ಬೆಂಗಳೂರು (ಮಾ. 22):  2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಅತಿ ಹೆಚ್ಚು ಸ್ಥಾನ ಗಳಿಸುವುದು. ಇದು ಕಾಂಗ್ರೆಸ್‌ ಹೈಕಮಾಂಡ್‌, ರಾಜ್ಯದಲ್ಲಿ ಜೆಡಿಎಸ್‌ನ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ರಚಿಸಲು ಮುಂದಾಗಿದ್ದರ ಮೂಲ ಉದ್ದೇಶ. ಈ ಉದ್ದೇಶ ಸಾಧನೆಗಾಗಿ ಲೋಕಸಭಾ ಚುನಾವಣೆಗೂ ಮೈತ್ರಿ ರಚನೆಯಾಗಿದೆ.

ಮೈತ್ರಿ ಕೂಟದಿಂದ ಅತಿ ಹೆಚ್ಚು ಸ್ಥಾನ ಗೆಲ್ಲಲು ಏನೇನು ಪ್ರಯತ್ನ ಸಾಧ್ಯವೋ ಅದೆಲ್ಲ ನಡೆದಿದೆ. ಇದರ ಪರಿಣಾಮವಾಗಿ ರಾಜ್ಯದ ಇತಿಹಾಸದಲ್ಲೇ ಕಾಂಗ್ರೆಸ್‌ ಎಂಟು ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸದಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೈತ್ರಿಕೂಟದ ಏಟು-ಒಳಏಟುಗಳ ಜಂಜಾಟ, ಅಭ್ಯರ್ಥಿಗಳ ಕೊರತೆ, ಬಂಡಾಯದ ಭೀತಿಯಂತಹ ಹತ್ತಾರು ಸಮಸ್ಯೆಗಳು ಹುಟ್ಟಿಕೊಂಡಿವೆ.

ಇಂತಹ ಸಂದಿಗ್ಧ ಸಂದರ್ಭವನ್ನು ಕಾಂಗ್ರೆಸ್‌ ಹೇಗೆ ಎದುರಿಸಲಿದೆ? ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ ಎಂದರೆ ಸಿಡಿದೇಳುವ ಕಾಂಗ್ರೆಸ್‌ ನಾಯಕರು ಹಾಗೂ ಕಾರ್ಯಕರ್ತರನ್ನು ಹೇಗೆ ಸಮಾಧಾನ ಮಾಡಲಿದೆ? ಬಿಜೆಪಿ ಪ್ರೇರಿತ ರಾಷ್ಟ್ರೀಯತೆಯ ಪ್ರಚಾರ ತಂತ್ರವನ್ನು ಕಾಂಗ್ರೆಸ್‌ ಹೇಗೆ ಎದುರಿಸಲಿದೆ? ಇಷ್ಟಕ್ಕೂ ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಜನರ ಮುಂದಿಡುವ ವಿಚಾರಗಳೇನು ಎಂಬಿತ್ಯಾದಿ ವಿಚಾರಗಳ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ‘ಕನ್ನಡಪ್ರಭ’ಕ್ಕೆ ನೀಡಿದ ಸಂದರ್ಶನದಲ್ಲಿ ವಿವರವಾಗಿ ಮಾತನಾಡಿದ್ದಾರೆ.

ಮೈತ್ರಿಕೂಟದ ಟಿಕೆಟ್‌ ಗೊಂದಲ ಬಗೆಹರಿಯುತ್ತಲೇ ಇಲ್ಲ, ಏಕೆ?

ದೊಡ್ಡ ಸಮಸ್ಯೆಗಳೇನೂ ಇರಲಿಲ್ಲ. ಆದರೆ, ಆಯ್ಕೆಯ ಪ್ರಕ್ರಿಯೆಯೇ ದೀರ್ಘವಾಗಿರುತ್ತದೆಯಲ್ಲ. ಇನ್ನು ಮೈತ್ರಿಯಾಗಿರುವ ಹಿನ್ನೆಲೆಯಲ್ಲಿ ಜೆಡಿಎಸ್‌ ಜತೆಗೆ ಒಂದು ಸುತ್ತಿನ ಮಾತುಕತೆ ನಡೆಯಬೇಕಿತ್ತು. ಏಕೆಂದರೆ, ಅವರ ಪ್ರಭಾವ ಇರುವ ಕ್ಷೇತ್ರಗಳಲ್ಲಿ ಯಾರನ್ನು ಕಣಕ್ಕೆ ಇಳಿಸಬೇಕು ಎಂದು ನಾವು ಅವರನ್ನು ಕೇಳಬೇಕಿತ್ತು. ನಮ್ಮ ಪ್ರಭಾವ ಇರುವ ಕ್ಷೇತ್ರಗಳಲ್ಲಿ ಯಾರನ್ನು ಕಣಕ್ಕೆ ಇಳಿಸಿದರೆ ಉತ್ತಮ ಎಂದು ಅವರಿಗೆ ಹೇಳಬೇಕಿತ್ತು. ಅಂದರೆ, ಉಡುಪಿ-ಚಿಕ್ಕಮಗಳೂರು, ವಿಜಯಪುರದಂತಹ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪ್ರಭಾವ ಉತ್ತಮವಾಗಿದೆ.

