Facebook Like Turns Deadly: ತನ್ನ ಅಜ್ಜನ ಸಾವಿಗೆ ಸಂತಾಪ ಸೂಚಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದ ಯುವಕನಿಗೆ, ಪರಿಚಿತನೊಬ್ಬ ನಗುವ ಇಮೋಜಿ ಹಾಕಿ ಪ್ರತಿಕ್ರಿಯಿಸಿದ್ದಾನೆ. ಇದನ್ನು ಪ್ರಶ್ನಿಸಿದ್ದಕ್ಕೆ ಕುಪಿತಗೊಂಡ ಆರೋಪಿ, ಪೋಸ್ಟ್ ಹಾಕಿದ್ದ ಯುವಕನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

ತಾತನ ಸಾವಿಗೆ ಸಂತಾಪದ ಪೋಸ್ಟ್ ಹಾಕಿದ್ದ ಮೊಮ್ಮಗ

ಸೋಶಿಯಲ್ ಮೀಡಿಯಾದಲ್ಲಿ ಕೆಲವರಿಗೆ ಎಲ್ಲಿ ಹೇಗೆ ರಿಯಾಕ್ಟ್ ಮಾಡ್ಬೇಕು ಅಂತ ಗೊತ್ತಿರಲ್ಲ, ಕೆಲವರಿಗೆ ಇಮೋಜಿಯ ಅರ್ಥವೇ ಗೊತ್ತಿರಲ್ಲ, ಸಾವಿನ ಘಟೆನಗೂ ಲೈಕ್ ಬಟನ್ ಒತ್ತುತ್ತಾರೆ ನಗುವ ಇಮೋಜಿ ಮೂಲಕ ರಿಯಾಕ್ಟ್ ಮಾಡ್ತಾರೆ. ಉದ್ದೇಶಪೂರ್ವಕವಾಗಿ ಹೀಗೆ ಮಾಡ್ತಾರೋ ಅಥವಾ ಅದರ ಅರ್ಥ ತಿಳಿಯದೇ ಮಾಡ್ತರೋ ಅಥವಾ ಎಲ್ಲ ಪೋಸ್ಟ್‌ಗಳಂತೆ ಇದು ಒಂದು ಪೋಸ್ಟ್ ಎಂಬ ಭಾವನೆಯಲ್ಲಿ ರಿಯಾಕ್ಟ್ ಮಾಡ್ತಾರೋ ಗೊತ್ತಿಲ್ಲ, ಆದರೆ ಸಾವು, ದುಃಖ ಸೂಚಿಸುವ ಪೋಸ್ಟ್‌ಗಳಿಗೆ ಒತ್ತುವ ಲೈಕ್‌ಗಳು ಒಂದು ರೀತಿಯ ಅಭಾಸವೆನಿಸುತ್ತದೆ. ಇದು ಪೋಸ್ಟ್ ಹಾಕಿದವರಿಗೂ ಎಂಥಹಾ ಜನರಿರ್ತಾರಾಪ್ಪ ಸಾವಿನ ಪೋಸ್ಟ್‌ಗೂ ಲೈಕ್ ಒತ್ತಿದ್ದಾರೆ ಎಂದು ಯೋಚಿಸುವಂತೆ ಮಾಡುತ್ತದೆ. ಕೆಲವರು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಅದೇ ರೀತಿ ಇಲ್ಲೊಬ್ಬ ಯುವಕ ಕೆಲ ತಿಂಗಳ ಹಿಂದೆ ತೀರಿಕೊಂಡಿದ್ದ ತನ್ನ ಪ್ರೀತಿಯ ಅಜ್ಜನನ್ನು ನೆನೆಯುತ್ತಾ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಯಾರೋ ಪರಿಚಿತರ ಕಿಡಿಗೇಡಿಗಳು ಗೊತ್ತಿದ್ದೋ ಗೊತ್ತಿಲ್ಲದೆಯೋ ಇದಕ್ಕೆ ನಗುವ ಇಮೋಜಿಯ ಮೂಲಕ ರಿಯಾಕ್ಟ್ ಮಾಡಿದ್ದಾರೆ. ಇದರಿಂದ ಅಸಮಾಧಾನಗೊಂಡ ಆ ಹುಡುಗ ಹೀಗೆ ಸಾವಿಗೂ ನಗುವ ಇಮೋಜಿ ಮೂಲಕ ಪ್ರತಿಕ್ರಿಯಿಸಿದ ಯುವಕನನ್ನು ಪ್ರಶ್ನೆ ಮಾಡಿದ್ದಾರೆ ಅಷ್ಟೇ? ಆದರೆ ಇದರಿಂದ ಕುಪಿತಗೊಂಡ ಆ ಯುವಕರು ತಾತನಿಗೆ ಎಫ್‌ಬಿ ಪೋಸ್ಟ್ ಹಾಕಿದ ಮೊಮ್ಮಗನನ್ನು ಯಮಲೋಕಕ್ಕೆ ಅಟ್ಟಿದ್ದಾರೆ. ಇಂತಹ ಭಯಾನಕ ಹಾಗೂ ಆಘಾತಕಾರಿ ಘಟನೆ ನಡೆದಿರುವುದು ಗುಜರಾತ್‌ನ ರಾಜ್‌ಕೋಟ್‌ನಲ್ಲಿ. ಕೊಲೆ ಮಾಡಿದವರು ಕೊಲೆಯಾದವರು ಎಲ್ಲರೂ ಬಿಹಾರಿಗಳೇ ಆಗಿದ್ದಾರೆ..

