ನವದೆಹಲಿ (ಮಾ. 02): ಸಂಸತ್ತಿನ ಬಜೆಟ್‌ ಅಧಿವೇಶನದ 2ನೇ ಚರಣ ಸೋಮವಾರದಿಂದ ಆರಂಭವಾಗಲಿದೆ. ಏಪ್ರಿಲ್‌ 3ರವರೆಗೆ ನಡೆಯಲಿರುವ ಈ ಅಧಿವೇಶನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ದಿಲ್ಲಿಯಲ್ಲಿ ಸಂಭವಿಸಿದ ಕಂಡು ಕೇಳರಿಯದ ಹಿಂಸಾಚಾರದ ಬಗ್ಗೆ ಭಾರೀ ಕೋಲಾಹಲ ಏರ್ಪಡುವ ಸಾಧ್ಯತೆ ಇದೆ.

ಈ ವಿಷಯವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಸರ್ಕಾರದ ಮೇಲೆ ವಾಗ್ದಾಳಿ ನಡೆಸಲು ನಿರ್ಧರಿಸಿವೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜೀನಾಮೆಗೆ ಸದನದಲ್ಲೇ ಅವು ಆಗ್ರಹಿಸುವ ಸಾಧ್ಯತೆ ಇದೆ. ಹೀಗಾಗಿ ಕಲಾಪ ಕಾವೇರುವ ಅಂದಾಜಿದೆ.

ದಿಲ್ಲಿ ಹಿಂಸೆ: 25000 ಕೋಟಿ ನಷ್ಟ; ಸಾವಿನ ಸಂಖ್ಯೆ 46 ಕ್ಕೆ ಏರಿಕೆ

ಆದರೆ, ‘ಪ್ರತಿಪಕ್ಷಗಳು ಇಂತಹ ಘಟನೆ ಮರುಕಳಿಸಬಾರದು ಎಂಬುದಕ್ಕೆ ಸಲಹೆ ನೀಡಲಿ. ಅದು ಬಿಟ್ಟು ರಾಜಕೀಯ ಮಾಡಬಾರದು’ ಎಂದು ಕೇಂದ್ರ ಸಂಸದೀಯ ಖಾತೆ ರಾಜ್ಯ ಸಚಿವ ಅರ್ಜುನ್‌ ರಾಮ್‌ ಮೇಘ್ವಾಲ್‌ ಆಗ್ರಹಿಸಿದ್ದಾರೆ.

ಸರ್ಕಾರವು ಗರ್ಭಪಾತ ಮಸೂದೆ, ಬಾಡಿಗೆ ತಾಯ್ತನ ಮಸೂದೆ ಸೇರಿ ಹಲವು ಮಹತ್ವದ ವಿಧೇಯಕ ಮಂಡಿಸಲು ಸಿದ್ಧತೆ ಮಾಡಿಕೊಂಡಿದೆ. ಬಜೆಟ್‌ ಕೂಡ ಪಾಸು ಮಾಡಬೇಕಿದೆ.