Asianet Suvarna News Asianet Suvarna News

ಸಾಹಿತಿಗಳ ಮೌನವನ್ನು ಹಗುರವಾಗಿ ನೋಡಬೇಡಿ-ವೈದೇಹಿ

ಬರವಣಿಗೆ ಮಾತ್ರವಲ್ಲ ವೈದೇಹಿ ಅವರ ಮಾತು ಸಹ ಬಹಳ ಆರ್ದ್ರ. ಅದಕ್ಕೇ ಅವರು ಲಂಕೇಶರು ಅಂದಂತೆ ಇಂದಿಗೂ ಎಂದಿಗೂ ಆರ್ದ್ರ ಗರ್ವದ ಹುಡುಗಿ. ಈ ಕಾಲದ ಬರವಣಿಗೆ ಬಗ್ಗೆ ಮನೋಭಾವದ ಬಗ್ಗೆ ಅವರಿಲ್ಲಿ ಮಾತನಾಡಿದ್ದಾರೆ.

Dont take the silence of Authoys lightly saysVaidehi Vin
Author
First Published Apr 21, 2024, 5:57 PM IST

-ಪ್ರಿಯಾ ಕೆರ್ವಾಶೆ

ಈಗೀಗ ಹೆಚ್ಚುತ್ತಿರುವ ಸಾಹಿತ್ಯ ಸ್ಪರ್ಧೆಗಳ ಬಗ್ಗೆ?

- ಸಾಹಿತ್ಯ ಸ್ಪರ್ಧೆಗಳು ಎಲ್ಲ ಕಾಲದಲ್ಲೂ ಇದ್ದವು. ಇಂಥಾ ಸ್ಪರ್ಧೆಗಳಲ್ಲಿ ಗೆಲ್ಲುವುದಷ್ಟೇ ಮುಖ್ಯ ಅಲ್ಲ. ಗೆದ್ದ ನಂತರ ಬರವಣಿಗೆಯಲ್ಲಿ ಗಟ್ಟಿಯಾಗಿ ನಿಲ್ಲುವುದು ಮುಖ್ಯ ಆಗುತ್ತೆ. ದುಡ್ಡು ಬಂತೂ ಅಂತ ಅಮಲು ಏರಿಸಿಕೋ ಬಾರದು. ಹಾಗೆ ನಶೆ ಏರಿ ಬರವಣಿಗೆ ಅಲ್ಲಿಗೇ ನಿಲ್ಲಿಸುವಂತಾಗಬಾರದು. ಏನಿದ್ದರೂ ಸ್ಪರ್ಧೆಗಿರ್ಧೆ ಎಲ್ಲ ಕೇವಲ ಬರವಣಿಗೆಗೆ ಪ್ರೋತ್ಸಾಹದ ದೃಷಿಯಿಂದ ಇರೋದು. ಅದನ್ನು ಅಷ್ಟಕ್ಕೇ ಸೀಮಿತವಾಗಿ ಗ್ರಹಿಸಬೇಕು. ಮುಂದೆ ಅದು ಆತ್ಮವಿಶ್ವಾಸಕ್ಕೆ ದಾರಿ ಆಗಬೇಕು. ಸ್ಪರ್ಧೆಗಳು ಆಗುತ್ತಿರಲಿ. ಅದರಿಂದ ಒಂದು ಸಾವಿರ ಕತೆ ಬರಲಿ. ಅದರಲ್ಲಿ ಮೂರು ಕಥೆ ಚೆನ್ನಾಗಿದ್ರೂ ದೊಡ್ಡ ವಿಚಾರವೇ ಅಲ್ವಾ? ಅದನ್ನು ಓದಿ ಸಂತೋಷ ಪಡೋಣ. ಆ ನೆಪದಲ್ಲಾದ್ರೂ ಕಥೆಗಳ ಕೊಯ್ಲು ಆಗಲಿ. ಹಾಗೆಯೇ, ಕತೆ ಬರೆಯೋದು ಸುಲಭವ? ಹುಡುಗಾಟಿಕೆಯ? ಅಲ್ಲವಲ್ಲ..

