ಮೇಲ್ವರ್ಗ ಮೀಸಲಾತಿ ಪಡೆಯಲು 3 ಮಾನದಂಡಗಳು, ಯಾರಿಗೆ ಲಾಭ? ಇಲ್ಲಿದೆ ಮಾಹಿತಿ

ಸಾಮಾನ್ಯ ವರ್ಗದ ಮೀಸಲಿಗೆ ಲೋಕ ಅಸ್ತು| ಆರ್ಥಿಕವಾಗಿ ಹಿಂದುದಳಿದವರಿಗೆ ಶೇ.10 ಮೀಸಲು ನೀಡುವ ಮಸೂದೆಗೆ ಲೋಕಸಭೆ ಅನುಮೋದನೆ| ಇಂದು ರಾಜ್ಯಸಭೆಯಲ್ಲಿ ಮಸೂದೆ ಮಂಡನೆ, ಅಂಗೀಕಾರಕ್ಕೆ ಕೇಂದ್ರ ಸರ್ಕಾರದ ಸರ್ವ ಪ್ರಯತ್ನ

all about reservation for economically backward upper caste

ನವದೆಹಲಿ: ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೂ ಉನ್ನತ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10ರಷ್ಟುಮೀಸಲು ನೀಡುವ ಮಹತ್ವದ ಮಸೂದೆಗೆ ಲೋಕಸಭೆ ಮಂಗಳವಾರ ಅನುಮೋದನೆ ನೀಡಿದೆ. ಹೀಗಾಗಿ ಲೋಕಸಭಾ ಚುನಾವಣೆಗೂ ಮುನ್ನ ದೇಶದ ಬಹುದೊಡ್ಡ ವರ್ಗವನ್ನು ತಲುಪುವ ಕೇಂದ್ರ ಸರ್ಕಾರದ ಕನಸು ಸಾಕಾರಕ್ಕೆ ಇನ್ನೊಂದು ಮೆಟ್ಟಿಲು ಮಾತ್ರ ಬಾಕಿ ಉಳಿದಂತಾಗಿದೆ. ಬುಧವಾರ ರಾಜ್ಯಸಭೆಯಲ್ಲಿ ಮಸೂದೆ ಮಂಡನೆಗೆ ಕೇಂದ್ರ ಸರ್ಕಾರ ಉದ್ದೇಶಿಸಿದೆ. ಲೋಕಸಭಾ ಚುನಾವಣೆ ಕೆಲವೇ ದಿನಗಳಿರುವಾಗ ಸರ್ಕಾರ ತಂದಿರುವ ಈ ಮಸೂದೆ ರಾಜಕೀಯ ಗಿಮಿಕ್‌ ಎಂದು ಕಾಂಗ್ರೆಸ್‌ ಸೇರಿದಂತೆ ವಿಪಕ್ಷಗಳು ತೀವ್ರ ಟೀಕೆ ಮಾಡಿವೆಯಾದರೂ, ಮಸೂದೆಯನ್ನು ಸಂಸತ್‌ನಲ್ಲಿ ಬೆಂಬಲಿಸುವುದಾಗಿ ಹೇಳಿರುವ ಕಾರಣ, ಸಂಸತ್‌ ಕಲಾಪದ ಕಡೆಯ ದಿನವಾದ ಬುಧವಾರ ರಾಜ್ಯಸಭೆಯಲ್ಲೂ ಅಂಗೀಕಾರವಾಗುವ ವಿಶ್ವಾಸದಲ್ಲಿ ಸರ್ಕಾರ ಇದೆ.

ಒಂದೊಮ್ಮೆ ಬುಧವಾರವೇ ರಾಜ್ಯಸಭೆಯಲ್ಲೂ ಮಸೂದೆಗೆ ಅಂಗೀಕಾರ ಸಿಕ್ಕರೆ, ನಂತರ ಅದು ರಾಷ್ಟ್ರಪತಿಗಳ ಬಳಿಗೆ ಹೋಗಲಿದ್ದು, ಅವರ ಅಂಕಿತ ಬೀಳುತ್ತಲೇ ಕಾಯ್ದೆಯ ಸ್ವರೂಪ ಪಡೆದುಕೊಳ್ಳಲಿದೆ.

