Asianet Suvarna News Asianet Suvarna News

ಎಲ್ಲೋರ ಗುಹೆಗಳ ಸ್ಥಿರತೆಯ ರಹಸ್ಯ ಅನ್ವೇಷಣೆ: ಪರಿಸರ ಸ್ನೇಹಿ ಮನೆಗಳ ನಿರ್ಮಾಣಕ್ಕೆ ಪೂರಕ

ಪರಿಸರ ಸ್ನೇಹಿ ಮನೆಗಳು ಇತ್ತೀಚೆಗೆ ಹೆಚ್ಚಿನ ಪ್ರಾಧಾನ್ಯತೆ ಗಳಿಸಿಕೊಳ್ಳುತ್ತಿದ್ದು, ಅವುಗಳ ನಿರ್ಮಾಣದಲ್ಲಿ ಬಿದಿರು, ಒಣಹುಲ್ಲಿನ ಮೂಟೆಗಳು, ಮರುಬಳಕೆ ಮಾಡಲಾದ ಪ್ಲಾಸ್ಟಿಕ್, ಕಾರ್ಕ್, ಮರುಬಳಕೆಯ ಮರ, ಹಾಗೂ ಭೂಮಿಯನ್ನು ಬಳಸಲಾಗುತ್ತದೆ.

 

 

Elora Caves Sustainability is Secret Discovery and A Complement to Eco Friendly Home Construction akb
Author
First Published Mar 13, 2023, 5:32 PM IST


ಲೇಖಕರು: ಗಿರೀಶ್ ಲಿಂಗಣ್ಣ,  ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಪರಿಸರ ಸ್ನೇಹಿ ಮನೆಗಳು ಇತ್ತೀಚೆಗೆ ಹೆಚ್ಚಿನ ಪ್ರಾಧಾನ್ಯತೆ ಗಳಿಸಿಕೊಳ್ಳುತ್ತಿದ್ದು, ಅವುಗಳ ನಿರ್ಮಾಣದಲ್ಲಿ ಬಿದಿರು, ಒಣಹುಲ್ಲಿನ ಮೂಟೆಗಳು, ಮರುಬಳಕೆ ಮಾಡಲಾದ ಪ್ಲಾಸ್ಟಿಕ್, ಕಾರ್ಕ್, ಮರುಬಳಕೆಯ ಮರ, ಹಾಗೂ ಭೂಮಿಯನ್ನು ಬಳಸಲಾಗುತ್ತದೆ. ಇಂತಹ ಮನೆಗಳು ರಾಜಸ್ಥಾನದ ಮರುಭೂಮಿಗಳಲ್ಲಿರುವ ಮಣ್ಣಿನ ಮನೆಗಳಿಂದ, ಸಂಪೂರ್ಣವಾಗಿ ಹಳೆಯ ಬಿಯರ್ ಬಾಟಲಿಗಳಿಂದ ನಿರ್ಮಿಸಿರುವ ಮನೆಗಳ ತನಕ ವ್ಯಾಪಿಸಿವೆ. ಕ್ಯಾನಬಿಸ್ ಅಥವಾ ಕಾಮನ್ ಹೆಂಪ್ ಕ್ಯಾನಬಿಸ್ ಸತಿವ ಸಸ್ಯದ ವಿಚಾರವನ್ನು ಸತತವಾಗಿ ನಿರ್ಲಕ್ಷಿಸುತ್ತಾ ಬರಲಾಗಿದೆ. ಆದರೆ, ಇನ್ನೂ ಅದೇ ರೀತಿ ನಿರ್ಲಕ್ಷ್ಯ ಮುಂದುವರಿಸಲು ಸಾಧ್ಯವಿಲ್ಲ.

