ಆಗ್ರಾ(ಅ. 05) ಹತ್ರಾಸ್ ಅತ್ಯಾಚಾರ ಪ್ರಕರಣ  ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಲೆ ಇದೆ.  ಪ್ರಕರಣಕ್ಕೆ ಸಂಬಂಧಿಸಿ ಸುಳ್ಳು ಸುದ್ದಿ ಹರಡಿದವರ ಮೇಲೆ ಉತ್ತರ ಪ್ರದೇಶ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.

ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶಿಫಾರಸು ಮಾಡಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.

ಒಂದು ಸಮುದಾಯ ಅಥವಾ ಜಾತಿ ವಿರುದ್ಧ ಅವಹೇಳನ ಮಾಡುವುದು, ಕೋಮು ಸೌಹಾರ್ದ ಕದಡಲು ಯತ್ನ ಆರೋಪದ ಮೇಲೆ ಪ್ರೆಕರಣ ದಾಖಲಿಸಿಕೊಳ್ಳಲಾಗಿದೆ.  ಸುಳ್ಳು ಸುದ್ದಿ ಹರಡಿದ ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ.

ಹತ್ರಾಸ್ ಸಂತ್ರಸ್ತೆ ಮನೆಗೆ ಭೇಟಿ ನೀಡಿದ್ದ ಭೀಮ ಸೇನೆ ಮುಖ್ಯಸ್ಥನ ಮೇಲೆ FIR

ಇನ್ನೊಂದು ಕಡೆ  ಪ್ರತಿಪಕ್ಷಗಳ ಮೇಲೆ ದಾಳಿ ಮಾಡಿರುವ  ಸಿಎಂ  ಆದಿತ್ಯನಾತ್, ವಲಯ ಮತ್ತು ಬೂತ್ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆ ನಡೆಸುತ್ತಿದ್ದಾಗ ವಿಪಕ್ಷಗಳು ಕೋಮು ಸೌಹಾರ್ದ ಕದಡಲು ಯತ್ನ ಮಾಡಿವೆ ಎಂದು ಆರೋಪಿಸಿದ್ದಾರೆ.  ಬಿಜೆಪಿ ಮಾಡಿರುವ ಅಭಿವೃದ್ಧಿ ಕೆಲಸವನ್ನು ಅವರಿಂದ ಸಹಿಸಿಕೊಳ್ಳಲು ಸಾಧ್ಯವಾಗದೆ ಇಂಥ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.

ಹತ್ರಾಸ್ ಪ್ರಕರಣದ ತನಿಖೆ ನಡೆಸುತ್ತಿರುವ ಮೂವರು ಸದಸ್ಯರ ವಿಶೇಷ ತನಿಖಾ ತಂಡವು ದಲಿತ ಸಂತ್ರಸ್ತೆಯ ಕುಟುಂಬ ಸದಸ್ಯರ ಹೇಳಿಕೆ ಪಡೆದುಕೊಂಡಿದೆ. ಸಂತ್ರಸ್ತೆಯ ತಂದೆಯ ಆರೋಗ್ಯವನ್ನು ವಿಶೇಷ ವೈದ್ಯಕೀಯ  ತಂಡ ಗಮನಿಸಿದೆ.  ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯ ಲೋಪ ಆರೋಪದಡಿ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.