ಹೊಳೆನರಸೀಪುರ [ನ.03]:  ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಬಂಧಿಸಲು ಹೋಗಿದ್ದ ಪೊಲೀಸರ ಮೇಲೂ ಹಲ್ಲೆ ನಡೆಸಿ ಪರಾರಿಯಾಗಿದ್ದ ವ್ಯಕ್ತಿಯನ್ನು ಇಲ್ಲಿನ ನಗರ ಠಾಣೆ ಪೊಲೀಸರು ಕಡೆಗೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತಾಲೂಕಿನ ಬಿದರಕ್ಕ ಗ್ರಾಮದ ರೌಡಿಶೀಟರ್‌ ಸುಧಾಕರ(22) ಬಂಧಿತ. ಪಟ್ಟಣದ ನಾಗಲಾಪುರ ಐಟಿಐನಲ್ಲಿ ವ್ಯಾಸಂಗ ಮಾಡುತ್ತಿದ್ದ ಕೊಣನೂರು ಹೋಬಳಿಯ ಬಾಲಕಿಯ ಮೇಲೆ ಅತ್ಯಾಚಾರದ ಆರೋಪ ಎದುರಿಸುತ್ತಿದ್ದಾನೆ.

ಐಟಿಐನಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಯು ಪಟ್ಟಣದ ಬಾಲಕಿಯರ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಓದುತ್ತಿರುವ ಸಂದರ್ಭದಲ್ಲಿ ಪರಿಚಯವಾದ ಸುಧಾಕರ ಎಂಬಾತ ತನ್ನ ಮೇಲೆ ತಾಲೂಕಿನ ಹಳೇಕೋಟೆ ಹೋಬಳಿಯ ಮಾವಿನಕೆರೆ ಬೆಟ್ಟದಲ್ಲಿ ಅತ್ಯಾಚಾರ ನಡೆಸಿದ್ದಾನೆ ಎಂದು ಬಾಲಕಿಯು ಸೆ.27ರಂದು ಇಲ್ಲಿನ ನಗರ ಠಾಣೆಗೆ ದೂರು ನೀಡಿದ್ದಳು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ಸುಧಾಕರನನ್ನು ಬಂಧಿಸಲು ಬಿದರಕ್ಕ ಗ್ರಾಮಕ್ಕೆ ತೆರಳಿದ ಸಂದರ್ಭದಲ್ಲಿ ಇಲ್ಲಿನ ನಗರ ಠಾಣೆ ಪಿಎಸ್ಸೈ ಕುಮಾರ್‌ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಪರಾರಿಯಾಗಿದ್ದ ಆರೋಪಿ ಸುಧಾಕರನನ್ನು ನ.1ರಂದು ಬೆಂಗಳೂರಿನ ಗೋಕಾಕ್‌ ಪಾರ್ಕ್ನ ಬಳಿಯಲ್ಲಿ ಬಂಧಿಸಿ ಡಿವೈಎಸ್ಪಿ ಲಕ್ಷ್ಮೇಗೌಡ ಅವರ ನೇತೃತ್ವದಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಯನ್ನು ಪಿಎಸ್ಸೈ ಕುಮಾರ್‌ ಸಿಬ್ಬಂದಿ ಚಿದಾನಂದ, ಮಂಜೇಗೌಡ, ಸಂಗಮ್‌ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.