ಒಂದು ವಿಸ್ಮಯಕಾರಿ ಅನ್ವೇಷಣೆ

ಮುಂಬೈಯ (Mumbai) ಮೂರ್ವದಲ್ಲಿ, ಹತ್ತು ಕಿಲೋಮೀಟರ್ ದೂರದಲ್ಲಿರುವ ಎಲ್ಲೋರ (Ellora) ಗುಹೆಗಳು ಕಲ್ಲನ್ನು ಕೊರೆದು ನಿರ್ಮಿಸಿರುವ ಗುಹೆಗಳನ್ನು ಹೊಂದಿವೆ. ಅವುಗಳಲ್ಲಿ ಸಾಕಷ್ಟು ಕಲಾಕೃತಿಗಳಿದ್ದು, ಕ್ರಿಸ್ತಶಕ 1,000 ಇಸವಿಯ ಆಸುಪಾಸಿನವಾಗಿವೆ. ಪ್ರವಾಸಿಗರು ಅಲ್ಲಿಗೆ ಭೇಟಿ ನೀಡಿ, ತಣ್ಣನೆಯ ವಾತಾವರಣವನ್ನು ಅನುಭವಿಸಿ, ದೂರದಲ್ಲಿ ನೀರು ತೊಟ್ಟಿಕ್ಕುವ ಸದ್ದನ್ನು ಹೇಳಬಹುದಾಗಿದೆ. ಇಂತಹ ನಿರ್ಮಾಣಗಳು ಶತಮಾನಗಳ ಕಾಲ ಉಳಿದಿರುವುದೇ ಆಶ್ಚರ್ಯದ ವಿಚಾರವಾಗಿದೆ.

Business Woman : ಮನೆಯಲ್ಲೇ ಸೆಣಬಿನ ಚೀಲ ತಯಾರಿಸಿ ಯಶಸ್ವಿಯಾದ ಮಹಿಳೆ

ಹಲವು ವರ್ಷಗಳಿಂದಲೂ, ಪುರಾತತ್ತ್ವ ಶಾಸ್ತ್ರಜ್ಞರು (Archaeologist) ಎಲ್ಲೋರ ಗುಹೆಗಳ ಕುರಿತು ಕುತೂಹಲ ಹೊಂದಿದ್ದರು. ಅದೊಂದು ಯುನೆಸ್ಕೋ ವಿಶ್ವ ಪಾರಂಪರಿಕ ತಾಣವೂ ಹೌದು. ತಜ್ಞರು ಈ ಗುಹೆಗಳು ಹೇಗೆ ಇಷ್ಟೊಂದು ಚೆನ್ನಾಗಿ ಸಂರಕ್ಷಿಸಲ್ಪಟ್ಟಿವೆ ಎಂದು ಆಶ್ಚರ್ಯಚಕಿತರಾಗಿ, ಇದರ ಅಡಿಪಾಯದಲ್ಲಿ ಏನಾದರೂ ವಿಶಿಷ್ಟ ಶೈಲಿಯ ಕಲ್ಲುಗಳನ್ನು ಬಳಸಿರಬಹುದೇ? ಅಥವಾ ಪುರಾತನ ವಾಸ್ತುಶಿಲ್ಪದ ತತ್ವಗಳನ್ನು ಅನುಸರಿಸಿರಬಹುದೇ ಎಂದು ಅನುಮಾನ ಹೊಂದಿದ್ದರು.

2016ರ ಒಂದು ಅಧ್ಯಯನದ ಪ್ರಕಾರ, ಸೆಣಬು, ಮಣ್ಣು ಮತ್ತು ಸುಣ್ಣದ ಹೊದಿಕೆಗಳ ಮಿಶ್ರಣ ಈ 1,500 ವರ್ಷಗಳಷ್ಟು ಹಳೆಯ ಗುಹೆಗಳು ಹಾಳಾಗದಂತೆ ಕಾಪಾಡಿಕೊಂಡು ಬಂದಿದೆ.

