Asianet Suvarna News Asianet Suvarna News

ನಾನು, ಧರಂ ಸಿಂಗ್ 50 ವರ್ಷಗಳ ಕಾಲ ಜೊತೆಯಾಗಿಯೇ ಇದ್ದೆವು; ಧರಂ ಬಗ್ಗೆ ಖರ್ಗೆ ನೆನಪಿನಾಳದ ಮಾತುಗಳಿವು

''ನಾನು ಮತ್ತು ಧರಂ ಸಿಂಗ್ ಯಾವತ್ತೂ ಜಂಟಿಯಾಗಿಯೇ ಇದ್ದವರು. ಹತ್ತೋ ಇಪ್ಪತ್ತೋ ಮೂವತ್ತೋ ವರ್ಷ ಜೊತೆಯಾಗಿ ಇದ್ದವರ ಉದಾಹರಣೆ ಸಿಗಬಹುದು. ಆದರೆ ನಾವು 50 ವರ್ಷಗಳ ಕಾಲ ಜೊತೆಯಾಗಿಯೇ ಇದ್ದವರು. ನಮ್ಮ ರಾಜಕೀಯ ಜೀವನ ಮತ್ತು ಅದರ ಪಯಣ ಒಟ್ಟೊಟ್ಟಿಗೇ ಸಾಗಿದಂಥದ್ದು. ಈಗ ಧರಂ ಇಲ್ಲ ಎಂದೊಡನೆ ನಾನು ಈ 50 ವರ್ಷಗಳಲ್ಲಿ ನಾವು ಒಟ್ಟಾಗಿ ಕಳೆದ ಯಾವ ಕ್ಷಣ, ಯಾವ ಸಂದರ್ಭವನ್ನು ನಿಮ್ಮ ಮುಂದಿಡಲಿ? ಯಾವುದಾದರೂ ಒಂದು ಘಟನೆಯನ್ನು ಬೇರ್ಪಡಿಸಿಡಲು ಸಾಧ್ಯವೇ? ಆದರೆ, ನಿಸರ್ಗ ನಮ್ಮನ್ನು ಬೇರ್ಪಡಿಸಿಬಿಟ್ಟಿತು. ಹೀಗೆ ಹೇಳುತ್ತಾ ಮಲ್ಲಿಕಾರ್ಜುನ ಖರ್ಗೆ ಭಾವುಕರಾಗಿಬಿಟ್ಟರು.

Kharge Shared A memory With Dharam Singh
ನವದೆಹಲಿ (ಜು.27): ''ನಾನು ಮತ್ತು ಧರಂ ಸಿಂಗ್ ಯಾವತ್ತೂ ಜಂಟಿಯಾಗಿಯೇ ಇದ್ದವರು. ಹತ್ತೋ ಇಪ್ಪತ್ತೋ ಮೂವತ್ತೋ ವರ್ಷ ಜೊತೆಯಾಗಿ ಇದ್ದವರ ಉದಾಹರಣೆ ಸಿಗಬಹುದು. ಆದರೆ ನಾವು 50 ವರ್ಷಗಳ ಕಾಲ ಜೊತೆಯಾಗಿಯೇ ಇದ್ದವರು. ನಮ್ಮ ರಾಜಕೀಯ ಜೀವನ ಮತ್ತು ಅದರ ಪಯಣ ಒಟ್ಟೊಟ್ಟಿಗೇ ಸಾಗಿದಂಥದ್ದು. ಈಗ ಧರಂ ಇಲ್ಲ ಎಂದೊಡನೆ ನಾನು ಈ 50 ವರ್ಷಗಳಲ್ಲಿ ನಾವು ಒಟ್ಟಾಗಿ ಕಳೆದ ಯಾವ ಕ್ಷಣ, ಯಾವ ಸಂದರ್ಭವನ್ನು ನಿಮ್ಮ ಮುಂದಿಡಲಿ? ಯಾವುದಾದರೂ ಒಂದು ಘಟನೆಯನ್ನು ಬೇರ್ಪಡಿಸಿಡಲು ಸಾಧ್ಯವೇ? ಆದರೆ, ನಿಸರ್ಗ ನಮ್ಮನ್ನು ಬೇರ್ಪಡಿಸಿಬಿಟ್ಟಿತು. ಹೀಗೆ ಹೇಳುತ್ತಾ ಮಲ್ಲಿಕಾರ್ಜುನ ಖರ್ಗೆ ಭಾವುಕರಾಗಿಬಿಟ್ಟರು.
