Asianet Suvarna News Asianet Suvarna News

ಗೋಳಗುಮ್ಮಟದ ಸ್ವಚ್ಛತೆಗೆ ಅಂಗವಿಕಲನ ನಿಸ್ವಾರ್ಥ ಸೇವೆ

ವಿಜಯಪುರದ ಬೆಂಡಿಗೇರಿ ಗಲ್ಲಿಯವರಾದ ಶೇಖಪ್ಪ ಬರೋಬ್ಬರಿ 30 ವರ್ಷಕ್ಕೂ ಹೆಚ್ಚು ಕಾಲದಿಂದ ಗೋಳಗುಮ್ಮಟ ಆವರಣದಲ್ಲಿ ಕಸ ಆಯುವುದನ್ನೇ ತಮ್ಮ ಜೀವನ ಪದ್ಧತಿಯನ್ನಾಗಿ ಮಾಡಿಕೊಂಡಿದ್ದಾರೆ. 

Specially Challenged Man Create Awareness At Gol Gumbaz
Author
Bengaluru, First Published Sep 22, 2018, 8:42 AM IST

ವಿಜಯಪುರ :  ಇವರಿಗೆ ಸರಿಯಾಗಿ ಮಾತನಾಡಲೂ ಬರುವುದಿಲ್ಲ, ಕಾಲು ಸಹ ಊನ. ಆದರೆ ಪರಿಸರದ ಮೇಲಿನ ಇವರ ಕಾಳಜಿ ಇತರರಿಗೆ ಮಾದರಿ. ವಿಶ್ವವಿಖ್ಯಾತ ಗೋಳಗುಮ್ಮಟ ಆವರಣದಲ್ಲಿ ದಣಿವರಿಯದೆ ಕಸ ಆಯುವ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸುವುದೇ ಇವರ ನಿತ್ಯ ಕಾಯಕ.

ಇವರ ಹೆಸರು ಶೇಖಪ್ಪ ಗುರುಲಿಂಗಪ್ಪ ಹಡಪದ (52). ವಿಜಯಪುರದ ಬೆಂಡಿಗೇರಿ ಗಲ್ಲಿಯವರಾದ ಶೇಖಪ್ಪ ಬರೋಬ್ಬರಿ 30 ವರ್ಷಕ್ಕೂ ಹೆಚ್ಚು ಕಾಲದಿಂದ ಗೋಳಗುಮ್ಮಟ ಆವರಣದಲ್ಲಿ ಕಸ ಆಯುವುದನ್ನೇ ತಮ್ಮ ಜೀವನ ಪದ್ಧತಿಯನ್ನಾಗಿ ಮಾಡಿಕೊಂಡಿದ್ದಾರೆ. ಬೆಳಗ್ಗೆ 10 ಗಂಟೆ ಸುಮಾರಿಗೆ ಮನೆಯಿಂದ ಗೋಳಗುಮ್ಮಟ ಆವರಣಕ್ಕೆ ಕಾಲಿಟ್ಟರೆ ಸಾಕು. ಸಂಜೆ 6 ಗಂಟೆವರೆಗೆ ಕಸ ಆಯುವುದರಲ್ಲಿಯೇ ತಲ್ಲೀನರಾಗಿ ಬಿಡುತ್ತಾರೆ.

ಬರೀ ಕಸ ಆಯುವುದನ್ನಷ್ಟೇ ಮಾಡುವುದಿಲ್ಲ. ಉದ್ಯಾನದಲ್ಲಿ ಕಸ ಬೀಳದಂತೆ ನೋಡಿಕೊಳ್ಳುತ್ತಾರೆ. ಊಟ, ಉಪಾಹಾರ ಮಾಡುವ ಪ್ರವಾಸಿಗರ ಬಳಿ ಕಸದ ಬುಟ್ಟಿಯನ್ನು ಇಡುತ್ತಾರೆ. ಅವರು ತಿಂದುಂಡು ಉಳಿದ ಮುಸುರೆಯನ್ನು ಉದ್ಯಾನದಲ್ಲಿ ಬೇಕಾಬಿಟ್ಟಿಎಸೆಯದೇ ಕಸದ ಬುಟ್ಟಿಯಲ್ಲಿಯೇ ಹಾಕುವಂತೆ ಸಲಹೆ ನೀಡುತ್ತಾರೆ. ಆದರೂ ಕೆಲವರು ಇವರ ಸಲಹೆಯನ್ನೂ ಗಂಭೀರವಾಗಿ ಪರಿಗಣಿಸದೇ ಉದ್ಯಾನದಲ್ಲಿ ಎಲ್ಲಿ ಬೇಕೆಂದರಲ್ಲಿ ಎಸೆಯುತ್ತಾರೆ. ಆಗ ತಟ್ಟನೆ ಓಡಿ ಹೋಗಿ ನೆಲದಲ್ಲಿ ಬಿದ್ದಿರುವ ಊಟದ ಮುಸುರೆ, ಪ್ಲಾಸ್ಟಿಕ್‌, ಗುಟಕಾ ಮತ್ತಿತರ ಕಸ, ಕಡ್ಡಿಗಳನ್ನು ಕಸದ ಬುಟ್ಟಿಯಲ್ಲಿ ಹಾಕಿ ಪ್ರವಾಸಿಗರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುತ್ತಾರೆ. ಕಣ್ಣಿಗೆ ಎಲ್ಲಿಯಾದರೂ ಕಸ ಬಿದ್ದರೆ ಸಾಕು. ನೆಟ್ಟಗೆ ನಡೆಯಲಿಕ್ಕೆ ಬರದಿದ್ದರೂ ಕಾಲುಗಳನ್ನು ಎಳೆದುಕೊಳ್ಳುತ್ತ ಅತ್ತ ಓಡಿ ಹೋಗುತ್ತಾರೆ. ನಾಯಿ, ಹಂದಿಗಳು ಉದ್ಯಾನದಲ್ಲಿ ಬಂದರೆ ಓಡಿಸುತ್ತಾರೆ.