ಆರ್ಕಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ (ಎಎಸ್ಐ) ಸಂಸ್ಥೆಯ ಪಶ್ಚಿಮ ಪ್ರಾಂತ್ಯದ ವಿಜ್ಞಾನ ವಿಭಾಗದ ಸೂಪರಿಂಟೆಂಡೆಂಟ್ ಆರ್ಕಿಯಾಲಜಿಕಲ್ ಕೆಮಿಸ್ಟ್ ಆಗಿದ್ದ ರಾಜ್‌ದಿಯೋ ಸಿಂಗ್ ಅವರು ಮತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರ್ ವಿಶ್ವವಿದ್ಯಾಲಯ, ಮರಾಠಾವಾಡದ ಸಸ್ಯಶಾಸ್ತ್ರ ಉಪನ್ಯಾಸಕರಾದ ಮಿಲಿಂದ್ ಎಂ ಸರ್ದೇಸಾಯಿ ಎಲ್ಲೋರ ಗುಹೆಗಳ ಬಾಳಿಕೆ ಮತ್ತು ಶಕ್ತಿಯ ಕುರಿತು ಒಂದು ಅಧ್ಯಯನ ನಡೆಸಿದ್ದರು.

Kodagu: ನರಿಮಲೆ ಬೆಟ್ಟ ಏರಿ ಪರಿಸರ ಅಧ್ಯಯನ ಮಾಡಿದ ವಿದ್ಯಾರ್ಥಿಗಳು

ಅವರ ಸಂಶೋಧನೆಯ ಪ್ರಕಾರ, 6ನೇ ಶತಮಾನದಲ್ಲಿ ನಿರ್ಮಿಸಲಾದ ಈ ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಇನ್ನೂ ಗಟ್ಟಿಯಾಗಿರುವುದಕ್ಕೆ, ಅದರಲ್ಲಿನ ಕಲೆಗಳು ಉಳಿದಿರುವುದಕ್ಕೆ ಸೆಣಬಿನ ಬಳಕೆಯೂ ಪ್ರಮುಖ ಕಾರಣ ಎನ್ನಲಾಗಿದೆ. ಈ ಗುಹೆಗಳು ಅತ್ಯುತ್ತಮವಾದ ಕಲ್ಲಿನಿಂದ ಕತ್ತರಿಸಿದ ವಾಸ್ತುಶಿಲ್ಪವನ್ನು ಹೊಂದಿದ್ದು, ನಿರ್ಮಾಣ ಮಾಡಿದವರ ಸೃಜನಶೀಲತೆ ಮತ್ತು ಕಲಾ ಕೌಶಲ್ಯವನ್ನು ಪ್ರದರ್ಶಿಸುತ್ತವೆ.

ತಮ್ಮ ಸಂಶೋಧನೆಯಲ್ಲಿ ಉತ್ತರಗಳನ್ನು ಕಂಡುಕೊಳ್ಳಲು ಅವರಿಬ್ಬರು ವಿವಿಧ ತಂತ್ರಜ್ಞಾನಗಳಾದ ಇಲೆಕ್ಟ್ರಾನ್ ಮೈಕ್ರೋಸ್ಕೋಪ್ ಸ್ಕ್ಯಾನಿಂಗ್, ಫಾರಿಯರ್ ಟ್ರಾನ್ಸ್‌ಫಾರ್ಮ್, ಇನ್‌ಫ್ರಾರೆಡ್ ಸ್ಪೆಕ್ಟ್ರೋಸ್ಕೊಪಿ, ಹಾಗೂ ಸ್ಟೀರಿಯೋ ಮೈಕ್ರೋಸ್ಕೊಪಿಕ್ ಇನ್ವೆಸ್ಟಿಗೇಶನ್ ತಂತ್ರಜ್ಞಾನಗಳನ್ನು ಬಳಸಿಕೊಂಡರು. ಅವರು ಔರಂಗಾಬಾದಿನ ಜಲ್ನಾ ಮತ್ತು ದೆಹಲಿಯಿಂದ ಕ್ಯಾನಬಿಸ್ ಮಾದರಿಗಳನ್ನು ಸಂಗ್ರಹಿಸಿ, ಅವುಗಳನ್ನು ಎಲ್ಲೋರ ಗುಹೆಗಳಲ್ಲಿ ಪಡೆದ ಮಾದರಿಗಳೊಡನೆ ಹೋಲಿಸಿ, ನಿರ್ಮಾಣ ಕಾರ್ಯದಲ್ಲಿ ಸೆಣಬಿನ ಬಳಕೆಯನ್ನು ಸಾಬೀತುಪಡಿಸಿದರು.