ಅದು 1968... ನಾನು ಇಂದಿರಾ ಗಾಂಧಿ ಅವರ ಪ್ರಭಾವದಿಂದ ಕಾಂಗ್ರೆಸ್ ಸೇರಿದ್ದೆ. ಧರಂ ನನಗಿಂತಲೂ ಮೊದಲೇ ಕಾಂಗ್ರೆಸ್ ಸೇರಿದ್ದರು. ಆದರೆ ಕಾಂಗ್ರೆಸ್ ಇಬ್ಭಾಗವಾದ ಮೇಲೆ ನಾವಿಬ್ಬರೂ ಪಕ್ಷವನ್ನು ಬೆಳೆಸಲು ಅಪಾರ ಶ್ರಮವಹಿಸಿದ್ದೆವು. ಮಲ್ಲಪ್ಪ ಕೊಲ್ಲೂರು ಮುಂತಾದವರೆಲ್ಲರ ಜೊತೆ ನಾನು ಕೆಲಸ ಮಾಡಿದ್ದೆ. 1970 ರಲ್ಲಿ ಇಂದಿರಾ ಗಾಂಧಿ ಕಲಬುರಗಿಗೆ ಬಂದಾಗ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದ್ದೆವು. ಆ ಕಾಲದಲ್ಲಿ ಕಾಂಗ್ರೆಸ್(ಒ) ಮತ್ತು ಕಾಂಗ್ರೆಸ್(ಆರ್) ಇದ್ದವು. ಆ ಸಂದರ್ಭದಲ್ಲಿ ಧರಂ ಸಿಂಗ್ ಕಾಂಗ್ರೆಸ್(ಆರ್) ಜಿಲ್ಲಾ ಸಮಿತಿಯ ಕಾರ್ಯದರ್ಶಿ ಆಗಿದ್ದರು. ನಾನು ಗುಲ್ಬರ್ಗ ನಗರ ಕಾಂಗ್ರೆಸ್‌ನ ಅಧ್ಯಕ್ಷನಾಗಿದ್ದೆ. ನಮ್ಮಿಬ್ಬರ ರಾಜಕೀಯ ಪ್ರವೇಶ ಹೆಚ್ಚು ಕಡಿಮೆ ಒಂದೇ ಕಾಲಘಟ್ಟದಲ್ಲಿ ನಡೆದಿದ್ದರೂ ರಾಜಕೀಯ ಸೇರುವ ಮೊದಲು ನಮ್ಮಿಬ್ಬರ ಮಧ್ಯೆ ಅಂತಹ ಒಡನಾಟವಿರಲಿಲ್ಲ. ಅವರು ಹೈದರಾಬಾದ್‌ನಲ್ಲಿ ಓದಿದವರು. ನಾನು ಗುಲ್ಬರ್ಗದಲ್ಲಿ ಓದಿದವನು. ಅವರು ನನ್ನ ಸೀನಿಯರ್ ಆಗಿದ್ದರು. ಆದರೆ ನಮ್ಮಿಬ್ಬರನ್ನು ಸೆಳೆದದ್ದು ಇಂದಿರಾ ಗಾಂಧಿಯವರ ಕಾರ್ಯಕ್ರಮಗಳು.