ಅಲ್ಲಿ ಯಾರು ಕಣಕ್ಕೆ ಇಳಿದರೆ ಉತ್ತಮ ಎಂಬ ಬಗ್ಗೆ ನಮ್ಮ ಅನಿಸಿಕೆಯನ್ನು ಅವರಿಗೆ ಹೇಳಿದ್ದೇವೆ. ಅದೇ ರೀತಿ ಮೈಸೂರಿನಂತಹ ಕ್ಷೇತ್ರಗಳಲ್ಲಿ ಅವರ ಪ್ರಭಾವ ಉತ್ತಮವಾಗಿದೆ. ಹೀಗಾಗಿ ಅವರ ಅಭಿಪ್ರಾಯವನ್ನು ಪಡೆದಿದ್ದೇವೆ. ಬಹುತೇಕ ಕ್ಷೇತ್ರಗಳಲ್ಲಿ ಯಾರನ್ನು ಕಣಕ್ಕೆ ಇಳಿಸಬೇಕು ಎಂಬ ಬಗ್ಗೆ ಸ್ಥೂಲ ನಿರ್ಧಾರವಾಗಿದೆ. ಪ್ಯಾನಲ್‌ ಕೂಡ ಸಿದ್ಧವಿದೆ. ಶುಕ್ರವಾರ (ಮಾ.22) ಹೈಕಮಾಂಡ್‌ನೊಂದಿಗೆ ಚರ್ಚಿಸಿ ಅಭ್ಯರ್ಥಿಯನ್ನು ಅಂತಿಮಗೊಳಿಸುತ್ತೇವೆ. ಅನಂತರ ಹೈಕಮಾಂಡ್‌ ಪಟ್ಟಿಪ್ರಕಟಿಸುತ್ತದೆ.

ಮೈತ್ರಿಕೂಟಕ್ಕೆ ಒಳಏಟಿನ ಭೀತಿ ಜೋರಾಗಿದೆಯಲ್ಲ?

ಮಂಡ್ಯ ಕ್ಷೇತ್ರವನ್ನು ಹೊರತುಪಡಿಸಿದರೆ ಬೇರೆ ಎಲ್ಲೂ ಆ ರೀತಿಯ ಸಮಸ್ಯೆಯಿಲ್ಲ. ಮಂಡ್ಯದಲ್ಲಿ ನಾವು ಹಾಗೂ ಜೆಡಿಎಸ್‌ ಸಾಂಪ್ರದಾಯಿಕ ಎದುರಾಳಿಗಳಾಗಿದ್ದೆವು. ಹೀಗಾಗಿ ಸ್ಥಳೀಯ ವಿರೋಧವಿದೆ. ಆದರೆ, ಹೈಕಮಾಂಡ್‌ ತೀರ್ಮಾನದ ಹಿನ್ನೆಲೆಯಲ್ಲಿ ಜೆಡಿಎಸ್‌ನೊಂದಿಗೆ ಸಹಕರಿಸುವಂತೆ ಎಲ್ಲಾ ನಾಯಕರಿಗೂ ತಾಕೀತು ಮಾಡಿದ್ದೇವೆ. ದೆಹಲಿಯಿಂದ ಬಂದ ನಂತರ ಮತ್ತೊಮ್ಮೆ ಮಂಡ್ಯ ನಾಯಕರ ಜತೆ ಮಾತುಕತೆ ನಡೆಸುತ್ತೇವೆ. ಯಾರಾದರೂ ಬಿಜೆಪಿಗೆ ಬೆಂಬಲ ನೀಡಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡುತ್ತೇವೆ.

ಬಿಜೆಪಿಗಲ್ಲ, ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಿದರೆ...

ಪಕ್ಷದಲ್ಲಿ ಇರುವ ಎಲ್ಲರೂ ಹೈಕಮಾಂಡ್‌ ಸೂಚನೆ ಪಾಲಿಸಬೇಕಾಗುತ್ತದೆ. ಬಹಿರಂಗವಾಗಿ ಬೇರೆ ಅಭ್ಯರ್ಥಿಗೆ ಬೆಂಬಲ ನೀಡಿದರೆ ಅಥವಾ ಪಕ್ಷದ ಸೂಚನೆಯ ವಿರುದ್ಧ ಹೋದರೆ ಕ್ರಮ ಅನಿವಾರ್ಯ!

ಪರೋಕ್ಷ ಬೆಂಬಲ ನೀಡಿದರೆ?

(ಮೌನ)

ಮಂಡ್ಯದಲ್ಲಿ ನಮಗೆ ಕೈಕೊಟ್ಟರೆ ಮೈಸೂರಿನಲ್ಲಿ ಪಾಠ ಕಲಿಸುತ್ತೇವೆ ಎಂದು ಜೆಡಿಎಸ್‌ನ ಸಚಿವರು ಎಚ್ಚರಿಕೆ ನೀಡಿದ್ದಾರೆ?

ಇಂತಹದೊಂದು ಹೇಳಿಕೆಯನ್ನು ಜೆಡಿಎಸ್‌ ಸಚಿವ ಸಾ.ರಾ. ಮಹೇಶ್‌ ನೀಡಿದ್ದರು. ಆದರೆ, ಈ ಬಗ್ಗೆ ಅವರೊಂದಿಗೆ ನಾನೇ ಮಾತನಾಡಿದ್ದೇನೆ. ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರ ನೀಡುವ ಭರದಲ್ಲಿ ಇಂತಹ ಹೇಳಿಕೆ ನೀಡಿದ್ದಾಗಿ ಅವರು ತಿಳಿಸಿದ್ದಾರೆ. ಆದರೆ, ಮೈತ್ರಿಕೂಟದ ಅಭ್ಯರ್ಥಿ ಪರವಾಗಿಯೇ ನಿಲ್ಲುತ್ತೇವೆ. ಪ್ರಾಮಾಣಿಕವಾಗಿ ಪ್ರಚಾರ ಮಾಡುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ. ನನಗಂತೂ ಜೆಡಿಎಸ್‌ನವರು ನೀಡಿರುವ ಭರವಸೆಯಂತೆ ನಡೆದುಕೊಳ್ಳುತ್ತಾರೆ ಎಂಬ ನಂಬಿಕೆಯಿದೆ.

ಮೈತ್ರಿಯಿಂದಾಗಿ ಕಾಂಗ್ರೆಸ್‌ಗೆ ತುಂಬಾ ನಷ್ಟವಾಗಿದೆ ಎಂಬ ಸಂಕಟ ಕಾಂಗ್ರೆಸ್ಸಿಗರಿಗೆ ಇದೆ?

ಹೌದು, ಅದು ಸಹಜ ಭಾವನೆ. ಆದರೆ, ಇಂದು ದೇಶವು ಆತಂಕಕಾರಿ ಪರಿಸ್ಥಿತಿ ಎದುರಿಸುತ್ತಿದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಈ ದೇಶದಲ್ಲಿ ಏನೆಲ್ಲ ಅನಾಹುತ ಸಂಭವಿಸಲಿದೆ ಎಂಬುದನ್ನು ಊಹಿಸುವುದು ಕಷ್ಟ. ಈ ದುರಂತವನ್ನು ತಪ್ಪಿಸಲು ನಾವು ಹಾಗೂ ಜೆಡಿಎಸ್‌ ಜತೆಗೂಡಿದ್ದೇವೆ. ಹೀಗಾಗಿ ಹೊಂದಾಣಿಕೆ ಅನಿವಾರ್ಯ. ಇದನ್ನು ಕಾಂಗ್ರೆಸ್ಸಿಗರು ಅರ್ಥ ಮಾಡಿಕೊಂಡಿದ್ದಾರೆ.

ಬಿಜೆಪಿ ಅಸ್ತಿತ್ವದಲ್ಲಿ ಇಲ್ಲದ ಹಳೆ ಮೈಸೂರಿನ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದೀರಿ. ಪಕ್ಷದ ಮೇಲೆ ದೂರಗಾಮಿ ಪರಿಣಾಮ ಬೀರುವುದಿಲ್ಲವೇ?