ಸಂತಾಪದ ಪೋಸ್ಟ್‌ಗೆ ನಗುವಿನ ಇಮೋಜಿ ಹಾಕಿದ ದುರುಳರು

20 ವರ್ಷದ ಪ್ರಿನ್ಸ್ ಕುಮಾರ್ ಕೊಲೆಯಾದವರು. ಮೂಲತಃ ಬಿಹಾರದವರಾಗಿದ್ದ ಇವರು, ತಮ್ಮ ಮೂವರು ಸೋದರ ಸಂಬಂಧಿಗಳೊಂದಿಗೆ ಗುಜರಾತ್‌ನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ನಾಲ್ಕು ತಿಂಗಳ ಹಿಂದೆ ಇವರ ಅಜ್ಜ ರೂಪನಾರಾಯಣ್ ಭಿಂದ್ ಅವರು ತೀರಿಕೊಂಡಿದ್ದು, ಅವರ ನೆನಪಲ್ಲಿ ಪ್ರಿನ್ಸ್‌ಕುಮಾರ್ ತಮ್ಮ ಫೇಸ್‌ಬುಕ್‌ನಲ್ಲಿ ಒಂದು ಸ್ಟೋರಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್‌ಗೆ ಪ್ರಿನ್ಸ್‌ನ ಪರಿಚಯಸ್ಥ ಬಿಪಿನ್ ಕುಮಾರ್ ರಾಜಿಂದರ್ ಗೊಂಡ್ ನಗುವ ಎಮೋಜಿಯೊಂದಿಗೆ ಪ್ರತಿಕ್ರಿಯಿಸಿದರು, ಇದು ಇಬ್ಬರ ನಡುವೆ ಜಗಳಕ್ಕೆ ಕಾರಣವಾಗಿದೆ. ನಂತರ ಇದೇ ವಿಚಾರಕ್ಕೆ ಈ ತಿಂಗಳ ಆರಂಭದಲ್ಲೇ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ನಂತರ ಅದು ಹೊಡೆದಾಟವಾಗಿ ಬದಲಾಗಿತ್ತು.

