Asianet Suvarna News Asianet Suvarna News

ಕಾವೇರಿ ವಿಚಾರದಲ್ಲಿ ರೈತರಿಗೂ ಒಂದು ಅವಕಾಶ ಕೊಟ್ಟು ನೋಡಿ

Cauvery Issue give a chance to farmers

ಬೆಂಗಳೂರು (ಸೆ.23): ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಉಂಟಾದ ಗೊಂದಲ, ಹತಾಶ ಭಾವ ಕೊಂಚ ತಹಬದಿಗೆ ಬಂದಂತಾಗಿದೆ. ಆದರೂ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಇದುವರೆಗೂ ಗಂಭೀರ ಪ್ರಯತ್ನ ನಡೆದಿಲ್ಲ ಎಂಬುದು ನಿಜ. ಈ ಹಿನ್ನೆಲೆಯಲ್ಲಿ ಕೃಷಿ ಮತ್ತು ಕಾನೂನು ಚೌಕಟ್ಟಿನಲ್ಲಿ ಸಮಸ್ಯೆ ಪರಿಹರಿಸಲು ಸಿಗಬಹುದಾದ ಎರಡು ದಾರಿಗಳನ್ನು ಇಲ್ಲಿ ಅವಲೋಕಿಸಲಾಗಿದೆ.

ರೈತರಿಗೂ ಒಂದು ಅವಕಾಶ ಕೊಟ್ಟು ನೋಡಿ

ಕಾವೇರಿ ನದಿ ನೀರು ಹಂಚಿಕೆಯ ಸಮಸ್ಯೆಗೆ ಎರಡೂ ರಾಜ್ಯಗಳ ರೈತರೇ ಪರಿಹಾರ ಹುಡುಕಬಲ್ಲರೇನೋ? ಸರ್ಕಾರವೇ ಮುಂದಾಗಿ, ಇಂಥ ಚರ್ಚೆಗೆ ಒಂದು ಅವಕಾಶವನ್ನು ಅನುವು ಮಾಡಿಕೊಡಬಾರದೇಕೆ? ರೈತರು ಅನಾದಿ ಕಾಲದಿಂದಲೂ ಕೃಷಿಗಾಗಿ ಹೊಸ ತಳಿಗಳ ಅಭಿವೃದ್ಧಿ, ಬೆಳೆಯುವ ಮತ್ತು ಬಳಸುವ ವಿಧಾನಗಳ ಬಗ್ಗೆ ಅಪಾರ ಕೊಡುಗೆ ನೀಡಿದ್ದಾರೆ. ರೈತರು ಮತ್ತು ತಜ್ಞರು/ವಿಜ್ಞಾನಿಗಳು ಅನುಕರಣೆಗೆ ಸಾಧ್ಯವಾದ ಸೂತ್ರಗಳನ್ನು ಕೊಡಬಲ್ಲರೇನೋ? ಹಾಗಾಗಿ ಸರ್ಕಾರವೇ ಮುಂದೆ ನಿಂತು ಇಂಥದ್ದೊಂದು ವೇದಿಕೆ ಕಲ್ಪಿಸಲಿ.