ಹಣಕ್ಕಾಗಿ ಕೆಲಸ ಮಾಡುತ್ತಿಲ್ಲ:

ಪುರಾತತ್ವ ಹಾಗೂ ಪ್ರಾಚ್ಯವಸ್ತು ಇಲಾಖೆ ಅಥವಾ ಪ್ರವಾಸೋದ್ಯಮ ಇಲಾಖೆಯಾಗಲಿ ಇವರ ಕೆಲಸಕ್ಕೆ ಒಂದು ನಯಾಪೈಸೆ ಸಂಭಾವನೆ ನೀಡುತ್ತಿಲ್ಲ. ಶೇಖಪ್ಪ ಯಾರನ್ನು ದುಡ್ಡು ಕೇಳುವುದಿಲ್ಲ. ಖುಷಿಯಿಂದ ಏನಾದರೂ ತಿನ್ನಲು ಕೊಟ್ಟರೆ ತಿನ್ನುತ್ತಾರೆ. ಇಲ್ಲವಾದಲ್ಲಿ ಇಲ್ಲ. ಪ್ರವಾಸಿಗರು ಈತನಿಗೆ ಪ್ರೀತಿಯಿಂದ .10, .20 ದುಡ್ಡು ನೀಡಿದರೆ ಒಲ್ಲದ ಮನಸ್ಸಿನಿಂದ ಪಡೆಯುತ್ತಾರೆ.

ಇವರಿಗೆ ಗೋಳಗುಮ್ಮಟ ಸದಾ ಸ್ವಚ್ಛವಾಗಿರಬೇಕು ಎಂಬ ಹೆಬ್ಬಯಕೆ. ಅನಕ್ಷರಸ್ಥರಾದ ಶೇಖಪ್ಪ, ಗೋಳಗುಮ್ಮಟ ಸ್ವಚ್ಛತೆ ಮಾಡುವುದರಲ್ಲಿಯೇ ತಮ್ಮ ಜೀವನದ ಅರ್ಧ ಭಾಗವನ್ನು ಸವೆಸಿದ್ದಾರೆ. ಶೇಖಪ್ಪನ ತಂದೆ ಗುರುಲಿಂಗಪ್ಪ ಚಿಕ್ಕಂದಿನಲ್ಲಿ ಇರುವಾಗಲೇ ಮೃತಪಟ್ಟಿದ್ದಾರೆ. ಮನೆಯಲ್ಲಿರುವ ವಯಸ್ಸಾದ ತಾಯಿ ಬೌರಮ್ಮಳ ಸಂರಕ್ಷಣೆ ಮಾಡುವ ಗುರುತರ ಜವಾಬ್ದಾರಿಯೂ ಇವರ ಮೇಲಿದೆ.

ಶೇಖಪ್ಪನಿಗೆ ಒಬ್ಬ ಸಹೋದರನಿದ್ದಾನೆ. ಆತ ಮದುವೆಯಾಗಿ ತನ್ನ ಪತ್ನಿ, ಮಕ್ಕಳು ಜೊತೆಗೆ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾನೆ. ಶೇಖಪ್ಪ ಮದುವೆಯಾಗಿಲ್ಲ. ತನ್ನ ವಯೋವೃದ್ಧೆ ತಾಯಿ ಜೊತೆಗೆ ವಾಸವಾಗಿದ್ದಾನೆ. ಶೇಖಪ್ಪನಿಗೆ ಪ್ರತಿ ತಿಂಗಳು .1200 ಅಂಗವಿಕಲ ಮಾಸಿಕ ಭತ್ಯೆ ಬರುತ್ತದೆ. ಈ ಭತ್ಯೆಯಲ್ಲಿಯೇ ತಾಯಿ ಜತೆ ಬದುಕು ಸಾಗಿಸುತ್ತಿದ್ದಾರೆ.

 

ನಾನು ರೊಕ್ಕಾ, ಪಗಾರ ಸಲುವಾಗಿ ಗೋಳಗುಮ್ಮಟ ಆವರಣ ಸ್ವಚ್ಛತೆ ಮಾಡುತ್ತಿಲ್ಲ. ವಿಶ್ವವಿಖ್ಯಾತ ಗೋಳಗುಮ್ಮಟ ಪರಿಸರವು ಸ್ವಚ್ಛವಾಗಿರಬೇಕು ಎಂಬುವುದೇ ನನ್ನ ಹೆಬ್ಬಯಕೆ. ಆದ್ದರಿಂದ ನಾನು ಸ್ವಚ್ಛತಾ ಅಭಿಯಾನವನ್ನು ಕೈಗೊಂಡಿದ್ದೇನೆ. ಸ್ವಚ್ಛತೆ ಕಾರ್ಯದಲ್ಲಿ ಸಿಗುವಷ್ಟುಸುಖ ನನಗೆ ಬೇರೆ ಎಲ್ಲಿಯೂ ಸಿಗುವುದಿಲ್ಲ.

-ಶೇಖಪ್ಪ ಹಡಪದ, ವಿಜಯಪುರ

ರುದ್ರಪ್ಪ ಆಸಂಗಿ

Follow Us:
Download App:
  • android
  • ios