ಡೆಹ್ರಾಡೂನ್ : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇತ್ತೀಚಿನ ದಿನಗಳಲ್ಲಿ  ಹೆಚ್ಚು ಪ್ರಬುದ್ಧತೆಯನ್ನು ತೋರುತ್ತಿದ್ದಾರೆ ಎಂದು ಬಿಜೆಪಿ ಸಂಸದೆ ಸರೋಜ್ ಪಾಂಡೆ ಹೇಳಿದ್ದಾರೆ.

ಚತ್ತೀಸ್ ಗಢದ ರಾಜ್ಯಸಭಾ ಸದಸ್ಯೆಯಾಗಿರುವ ಸರೋಜ್ ಹಿಂದೆ ರಾಹುಲ್ ಅವರನ್ನು ಮಂದ ಬುದ್ದಿ ಎಂದು ಹೇಳಿದ್ದರು. ಆದರೆ ಈಗ ಅವರು ಹೆಚ್ಚಿನ ಪ್ರಬುದ್ಧತೆ ತೋರುತ್ತಿದ್ದಾರೆ ಎಂದಿದ್ದಾರೆ.  

ಇನ್ನು ಇದೇ ವೇಳೆ ವ್ಯಾಪಮ್ ಸ್ಕ್ಯಾಮ್ ಬಗ್ಗೆ ಮಾತನಾಡುತ್ತಾ ಕಾಂಗ್ರೆಸ್ ಇದನ್ನು ಹೇಗೆ  ರಾಜಕೀಯ ಸ್ಟ್ರಾಟಜಿಯಾಗಿ ಬಳಕೆ ಮಾಡಿಕೊಂಡಿತು ಎನ್ನುವುದನ್ನು ತಿಳಿಯಬಹುದಾಗಿದೆ. ಅಲ್ಲದೇ ಬಿಜೆಪಿ ಯಾವುದೇ ರೀತಿಯ ಭ್ರಷ್ಟಾಚಾರದಲ್ಲಿಯೂ ಕೂಡ ತೊಡಗಿಲ್ಲ. ಆದ್ದರಿಂದ ಇದಿಗ ಬಿಜೆಪಿ ವಿರುದ್ಧ ಈಗ ಕಾಂಗ್ರೆಸ್ ರಫೇಲ್ ವಿಚಾರವನ್ನು ಎಳೆದು ತಂದಿದೆ ಎಂದು ಅವರು ಹೇಳಿದ್ದಾರೆ. 

2018ರಲ್ಲಿ ಪಾಂಡೆ ರಾಹುಲ್ ಗಾಂಧಿ ಅವರನ್ನು ಮಂದ ಬುದ್ದಿಯ ವ್ಯಕ್ತಿ ಎಂದು ತೆಗಳಿದ್ದರು. ಅಲ್ಲದೇ ರಾಹುಲ್ ಇತ್ತೀಚೆಗೆ ಹೆಚ್ಚು ಹೆಚ್ಚು ಕಲಿಯಲು ಬಯಸುತ್ತಿದ್ದಾರೆ. ಆದರೆ ಎಲ್ಲಾ ರೀತಿಯ ಕಲಿಕೆಗೂ ಕೂಡ ಒಂದು ವಯಸ್ಸಿನ ಮಿತಿ ಇರುತ್ತದೆ. 40 ವರ್ಷಗಳ ನಂತರದ ಕಲಿಕೆಯನ್ನು ಕಲಿಕೆ ಎಂದೂ ಯಾರೂ ಕರೆಯುವುದಿಲ್ಲ ಎಂದಿದ್ದಾರೆ. 

ಇನ್ನು ಬಿಜೆಪಿ ವಿರುದ್ಧ ವಿಪಕ್ಷಗಳನ್ನು ಸಂಘಟಿಸಲು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ನಡೆಸಿದ ರ್ಯಾಲಿ ಬಗ್ಗೆಯೂ ಕೂಡ ವಾಗ್ದಾಳಿ ನಡೆಸಿದ್ದಾರೆ. 

ಮಮತಾ ಬ್ಯಾನರ್ಜಿ ತನ್ನ ಸ್ವಂತ ರಾಜ್ಯದಲ್ಲಿಯೇ ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಅವರ ನೇತೃತ್ವದಲ್ಲಿ ವಿಪಕ್ಷಗಳು ಒಂದಾಗುತ್ತಿರುವುದು ಶಾಕಿಂಗ್ ವಿಚಾರ ಎಂದು ಸರೋಜ್ ಪಾಂಡೆ ಹೇಳಿದ್ದಾರೆ.