ಈ ಅಧ್ಯಯನದ ಫಲಿತಾಂಶದ ಪ್ರಕಾರ, ಎಲ್ಲೋರ ಗುಹೆಯಲ್ಲಿ ಪಡೆದುಕೊಂಡ ಮಾದರಿಯಲ್ಲಿ 10% ಕ್ಯಾನಬಿಸ್ ಸತಿವಾ ಮಣ್ಣು ಮತ್ತು ಸುಣ್ಣದೊಡನೆ ಮಿಶ್ರವಾಗಿದ್ದು ಕಂಡುಬಂತು. ಈ ಕಾರಣದಿಂದಾಗಿ ಎಲ್ಲೋರ ಗುಹೆಗಳಲ್ಲಿ ಯಾವುದೇ ಕೀಟಬಾಧೆ ಕಂಡುಬಂದಿಲ್ಲ.

ಈ ಫಲಿತಾಂಶ ದೇವಾಲಯ ಮತ್ತು ಬೌದ್ಧ ವಿಹಾರಗಳನ್ನು ಒಳಗೊಂಡಿರುವ ಎಲ್ಲೋರದಲ್ಲಿರುವ 34 ಗುಹೆಗಳ ಗುಂಪು ಇನ್ನೂ ಉತ್ತಮ ಹಂತದಲ್ಲಿ ಯಾಕಿವೆ ಎಂಬುದನ್ನು ಸಾಬೀತುಪಡಿಸುತ್ತದೆ. ಆದರೆ ಎಲ್ಲೋರಾಗೆ ಸನಿಹದಲ್ಲಿರುವ ಅಜಂತಾ ಗುಹೆಗಳಲ್ಲಿ ಮಾತ್ರ ಕೀಟಬಾಧೆ ತಲೆದೋರಿ, ವಿರೂಪಗೊಂಡಿದೆ.

ಸಂಶೋಧಕರಿಬ್ಬರೂ ಈ ಹೆಂಪ್‌ನ ಯಾವ ಗುಣ ಅದನ್ನು ಅಷ್ಟು ಹೊಂದಿಕೊಳ್ಳುವ ನಿರ್ಮಣಾ ಉತ್ಪನ್ನವಾಗಿಸುತ್ತದೆ ಎಂದು ಕುತೂಹಲಗೊಂಡಿದ್ದರು. ಆದ್ದರಿಂದ ಅವರಿಗೆ ಇದರ ಕುರಿತು ಇನ್ನಷ್ಟು ಆಸಕ್ತಿ ಮೂಡಿತ್ತು.

ಸರ್ದೇಸಾಯಿ ಅವರ ಪ್ರಕಾರ, ಹೆಂಪ್ ನಾರಿನ ದೀರ್ಘಕಾಲದ ಬಾಳ್ವಿಕೆಯ ಗುಣ ಇತರ ನಾರುಗಳ ಗುಣಕ್ಕಿಂತ ಹೆಚ್ಚಾಗಿದೆ. ಕ್ಯಾನಬಿಸ್ ಗಮ್ಮಿನಲ್ಲಿರುವ ಅಂಟಿನ ಗುಣಗಳು ಮಣ್ಣು ಮತ್ತು ಸುಣ್ಣಗಳು ಒಂದಕ್ಕೊಂದು ಗಟ್ಟಿಯಾಗಿ ಹೊಂದಿಕೊಳ್ಳುವಂತೆ ಮಾಡುತ್ತದೆ. ಈ ನಾರಿನ ಪ್ಲಾಸ್ಟರ್ ಬಳಸುವ ಮೂಲಕ ಎಲ್ಲೋರ ಗುಹೆಯ ಸನ್ಯಾಸಿಗಳು ಪ್ರಶಾಂತ ವಾತಾವರಣ ಸೃಷ್ಟಿಸಿದರು. ಈ ನಾರುಗಳು ಉಷ್ಣವನ್ನು ಹೀರಿಕೊಳ್ಳುವ, ಬೆಂಕಿಯನ್ನು ವಿರೋಧಿಸುವ ಹಾಗೂ ವಾತಾವರಣದಲ್ಲಿರುವ 90% ಶಬ್ದಗಳನ್ನು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿವೆ.

ಪ್ರಸ್ತುತ ಗಮನ ಈ ನಾರನ್ನು ನಿರ್ಮಾಣ ಕಾಮಗಾರಿಗಳಲ್ಲಿ ಹೇಗೆ ಬಳಸಿಕೊಳ್ಳಬಹುದು ಎಂಬುದರ ಕುರಿತಾಗಿದೆ. ಆದರೆ ಈ ಕ್ಯಾನಬಿಸ್ ಅನ್ನು ಪ್ರಸ್ತುತ ಸಮಾಜದಲ್ಲಿ ಹೇಗೆ ಕಾನೂನಿಗೆ ಬದ್ಧವಾಗಿ ಬಳಸಿಕೊಳ್ಳಬಹುದು ಎಂಬುದೇ ಪ್ರಶ್ನೆಯಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ, ಎಲ್ಲ ಪ್ರಮುಖ ವಿಚಾರಗಳನ್ನು ಗಮನಕ್ಕೆ ತೆಗೆದುಕೊಳ್ಳಲಾಗಿದೆ.

ಕ್ಯಾನಬಿಸ್ ಮತ್ತು ಸಮಾಜದ ಸಂಬಂಧ ಚರ್ಚೆಯ ವಿಚಾರ

ಹೆಂಪ್ ಮತ್ತು ಮಾರಿಜುವಾನ ಒಂದೇ ಪ್ರಬೇಧದ ಸಸ್ಯಗಳಿಂದ ಲಭಿಸುವುದಾದರೂ, ಅವುಗಳಲ್ಲಿರುವ ಟಿಎಚ್‌ಸಿ ಮಟ್ಟ ಬೇರೆಬೇರೆಯಾಗಿದೆ. ಈ ಟಿಎಚ್‌ಸಿ ಮಟ್ಟವನ್ನು ಸೈಕೋಆಕ್ಟಿವ್ ಘಟಕ ಎಂದು ಕರೆಯಲಾಗುತ್ತದೆ. ಈ ಸೆಣಬು ಕನಿಷ್ಠ ಪ್ರಮಾಣದ ಟಿಎಚ್‌ಸಿ ಮಟ್ಟವನ್ನು ಹೊಂದಿದ್ದರೆ, ಮಾರಿಜುವಾನ ಅಧಿಕ ಪ್ರಮಾಣದಲ್ಲಿ ಹೊಂದಿರುತ್ತದೆ.

ನಾರ್ಕೋಟಿಕ್ ಡ್ರಗ್ಸ್ ಆ್ಯಂಡ್ ಸೈಕೋಟ್ರೋಪಿಕ್ ಸಬ್‌ಸ್ಟಾನ್ಸಸ್ (ಎನ್‌ಡಿಪಿಎಸ್) ಕಾಯಿದೆ ಮಾರಿಜುವಾನದ ಬೆಳೆ, ಸಾಗಾಣಿಕೆ ಮತ್ತು ಉಪಯೋಗಿಸುವುದನ್ನು ನಿಷೇಧಿಸಿದೆ. ಈ ಕಾನೂನನ್ನು ಉಲ್ಲಂಘಿಸುವವರು ತೀವ್ರ ಕಾನೂನು ಕ್ರಮಗಳಿಗೆ ಗುರಿಯಾಗಬೇಕಾಗುತ್ತದೆ.

ಆದರೆ ಭಾರತದಲ್ಲಿ ಉತ್ತರಾಖಂಡ ರಾಜ್ಯ ಔದ್ಯಮಿಕ ಉದ್ದೇಶಗಳಿಗೆ ಲಾಭದಾಯಕ ಹೆಂಪ್ ಬೆಳೆಯನ್ನು ಅಧಿಕೃತಗೊಳಿಸಿದೆ.