ಮಾಜಿ ಪ್ರಧಾನಿ ಚಂದ್ರಶೇಖರ್, ಕೃಷ್ಣಕಾಂತ್, ಮೋಹನ್ ಧಾರಿಯಾ ಗುಲ್ಬರ್ಗಕ್ಕೆ ಬಂದಾಗ ವೀರೇಂದ್ರ ಪಾಟೀಲ್ ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ಚಂದ್ರಶೇಖರ್ ಅವರು ಭಾಷಣ ಮಾಡಬಾರದು ಎಂದು ಗುಲ್ಬರ್ಗದಲ್ಲಿ ೧೪೪ ಸೆಕ್ಷನ್ ಹಾಕಿದ್ದರು. ನಾವು ಈ ಕಾರ್ಯಕ್ರಮ ಮಾಡಲೇಬೇಕು ಎಂದು ತೀರ್ಮಾನಿಸಿದೆವು. ಲಾಠಿ ಚಾರ್ಜ್ ಆಯಿತು. ನಮ್ಮೆಲ್ಲರ ಮೇಲೆ ಎಫ್‌ಐಆರ್ ಆಯಿತು. ಜಾಮೀನು ತೆಗೆದುಕೊಂಡು ಹೊರಗೆ ಬಂದೆವು. ನಾವು ಆ ದಿನಗಳಲ್ಲಿ ಒಟ್ಟಿಗೆ ಸಾಕಷ್ಟು ಹೋರಾಟ ನಡೆಸಿದೆವು. ಆ ಬಳಿಕ ನಾವಿಬ್ಬರೂ 1972 ರಲ್ಲಿ ಶಾಸಕರಾಗಿ ಒಟ್ಟಿಗೆ ಆಯ್ಕೆ ಆದೆವು. ಕರ್ನಾಟಕ ವಿಧಾನಸಭೆಯಲ್ಲಿ ಒಟ್ಟು 224 ಶಾಸಕ ಸ್ಥಾನಗಳಿದ್ದರೆ ಮುಂದಿನ ದಿನಗಳಲ್ಲಿ 2 ಸ್ಥಾನಗಳು ನಮ್ಮಿಬ್ಬರಿಗೆ ಮೀಸಲಿಟ್ಟಿದ್ದಂತೆಯೇ ಆಗಿತ್ತು.
1973 ರಲ್ಲಿ ನಾನು ಮುನ್ಸಿಪಲ್ ಹಣಕಾಸು ಸಮಿತಿ ಮುಖ್ಯಸ್ಥನಾಗಿದ್ದೆ. ಆಗಲೂ ನಾವು ಜೊತೆಯಲ್ಲೇ  ಅಡ್ಡಾಡುತ್ತಿದ್ದೆವು. 1976 ರಲ್ಲಿ ನಾನು ಮಂತ್ರಿಯಾದೆ. ಆಗಲೂ ಅಷ್ಟೆ, ನಾವು ಜೊತೆಯಲ್ಲೇ ಓಡಾಡುತ್ತಿದ್ದೆವು. ನಾನು ಮಂತ್ರಿಯಾಗಿ ಗುಲ್ಬರ್ಗಕ್ಕೆ ಮೊದಲ ಬಾರಿಗೆ ಬರುವ ಸಂದರ್ಭದಲ್ಲಿ ಖುದ್ದು ಧರಂ ಸಿಂಗ್ ಅವರೇ ನನ್ನನ್ನು ಸ್ವಾಗತಿಸಲು ಸಮಿತಿಯೊಂದನ್ನು ಮಾಡಿ 101 ಕಮಾನು ಹಾಕಿಸಿ ಸ್ವಾಗತಿಸಿದ್ದರು. ನನ್ನ ಅನೇಕ ನಿರ್ಧಾರಗಳ ಜಾರಿಯಲ್ಲಿ ಧರಂ ಸಿಂಗ್ ಮುತುವರ್ಜಿಯಿಂದ ಕೆಲಸ ಮಾಡಿದ್ದರು.