ಖಂಡಿತಾ ಬೀರುತ್ತದೆ. ದೂರಗಾಮಿ ಪರಿಣಾಮದ ದೃಷ್ಟಿಯಿಂದ ನಿಮ್ಮ ಮಾತು ನಿಜ. ಆದರೆ, ಸದ್ಯದ ಪರಿಸ್ಥಿತಿಯನ್ನು ನಾವು ನೋಡಬೇಕಲ್ಲ. ಇಷ್ಟಕ್ಕೂ ಇದೇ ಅಲ್ಲವೇ ರಾಜಕಾರಣ.

ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಎಂಟು ಲೋಕಸಭಾ ಕ್ಷೇತ್ರದಲ್ಲಿ ಹಸ್ತ ಚಿಹ್ನೆ ಇವಿಎಂಗಳಲ್ಲಿ ಇರುವುದೇ ಇಲ್ಲ?

ಕಳೆದ ನಾಲ್ಕೈದು ಚುನಾವಣೆಗಳಲ್ಲಿ ಕಾಂಗ್ರೆಸ್‌ ಸಾಧನೆ ಏನು ಎಂಬುದನ್ನು ನಾವು ಪರ್ಯಾಲೋಚಿಸಬೇಕು. ಕಾಂಗ್ರೆಸ್‌ ಸ್ವತಂತ್ರವಾಗಿ ಸ್ಪರ್ಧಿಸಿ ಆರು, ಎಂಟು ಮತ್ತು ಹತ್ತು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಕಂಡಿದೆ. ಅಂದರೆ, ಕಾಂಗ್ರೆಸ್‌ನ ನಿರೀಕ್ಷೆಯಂತೆ ಲೋಕಸಭಾ ಚುನಾವಣೆಯಲ್ಲಿ ಫಲಿತಾಂಶ ಬರುತ್ತಿಲ್ಲ. ಈ ಆತ್ಮಾವಲೋಕನವನ್ನು ನಾವು ಮಾಡಿಕೊಳ್ಳಬೇಕಲ್ಲ. ಹೀಗಾಗಿ ಮೈತ್ರಿಯ ಹೆಜ್ಜೆಯನ್ನು ಇಟ್ಟಿದ್ದೇವೆ.

ಕ್ಷೇತ್ರ ಅಷ್ಟೇ ಅಲ್ಲ ಪಕ್ಷದ ನಾಯಕರನ್ನೂ ಜೆಡಿಎಸ್‌ಗೆ ನೀಡಬೇಕಾದ ಪರಿಸ್ಥಿತಿ ಬಂದಿದೆ?

ಜೆಡಿಎಸ್‌ ಜತೆ ಮೈತ್ರಿಯಾಗಿದೆ. ಅದನ್ನು ಈಗ ಬದಲಾಯಿಸಲು ಸಾಧ್ಯವಿಲ್ಲ. ಈ ಬಗ್ಗೆ ಮತ್ತೆ ಚರ್ಚೆ ನಡೆಸುವುದರಲ್ಲಿ ಅರ್ಥವಿಲ್ಲ. ಜೆಡಿಎಸ್‌ಗೆ ಎಲ್ಲೆಲ್ಲಿ ಮತ್ತು ಯಾವ್ಯಾವ ಸ್ವರೂಪದಲ್ಲಿ ಕಾಂಗ್ರೆಸ್‌ನ ಬೆಂಬಲ ಅಗತ್ಯವಿದೆಯೋ ಅದೆಲ್ಲವನ್ನು ನಾವು ನೀಡುತ್ತೇವೆ. ಅಭ್ಯರ್ಥಿ ಬೇಕು ಎಂದರೆ ಅಭ್ಯರ್ಥಿಯನ್ನು ನೀಡುತ್ತೇವೆ. ಇಷ್ಟಕ್ಕೂ ಈ ಚುನಾವಣೆಯಲ್ಲಿ ಕೆಲ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಬೆಂಬಲಿತ ಜೆಡಿಎಸ್‌ ಅಭ್ಯರ್ಥಿ ಮತ್ತು ಇತರ ಕೆಲ ಕ್ಷೇತ್ರಗಳಲ್ಲಿ ಜೆಡಿಎಸ್‌ ಬೆಂಬಲಿತ ಕಾಂಗ್ರೆಸ್‌ ಅಭ್ಯರ್ಥಿ ಕಣದಲ್ಲಿ ಇರುತ್ತಾರೆ.

ಹಾಲಿ ಸಂಸದರಿಗೆ ದೇಶದಲ್ಲೆಲ್ಲೂ ಟಿಕೆಟ್‌ ನಿರಾಕರಿಸಿಲ್ಲ. ತುಮಕೂರಿನ ಮುದ್ದಹನುಮೇಗೌಡ ಮಾತ್ರ ಏನು ಅನ್ಯಾಯ ಮಾಡಿದ್ದರು?

