ಹಿರಿಯಡ್ಕ[ಫೆ.03]   ಇಲ್ಲಿನ ಅಂಜಾರು ಗ್ರಾಮದಲ್ಲಿರುವ ಉಡುಪಿ ಜಿಲ್ಲಾ ಕಾರಾಗೃಹದ ವಿಚಾರಣಾ ಕೈದಿ ಅಮರ್ ನಾಥ (32) ಎಂಬುವರು ಜೈಲಿನಲ್ಲಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಉಡುಪಿ ತಾಲೂಕಿನ ಕಿದಿಯೂರು ಗ್ರಾಮದ ನಿವಾಸಿಯಾಗಿದ್ದ ಅಮರನಾಥ 2018 ಅಕ್ಟೋಬರ್  31ರಂದು ಅತ್ಯಾಚಾರ ಮತ್ತು ಜಾತಿನಿಂದನೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದರು.

ಭಾನುವಾರ ಬೆಳ್ಳಿಗ್ಗೆ 8 ಗಂಟೆಗೆ ನಿತ್ಯಕರ್ಮಗಳನ್ನು ಮುಗಿಸಲು ಸೆಲ್ ನಿಂದ  ಹೊರಗೆ ಬಿಟ್ಟಾಗ, ಜೈಲಿನ ವಿಡಿಯೋ ಕಾನ್ಪರೆನ್ಸ್ ಕೊಠಡಿಯಲ್ಲಿ ತಮ್ಮ ಟವಲ್ ನಿಂದ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ತಕ್ಷಣ ಇದನ್ನು ಗಮನಿಸಿದ ಜೈಲಿನ ಸಿಬ್ಬಂದಿಗಳು ಜೈಲಿನ ಅಧೀಕ್ಷಕ ಸಂಜಯ್ ಜಿತ್ತಿ ಅವರಿಗೆ ಮಾಹಿತಿ ನೀಡಿದರು.

ಅವರು ಬಂದು ಆರೋಪಿಯನ್ನು ನೇಣಿನಿಂದ ಕೆಳಕ್ಕೆ ಇಳಿಸಿ, ಉಡುಪಿ ಅಜ್ಜರಕಾಡಿನ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯದಲ್ಲಿಯೇ  ಮೃತಪಟ್ಟಿದ್ದಾರೆ.  ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ ಎಂದು ಜೈಲು ಅಧಿಕಾರಿ ತಿಳಿಸಿದ್ದಾರೆ.