ್ರತಿ ಊರಿನಿಂದ 600 ಲೀಟರ್ ನೀರು ಸಂಗ್ರಹಿಸಿದಂತಾಗುತ್ತದೆ. ಅದು ಬಿಟ್ಟು ಯಾವ ಟಿವಿಯಲ್ಲಿ ಯಾರು ಏನ್ ಹೇಳಿದರು? ಯಾವ ಚಾನಲ್‌ನವರು ಯಾವ ಕತೆ ಹೇಳ್ತಾರೆ? ಯಾರ್ ಡ್ರಾಮಾ ಮಾಡ್ತಾರೆ ಅಂತ ನೋಡುತ್ತ ತಲೈ, ಸಿಂಬು, ಧನುಷ್... ಯಾವ ನಟ ಓಡಿ ಬಂದು ಕೈ ಹಿಡಿಯುತ್ತಾನೆ ಅಂತ ಯೋಚಿಸುತ್ತೀರಲ್ಲ, ನಾಚಿಗೆ ಆಗಲ್ವಾ?

ತಮಿಳಿಗೆ ಸ್ವಾಭಿಮಾನವೇ ದೊಡ್ಡದು ಅಂತೀರಾ. ಬೇರೆಯವರ ಬಳಿ ಕೈಚಾಚಿ ಬದುಕುವುದು ಯಾವ ಸ್ವಾಭಿಮಾನ? ತುಂಬಾ ಹಿಂದೆ ನಮ್ಮೂರಿನಲ್ಲಿ ಕಾವೇರಿ ಸಮಸ್ಯೆಯೇ ಇರಲಿಲ್ಲ. ಯಾಕೆಂದರೆ ಪ್ರತಿ ಏರಿಯಾದಲ್ಲಿ ನಲ್ಲಿಗಳಿದ್ದವು. ಪ್ರತಿ ಊರಿನಲ್ಲಿ ಕೆರೆಗಳಿದ್ದವು. ಮಳೆನೀರು ಪೋಲಾಗದಂತೆ ಗುಂಡಿಗಳು ತುಂಬುತ್ತಿದ್ದವು. ನಿಜವಾಗಲೂ ನೀವು ತಮಿಳು ವೀರರೇ ಆಗಿದ್ದು, ಯಾರನ್ನಾರೂ ಹೊಡೆಯಲೇಬೇಕು ಅಂತಿದ್ದರೆ ದಯವಿಟ್ಟು ನಿಮ್ಮ ನಿಮ್ಮ ಏರಿಗಳಲ್ಲಿ ಊರುಗಳಲ್ಲಿ ಗುಂಡಿಗಳನ್ನು ಹೊಡೆಯಿರಿ. ಎಷ್ಟು ಸಾಧ್ಯವೋ ಅಷ್ಟು ಗುಂಡಿಗಳನ್ನು ಮಾಡಿ. ನಮ್ಮೂರಿನ ನೀರು ನಮ್ಮ ಬಳಿಯೇ ಇರುತ್ತದೆ. ಯಾರೋ ಒಬ್ಬರು ನಿಮಗೆ ನೀರು ಕೊಡಲ್ಲ ಅಂದಾಗ ಅವರಿಗಿಂತ ನಾವು ಹೆಚ್ಚು ನೀರು ಶೇಖರಿಸಿ ನಮ್ಮ ತಾಕತ್ತು ಏನು ಅಂತ ತೋರಿಸಬೇಕು. ಕೊಡೋದಿಲ್ಲ ಅನ್ನುವವರ ಬಳಿ ಕಿತ್ತುಕೊಳ್ಳುವುದು ವೀರನ ಲಕ್ಷಣವಲ್ಲ, ಅದು ಅವಮಾನ. ಇದು ನೋಡಕ್ಕೆ ಹೇಗಿರುತ್ತೆ ಗೊತ್ತಾ, ನಲ್ಲಿ ನೀರಿನ ಮುಂದೆ ಹೆಣ್ಣುಮಕ್ಕಳು ಜಗಳ ಆಡಿದಂತೆ ಇರುತ್ತದೆ. ಒಬ್ಬ ನಮ್ಮೆದುರು ಬಂದು ನೀನು ಬದುಕುಬಾರದು ಅಂದರೆ ಬದುಕಿ ತೋರಿಸಬೇಕು. ಅದೇ ನಿಜವಾದ ಸ್ವಾಭಿಮಾನ, ಗೌರವ, ಮಾನ, ಮರ್ಯಾದೆ ಹಾಗೂ ವೀರತ್ವ. ಅದು ಬಿಟ್ಟು ಹೋರಾಟ ಹೋರಾಟ...! ಸ್ವಲ್ಪ ಯೋಚಿಸಿ ನೋಡಿ, ಇನ್ನೇನು ಮಳೆ ಬರುತ್ತದೆ. ಹೀಗೆ ಬೇರೆ ರಾಜ್ಯದ ನೀರಿಗಾಗಿ ಕಿತ್ತಾಡಿಕೊಂಡೇ ಇರುತ್ತೀರಾ ಅಥವಾ ಶಾಶ್ವತ ಪರಿಹಾರ ಕಂಡುಕೊಳ್ಳುತ್ತೀರಾ?

ಈ ಬರಹದ ಮೂಲ ಆಡಿಯೊ ಕನ್ನಡಪ್ರಭದ ಫೇಸ್‌ಬುಕ್(kannadaprabhakp) ಮತ್ತು ಟ್ವಿಟರ್ (@kprabhanews) ಅಕೌಂಟ್‌ನಲ್ಲಿ ಲಭ್ಯ

ಕೃಪೆ: ಕನ್ನಡಪ್ರಭ

Latest Videos
Follow Us:
Download App:
  • android
  • ios