ಇನ್ನೂ ಅಂತಿಮ ಪಟ್ಟಿಬಂದಿಲ್ಲ. ಹೀಗಾಗಿ ಮುದ್ದಹನುಮೇಗೌಡರಿಗೆ ಅನ್ಯಾಯವಾಗಿದೆ ಎಂದು ಹೇಳುವಂತಿಲ್ಲ. ಮುದ್ದಹನುಮೇಗೌಡರು ಒಳ್ಳೆಯ ಸಂಸದರು. ಆದರೆ, ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಜೆಡಿಎಸ್‌ಗೆ ಹಳೆ ಮೈಸೂರು ಭಾಗದಲ್ಲಿ ಕೆಲ ಕ್ಷೇತ್ರ ನೀಡಬೇಕಿತ್ತು. ಜೆಡಿಎಸ್‌ಗೆ ತುಮಕೂರಿನಲ್ಲಿ ಮೂರು ಮಂದಿ ಶಾಸಕರಿದ್ದಾರೆ. ಅವರಿಗೆ ಅಲ್ಲಿ ಹೆಚ್ಚಿನ ಮತಗಳು ಇವೆ. ಇನ್ನು ಮುದ್ದಹನುಮೇಗೌಡರಿಗೆ ಪಕ್ಷದಲ್ಲಿ ಏನಾದರೂ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ.

ಮೈಸೂರು ಉಳಿಸಿಕೊಳ್ಳಲು ತುಮಕೂರು ಬಲಿ ಆಯ್ತೆ?

ನಮಗೆ ಆಗದವರು ಆ ರೀತಿ ಹೇಳುತ್ತಿರಬಹುದು. ಆದರೆ, ರಾಜಕೀಯದಲ್ಲಿ ಆ ರೀತಿಯೆಲ್ಲ ನಡೆಯುವುದಿಲ್ಲ. ನೋಡಿ, ಮೈಸೂರಿನಲ್ಲಿ ಯಾವತ್ತೂ ಜೆಡಿಎಸ್‌ ಗೆದ್ದಿಲ್ಲ. ಕಳೆದ ವಿಧಾನಸಭೆಯಲ್ಲಿ ಕಾಂಗ್ರೆಸ್‌ನಿಂದ ಆ ಕ್ಷೇತ್ರದಲ್ಲಿ ಒಬ್ಬ ಶಾಸಕ ಮಾತ್ರ ಗೆದ್ದಿರಬಹುದು. ಆದರೆ, ಒಟ್ಟಾರೆ ಮತ ಗಳಿಕೆಯಲ್ಲಿ ಜೆಡಿಎಸ್‌ಗಿಂತ ಹೆಚ್ಚಿನ ಮತಗಳು ಕಾಂಗ್ರೆಸ್‌ಗೆ ಬಿದ್ದಿವೆ. ಇದು ಕಾಂಗ್ರೆಸ್‌ಗೆ ಮೈಸೂರಿನಲ್ಲಿ ತಳಪಾಯ ಇದೆ ಎಂಬುದನ್ನು ನಿರೂಪಿಸುತ್ತದೆ. ಇನ್ನು ಜೆಡಿಎಸ್‌ ಬೆಂಬಲ ಸಿಕ್ಕರೆ ನಾವು ಖಂಡಿತ ಅಲ್ಲಿ ಗೆಲ್ಲುತ್ತೇವೆ.

ರಾಜ್ಯದ 28 ಕ್ಷೇತ್ರಗಳಲ್ಲೂ ಪ್ರಧಾನಿ ನರೇಂದ್ರ ಮೋದಿಯೇ ಅಭ್ಯರ್ಥಿ! ಇದು ಬಿಜೆಪಿ ಪ್ರಚಾರ ಶೈಲಿ. ನಿಮ್ಮ ಪ್ರತಿ ತಂತ್ರವೇನು?