ನಾನು ಕರ್ನಾಟಕದ ಭತ್ತದ ವಿಜ್ಞಾನಿ ಆಗಿದ್ದೆ; ನನ್ನ ಸಹಪಾಠಿ ತಮಿಳುನಾಡಿನ ಭತ್ತದ ವಿಜ್ಞಾನಿ ಆಗಿದ್ದರು. 1990-1994 ರಲ್ಲಿ ನಾವಿಬ್ಬರು ಮತ್ತು ನಮ್ಮ ಭತ್ತ ಸಂಶೋಧನೆ ಸಹೋದ್ಯೋಗಿಗಳು ಸುಮಾರು ಸಲ ಚರ್ಚೆ ನಡೆಸಿ, ಈ ಸಮಸ್ಯೆಗೆ ಒಂದು ಪರಿಹಾರ ಮಾರ್ಗ ಹುಡುಕಿದೆವು. ನಾವಿಬ್ಬರೂ ನಮ್ಮ-ನಮ್ಮ ರಾಜ್ಯಗಳ ಸಚಿವರು ಮತ್ತು ನೀರಾವರಿ ತಜ್ಞರೊಡನೆ ಚರ್ಚಿಸಿದಾಗ ಅವರಿಗೆ ನಂಬಿಕೆ ಹುಟ್ಟಿತ್ತು. ಅದೇಕೋ ಅವರು ನಮ್ಮನ್ನು ಕರೆಸಿ ಮಾತಾಡಿ ಮುಂದುವರಿಸಲಿಲ್ಲ! ಅಲ್ಲದೆ, ಅಕ್ಕಪಕ್ಕದಲ್ಲಿದ್ದ ಕೆಲವರು, ‘‘ಈ ಸಮಸ್ಯೆಗೆ ಪರಿಹಾರ ರಾಜಕಾರಣಿಗಳಿಗೆ ಬೇಕಾಗಿಲ್ಲ. ಇದು ‘ಚಿನ್ನದ ಮೊಟ್ಟೆ, ಇದು ಬದುಕಿರಲೇಬೇಕು,’’ ಎಂದು ಅಭಿಪ್ರಾಯಪಟ್ಟರು. ಅಷ್ಟು ಹೊತ್ತಿಗೆ ಚೆನ್ನಾಗಿ ಮಳೆಯಾದ್ದರಿಂದ ಈ ವಿಷಯದ ಬಗ್ಗೆ ಗಮನ ಹರಿಸಲಿಲ್ಲ ಎಂದೂ ಅಂದುಕೊಳ್ಳಬಹುದು. ಆದರೆ, ಸಮಸ್ಯೆ ಬಿಕ್ಕಟ್ಟಾಗಿ ಬದಲಾಗಿರುವ ಈಗಲಾದರೂ ಇಂಥ ಪ್ರಯತ್ನಗಳನ್ನು ಮಾಡಬಾರದೇಕೆ?

ತಮಿಳುನಾಡು ನೀರು ಕೇಳುತ್ತಿರುವುದು ಸಾಂಬಾ ಬೆಳೆಗೆ. ಈ ಬೆಳೆಯು ಈಶಾನ್ಯ  ಮಳೆಯನ್ನು (ಸೆಪ್ಟೆಂಬರ್) ಅವಲಂಬಿಸಿದೆ. ಅಂದರೆ, ಈಗ ತಾನೇ ಕೊಯ್ಲಿಗೆ ಬಂದಿರುವ ‘ಕುರುವಾಯ್’ ಬೆಳೆಯ ಕಟಾವಿನ ನಂತರ ಬಿತ್ತನೆ ಆರಂಭವಾಗುತ್ತದೆ. ಅದಕ್ಕೆ ಇನ್ನೂ ಸಮಯವಿದೆ. ಸಾಂಬಾ ಬೆಳೆಯು ನರ್ಸರಿ ಬಿತ್ತನೆಯಾದ ಮೂರು ವಾರಗಳು ಒಟ್ಲು ಪಾತೆಯಲ್ಲಿ ಪೈರುಗಳು ಬೆಳೆಯುತ್ತಿರುತ್ತವೆ. ಅಷ್ಟರಲ್ಲಿ ಎರಡೂ ರಾಜ್ಯಗಳಲ್ಲಿ, ಅದರಲ್ಲೂ, ತಮಿಳುನಾಡಿನಲ್ಲಿರುವ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆಯೂ ಇದೆ. ಸಮಯ ಬಂದಾಗ ಎಷ್ಟು ನೀರಿನ ಆವಶ್ಯಕತೆ ಇದೆ ಎಂಬುದನ್ನು ಎರಡೂ ರಾಜ್ಯಗಳ ಬೆಳೆ ಒಣಗದಂತೆ ಚರ್ಚಿಸಿ, ನೀರಿನ ಸಾರ್ಥಕ ಬಳಕೆಯಿಂದ ನಿರ್ಧಾರ ಕೈಗೊಳ್ಳಬಾರದೇಕೆ? ಈ ಹಿನ್ನೆಲೆಯಲ್ಲಿ ಇಷ್ಟು ಆತುರ ಮಾಡುತ್ತಿರುವುದರಲ್ಲಿ ಅರ್ಥವಿಲ್ಲ ಅನಿಸುವುದಿಲ್ಲವೇ? ಕರ್ನಾಟಕದಲ್ಲಿ ಈಗಾಗಲೇ ನಾಟಿ ಮಾಡಿ ಒಣಗುತ್ತಿರುವ ಭತ್ತದ ಬೆಳೆಗೆ ಮತ್ತು ಕರ್ನಾಟಕದಲ್ಲಿ ಕುಡಿಯುವ ನೀರಿಗೆ ಇಲ್ಲದ ಆತುರ, ತಮಿಳುನಾಡಿನಲ್ಲಿ ಈಗ ಬೆಳೆಯಲು ಶುರು ಮಾಡುವ ಬೆಳೆಗೆ ನೀಡುತ್ತಿರುವ ಆದ್ಯತೆ ಮತ್ತು ಆತುರಕ್ಕೆ ಅರ್ಥವಿದೆಯೇ?