ನಾವು ಎಲ್ಲಿ ಹೋದರೂ ‘ಧರಂ ಸಿಂಗ್ ಖರ್ಗೆ’, ‘ಖರ್ಗೆ ಧರಂ ಸಿಂಗ್’ ಅನ್ನೋರು. ಜಂಟಿ ಹೆಸರಿದ್ದಂತೆ ನಮ್ಮದು. ಹೆಸರನ್ನು ಯಾರೂ ಬಿಡಿಸಿ ಹೇಳುತ್ತಿರಲಿಲ್ಲ. ಧರಂ ಸಿಂಗ್ ಎಲ್ಲೇ ಹೋದರೂ ಖರ್ಗೆ ಎಲ್ಲಿ ಎಂದು ಜನ ಕೇಳೋರು. ಹಾಗೆಯೇ ನಾನು ಎಲ್ಲಿ ಹೋದರೂ ಧರಂ ಸಿಂಗ್ ಎಲ್ಲಿ ಎಂದು ಕೇಳೋರು. ಇದು ಕೇವಲ ಗುಲ್ಬರ್ಗಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಕರ್ನಾಟಕ ಮಾತ್ರವಲ್ಲ ಅಖಿಲ ಭಾರತ ಮಟ್ಟದಲ್ಲೂ ಇದೇ ರೀತಿ ಆಗಿತ್ತು. ಸಂಸತ್ತಿನಲ್ಲೂ ಇದೇ ರೀತಿ ಕೇಳುತ್ತಿದ್ದರು. ನಾವು ಅಷ್ಟೊಂದು ಆತ್ಮೀಯತೆಯಿಂದ ಇದ್ದೆವು. ಜನ ಕೂಡ ನಮ್ಮನ್ನು ಹಾಗೆಯೇ ಗುರುತಿಸಿದ್ದರು. ಅವರಿಬ್ಬರೂ ಒಂದೇ ಎನ್ನುತ್ತಿದ್ದರು. ಎಲ್ಲಿ ನಿಮ್ ತಮ್ಮ, ಎಲ್ಲಿ ನಿಮ್ ಅಣ್ಣ ಅಂತ ಕೇಳೋರು. ನಮ್ಮದು 50 ವರ್ಷಗಳ ಮಿತ್ರತ್ವ. ಬಹುಶಃ ಇತಿಹಾಸದಲ್ಲಿ ಯಾರೂ ಇಷ್ಟೊಂದು ದೀರ್ಘಕಾಲ ಮೈತ್ರಿ ಇಟ್ಟುಕೊಂಡಿರಲಿಕ್ಕಿಲ್ಲ.
 
ನನ್ನ ಹುಟ್ಟುಹಬ್ಬದಂದೇ ಕೊನೆಯ ಭೇಟಿ
ಜು. 21 ರಂದು ನನ್ನ ಹುಟ್ಟುಹಬ್ಬ . ನೀವು ಬರಬೇಡಿ, ನಾನೇ ನಿಮ್ಮ ಬಳಿ ಬರುತ್ತೇನೆ ಎಂದು ಹೇಳಿದರೂ ಕೇಳದೆ ಬಂದರು. ನನ್ನನ್ನು ಅಭಿನಂದಿಸಿ ಹೋದರು. ಹೊರಗಡೆ ಸಾವಿರಾರು ಜನ. ನಿಮಗೆ ಹುಷಾರಿಲ್ಲ, ನಾನೇ ನಿಮ್ಮ ಬಳಿ ಬರುತ್ತೇನೆ ಎಂದು ಹೇಳಿದ್ದೆ. ಏಯ್, ಪ್ರತಿವರ್ಷ ನಾನೇ ಬರುತ್ತೇನೆ, ಈ ವರ್ಷ ಏಕೆ ತಪ್ಪಿಸಲಿ ಎಂದು ಬಂದೇ ಬಿಟ್ಟಿದ್ದರು. ಅದೇ ನಮ್ಮ ಕೊನೆಯ ಭೇಟಿಯಾಯ್ತು. ಪ್ರತಿವರ್ಷ ಅವರ ಹುಟ್ಟುಹಬ್ಬಕ್ಕೆ ನಾನು ಹೋಗುತ್ತಿದ್ದೆ. ಅವರು ಯಾವತ್ತೂ ಹೇಳೋರು, ನನ್ನ ಹುಟ್ಟುಹಬ್ಬವನ್ನು ಇಡೀ ಜಗತ್ತೇ ಆಚರಿಸುತ್ತದೆ ಎಂದು! ಏಕೆಂದರೆ ಅವರು ಹುಟ್ಟಿದ್ದು ಡಿ. 25 ಯೇಸುಕ್ರಿಸ್ತ ಹುಟ್ಟಿದ ದಿನ. ಅಂದೇ ವಾಜಪೇಯಿ ಜನ್ಮದಿನ. ‘ನಾವೆಲ್ಲರೂ ಒಂದೇ ದಿನ ಹುಟ್ಟಿದ್ದು. ನಿಮ್ಮ ಹುಟ್ಟುಹಬ್ಬವನ್ನು ನೀವು ಮಾಡಿಕೊಳ್ತೀರಿ, ನನ್ನ ಹುಟ್ಟುಹಬ್ಬವನ್ನು ಇಡೀ ಜಗತ್ತೇ ಆಚರಿಸುತ್ತದೆ’ ಎಂದು ಗೇಲಿ ಮಾಡುತ್ತಿದ್ದರು. 
 
ಅಗಾಧ ತಾಳ್ಮೆ, ಉತ್ತಮ ಸಂಪರ್ಕ
ಕರ್ನಾಟಕದಲ್ಲಿ 30-35 ಮಂತ್ರಿ ಸ್ಥಾನಗಳಿದ್ದರೂ ನಾವಿಬ್ಬರು ಕಾಯಂ ಆಗಿ ಮಂತ್ರಿಗಳಾಗಿರುತ್ತಿದ್ವಿ. ಕಾಂಗ್ರೆಸ್ ರಾಜ್ಯ ಘಟಕದಲ್ಲಿ ಎರಡೇ ಉನ್ನತ ಹುದ್ದೆಗಳು. ಒಂದು ಸಿಎಲ್ಪಿ ಲೀಡರ್, ಇನ್ನೊಂದು ಕಾಂಗ್ರೆಸ್ ಅಧ್ಯಕ್ಷ. ನಾನು ಸಿಎಲ್ಪಿ ಲೀಡರ್ ಆದೆ. ಅವರು ಅಧ್ಯಕ್ಷರಾದರು. ನಾನು ಸಂಸತ್ತಿಗೆ ಬಂದೆ. ಅವರೂ ಬಂದರು. ಅಂದರೆ ನಾವು ಎಲ್ಲೂ ಅಗಲಲಿಲ್ಲ. ಈಗ ಮಾತ್ರ ಅವರು ನನ್ನಿಂದ ಅಗಲಿದ್ದಾರೆ. ಈ ಅಗಲಿಕೆ ಭಾರೀ ನೋವು ನೀಡಿದೆ.