ಬಿಜೆಪಿ ಈ ತಂತ್ರ ಅನುಸರಿಸಲು ಎರಡು ಕಾರಣವಿದೆ. ಮೊದಲನೆಯದ್ದು ಆ ಪಕ್ಷಕ್ಕೆ ಉತ್ತಮ ಅಭ್ಯರ್ಥಿಗಳೇ ಇಲ್ಲ. ಎರಡನೆಯದ್ದು ಆ ಪಕ್ಷದ ಹಾಲಿ ಸಂಸದರು ಕಳೆದ ಐದು ವರ್ಷಗಳಲ್ಲಿ ರಾಜ್ಯದ ಪರವಾಗಿ ಕೇಂದ್ರದಲ್ಲಿ ಯಾವುದೇ ಒಳ್ಳೆಯ ಕೆಲಸ ಮಾಡಿಲ್ಲ. ಬರಗಾಲ, ಮಹದಾಯಿ, ಕಾವೇರಿ, ಪ್ರಕೃತಿ ವಿಕೋಪ ಹೀಗೆ ಪ್ರತಿಯೊಂದು ವಿಚಾರದಲ್ಲೂ ರಾಜ್ಯಕ್ಕೆ ನೆರವಾಗುವಂತಹ ಯಾವುದೇ ತೀರ್ಮಾನವನ್ನು ಕೇಂದ್ರ ಕೈಗೊಂಡಿಲ್ಲ. ಇಂತಹ ನಿರ್ಧಾರ ಕೈಗೊಳ್ಳುವಂತೆ ಬಿಜೆಪಿ ಸಂಸದರು ಕೇಂದ್ರದ ಮೇಲೆ ಒತ್ತಡ ಹಾಕುವಲ್ಲಿ ಯಶಸ್ವಿಯೂ ಆಗಿಲ್ಲ. ಇನ್ನು ಆ ಪಕ್ಷದ ರಾಜ್ಯ ನಾಯಕರು ಭ್ರಷ್ಟಾಚಾರದಿಂದಾಗಿ ಕಳಂಕಿತರು. ಹೀಗಾಗಿ ಜನರ ಮುಂದೆ ಹೋಗಲು ಅವರಿಗೆ ಮುಖವೇ ಇಲ್ಲ. ಆದ್ದರಿಂದ ಮೋದಿ ಹೆಸರು ಬಳಸಿ ಮತ ಪಡೆಯಬಹುದು ಎಂದು ಭಾವಿಸಿದ್ದಾರೆ.

ಬಿಜೆಪಿಯ ಈ ಭಾವನೆ ಸುಳ್ಳೇ?

ನಿಜ, ಮೋದಿ ಐದು ವರ್ಷದಲ್ಲಿ ತುಂಬಾ ಕೆಲಸ ಮಾಡಿರುವುದಾಗಿ ಇಡೀ ದೇಶದಲ್ಲಿ ಒಂದು ಭ್ರಮೆ ಸೃಷ್ಟಿಸಿದ್ದಾರೆ. ಹೀಗಾಗಿ ಯುವಕರು ಮೋದಿ ಪರವಾಗಿ ಇದ್ದಾರೆ. ವಿಚಿತ್ರವೆಂದರೆ ಮೋದಿ ತಮ್ಮ ಅವಧಿಯಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ತಮ್ಮನ್ನು ತಾವೇ ಚೌಕೀದಾರ್‌ ಎಂದು ಹೇಳಿಕೊಂಡರೂ ತಮ್ಮ ಪರಿಚಯದ ಉದ್ಯಮಿಗಳು ಸುಮಾರು ಒಂದು ಲಕ್ಷ ಕೋಟಿ ರು.ನಷ್ಟುಬ್ಯಾಂಕಿನ ಹಣ ಲೂಟಿ ಹೊಡೆದುಕೊಂಡು ದೇಶ ಬಿಟ್ಟು ಓಡಿಹೋದಾಗ ಚೌಕಿದಾರಿಕೆ ಮಾಡಲಿಲ್ಲ.

ಈಗ ಚುನಾವಣೆ ಬಂದಿದೆ ಎಂದು ಅವರನ್ನು ಹಿಡಿದು ತರುವ ನಾಟಕ ಆಡುತ್ತಿದ್ದಾರೆ. ಕೃಷಿಕರ ಪರವಾಗಿ ಒಂದೇ ಒಂದು ನಿರ್ಧಾರ ಕೈಗೊಳ್ಳಲಿಲ್ಲ. ಯಾವುದೇ ಕ್ಷೇತ್ರದಲ್ಲಿ ಮೋದಿ ಸಾಧನೆ ಮಾಡಲಿಲ್ಲ. ಆದರೂ, ಕೋಟ್ಯಂತರ ರು. ಮೊತ್ತವನ್ನು ಪ್ರಚಾರಕ್ಕೆ ತೊಡಗಿಸಿ ದೇಶದಲ್ಲಿ ಭ್ರಮೆ ಮೂಡಿಸಲು ಯತ್ನಿಸುತ್ತಿದ್ದಾರೆ. ಏನೋ ದೊಡ್ಡ ಸಾಧನೆಯಾಗಿದೆ ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ. ಆದರೆ, ಜನರು ಈ ಭ್ರಮೆಗೆ ಬಲಿಯಾಗುವುದಿಲ್ಲ.