ಯಾವುದೇ ಕಾರಣಕ್ಕೂ ಕುಡಿಯುವ ನೀರನ್ನು ಮೊಟಕುಗೊಳಿಸಿ, ಈಗಾಗಲೇ ಒಂದು ಬೆಳೆ ತೆಗೆದುಕೊಂಡಿರುವ ಗದ್ದೆಯಲ್ಲಿ ಮತ್ತೊಂದು ಬೆಳೆ ಬೆಳೆಯಲು ನೀರು ಕೊಡುವುದು ಅಮಾನವೀಯ. ಯಾವುದೇ ಪ್ರದೇಶದಲ್ಲಿ ಭತ್ತವನ್ನು ಕೊಂಡುಕೊಳ್ಳಬಹುದು, ಆದರೆ ನೀರನ್ನು ಕೊಂಡುಕೊಳ್ಳಲಾಗದು ಎಂಬ ಸಾಮಾನ್ಯಜ್ಞಾನ ಇಲ್ಲದಾಯಿತೇ?

ಭತ್ತ ಮತ್ತು ಸಾಂಬಾದಂಥ ಬೆಳೆಗಳನ್ನೇ ಬೆಳೆಯಬೇಕೆಂದಾಗ ಹೆಚ್ಚು ನೀರು ಬೇಕಾಗುತ್ತದೆ. ಭತ್ತ, ಕಬ್ಬುಗಳ ಬದಲು ಅಷ್ಟೇ ಲಾಭ ತರುವ ಅನೇಕ ಪರ್ಯಾಯ ಬೆಳೆಗಳನ್ನು ಬೆಳೆಯುವ ಅವಕಾಶವಿದೆ ಎಂಬುದು ಎರಡೂ ರಾಜ್ಯಗಳಲ್ಲಿರುವ ವಿಶ್ವವಿದ್ಯಾಲಯಗಳೂ ಹಾಗೂ ಭಾರತೀಯ ಅನುಸಂಧಾನ ಪರಿಷತ್ತು, ಕೇಂದ್ರ ಸರ್ಕಾರ ನಡೆಸಿರುವ ಸಂಶೋಧನೆಯಿಂದ ಸ್ಪಷ್ಟವಾಗಿ ತಿಳಿದುಬಂದಿದೆ. ಮತ್ತು ತಮಿಳುನಾಡಿನ ಕೃಷಿ ಪತ್ರಿಕೆಗಳಲ್ಲೂ ಸಾಕಷ್ಟು ಪ್ರಕಟವಾಗಿದೆ. ಆದ್ದರಿಂದ ಒಂದಷ್ಟು ಪ್ರದೇಶದಲ್ಲಿ ಆಧುನಿಕ ಕೃಷಿ ಪದ್ಧತಿ, ಮುಖ್ಯವಾಗಿ ಪರ್ಯಾಯ ಬೆಳೆಗಳತ್ತ ಗಮನ ಹರಿಸಬಾರದೇಕೆ?