ಸುದೀರ್ಘ ಚರ್ಚೆ:

ಸೋಮವಾರವಷ್ಟೇ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದುಕೊಂಡಿದ್ದ ಮಸೂದೆಯನ್ನು ಸರ್ಕಾರ ಮಂಗಳವಾರ ಮಧ್ಯಾಹ್ನ ಲೋಕಸಭೆಯಲ್ಲಿ ಮಂಡಿಸಿತು. ಮಸೂದೆ ಮೇಲೆ ಆಡಳಿತ ಮತ್ತು ವಿಪಕ್ಷಗಳಿಂದ ಸುದೀರ್ಘ ಚರ್ಚೆ ನಡೆಯಿತು. ಸುಮಾರು 5 ಗಂಟೆಗಳ ಕಾಲ ನಡೆದ ಚರ್ಚೆಯ ಬಳಿಕ ಮಸೂದೆಯನ್ನು ಮತಕ್ಕೆ ಹಾಕಲಾಯಿತು. ಈ ವೇಳೆ ಮಸೂದೆಯ ಪರವಾಗಿ 319 ಮತ್ತು ವಿರುದ್ಧವಾಗಿ ಕೇವಲ 4 ಮತಗಳ ಚಲಾವಣೆಯಾಯಿತು. ಇದರೊಂದಿಗೆ ಮಸೂದೆಗೆ ಲೋಕಸಭೆಯ ಅನುಮೋದನೆ ಸಿಕ್ಕಿತು.

ಮಸೂದೆಯನ್ನು ಮತಕ್ಕೆ ಹಾಕುವ ಪ್ರಧಾನಿ ನರೇಂದ್ರ ಮೋದಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿವಿಧ ಪಕ್ಷಗಳ ಗಣ್ಯರು ಹಾಜರಿದ್ದರು.

ಮಸೂದೆಗೆ ಎನ್‌ಡಿಎ ಮಿತ್ರಪಕ್ಷಗಳು, ಕಾಂಗ್ರೆಸ್‌, ಟಿಎಂಸಿ, ಎಸ್‌ಪಿ, ಬಿಜೆಡಿ, ಎನ್‌ಸಿಪಿ, ಬಿಜೆಡಿ ಬೆಂಬಲ ವ್ಯಕ್ತಪಡಿಸಿದವು.

ಮೀಸಲು ಪಡೆಯಲು ಏನು ಮಾನದಂಡ?

- ಕೃಷಿ, ಸಂಬಳ ಸೇರಿ ಯಾವುದೇ ಮೂಲದಿಂದ ವಾರ್ಷಿಕ 8 ಲಕ್ಷ ರು. ಒಳಗೆ ಆದಾಯ ಗಳಿಸುತ್ತಿರುವವರಿಗೆ

- 5 ಎಕರೆಗಿಂತ ಕಡಿಮೆ ಜಮೀನು, 1000 ಚದರಡಿಗಿಂತ ಕಡಿಮೆ ವಿಸ್ತೀರ್ಣದ ಮನೆ ಹೊಂದಿದವರಿಗೆ

- ಅಧಿಸೂಚಿತ ನಗರಪಾಲಿಕೆ ವ್ಯಾಪ್ತಿಯಲ್ಲಿ 100 ಯಾರ್ಡ್‌ (900 ಚದರಡಿ), ಅಧಿಸೂಚಿತವಲ್ಲದ ನಗರಪಾಲಿಕೆ ಪ್ರದೇಶದಲ್ಲಿ 200 ಯಾರ್ಡ್‌ (1800 ಚದರಡಿ)ಗಿಂತ ಕಡಿಮೆ ವಿಸ್ತೀರ್ಣದ ವಸತಿ ನಿವೇಶನ ಹೊಂದಿರುವವವರಿಗೆ

ಯಾರಿಗೆ ಲಾಭ?:

ಸಂವಿಧಾನಕ್ಕೆ ತಿದ್ದುಪಡಿಯ ಮೂಲಕ ತರಲು ಉದ್ಧೇಶಿಸಲಾಗಿರುವ ಈ ಮಸೂದೆಯಿಂದ ಬ್ರಾಹ್ಮಣರು, ರಜಪೂತರು, ಭೂಮಿಹಾರ್‌, ಬನಿಯಾಗಳಂತಹ ಮೇಲ್ವರ್ಗದ ಸಮುದಾಯಗಳಿಗೆ ಇನ್ನು ಮುಂದೆ ಉನ್ನತ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10ರಷ್ಟುಮೀಸಲು ಸಿಗಲಿದೆ. ಹೀಗಾಗಿ ಹಾಲಿ ಇರುವ ಮೀಸಲು ಪ್ರಮಾಣ ಶೇ.50ರಿಂದ ಶೇ.60ಕ್ಕೆ ಹೆಚ್ಚಳವಾಗಲಿದೆ.

Latest Videos
Follow Us:
Download App:
  • android
  • ios