ಬಿಜೆಪಿ ಭ್ರಮೆ ಸೃಷ್ಟಿಸಿದೆ ಅನ್ನುವಿರಿ. ಜನರನ್ನು ಈ ಭ್ರಮೆಯಿಂದ ಮುಕ್ತ ಮಾಡಲು ನೀವೇನು ಮಾಡಿದ್ದೀರಿ?

ನಾವು ಸತ್ಯಾಂಶವನ್ನಷ್ಟೇ ಹೇಳಲು ಸಾಧ್ಯ. ಅವರು ಭ್ರಮೆ ಕಟ್ಟಿಕೊಟ್ಟಿದ್ದಾರೆ ಎಂದು ನಾವು ಅಂತಹದ್ದೇ ಮತ್ತೊಂದು ಭ್ರಮೆ ಮೂಡಿಸಲು ಸಾಧ್ಯವಿಲ್ಲ. ಇಷ್ಟಕ್ಕೂ ಈ ಬಾರಿ ಮೋದಿ ಯಾವ ವಿಚಾರದ ಮೇಲೆ ಮತ್ತೆ ಮತ ಕೇಳುತ್ತಿದ್ದಾರೆ? ತಮ್ಮ ಆಡಳಿತದ ಅವಧಿಯ ಸಾಧನೆಗೆ ಮತ ನೀಡುವಂತೆ ಕೇಳುತ್ತಿದ್ದಾರೆಯೇ? ಇಲ್ಲ. ಬದಲಾಗಿ, ಅತಿಯಾದ ರಾಷ್ಟ್ರೀಯತೆಯ ಭ್ರಮೆ ಮೂಡಿಸಿ, ದೇಶವನ್ನು ವಿಭಜಿಸುವ ನಾಡಿನ ಸಾಮಾಜಿಕ ಸ್ವರೂಪವನ್ನು ಹಾಳುಗೆಡವಲು ಮುಂದಾಗಿದ್ದಾರೆ. ಮೋದಿ ನಿಜಕ್ಕೂ ಕೆಲಸ ಮಾಡಿದ್ದರೆ, ನಾನು ಇಂತಹ ಸಾಧನೆ ಮಾಡಿದ್ದೇನೆ ಎಂದು ಜನರ ಮುಂದೆ ಬರಲಿ.

ಅತಿ ರಾಷ್ಟ್ರೀಯತೆ ಎನ್ನುತ್ತಿದ್ದೀರಿ? ಏನದು?

ರಾಷ್ಟ್ರೀಯತೆ ಯಾರೋ ಒಬ್ಬರ ಸ್ವತ್ತಲ್ಲ. ಆದರೆ, ಅತಿಯಾದ ಅಥವಾ ಮೂಲಭೂತವಾದದ ರಾಷ್ಟ್ರೀಯತೆ ಈ ದೇಶದ ಐಕ್ಯತೆಗೆ ಧಕ್ಕೆ ತರುತ್ತದೆ. ತಾನು ಹೇಳಿದ್ದೇ ದೇಶಪ್ರೇಮ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ. ಬಿಜೆಪಿಯ ಕುತಂತ್ರಗಳು ಈ ದೇಶಕ್ಕೆ ಮಾರಕವಾಗಿವೆ. ಹೇಗೆಂದರೆ, ಈ ಹಿಂದೆ ನೀವು ಬಿಜೆಪಿಯಲ್ಲಿದ್ದರೆ ಮಾತ್ರ ಹಿಂದುಗಳು, ಬಿಜೆಪಿಯಲ್ಲಿ ಇಲ್ಲದವರು ಹಿಂದುಗಳೇ ಅಲ್ಲ ಎಂದು ಬಿಂಬಿಸುತ್ತಿದ್ದರು. ಈಗ ಅದನ್ನು ಬಿಟ್ಟಿದ್ದಾರೆ. ಈಗ ಬಿಜೆಪಿ ಬೆಂಬಲಿಸುವವರು ಮಾತ್ರ ದೇಶಪ್ರೇಮಿಗಳು, ವಿರೋಧಿಸಿದರೆ ನೀವು ದೇಶದ್ರೋಹಿಗಳು ಎಂದು ಬಿಂಬಿಸಲು ಆರಂಭಿಸಿದ್ದಾರೆ.