ಭಾರತದಲ್ಲಿ ಕ್ಯಾನಬಿಸ್ ಬೆಳೆ ಮತ್ತು ವ್ಯಾಪಾರವನ್ನು ಕಾನೂನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತದೆ. ಪ್ರಸ್ತುತ ಇರುವ ನಿಯಮ ನಿಬಂಧನೆಗಳ ಪ್ರಕಾರ, ಸಸ್ಯದ ಎಲೆಯಿಂದ ಸಂಗ್ರಹಿಸಲಾದ ಕ್ಯಾನಬಿಸ್‌ನಲ್ಲಿ 0.3%ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಟಿಎಚ್‌ಸಿ ಇಲ್ಲದಿದ್ದರೆ ಅದಕ್ಕೆ ಕಾನೂನಿನ ಮಾನ್ಯತೆಯಿದೆ. ಅದನ್ನು ಸೂಕ್ತವಾಗಿ ಮಾರಾಟ ನಡೆಸಬಹುದು.

ವೈದ್ಯಕೀಯ ಮತ್ತು ಪೌಷ್ಟಿಕ ಉದ್ಯಮ ಹೆಂಪ್ ಬೀಜಗಳನ್ನು ಪ್ರಮುಖವಾಗಿ ಪರಿಗಣಿಸುತ್ತದೆ. ಅದಕ್ಕೆ ಈ ಬೀಜಗಳ ಹಲವಾರು ಪ್ರಯೋಜನಗಳು ಕಾರಣವಾಗಿವೆ.

ಆದರೆ ನಿರ್ಮಾಣ ಉದ್ಯಮದಲ್ಲಿ ಹೆಂಪ್ ಬಳಕೆಯ ಸುತ್ತ ಹಲವು ಅನಿಶ್ಚಿತತೆಗಳಿವೆ.

ಹಲವು ಪ್ರಕರಣಗಳನ್ನು ಎನ್‌ಡಿಪಿಎಸ್ ಕಾಯ್ದೆಯಡಿ ವಿಚಾರಣೆ ನಡೆಸಿರುವ ಅನುಭವ ಹೊಂದಿರುವ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಂದ್ರ ಮುಗ್ದಿಯಾ ಅವರು ಒಂದು ವೇಳೆ ಹೆಂಪ್ ಅನ್ನು ನಿರ್ಮಾಣ ಕಾಮಗಾರಿಗಳಲ್ಲಿ ಬಳಸಲು ಆರಂಭವಾದರೆ ಅದು ಖಂಡಿತವಾಗಿಯೂ ದುರುಪಯೋಗಕ್ಕೆ ಒಳಗಾಗುತ್ತದೆ. ಆಗ ಸರ್ಕಾರ 1985ರ ಕಾನೂನಿಗೆ ತಿದ್ದುಪಡಿ ತರಬೇಕಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಮುಗ್ದಿಯಾ ಅವರು ನಿರ್ಮಾಣ ಕಾಮಗಾರಿಗಳಲ್ಲಿ ಹೆಂಪ್ ಬಳಕೆಗೆ ಅನುಮತಿ ನೀಡಲು ಪ್ರತ್ಯೇಕ ವಿಭಾಗವನ್ನು ಆರಂಭಿಸಬೇಕು ಎನ್ನುತ್ತಾರೆ.

ಹೆಂಪ್ ಅನ್ನು ನಿರ್ಮಾಣ ಕಾಮಗಾರಿಗಳಲ್ಲಿ ಉತ್ಪನ್ನವಾಗಿ ಬಳಸಲು ಸಾಧ್ಯವೇ ಎಂದು ಬೇರೆ ದೇಶಗಳಲ್ಲಿ, ಅದರಲ್ಲೂ ಪ್ರಮುಖವಾಗಿ ಇಂಗ್ಲೆಂಡ್‌ನಲ್ಲಿ ಪ್ರಯೋಗಗಳು ನಡೆದಿವೆ.

