ಬಂದ್‌ನಿಂದ ರಾಜ್ಯಕ್ಕಾದ ನಷ್ಟವೆಷ್ಟು ಗೊತ್ತಾ?
ಭಾರತ್ ಬಂದ್‌ನಿಂದ ರಾಜ್ಯಕ್ಕೆ ಭಾರೀ ನಷ್ಟ | ವಾಣಿಜ್ಯ ವಹಿವಾಟು ಸ್ಥಗಿತದಿಂದ ಸರ್ಕಾರಕ್ಕೆ 195 ಕೋಟಿ ರು. ತೆರಿಗೆ ಆದಾಯ ಖೋತಾ: ಎಫ್‌ಕೆಸಿಸಿಐ ಅಂದಾಜು | ಸೋಮವಾರ
ಬಂದ್‌ನಿಂದಾಗಿ 2300 ಕೋಟಿ ರು.ನಷ್ಟು ವ್ಯಾಟ್ ಹಾಗೂ ತೆರಿಗೆ ವ್ಯಾಪ್ತಿಯ ವಹಿವಾಟು ಹಾಗೂ 1,100 ಕೋಟಿ ರು. ತೆರಿಗೆಯೇತರ ವ್ಯಾಪಾರ ವಹಿವಾಟು ಸೇರಿದಂತೆ ಕನಿಷ್ಠ 3,400 ಕೋಟಿ ರು. ನಷ್ಟ
ಬೆಂಗಳೂರು (ಸೆ. 11): ‘ಭಾರತ್ ಬಂದ್’ ಪರಿಣಾಮ ರಾಜ್ಯದಲ್ಲಿ 3,400 ಕೋಟಿ ರು. ಮೊತ್ತದ ವಾಣಿಜ್ಯ ವಹಿವಾಟು ನಷ್ಟ ಉಂಟಾಗಿದ್ದು, ಸರ್ಕಾರದ ಬೊಕ್ಕಸಕ್ಕೆ ಸುಮಾರು 195 ಕೋಟಿ ರು. ಆದಾಯ ಖೋತಾ ಆಗಿದೆ ಎಂದು ಅಂದಾಜಿಸಲಾಗಿದೆ.
ಪ್ರತಿ ನಿತ್ಯ ರಾಜ್ಯದಲ್ಲಿ 3,400 ಕೋಟಿ ರು.ಗಳಿಂದ ನಾಲ್ಕು ಸಾವಿರ ಕೋಟಿ ರು.ನಷ್ಟು ಕೈಗಾರಿಕೆ ಹಾಗೂ ವ್ಯಾಪಾರ ವಹಿವಾಟು ನಡೆಯುತ್ತದೆ. ಸೋಮವಾರ ಬಂದ್‌ನಿಂದಾಗಿ 2,300 ಕೋಟಿ ರು.ನಷ್ಟು ವ್ಯಾಟ್ ಹಾಗೂ ತೆರಿಗೆ ವ್ಯಾಪ್ತಿಯ ವಹಿವಾಟು ಹಾಗೂ 1,100 ಕೋಟಿ ರು. ತೆರಿಗೆಯೇತರ ವ್ಯಾಪಾರ ವಹಿವಾಟು ಸೇರಿದಂತೆ ಕನಿಷ್ಠ 3,400 ಕೋಟಿ ರು. ನಷ್ಟ ಉಂಟಾಗಿದೆ.
ಈ ಪೈಕಿ ಪ್ರತಿ ವರ್ಷ ಸರ್ಕಾರಕ್ಕೆ ಕೈಗಾರಿಕೆ ಹಾಗೂ ವ್ಯಾಪಾರ ವಹಿವಾಟು ಕ್ಷೇತ್ರದಿಂದ 65 ಸಾವಿರ ಕೋಟಿ ರು. ಆದಾಯ ತೆರಿಗೆ ರೂಪದಲ್ಲಿ ಬರುತ್ತಿದೆ. ಹೀಗಾಗಿ ಸೋಮವಾರ ಕೈಗಾರಿಕೆಗಳು ಸ್ತಬ್ಧಗೊಂಡ ಕಾರಣ ರಾಜ್ಯ ಸರ್ಕಾರಕ್ಕೆ 160 ಕೋಟಿ ರು. ನಷ್ಟ ಉಂಟಾಗಿದೆ.