ಧರಂ ಸಿಂಗ್ ಲಿಬರಲ್ (ಉದಾರವಾದಿ) ಆಗಿದ್ದರು. ಯಾವುದೇ ಕಾರಣಕ್ಕೂ ಸಿಟ್ಟುಗೊಳ್ಳುತ್ತಿರಲಿಲ್ಲ. ಯಾರಾದರೂ ಸುಳ್ಳು ಹೇಳಿದರೆ, ತಪ್ಪು ಮಾಹಿತಿ ನೀಡಿದರೆ ನಾನು ಸಿಟ್ಟಿಗೇಳುತ್ತಿದ್ದೆ. ಆದರೆ ಅವರ ತಾಳ್ಮೆ, ಸಂಪರ್ಕ ಅಗಾಧವಾಗಿತ್ತು. ಅವರ ಮಾತಿನಿಂದ ನನಗೆ ಇರಿಸು ಮುರಿಸು ಆದರೆ ಮರುದಿನ ಮುಂಜಾನೆ ಫೋನ್ ಮಾಡೋರು. ಹೀಗೆ ನಾವಿಬ್ಬರು ಪರಸ್ಪರ ಮುನಿಸಿಕೊಂಡರೂ ಮತ್ತೆ ಸಂಜೆಯೋ, ಬೆಳಗ್ಗೆಯೋ ಮಾತನಾಡಿಕೊಳ್ಳುತ್ತಿದ್ದೆವು. ಅವರಿಗೆ ಶತ್ರುಗಳೇ ಕಡಿಮೆ. ನನಗೆ ಹೊಂದಾಣಿಕೆ ಕಡಿಮೆ. ಬೇರೆ ಪಕ್ಷದವರೊಂದಿಗೂ ಉತ್ತಮ ಸಂಪರ್ಕ ಹೊಂದಿದ್ದರು.  ಕಲ್ಲನ್ನೂ ಮಾತನಾಡಿಸುವ ಚಾಕಚಕ್ಯತೆ ಧರಂ ಅವರಿಗಿತ್ತು. ನಮ್ಮ, ನಮ್ಮ ಪಕ್ಷದ ವಿರುದ್ಧ ಯಾರಾದರೂ ಮಾತನಾಡಿದ್ದರೆ ನನಗೆ ಅವರೊಂದಿಗೆ ಮತ್ತೆ ಮಾತನಾಡಲು ಕಷ್ಟವಾಗುತ್ತಿತ್ತು. ಆದರೆ ಧರಂ ಹಾಗಿರಲಿಲ್ಲ. ಮಾತನಾಡಿದರೆ ಮಾತನಾಡಿಕೊಳ್ಳಲಿ ಎನ್ನುತ್ತಿದ್ದರು. ಅವರೊಬ್ಬ ವಿಶಾಲ ಹೃದಯಿ. ಅಜಾತ ಶತ್ರು.  ಅವರ ನೆನಪಿನ ಶಕ್ತಿ ಅಗಾಧವಾಗಿತ್ತು. ಸಾವಿರಾರು ಫೋನ್ ನಂಬರ್‌ಗಳು ಅವರ ನಾಲಗೆಯಲ್ಲಿತ್ತು. ನಾನು ಅವರಿಗೆ ಅನೇಕ ಬಾರಿ ಹೇಳುತ್ತಿದ್ದೆ, ನಿನ್ನ ಬಾಡಿಯ ಬೇರೆ ಪಾರ್ಟ್ ಕೆಲಸ ಮಾಡದಿದ್ದರೂ ಬ್ರೈನ್ ಮಾತ್ರ ಶಾರ್ಪ್ ಇದೆ ಎಂದು. ಧರಂ ಸಿಂಗ್ ಮುಂಜಾನೆ ಎದ್ದು ಪ್ರತಿದಿನ ಎಲ್ಲರಿಗೂ ಒಂದು ಸುತ್ತು ಫೋನ್ ಮಾಡಿ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿದ್ದರು. ಇಂಥ ಸಂಪರ್ಕದಿಂದಾಗಿಯೇ ಅವರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದರೂ ಬಹುಸಂಖ್ಯಾತರ ಕ್ಷೇತ್ರದಲ್ಲಿ ೮ ಬಾರಿ ಶಾಸಕರಾಗಿ ಒಂದು ಬಾರಿ ಎಂಪಿಯಾಗಿ ಆಯ್ಕೆ ಆಗಿದ್ದು.