ಪ್ರಶ್ನಿಸಿದ್ದಕ್ಕೆ ನಡೆದೇ ಹೋಯ್ತು ಕೊಲೆ

ಘಟನೆ ಸಂಬಂಧ ದಾಖಲಾದ ಎಫ್‌ಐಆರ್ ಪ್ರಕಾರ, ಸೆಪ್ಟೆಂಬರ್ 12 ರ ರಾತ್ರಿ, ಸುಮಾರು 12:30 ರ ಸುಮಾರಿಗೆ, ಪ್ರಿನ್ಸ್ ತಾನು ಕೆಲಸ ಮಾಡುತ್ತಿದ್ದ ಕಾರ್ಖಾನೆಯ ಹೊರಗೆ ಆಟೋ ರಿಕ್ಷಾದಲ್ಲಿ ಕುಳಿತಿದ್ದಾಗ, ಬಿಪಿನ್ ಆತನ ಕಡೆಗೆ ನಡೆದುಕೊಂಡು ಬಂದಿದ್ದಾನೆ. ಈ ವೇಳೆ ಪ್ರಿನ್ಸ್ ಕಾರ್ಖಾನೆಯ ಒಳಗೆ ಹಿಂತಿರುಗಲು ನೋಡಿದಾ ಮತ್ತೊಬ್ಬ ಆರೋಪಿ ಬ್ರಿಜೇಶ್ ಗೊಂಡ್ ಆತನನ್ನು ದಾರಿಯಲ್ಲಿ ಅಡ್ಡಗಟ್ಟಿ ಕೊಲ್ಲುವುದಾಗಿ ಬೆದರಿಸಿದ್ದಾನೆ. ಅಷ್ಟರಲ್ಲಿ ಬಿಪಿನ್ ಬಂದು ಪ್ರಿನ್ಸ್‌ ಕುಮಾರ್‌ಗೆ ಚಾಕುವಿನಿಂದ ಇರಿದಿದ್ದಾನೆ. ಪ್ರಿನ್ಸ್‌ನ ಕಿರುಚಾಟ ಕೇಳಿ, ಅವನ ಸಹೋದ್ಯೋಗಿಗಳು ಅವನ ಸಹಾಯಕ್ಕೆ ಧಾವಿಸಿ ಬಂದು ಅವನನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಮತ್ತು ನಂತರ ರಾಜ್‌ಕೋಟ್ ಸಿವಿಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಚೂರಿ ಇರಿತದಿಂದಾಗಿ ಪ್ರಿನ್ಸ್‌ ಒಂದೂವರೆ ಇಂಚಿನಿಂದ ಎರಡೂವರೆ ಇಂಚು ಆಳದ ಗಾಯವಾಗಿತ್ತು ಆಸ್ಪತ್ರೆಗೆ ಸಾಗಿಸುವ ಸಮಯದಲ್ಲಿ ಪ್ರಜ್ಞೆ ಹೊಂದಿದ್ದ ಆತ ಸಾಯುವ ಮೊದಲು ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಆರಂಭಿಕ ವೈದ್ಯಕೀಯ ವರದಿಯಲ್ಲಿ ಆತನ ಗಾಯವನ್ನು ಗಂಭೀರ ಎಂದು ಪರಿಗಣಿಸಿರಲಿಲ್ಲ. ಆದರೆ ನಾಲ್ಕು ದಿನಗಳ ನಂತರ, ಅವರ ಸ್ಥಿತಿ ಹದಗೆಟ್ಟಿದ್ದರಿಂದ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಸೆಪ್ಟೆಂಬರ್ 22ರ ನಸುಕಿನ ಜಾವ ಪ್ರಿನ್ಸ್ ನಿಧನರಾಗಿದ್ದು, ನಂತರ ಆರೋಪಿಗಳ ವಿರುದ್ಧ ಪ್ರಿನ್ಸ್ ಸಾವಿಗೂ ಮೊದಲು ನೀಡಿದ್ದ ಹೇಳಿಕೆ ಆಧರಿಸಿ ಕೊಲೆ ಪ್ರಕರಣ ದಾಖಲಿಸಲಾಗಿದೆ.

ಘಟನೆಯ ಬಳಿಕ ಪ್ರಮುಖ ಆರೋಪಿ ಬಿಪಿನ್‌ನನ್ನು ಸೋಮವಾರ ರಾತ್ರಿ ಬಂಧಿಸಿ ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಎರಡನೇ ಆರೋಪಿ ಬ್ರಿಜೇಶ್ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ನೀಟ್ ಪರೀಕ್ಷೆಯಲ್ಲಿ 99.99 ಅಂಕ: ಡಾಕ್ಟರ್ ಆಗೋಕೆ ಇಷ್ಟ ಇಲ್ಲ ಎಂದು ಸಾವಿಗೆ ಶರಣಾದ ವಿದ್ಯಾರ್ಥಿ

ಇದನ್ನೂ ಓದಿ: ಪೋಷಕರು ಬೇಡವೆಂದು ತಿಪ್ಪೆಗೆಸೆದ ಮಗು ಈಗ ಫೇಮಸ್ ಇನ್‌ಫ್ಲುಯೆನ್ಸರ್

ಇದನ್ನೂ ಓದಿ: ಲಡಾಖ್‌ನ ಲೇಹ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ: ಬಿಜೆಪಿ ಕಚೇರಿ, ಪೊಲೀಸ್ ವಾಹನಕ್ಕೆ ಬೆಂಕಿ

ಇದನ್ನೂ ಓದಿ: ಹಾವು ಹಿಡಿಯಲು ಬಂದವನನ್ನೇ ಬಂಧಿಯಾಗಿಸಿದ ಹೆಬ್ಬಾವು