ನವದೆಹಲಿ (ಅ.31): ‘ಜಾಗತಿಕ ಬಿಸಿ ಏರಿಕೆ’ ಪರಿಣಾಮ ಸಮುದ್ರ ನೀರಿನ ಮಟ್ಟವೂ ಏರುತ್ತಿದ್ದು, ಇದರಿಂದ ಭಾರತದ ಸಮುದ್ರ ತೀರಗಳಲ್ಲಿ ನೆಲೆಸಿರುವ ಸುಮಾರು 3.6 ಕೋಟಿ ಭಾರತೀಯರು 2050ರ ವೇಳೆಗೆ ಪ್ರವಾಹ ಎದುರಿಸುವ ಅಪಾಯದಲ್ಲಿದ್ದಾರೆ.

ಅಲ್ಲದೆ, 2050ನೇ ಇಸವಿಯೊಳಗೆ ಬಹುತೇಕ ಮುಂಬೈ ನಗರವು ಸಮುದ್ರ ನೀರಿನಿಂದ ಕೊಚ್ಚಿಹೋಗುವ ಸಾಧ್ಯತೆ ಇದೆ. ಕೋಲ್ಕತಾ, ಕರಾವಳಿ ಬಂಗಾಳ ಹಾಗೂ ಕರಾವಳಿ ಒಡಿಶಾಗೂ ಅಪಾಯ ಕಾದಿದೆ ಎಂಬ ಆತಂಕದ ವಿಚಾರವು ಅಧ್ಯಯನವೊಂದರಿಂದ ತಿಳಿದುಬಂದಿದೆ.

ಮರೆಯಾಗುವ ಮುನ್ನ ನೋಡಲೇಬೇಕಾದ ವಿಶ್ವದ ತಾಣಗಳು

ಭಾರತವಷ್ಟೇ ಅಲ್ಲ, ಏರುತ್ತಿರುವ ಸಮುದ್ರ ಮಟ್ಟವು ವಿಶ್ವವ್ಯಾಪಿ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಶತಮಾನದ ಅಂತ್ಯಕ್ಕೆ 2 ಸೆಂ.ಮೀ. ಹಾಗೂ 20ನೇ ಶತಮಾನದಲ್ಲಿ 11ರಿಂದ 16 ಸೆಂ.ಮೀ.ನಷ್ಟುಸಮುದ್ರದ ನೀರು ಏರಿಕೆಯಾಗಲಿದೆ. 2050ಕ್ಕೆ ಜಗತ್ತಿನ 34 ಕೋಟಿ ಜನರು ಹಾಗೂ 2100ಕ್ಕೆ ಸುಮಾರು 63 ಕೋಟಿ ಜನರು ಸಮುದ್ರದ ಉಬ್ಬರಕ್ಕೆ ತತ್ತರಿಸಲಿದ್ದಾರೆ. ಇದು ಈ ಮುಂಚೆ ಅಂದಾಜಿಸಿದ 2.8 ಕೋಟಿಗಿಂತ ತುಂಬಾ ಅಧಿಕ ಎಂದು ಅಮೆರಿಕದ ನ್ಯೂಜೆರ್ಸಿಯ ‘ಕ್ಲೈಮೇಟ್‌ ಸೆಂಟ್ರಲ್‌’ ಎಂಬ ಸಂಸ್ಥೆ ಸಿದ್ಧಪಡಿಸಿದ ಅಧ್ಯಯನ ವರದಿ ಹೇಳಿದೆ. ಈ ವರದಿ ‘ನೇಚರ್‌ ಕಮ್ಯುನಿಕೇಶನ್‌’ ಎಂಬ ನಿಯತಕಾಲಿಕೆಯಲ್ಲಿ ಇದು ಪ್ರಕಟವಾಗಿದೆ.

ಚೀನಾದ 9.3 ಕೋಟಿ ಜನ, ಬಾಂಗ್ಲಾದೇಶದ 4.2 ಕೋಟಿ, ವಿಟ್ನಾಂನ 3.1 ಕೋಟಿ, ಇಂಡೋನೇಷ್ಯಾದ 2.3 ಕೋಟಿ ಹಾಗೂ ಥಾಯ್ಲೆಂಡ್‌ನ 1.2 ಕೋಟಿ ಜನರಿಗೆ ಇನ್ನು 31 ವರ್ಷದಲ್ಲಿ ಮುಳಗು ಭೀತಿ ಇದೆ.

ದ.ವಿಯೆಟ್ನಾಂ ಸಂಪೂರ್ಣ ಕಣ್ಮರೆ

ಸಮುದ್ರದ ಮಟ್ಟಏರಿಕೆಯು ವಿಶ್ವವ್ಯಾಪಿ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಭಾರತ, ಬಾಂಗ್ಲಾದೇಶ, ಇಂಡೋನೇಷ್ಯಾ, ಫಿಲಿಪ್ಪೀನ್ಸ್‌, ವಿಯೆಟ್ನಾಂ, ಚೀನಾ ಹಾಗೂ ಜಪಾನ್‌ ದೇಶಗಳು ಜಗತ್ತಿನ ಸಮುದ್ರ ತೀರದ ಜನಸಂಖ್ಯೆಯ ಶೇ.70ರಷ್ಟುಪಾಲು ಹೊಂದಿವೆ. ಈ ಪೈಕಿ ಭಾರತ, ಬಾಂಗ್ಲಾ, ಇಂಡೋನೇಷ್ಯಾ ಹಾಗೂ ಫಿಲಿಪ್ಪೀನ್ಸ್‌ ತೀರದಲ್ಲಿನ ಬಾಧಿತ ಜನರ ಪ್ರಮಾಣ 5ರಿಂದ 10 ಪಟ್ಟು ಏರಲಿದೆ ಎಂದು ವರದಿ ಎಚ್ಚರಿಸಿದೆ.

2050ರ ವೇಳೆಗೆ ದಕ್ಷಿಣ ವಿಯೆಟ್ನಾಂ ಅತಿಯಾಗಿ ಬಾಧಿತವಾಗಲಿದ್ದು, ದೇಶದ 2 ಕೋಟಿ ಜನರು ಇರುವಷ್ಟುಭಾಗ ಮುಳುಗಡೆಯಾಗಲಿದೆ. ಇದು ದೇಶದ ಮೂರನೇ ಎರಡು ಭಾಗದಷ್ಟುಭೂಮಿ. ಅಂದರೆ ದೇಶದ ಸುಮಾರು ಶೇ.66 ಭಾಗ ಕಣ್ಮರೆಯಾಗಲಿದೆ ಎಂದು ಅಧ್ಯಯನ ಹೇಳಿದೆ. ವಿಯೆಟ್ನಾಂನ ಆರ್ಥಿಕ ಕೇಂದ್ರವಾದ ಹೊ ಚಿ ಮಿನ್‌ ನಗರ ಕೂಡ ಸಂಪೂರ್ಣ ಮುಳುಗಡೆಯಾಗಲಿದೆ.

ಚಂಡಮಾರುತಕ್ಕೆ ಹೆಸರಿಟ್ಟೋರು ಯಾರು?

ಥಾಯ್ಲೆಂಡ್‌ನ ಶೇ.10 ಜನರು ಮುಳುಗುವ ಭೀತಿಯಿದೆ. ಅದರ ವಾಣಿಜ್ಯಿಕ ರಾಜಧಾನಿ ಬ್ಯಾಂಕಾಕನ್ನು ಕೂಡ ಸಮುದ್ರ ಆವರಿಸುವ ಅಪಾಯವಿದೆ. ಚೀನಾದ ಶಾಂಘೈ ನಗರದ ಹೃದಯವನ್ನೇ ಸಮುದ್ರ ನುಂಗಲಿದೆ.

ಇರಾಕ್‌ನ ಎರಡನೇ ದೊಡ್ಡ ನಗರ ಬಸ್ರಾ 2050ರ ವೇಳೆಗೆ ಬಹುತೇಕ ನೀರಿನಲ್ಲಿರಲಿದೆ.

ಅಧ್ಯಯನ ಹೇಗೆ?

ಉಪಗ್ರಹಗಳು ಸೂಚಿಸುವ ಅಂದಾಜು ಆಧರಿಸಿ ಈ ಅಧ್ಯಯನ ವರದಿ ಸಿದ್ಧಪಡಿಸಲಾಗಿದೆ. ಉಪಗ್ರಹಗಳ ಅಂದಾಜಿನ ಮೇರೆಗೇ ಸಮುದ್ರ ಮಟ್ಟದ ಏರಿಳಿತ ಅಂದಾಜಿಸಲಾಗುತ್ತದೆ.

3.6 ಕೋಟಿ.. ಭಾರತದ ಇಷ್ಟುಜನಸಂಖ್ಯೆಗೆ ಏರುತ್ತಿರುವ ಸಮುದ್ರದಿಂದ ಅಪಾಯ

34 ಕೋಟಿ... ಸಮುದ್ರ ತೀರದ ಜಗತ್ತಿನ 34 ಕೋಟಿ ಜನ 2050ಕ್ಕೆ ಅಪಾಯದಲ್ಲಿ

63 ಕೋಟಿ... ಸಮುದ್ರ ತೀರದ ಜಗತ್ತಿನ 63 ಕೋಟಿ ಜನರು 2050ಕ್ಕೆ ಅಪಾಯದಲ್ಲಿ

2 ನಗರ.. ಭಾರತದ ಚೆನ್ನೈ, ಕೋಲ್ಕತಾ ನಗರಗಳಿಗೆ ಮುಳುಗಡೆ ಭೀತಿ

2 ಸೆಂ.ಮೀ...ಈ ಶತಮಾನದ ಅಂಚಿಗೆ ಸಮುದ್ರ ಮಟ್ಟಇಷ್ಟುಏರಿಕೆ