ಬೆಂಗಳೂರು :  ಅನ್ನಭಾಗ್ಯ ಯೋಜನೆ ಅಡಿಯಲ್ಲಿ ವಿತರಿಸಲಾಗುತ್ತಿದ್ದ ಅಕ್ಕಿಯ ಪ್ರಮಾಣ ಏಳು ಕೆ.ಜಿ.ಯಿಂದ ಐದು ಕೆ.ಜಿ.ಗೆ ಕಡಿತಗೊಳಿಸುವ ನಿರ್ಧಾರಕ್ಕೇ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರ ಅಂಟಿಕೊಂಡಿದೆ. ಈ 2 ಕೆ.ಜಿ. ಅಕ್ಕಿ ಕಡಿತ ಮಾಡುವುದರಿಂದ ಹೆಚ್ಚೂ ಕಡಮೆ 4,500 ಕೋಟಿ ರು. ಗಳಷ್ಟು ದೊಡ್ಡ ಮೊತ್ತ ಉಳಿತಾಯವಾಗುವ ಬಗ್ಗೆ ಹಣಕಾಸು ಇಲಾಖೆ ಕೂಲಂಕಷವಾಗಿ ಲೆಕ್ಕ ಹಾಕಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಡಿತಗೊ ಳಿಸುವ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಹೀಗಾಗಿಯೇ ಗುರುವಾರ ವಿಧಾನಮಂಡಲದ ಅಧಿ ವೇಶನದಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವ ವೇಳೆ ಕುಮಾರಸ್ವಾಮಿ ಅವರು ಅಕ್ಕಿ ಕಡಿತ ನಿರ್ಧಾರ ವಾಪಸ್ ಪಡೆಯುವ ಬೇಡಿಕೆಗೆ ಸ್ಪಷ್ಟವಾಗಿ ಹೇಳದೆ ತೇಲಿಸಿದರು ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಿತ್ರಪಕ್ಷ ಕಾಂಗ್ರೆಸ್ಸಿನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ಕಿ ಕಡಿತ  ನಿರ್ಧಾರ ವಾಪಸ್ ಪಡೆಯುವಂತೆ ಮುಖ್ಯಮಂತ್ರಿಗಳಿಗೆ ಪತ್ರವನ್ನೇ ಬರೆದಿದ್ದರು. ಸ್ವಪಕ್ಷೀಯ ಶಾಸಕರೂ ಈ ಬಗ್ಗೆ ಒತ್ತಾಯ ಮಾಡಿ ದ್ದರು. ಆದರೂ ಸಾಲಮನ್ನಾಕ್ಕೆ ಅಗತ್ಯವಾದ ಸಂಪನ್ಮೂಲ ಕ್ರೋಡೀಕರಿಸುವ ಉದ್ದೇಶದಿಂದ ಅಕ್ಕಿ ಕಡಿತ ನಿರ್ಧಾರ ದಿಂದ ಹಿಂದೆ ಸರಿಯದಿರಲು ತೀರ್ಮಾನಿಸಿದರು. ತಮ್ಮ ಈ ನಿಲುವಿನ ಬಗ್ಗೆ ಸಿದ್ದರಾಮಯ್ಯ ಸೇರಿದಂತೆ ಮಿತ್ರಪಕ್ಷ ಕಾಂಗ್ರೆಸ್ಸಿನ ನಾಯಕರಿಗೆ ಮನವರಿಕೆ ಮಾಡಿಕೊಡಲೂ ಮುಖ್ಯಮಂತ್ರಿ ಕುಮಾರಸ್ವಾಮಿ ಮುಂದಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಕೇಂದ್ರದಿಂದ ಅಕ್ಕಿ 5 ಕೆ.ಜಿ. ಮಾತ್ರ: ಕೇಂದ್ರ ಸರ್ಕಾರದ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಪ್ರತಿ ರಾಜ್ಯಕ್ಕೂ 3 ರು.ಗಳಿಗೆ ಒಂದು ಕೆ.ಜಿ.ಯಂತೆ ಅಕ್ಕಿ ವಿತರಿಸುತ್ತದೆ. ಬಡವರಿಗೆ ಐದು ಕೆ.ಜಿ. ಕೊಡಲು ಅವಕಾಶವಿದೆ. ಕೇಂದ್ರ ಸರ್ಕಾರ ಉಚಿತವಾಗಿ ನೀಡುವ ಅಕ್ಕಿಯನ್ನು ವಿತರಿಸಲು ಸಾರಿಗೆ, ನಿರ್ವಹಣೆ ವೆಚ್ಚವಾಗಿ ಪ್ರತಿ ಕೆ.ಜಿ.ಗೆ 3 ರು. ತಗಲುತ್ತದೆ. ಅಂದರೆ, 5 ಕೆ.ಜಿ. ವಿತರಿಸಲು ಸರ್ಕಾರಕ್ಕೆ ಬೀಳುವ ಹೊರೆ ಕೇವಲ 15 ರು. ಮಾತ್ರ.  