ನನಗೆ ಮತ್ತು ಧರಂ ಅವರಿಗೆ ಕೆಲ ಪ್ರಮುಖ ಖಾತೆಗಳು ಸಿಕ್ಕ ಹಿನ್ನೆಲೆಯಲ್ಲಿ ಹೈದರಾಬಾದ್ ಕರ್ನಾಟಕದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಯಿತು. ಧರಂ ಸಿಎಂ ಆದ ಸಂದರ್ಭದಲ್ಲಿ ನಾನು ಸಿಎಂ ಆಗುವ ಸ್ಥಿತಿಯಿರಲಿಲ್ಲ. ಆದರೆ ನನ್ನ ಆತ್ಮೀಯ ಸ್ನೇಹಿತ ಸಿಎಂ ಆಗುತ್ತಿರುವುದು ನನಗೆ ಖುಷಿ ಕೊಟ್ಟಿತ್ತು. ನನಗೆ ನೋವಿದ್ದರೆ ಅದನ್ನು ದೇವೇಗೌಡರಿಗೆ ಹೇಳಿಕೊಳ್ಳಬೇಕೇ ಹೊರತು ಧರಂ ಸಿಂಗ್‌ಗೆ ಅಲ್ಲ.
 
ಅವರ ಮಗಳಿಗೆ ಪ್ರಿಯದರ್ಶಿನಿಯೆಂದು ಹೆಸರಿಟ್ಟಿದ್ದೆ...
ನಾನು ಲಗ್ನ ಆದಾಗ ಅವರದ್ದು ಆಗಿರಲಿಲ್ಲ. ಅವರು ಆ ಬಳಿಕ ಮದುವೆ ಆದರು. ನಾವು ನಮ್ಮ ಕುಟುಂಬಗಳ ಕಾರ್ಯಕ್ರಮಗಳಲ್ಲಿ ಸದಾ ಭಾಗಿ ಆಗಿರುತ್ತಿದ್ದೆವು. ಅವರ ಮಗಳಿಗೆ ಪ್ರಿಯದರ್ಶಿನಿ ಎಂಬ ಹೆಸರಿಟ್ಟದ್ದೆ ನಾನು. ಇಂದಿರಾ ಗಾಂಧಿ ಹೆಸರಿನಿಂದಾಗಿಯೇ ನಾವು ರಾಜಕೀಯದಿಂದ ಬೆಳೆದದ್ದು. ಅದಕ್ಕಾಗಿ ಆ ಹೆಸರಿಡಲು ಹೇಳಿದ್ದೆ.
ಅವರು 1985 ರವರೆಗೆ ಪ್ರಗತಿಪರ ಚಿಂತಕರಾಗಿದ್ದರು. ಆದರೆ ಆ ಬಳಿಕ ಅವರು ಆ ವಿಚಾರಧಾರೆಯಿಂದ ದೂರ ಸರಿದರು. ನಮ್ಮಿಬ್ಬರ ಮಧ್ಯೆ ವೈಚಾರಿಕ ವಿಷಯಗಳಿಗೆ ಸಂಬಂಧಿಸಿ ಭಿನ್ನಾಭಿಪ್ರಾಯಗಳಿದ್ದವು. ಆದರೆ ರಾಜಕೀಯ, ಸಾಮಾಜಿಕ ದೃಷ್ಟಿಯಿಂದ ಹೊಂದಾಣಿಕೆ ಮಾಡಿಕೊಂಡಿದ್ದೆವು. ಮೊದಲು ಕಮ್ಯುನಿಸ್ಟ್ ಆಗಿದ್ದ ಧರಂ ಸಿಂಗ್ ಇಂದಿರಾ ಅವರ ಪ್ರಭಾವಕ್ಕೆ ಸಿಲುಕಿ ಸಮಾಜವಾದಿ ಆದರು. ಆ ಬಳಿಕ ಭಕ್ತಿ ಮಾರ್ಗ ಅನುಸರಿಸಿದರು. ಆದರೂ ವಿಚಾರಧಾರೆಯಲ್ಲಿನ ಬದಲಾವಣೆ ನಮ್ಮ ಸ್ನೇಹಕ್ಕೆ ಯಾವತ್ತೂ ಕುಂದು ತರಲಿಲ್ಲ.
 
Follow Us:
Download App:
  • android
  • ios