ಬಹುಮಾನದ ಮೊತ್ತಗಳೂ ಹೆಚ್ಚುತ್ತಿವೆಯಲ್ಲಾ?
ಹೆಚ್ಚು ಮೊತ್ತ ಕೊಟ್ಟು ಹಾಳಾಗೋದೂ ಇಲ್ಲ. ಕಡಿಮೆ ಮೊತ್ತ ಕೊಟ್ಟರೆ ಒಳ್ಳೆದಾಗೋದು ಇಲ್ಲ. ಮುಖ್ಯವಾದದ್ದು ಮೊತ್ತ ಕೊಡುವವರ ಉಮೇದು, ಸಾಮರ್ಥ್ಯ, ಆಸಕ್ತಿ. ಅದು ತಗೊಳ್ಳುವವರ ಉಪಯೋಗಕ್ಕೆ ಬರಬಹುದು. ಮನಸ್ಸಿಗೊಂದು ಖುಷಿ ಕೊಡಬಹುದು. ಇವೆಲ್ಲ ಬೆನ್ನು ತಟ್ಟುವ ವಿಧಾನ ಅಷ್ಟೇ. ಅದರಿಂದಲೇ ಒಬ್ಬರು ಕತೆಗಾರರಾಗಿ ಅರಳುವುದಿಲ್ಲ, ಕತೆಗಾರರಾಗುವ ಹಲವು ಪೋಷಕಾಂಶಗಳಲ್ಲಿ ಅದೃಷ್ಟವಶಾತ್ ಅದೂ ಒಂದು ಪಾತ್ರ ವಹಿಸಬಹುದು ಅಷ್ಟೆ.

ಔತ್ತಮ್ಯದ ಗೀಳಿನಲ್ಲಿ

ಕೆಲವರು ಟೈಮ್ ಸಿಕ್ಕರೆ ಬರೀತೀನಿ ಅಂತಾರೆ?
ಏನು ಹಾಗೆಂದ್ರೆ? ಟೈಮ್ ಸಿಕ್ಕಿದ್ರೆ ಮಾತ್ರ ಊಟ ಮಾಡ್ತೀವ? ಟೈಮ್ ಸಿಕ್ಕಿದ್ರೆ ಮಾತ್ರ ಪ್ರೀತಿ ಮಾಡ್ತೀವ? ಇಲ್ವಲ್ಲ, ಬರವಣಿಗೆಯೂ ಅಷ್ಟೇ. ಪ್ರೀತಿಯಿಂದ ಅಪ್ಪಿಕೊಂಡು ಹೊರಡೋ ಪ್ರಕಾರ ಅದು.

ಸಾಹಿತ್ಯಕ್ಕೆ ಇರಬೇಕಾದ ಅತ್ಯವಶ್ಯಕ ಗುಣ?
ಪ್ರಾಮಾಣಿಕತೆ, ಅನುಭವ. ಮನುಷ್ಯ ಸಮಾಜ ಹೇಗೆ ಇದೆ ಅನ್ನೋದನ್ನು ಸಾಹಿತ್ಯ ಭಾಷೆಯ ಮೂಲಕ ತೋರಿಸುತ್ತೆ. ಅದನ್ನು ನೋಡಿ ನಾವೇ ಮೆಟ್ಟಿಬೀಳುವ ಹಾಗೆ, ದಿಗ್ಭ್ರಮೆ ಆಗುವ ಹಾಗೆ ತೋರಿಸುತ್ತೆ. ಇನ್ನು, ಸಾಹಿತ್ಯ ಸಮಾಜವನ್ನು ತಿದ್ದುತ್ತಾ ಅಂತ ಕೇಳಿದರೆ, ಇಲ್ಲ ಅಂತಲೂ ಹೇಳೋಕ್ಕಾಗಲ್ಲ ಹೌದು ಅಂತಲೂ ಹೇಳಲಿಕ್ಕಾಗಲ್ಲ. ಅದಕ್ಕೆ ತಿದ್ದುವ ಗುಣ ಇದೆ, ಖಂಡಿತ. ಆದರೆ ಅದು ಸಾಧ್ಯವಾಗುವುದು ವ್ಯಕ್ತಿಗತ ಸತ್ವಕ್ಕೆ, ಆಸಕ್ತಿಗೆ ಸಂಬಂಧಿಸಿ.