ತಮಿಳುನಾಡು ಕುರುವಾಯ್ ಬೆಳೆಯನ್ನು ಬೇಸಿಗೆಯಲ್ಲೇ ಬೆಳೆಯುತ್ತಿದೆ. ಒಂದು ಹನಿ ನೀರೂ ಮಳೆಯಿಂದ ದೊರೆಯುವುದಿಲ್ಲ! ಆದ್ದರಿಂದ ಭತ್ತದ ಪ್ರದೇಶವನ್ನು ಕಡಿತಗೊಳಿಸಿ, ಕಡಿತಗೊಳಿಸಿದಷ್ಟು ಪ್ರದೇಶದಲ್ಲಿ ಪರ್ಯಾಯ ಬೆಳೆಗಳನ್ನು ಬೆಳೆದರೆ ಸುಮಾರು ನೀರು ಉಳಿತಾಯ ಮಾಡಬಹುದು. ಮೆಟ್ಟೂರು ಅಣೆಕಟ್ಟಿನಲ್ಲಿ ಉಳಿಸಿದ ನೀರಿನಿಂದ ಸಾಂಬಾ ಭತ್ತವನ್ನಾಗಲಿ ಅಥವಾ ಎರಡನೇ ಬೆಳೆಯಾಗಿ ಲಾಭದಾಯಕ ಪರ್ಯಾಯ (ಹತ್ತಿ, ಮುಸುಕಿನ ಜೋಳ, ದ್ವಿದಳ ಧಾನ್ಯ ಮತ್ತು ಎಣ್ಣೆಕಾಳು) ಬೆಳೆಗಳನ್ನು ಬೆಳೆಯಬಹುದು. ಈ ಪ್ರಯತ್ನವನ್ನೇಕೆ ತಮಿಳುನಾಡು ಮಾಡುತ್ತಿಲ್ಲ?

ಕಾವೇರಿ ಕಣಿವೆಯ ನೀರನ್ನು ಬಳಸುವ ಎಲ್ಲ ರಾಜ್ಯಗಳೂ ಆಧುನಿಕ ಕೃಷಿ ಪದ್ಧತಿಗಳನ್ನು ಅನುಸರಿಸಿ, ದೊರಕಿದಷ್ಟು ನೀರಿನ ಸಾರ್ಥಕ ಬಳಕೆಯ ಬಗ್ಗೆ ಒಂದಿಷ್ಟು ಮುಂಜಾಗ್ರತೆ ಮತ್ತು ಕಾಳಜಿ ವಹಿಸಬಾರದೇಕೇ?

ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ತೀರ್ಪು ಅವೈಜ್ಞಾನಿಕ. ಏಕೆಂದರೆ, ಭತ್ತದ ಬೆಳೆಗೆ ಬೇಕಾಗುವ ಅತ್ಯಮೂಲ್ಯವಾದ ಒಳಸುರಿ-ಅಂದರೆ ನೀರು- ನೈರುತ್ಯ ಮಾರುತವು ಕರ್ನಾಟಕಕ್ಕೆ ಸೀಮಿತವಾಗಿದ್ದು, ತಮಿಳುನಾಡಿಗೆ ಯಾವುದೇ ಮಳೆ ಬೀಳುವುದಿಲ್ಲವಾದ್ದರಿಂದ ಕುರುವಾಯ್ ಭತ್ತವನ್ನು ನೂರಕ್ಕೆ ನೂರರಷ್ಟು ಅಣೆಕಟ್ಟಿನಲ್ಲಿ ಶೇಖರಿಸಲ್ಪಟ್ಟಿರುವ ನೀರಿನಿಂದಲೇ ಬೆಳೆಯಬೇಕಾಗುತ್ತದೆ! ಮಳೆಯಿಲ್ಲದ ಋತುಮಾನದಲ್ಲಿ ಶೇಖರಿಸಲ್ಪಟ್ಟ ನೀರಿನಿಂದ ಭತ್ತ ಬೆಳೆಯುವುದರಿಂದ ನೀರಿನ ಸಾರ್ಥಕ ಬಳಕೆ ಖಂಡಿತ ಸಾಧ್ಯವಾಗದು. ಭತ್ತದ ಬೆಳೆಯನ್ನು ಮಳೆಗಾಲಕ್ಕೇ ಸೀಮಿತ ಮಾಡಿಕೊಳ್ಳುವುದು ಮತ್ತು ಉಳಿತಾಯವಾದ ನೀರನ್ನು ಮುಂಬರುವ ಸಾಂಬಾ ಬೆಳೆಗೆ ಉಪಯೋಗಿಸುವುದರಿಂದ ಹೆಚ್ಚು ಪ್ರದೇಶದಲ್ಲಿ ಭತ್ತ ಬೆಳೆಯಲು ಸಾಧ್ಯ. ಇದು ವೈಜ್ಞಾನಿಕವೂ ಹೌದು ಮತ್ತು ಲಾಭದಾಯಕ ಕೂಡ.

ಎಂ. ಮಹದೇವಪ್ಪ, ಲೇಖಕರು ಕೃಷಿ ವಿವಿಯ ವಿಶ್ರಾಂತ ಕುಲಪತಿ

 

Latest Videos
Follow Us:
Download App:
  • android
  • ios