ರಾಜ್ಯ ಸರ್ಕಾರಕ್ಕೆ ಪ್ರತಿ ನಿತ್ಯ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ರೂಪದಲ್ಲಿ ಸರಾಸರಿ 30.6 ಕೋಟಿ ರು. ಆದಾಯ ಬರುತ್ತದೆ. ಸೋಮವಾರ ಈ ತೆರಿಗೆ ಆದಾಯದಲ್ಲೂ 25 ಕೋಟಿ ರು. ನಷ್ಟ ಉಂಟಾಗಿದೆ ಉಂಟಾಗಿದೆ ಎಂದು ಎಫ್‌ಕೆಸಿಸಿಐ ಅಂದಾಜಿಸಿದೆ. ಇನ್ನು ಕೆಎಸ್‌ಆರ್‌ಟಿಸಿಗೆ ಬಸ್ಸು ಸಂಚಾರ ವ್ಯತ್ಯಯ ದಿಂದ 5.34 ಕೋಟಿ ರು. ಹಾಗೂ ಬಿಎಂಟಿಸಿಗೆ ಸುಮಾರು 4 ಕೋಟಿ ರು. ನಷ್ಟ ಉಂಟಾಗಿದೆ.
ದರ ಏರಿಕೆಗೆ ಬಂದ್ ಪರಿಹಾರವಲ್ಲ:
ಈ ಬಗ್ಗೆ ಪ್ರತಿಕ್ರಿಯಿಸಿದ ಎಫ್‌ಕೆಸಿಸಿಐ ಅಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಪ್ರತಿ ಲೀಟರ್‌ಗೆ ಕ್ರಮವಾಗಿ 83.69 ಹಾಗೂ 74.84 ರು. ಇದೆ. ತೈಲ ಬೆಲೆ ಹೆಚ್ಚಳದಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯೂ ಆಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಬಂದ್ ಮಾಡುವುದು ಸ್ವಾಭಾವಿಕ. ಆದರೆ ಬಂದ್ ಮಾಡುವುದು ಯಾವುದೇ ಸಮಸ್ಯೆಗೆ ಪರಿಹಾರವಲ್ಲ ಎಂದು ಹೇಳಿದರು.
ಕೇಂದ್ರ, ರಾಜ್ಯ ಸರ್ಕಾರ ತೆರಿಗೆ ಇಳಿಸಲಿ:
ಪೆಟ್ರೋಲ್ ಹಾಗೂ ಡೀಸೆಲ್‌ಗೆ ಕೇಂದ್ರ ಸರ್ಕಾರವು ಪ್ರತಿ ಲೀಟರ್ ಪೆಟ್ರೋಲ್‌ಗೆ ಶೇ.23.27 ಹಾಗೂ ಡೀಸೆಲ್‌ಗೆ ಪ್ರತಿ ಲೀಟರ್‌ಗೆ ಶೇ.20.58 ರಷ್ಟು ತೆರಿಗೆ ವಿಧಿಸುತ್ತಿದೆ. ರಾಜ್ಯ ಸರ್ಕಾರವು ಪೆಟ್ರೋಲ್ ಮೇಲೆ ಶೇ.32 ಹಾಗೂ ಡೀಸೆಲ್ ಮೇಲೆ ಶೇ.21 ರಷ್ಟು ವಿಧಿಸುತ್ತಿದೆ.
ಇತ್ತೀಚೆಗೆ ರಾಜ್ಯ ಸರ್ಕಾರವು 2018-19 ರ ಬಜೆಟ್‌ನಲ್ಲಿ ಪೆಟ್ರೋಲ್, ಡೀಸೆಲ್ ದರದ ಮೇಲೆ ಶೇ.೨ರಷ್ಟು ತೆರಿಗೆ ಹೆಚ್ಚಳ ಮಾಡಿದೆ. ಇದು ಜನಸಾಮಾನ್ಯರು, ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೈಗಾರಿಕೆ ಹಾಗೂ ವ್ಯಾಪಾರ ಸಮುದಾಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ ಮಾದರಿಯಲ್ಲಿ ರಾಜ್ಯ ಸರ್ಕಾರವೂ ತೆರಿಗೆ ಹೊರೆ ಕಡಿಮೆ ಮಾಡಬೇಕು. ಕೇಂದ್ರ ಸರ್ಕಾರವೂ ತನ್ನ ಧೋರಣೆ ಬದಲಿಸಿ ತನ್ನ ಪಾಲಿನ ತೆರಿಗೆ ಇಳಿಕೆ ಮಾಡಬೇಕು ಎಂದು ಸುಧಾಕರ್ ಶೆಟ್ಟಿ ಒತ್ತಾಯಿಸಿದರು.