ರಾಷ್ಟ್ರಪ್ರೇಮ ಎಂಬುದು ನಿರ್ದಿಷ್ಟರೀತಿಯಲ್ಲೇ ಇರಬೇಕು ಎನ್ನುತ್ತಾರೆ. ಇಂತಹುದೇ ಭಾಷೆ ಆಡಬೇಕು, ಇಂತಹುದೇ ಆಹಾರ ಸೇವಿಸಬೇಕು, ಇಂತಹುದೇ ಉಡುಪು ಧರಿಸಬೇಕು, ಈ ರೀತಿಯೇ ನಡೆದುಕೊಳ್ಳಬೇಕು ಎಂದು ಒತ್ತಾಯ ಮಾಡಲಾಗುತ್ತಿದೆ. ಇದನ್ನು ಮಾಡದಿದ್ದರೆ ನೀವು ದೇಶದ್ರೋಹಿ ಎಂದುಬಿಡುತ್ತಾರೆ. ಇದು ಅತಿ ರಾಷ್ಟ್ರೀಯತೆ. ಇಂತಹ ಅತಿ ರಾಷ್ಟ್ರೀಯತೆ ಹಿಂದೆ ಜರ್ಮನಿಯಲ್ಲಿ ಹಿಟ್ಲರ್‌ ಆಡಳಿತದಲ್ಲಿ ಇತ್ತು. ಅದು ಮುಂದೆ ಎಂತೆಂತಹ ದುರಂತಗಳಿಗೆ ಕಾರಣವಾಯಿತು ಎಂಬುದನ್ನು ಇತಿಹಾಸ ಹೇಳುತ್ತದೆ. ಇಂತಹುದೇ ದುರಂತದತ್ತ ದೇಶವನ್ನು ಒಯ್ಯಲು ಮೋದಿ ಮುಂದಾಗಿದ್ದಾರೆ.

ಅತಿಯೋ ಅಥವಾ ಮಿತಿಯೋ... ಒಟ್ಟಾರೆ ರಾಷ್ಟ್ರೀಯತೆ ಈ ಬಾರಿ ಚುನಾವಣಾ ವಿಷಯವಾಗಿದೆ?

ಹೌದು, ಬಿಜೆಪಿ ಅತಿ ರಾಷ್ಟ್ರೀಯತೆಯನ್ನು ಚುನಾವಣೆ ವಿಷಯ ಮಾಡಿದೆ. ಮೋದಿಯಿಂದಲೇ ಎಲ್ಲಾ ಸಾಧ್ಯ ಎಂಬ ಭ್ರಮೆ ಮೂಡಿಸುತ್ತಿದೆ. ಇಷ್ಟಾಗಿಯೂ ಮೋದಿಯ ನಿಜ ಬಣ್ಣ ಜನರಿಗೆ ಗೊತ್ತಿದೆ. ನೋಡಿ, ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಇಂಡಿಯಾ ಶೈನಿಂಗ್‌ ಎಂದು ಪ್ರಚಾರ ಮಾಡಿದ್ದರು.

ಆ ಬಾರಿ ಕಾಂಗ್ರೆಸ್‌ ಅಧಿಕಾರಕ್ಕೆ ಬರೋದಿಲ್ಲ, ಕಾಂಗ್ರೆಸ್‌ ದೇಶದಲ್ಲಿ ನಾಶವಾಗುತ್ತೆ ಎಂದೆಲ್ಲ ಬಿಂಬಿಸಿದರು. ಆದರೆ, ಜನರು ಬೇರೆಯೇ ರೀತಿ ಮತದಾನ ಮಾಡಿದರು. ಬಿಜೆಪಿ ಶೈನಿಂಗ್‌ ಆಗಲಿಲ್ಲ. ಕಾಂಗ್ರೆಸ್‌ ಅಧಿಕಾರಕ್ಕೆ ಬಂತು. ಈ ಬಾರಿಯೂ ಕೂಡ ಬಿಜೆಪಿ ಹಳೆ ತಂತ್ರವನ್ನೇ ಬಳಸುತ್ತಿದೆ. ಮಾಧ್ಯಮಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಸುಳ್ಳು ಪ್ರಚಾರವನ್ನು ವಿಪರೀತ ಮಾಡುತ್ತಿದೆ. ಆದರೆ, ಅಸಲಿಯತ್ತು ಬಲ್ಲ ಜನರು ಬೇರೆಯೇ ರೀತಿ ಮತದಾನ ಮಾಡುತ್ತಾರೆ.

- ಎಸ್. ಗಿರೀಶ್ ಬಾಬು