ಆದರೆ, ಹೆಚ್ಚುವರಿಯಾಗಿ ಎರಡು ಕೆ.ಜಿ. ಅಕ್ಕಿ ವಿತರಿಸುವುದಾದರೆ ಅದನ್ನು ಕೇಂದ್ರ ಸರ್ಕಾರ ಉಚಿತವಾಗಿ ನೀಡುವುದಿಲ್ಲ. ಮಾರುಕಟ್ಟೆಯಲ್ಲಿ  ಖರೀದಿಸಿ ಕೊಡಿ ಎನ್ನುತ್ತದೆ. ಆಗ ರಾಜ್ಯ ಸರ್ಕಾರ ರಿಯಾಯ್ತಿ ದರದಲ್ಲಿ ಖರೀದಿಸಿದರೂ ಒಂದು ಕೆ.ಜಿ.ಗೆ 35 ರು. ವೆಚ್ಚ ಮಾಡಬೇಕಾಗುತ್ತದೆ. ಅಂದರೆ, ಎರಡು ಕೆ.ಜಿ.ಗೆ ಸುಮಾರು 70 ರು. ಎಂದು ಮೂಲಗಳು ಮಾಹಿತಿ ನೀಡಿವೆ. 

ಮೇಲಾಗಿ ಐದರಿಂದ ಏಳು ಕೆ.ಜಿ.ಗೆ ಏರಿಕೆಯಾದ ನಂತರ ಬೋಗಸ್ ಕಾರ್ಡ್‌ಗಳ ಸಂಖ್ಯೆಯೂ ತೀವ್ರಗತಿ ಯಲ್ಲಿ ಹೆಚ್ಚಾಗಿದೆ ಎಂಬುದನ್ನು ರಾಜ್ಯದ ಸಮ್ಮಿಶ್ರ ಸರ್ಕಾರ ಪತ್ತೆ ಹಚ್ಚಿದೆ. ಇದೆಲ್ಲವೂ ಸೇರಿ ರಾಜ್ಯ ಸರ್ಕಾರದ ಮೇಲೆ ಐದು ಕೆ.ಜಿ. ಬದಲು ಏಳು ಕೆ.ಜಿ. ನೀಡುವುದರಿಂದ ಹೆಚ್ಚುವರಿಯಾಗಿ 4,500 ಕೋಟಿ ರು. ವ್ಯಯಿಸಬೇಕಾಗುತ್ತದೆ. 

ಅಷ್ಟು ದೊಡ್ಡ ಮೊತ್ತ ಉಳಿಸುವುದು ಮುಖ್ಯ ಎಂಬ ಬಲವಾದ ಅಭಿಪ್ರಾಯವನ್ನು ಹಣಕಾಸು ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನೀಡಿದ್ದರು ಎನ್ನಲಾಗಿದೆ.