19ನೇ ಪ್ರಕರಣದಲ್ಲಿ ಸೈನೈಡ್ ಮೋಹನ್‌ಗೆ ಜೀವಾವಧಿ
ಕುಖ್ಯಾತ ಸರಣಿ ಸ್ತ್ರೀ ಹಂತಕ ಸೈನೈಡ್ ಮೋಹನ್ ಕುಮಾರ್‌ಗೆ 19ನೇ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಹಾಗೂ 55 ಸಾವಿರ ರು. ದಂಡ ವಿಧಿಸಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಮಂಗಳೂರು(ಫೆ.18): ಕುಖ್ಯಾತ ಸರಣಿ ಸ್ತ್ರೀ ಹಂತಕ ಸೈನೈಡ್ ಮೋಹನ್ ಕುಮಾರ್‌ಗೆ 19ನೇ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಹಾಗೂ 55 ಸಾವಿರ ರು. ದಂಡ ವಿಧಿಸಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಕಾಸರಗೋಡಿನ ಬದಿಯಡ್ಕ ಕೊಳ್ತಾಜೆಪಾದೆ ಗ್ರಾಮದ ಯುವತಿಯನ್ನು ಮದುವೆ ಆಗುವುದಾಗಿ ನಂಬಿಸಿ ಮೈಸೂರಿಗೆ ಕರೆದೊಯ್ದು ಅತ್ಯಾಚಾರ ಎಸಗಿ ಬಳಿಕ ಸಯನೈಡ್ ಮಾತ್ರೆ ನೀಡಿ ಕೊಲೆ ಮಾಡಿದ ಆರೋಪ ಫೆ.11ರಂದು ನ್ಯಾಯಾಲಯದಲ್ಲಿ ಸಾಬೀತಾಗಿತ್ತು. ಸೋಮವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಾಗಿದೆ.
ಏನಾಗಿತ್ತು?:
ಕೊಳ್ತಾಜೆಪಾದೆ ಗ್ರಾಮದ 23 ವರ್ಷ ವಯಸ್ಸಿನ ಬಡ ಯುವತಿ 2006ರಲ್ಲಿ ತನ್ನ ಸಂಬಂಧಿಕರ ಮದುವೆಗೆ ಹೋಗಿದ್ದಾಗ ಮೋಹನ್ ಕುಮಾರ್ ಆಕೆಯನ್ನು ಪರಿಚಯಿಸಿಕೊಂಡಿದ್ದ. ಆಕೆಯದ್ದೇ ಜಾತಿಯವನು ಎಂದು ನಂಬಿಸಿದ್ದಲ್ಲದೆ, ಮದುವೆ ಆಗುವುದಾಗಿ ಭರವಸೆ ನೀಡಿದ್ದ. 2006 ಜೂ.3ರಂದು ಯುವತಿ ತಾನು ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೊರಟಿದ್ದಳು. ಮೋಹನ್ ಕುಮಾರ್ ಆಕೆಯನ್ನು ಮೈಸೂರಿನ ಲಾಡ್ಜ್‌ಗೆ ಕರೆದೊಯ್ದು ಅಲ್ಲಿ ಒಂದು ರಾತ್ರಿ ಆಕೆ ಮೇಲೆ ಅತ್ಯಾಚಾರ ಎಸಗಿದ್ದ. ಮರುದಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಕರೆದೊಯ್ದು ಗರ್ಭಪಾತದ ಮಾತ್ರೆ ಎಂದು ಹೇಳಿ ಸೈನೈಡ್ ಗುಳಿಗೆ ನೀಡಿದ್ದ. ಆಕೆ ಶೌಚಾಲಯಕ್ಕೆ ಹೋಗಿ ಅದನ್ನು ಸೇವಿಸಿದ ಕೂಡಲೆ ಸಾವಿಗೀಡಾಗಿದ್ದಳು.
ಸೈನೈಡ್ ಮೋಹನ್ 19ನೇ ಪ್ರಕರಣ ಸಾಬೀತು
ಇತ್ತ ಯುವತಿಯ ಪೋಷಕರು ಪುತ್ರಿ ನಾಪತ್ತೆ ಬಗ್ಗೆ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 2009ರಲ್ಲಿ ಮೋಹನ್ ಕುಮಾರ್ ಬಂಧನದ ಬಳಿಕ ಈ ಯುವತಿಯ ಸಾವಿನ ಪ್ರಕರಣ ಬೆಳಕಿಗೆ ಬಂದಿತ್ತು. ಆಗ ಆಕೆಯ ಹೆತ್ತವರು ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದರು. ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಒಟ್ಟು 48 ಸಾಕ್ಷಿಗಳು ಹಾಗೂ 70 ದಾಖಲೆಗಳನ್ನು ಪರಿಗಣಿಸಲಾಗಿತ್ತು.