ಈಗಿನ ಲೇಖಕಿಯರ ಬರವಣಿಗೆಯ ಬಗ್ಗೆ?
ಈಗಿನವರ ಅನುಭವಗಳೇ ಬೇರೆ. ಈಗ ಹೆಣ್ಣು ಮಕ್ಕಳಿಗೆ ಲೋಕ ತೆರೆದಿದೆ ಅಂತಾರೆ. ಎಷ್ಟರ ಮಟ್ಟಿಗೆ ತೆರೆದಿದೆ? ತೆರೆದಂಗೆ ಕಾಣತ್ತೆ, ಆದರೆ ಮುಚ್ಚಿರುತ್ತೆ, ಮುಚ್ಚಿದ ಹಾಗೆ ಕಾಣುತ್ತೆ, ಆದರೆ ತೆರೆದಿರುತ್ತೆ. ಹೀಗೇ ಅಂತ ಹೇಳಲಾಗದ ರೀತಿಯಲ್ಲಿ ಹೆಣ್ಣುಮಕ್ಕಳ ಲೋಕ ಇದೆ. ಪೀಳಿಗೆಯಿಂದ ಪೀಳಿಗೆಗೆ ಬದುಕಿನಲ್ಲಿ ಪಲ್ಲಟ ಆಗುತ್ತಾ ಇರುತ್ತದೆ. ನಮ್ಮಜ್ಜಿ ಬದುಕಿದ ಕಾಲ ನನ್ನದಲ್ಲ. ನನ್ನ ಅಜ್ಜಿ ಬರೀತಿದ್ರೆ ಬೇರೆ ರೀತಿ ಆಗುತ್ತಿತ್ತು. ನನ್ನ ನಂತರದವರ ಕತೆ ಬೇರೆ ರೀತಿ. ಸಂಕೀರ್ಣವಾದ ಬದುಕು ಇವತ್ತಿನ ಹೆಣ್ಮಕ್ಕಳ ಮುಂದಿದೆ. ಅವರ ಅನುಭವ ಕತೆಗಳನ್ನು ಬರೆಸುವಷ್ಟು ತೀವ್ರವಾದಾಗೆಲ್ಲ ಒಳೊಳ್ಳೆಯ ಕತೆಗಳು ಬಂದಿವೆ. ಇನ್ನೂ ಬರಲಿವೆ.

ಕೆವಿ ತಿರುಮಲೇಶ್; ಹೊರನಾಡಿನ ಪರಮ ಕವಿ

ನನ್ನನ್ನು ಕಾಡುವುದು ಭಾಷೆ ತನ್ನ ಅಲಗನ್ನು ಎಲ್ಲೋ ಕಳೆದುಕೊಳ್ಳುವ ಅಪಾಯ ಇದೆಯ ಅನ್ನೋದಷ್ಟೇ. ಯಾವುದೇ ಭಾಷೆಗೆ ಅದರದೇ ಆದ ಘಮ ಇರುತ್ತದೆಯಲ್ಲ ಅದು ಹೋಗ್ತಿದೆಯೇನೋ ಎಂಬ ಭಯ, ಆತಂಕ. ಭಾಷೆ ಈಗ ಕಲಬೆರಕೆ ಆಗ್ತಾ ಇದೆ. ಬೇರೆ ಭಾಷೆಗಳು ಮಿಶ್ರವಾಗಿ ಒಂದು ಭಾಷೆಯ ಪರಿಧಿ ಹಿಗ್ಗುವ, ಪುಷ್ಟವಾಗುವ, ಮಿಶ್ರವಾದ ಭಾಷೆ ಮೂಲ ಭಾಷೆಯೊಳಗೆ ಬೆರೆತು ಒಂದಾಗಿ ಆಗುವ ಚಂದ ಬೇರೆ. ಕಲಬೆರಕೆ ಆಗುವುದು ಬೇರೆ. ಕಲಬೆರಕೆಯಾದಾಗ ಭಾಷೆ ಶಕ್ತಿಹೀನವಾಗತ್ತೆ. ಅದರಲ್ಲಿನ ಆರ್ದ್ರತೆ ಮಸುಕಾಗತ್ತೆ. ಕಾವ್ಯದಲ್ಲಂತೂ ಭಾಷೆಯ ಘಮ ಬಹಳ ಮುಖ್ಯ. ನಾಭಿಯಾಳದಿಂದ ಒಂದೊಳ್ಳೆ ಆಲಾಪ ಬಂದರೆ ಹೇಗೆ ಸಂಗೀತ ಗೊತ್ತಿಲ್ಲದೇ ಇದ್ದವರನ್ನೂ ಅದು ಅವರಿಸಿ ಬಿಡುತ್ತದೆಯೋ ಹಾಗೆಯೇ ಒಳ್ಳೆಯ ಕವಿತೆ ಹೃದಯಕ್ಕೆ ತಾಕಿ ಬಿಡತ್ತೆ. ಹಾಗಾಗಬೇಕು. ಬೇರೆ ಬೇರೆ ಭಾಷೆಯ ಪಲುಕುಗಳನ್ನು ತಂದರೂ ಪರವಾಗಿಲ್ಲ. ಅದನ್ನು ಯಾವ ರೀತಿ ನಮ್ಮ ಭಾಷೆ ಒಳಗೆ ಅಡಕ ಮಾಡಿ ಆ ಮೂಲಕ ನಮ್ಮ ಭಾಷೆಯ ಪರಿಮಳ ಹೆಚ್ಚಿಸಿಕೊಳ್ತಿವಿ ಅನ್ನೋದು ಬಹಳ ಮುಖ್ಯ.

ಹಲವು ಸೆನ್ಸಿಟಿವ್ ವಿಚಾರಗಳ ಬಗ್ಗೆ ಸಾಹಿತಿಗಳು ಮೌನವಾಗಿದ್ದಾರೆ ಎಂಬ ಮಾತಿದೆ. ಈ ಬಗ್ಗೆ?
ಮೌನ ಅದವರೆಲ್ಲ ಪ್ರಕರಣಗಳ ಪರ ಅಂತಲೋ? ನೇರಾ ನೇರ ಧುಮುಕಿದವರೆಲ್ಲ ಪ್ರಕರಣಗಳ ವಿರುದ್ಧ ಅಂತಲೋ? ಹಾಗೆ ಹೇಳೋದು ತಪ್ಪು ತಪ್ಪು. ಅದು ಮೌನವನ್ನು ಹಗುರವಾಗಿ ನೋಡಿದಂತೆ. ಮೌನವಾಗಿಯೇ ನೋಯುತ್ತಾ ಯೋಚಿಸುತ್ತಾ ಇದ್ದು ಅಂತಿಮವಾಗಿ ಅದನ್ನು ತಮ್ಮ ಸಾಹಿತ್ಯದಲ್ಲಿ ವಿವಿಧ ಬಗೆಯಲ್ಲಿ ಹೊಮ್ಮಿಸುವುದೂ ಸಾಹಿತಿಗಳ ಪ್ರತಿಭಟನೆಯ ಒಂದು ರೀತಿಯೇ, ಪ್ರತಿಭಟನೆಯ ಸ್ವರೂಪ ಹಲವು ರೂಪದಲ್ಲಿರುತ್ತವೆ. ಅದನ್ನು ಅರ್ಥ ಮಾಡಿಕೊಳ್ಳಬೇಕು.

Follow Us:
Download App:
  • android
  • ios