ದ ಹೆಂಪ್‌ಕ್ರೀಟ್ ಬುಕ್ ಎಂಬ ಪುಸ್ತಕದ ಲೇಖಕರಾದ ವಿಲಿಯಂ ಸ್ಟಾನ್‌ವಿಕ್ಸ್ ಹಾಗೂ ಅಲೆಕ್ಸ್ ಸ್ಪಾರೋ ಅವರು ಹೆಂಪ್‌ಕ್ರೀಟ್‌ನ ಪ್ರಮುಖ ಗುಣಲಕ್ಷಣಗಳನ್ನು ಪಟ್ಟಿಮಾಡಿದ್ದಾರೆ. ಅವರು ಹೆಂಪ್‌ಕ್ರೀಟ್ ಸ್ವತಂತ್ರವಾಗಿ ನಿರ್ಮಾಣ ಕಾರ್ಯ ಕೈಗೊಳ್ಳುವವರಿಗೆ ಮತ್ತು ಸಮುದಾಯ ಗುಂಪುಗಳಾಗಿ ನಿರ್ಮಾಣ ಮಾಡುವವರಿಗೆ ಅತ್ಯಂತ ಉಪಯುಕ್ತ ಎಂದಿದ್ದಾರೆ.

ಮರಗಳು ಮತ್ತು ಹೆಂಪ್ ಎರಡೂ ಇಂಗಾಲವನ್ನು ಹೀರುವ ಗುಣಗಳನ್ನು ಹೊಂದಿವೆ. ಆದರೆ ಹೆಂಪ್ ಇಂಗಾಲದ ಡೈಆಕ್ಸೈಡ್ ಅನ್ನು ಹೆಚ್ಚು ವೇಗದಲ್ಲಿ ಹೀರಿಕೊಳ್ಳುವ ಸಾಮರ್ಥ್ಯ ಪಡೆದಿದೆ. ಈ ಕಾರಣದಿಂದ ಹೆಂಪ್ ಕೇವಲ 4-5 ತಿಂಗಳ ಅವಧಿಯಲ್ಲಿ 2-4 ಮೀಟರ್ ಎತ್ತರಕ್ಕೆ ಬೆಳೆಯಬಲ್ಲದು.

ಮೂಲಗಳು

ಸೈಂಟಿಸ್ಟ್ಸ್ ಸೇ ದಟ್ ಕ್ಯಾನಬಿಸ್ ಹೆಲ್ಪ್ಡ್ ಪ್ರಿಸರ್ವ್ ಎಲ್ಲೋರ ಕೇವ್ಸ್ ಫ್ರಮ್ ಡೀಕೆ ಫಾರ್ 1,500 ಇಯರ್ಸ್, ಕೃಪಾ ಜೋಸೆಫ್, ಪ್ರಕಟಣೆ ಜೂನ್ 8, 2021.

ಹೆಂಪ್ ಶೀಲ್ಡಿಂಗ್ ಎಲ್ಲೋರ ಕೇವ್ಸ್ ಫ್ರಮ್ ಡೀಕೇ ಫಾರ್ 1,500 ಇಯರ್ಸ್: ಸಯ್ಯದ್ ರಿಜ್ವಾನುಲ್ಲ ಅವರ ಅಧ್ಯಯನ, ಪ್ರಕಟಣೆ, ಮಾರ್ಚ್ 10, 2016.

ವಾಟ್ ಇಸ್ ಹೆಂಪ್ ಆ್ಯಂಡ್ ಇಸ್ ಇಟ್ ಲೀಗಲ್ ಇನ್ ಇಂಡಿಯಾ? ನೋ ಎವ್ರಿಥಿಂಗ್ ಅಬೌಟ್ ಹಿಯರ್. ಫೈನಾನ್ಸಿಯಲ್ ಎಕ್ಸ್‌ಪ್ರೆಸ್‌, ಪ್ರಕಟಣೆ ಡಿಸೆಂಬರ್ 29, 2022.

ಲೈಮ್, ಕ್ಲೇ ಆ್ಯಂಡ್ ಎ ಕ್ಯೂರಿಯಸ್ ಥರ್ಡ್ ಇನ್ಗ್ರೀಡಿಯಂಟ್: ವಾಟ್ ಪ್ರಿಸರ್ವ್ಡ್ ಎಲ್ಲೋರಾ ಕೇವ್ಸ್ ಫಾರ್ 1,500 ಇಯರ್ಸ್? ದ ಬೆಟರ್ ಇಂಡಿಯಾ. ಪ್ರಕಟಣೆ: 12 ಮಾರ್ಚ್ 2023.

Follow Us:
Download App:
  • android
  • ios