ಕೊಲೆ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರು. ದಂಡ, ಅಪಹರಣ ಅಪರಾಧಕ್ಕೆ 10 ವರ್ಷ ಕಠಿಣ ಶಿಕ್ಷೆ ಮತ್ತು 5 ಸಾವಿರ ರು. ದಂಡ, ಅತ್ಯಾಚಾರ ಅಪರಾಧಕ್ಕೆ 7 ವರ್ಷ ಕಠಿಣ ಸಜೆ ಮತ್ತು 5 ಸಾವಿರ ರು. ದಂಡ, ವಿಷ ಪದಾರ್ಥ ಉಣಿಸಿದ ಅಪರಾಧಕ್ಕೆ 10 ವರ್ಷ ಕಠಿಣ ಶಿಕ್ಷೆ ಮತ್ತು 5 ಸಾವಿರ ರು. ದಂಡ, ಚಿನ್ನಾಭರಣ ಸುಲಿಗೆ ಅಪರಾಧಕ್ಕೆ 5 ವರ್ಷ ಕಠಿಣ ಸಜೆ ಮತ್ತು 5 ಸಾವಿರ ರು. ದಂಡ, ವಿಷ ಉಣಿಸಿ ಸುಲಿಗೆ ಮಾಡಿದ ಅಪರಾಧಕ್ಕೆ 10 ವರ್ಷ ಕಠಿಣ ಸಜೆ ಮತ್ತು 5 ಸಾವಿರ ರು. ದಂಡ, ಮದುವೆ ಆಗುವುದಾಗಿ ನಂಬಿಸಿ ವಂಚಿಸಿದ ಅಪರಾಧಕ್ಕೆ 1 ವರ್ಷ ಕಠಿಣ ಶಿಕ್ಷೆ, ಸಾಕ್ಷ ್ಯ ನಾಶಕ್ಕೆ 7 ವರ್ಷ ಕಠಿಣ ಸಜೆ ಮತ್ತು 5 ಸಾವಿರ ರು. ದಂಡ ಶಿಕ್ಷೆಯನ್ನು ವಿಧಿಸಲಾಗಿದೆ.
ಇನ್ನು ಒಂದು ಪ್ರಕರಣ ಬಾಕಿ
ಇದು ಸಯನೈಡ್ ಮೋಹನ್ ಕುಮಾರ್‌ನ 19ನೇ ಪ್ರಕರಣವಾಗಿದ್ದು, ಇನ್ನು 1 ಪ್ರಕರಣ ವಿಚಾರಣೆಗೆ ಬಾಕಿ ಇದೆ. ಈವರೆಗಿನ 19 ಪ್ರಕರಣಗಳ ಪೈಕಿ 4ರಲ್ಲಿ ಮರಣ ದಂಡನೆ ಶಿಕ್ಷೆ ಪ್ರಕಟವಾಗಿದ್ದರೂ ಈ ಪೈಕಿ ಒಂದು ಪ್ರಕರಣದಲ್ಲಿ ಶಿಕ್ಷೆಯ ಪ್ರಮಾಣವನ್ನು ಜೀವಾವಧಿ ಶಿಕ್ಷೆಗೆ ಹಾಗೂ ಇನ್ನೊಂದು ಪ್ರಕರಣದಲ್ಲಿ 5 ವರ್ಷಗಳ ಕಠಿನ ಶಿಕ್ಷೆಗೆ ಇಳಿಸಲಾಗಿದೆ. ಒಂದು ಪ್ರಕರಣದಲ್ಲಿ ಮರಣ ದಂಡನೆ ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಇನ್ನೊಂದು ಪ್ರಕರಣದಲ್ಲಿ ಹೈಕೋರ್ಟ್ ತೀರ್ಮಾನ ಇನ್ನಷ್ಟೇ ಬರಬೇಕಾಗಿದೆ. ಹೆಚ್ಚಿನ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಯಾಗಿದೆ.