Asianet Suvarna News Asianet Suvarna News

ಮತದಾನ ಪ್ರಮಾಣ ಹೆಚ್ಚಾಗಲು ಏನು ಮಾಡಬೇಕು?

ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮತದಾನ ಮುಗಿದಿದೆ. ಇತ್ತೀಚಿನ ದಿನಗಳಲ್ಲಿ ಭಾರತದ ಸಾಕ್ಷರತಾ ಪ್ರಮಾಣ ಏರಿಕೆಯಾಗಿದೆ. ಆದಾಗ್ಯೂ ಮತದಾನ ಪ್ರಮಾಣದಲ್ಲಿ ಮಾತ್ರ ಗಣನೀಯ ಏರಿಕೆ ಕಂಡುಬರುತ್ತಿಲ್ಲ. ಮತದಾನ ಹೆಚ್ಚಾಗಲು ಏನು ಮಾಡಬೇಕು? ಇಲ್ಲಿದೆ ಕ್ರಮಗಳು. 

Steps for how to increase voting percentage
Author
Bengaluru, First Published May 4, 2019, 10:04 AM IST

ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮತದಾನ ಮುಗಿದಿದೆ. ಇತ್ತೀಚಿನ ದಿನಗಳಲ್ಲಿ ಭಾರತದ ಸಾಕ್ಷರತಾ ಪ್ರಮಾಣ ಏರಿಕೆಯಾಗಿದೆ. ಆದಾಗ್ಯೂ ಮತದಾನ ಪ್ರಮಾಣದಲ್ಲಿ ಮಾತ್ರ ಗಣನೀಯ ಏರಿಕೆ ಕಂಡುಬರುತ್ತಿಲ್ಲ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜೆ ತನ್ನ ಅತ್ಯಮೂಲ್ಯ ಹಕ್ಕನ್ನು ಚಲಾಯಿಸಲು ಏಕೆ ಬದ್ಧತೆ ತೋರುತ್ತಿಲ್ಲ ಎಂಬುದರ ಹಿಂದಿನ ಕಾರಣಗಳನ್ನು ವಿಶ್ಲೇಷಿಸಲು ಇದು ಸಕಾಲ.

ಕಡ್ಡಾಯ ಮತದಾನದ ಅಗತ್ಯ

ಇಂದು ಜನರ ಮನಸ್ಥಿತಿ ಹೇಗಿದೆಯೆಂದರೆ, ದ್ವಿಚಕ್ರ ವಾಹನ ಚಾಲಕರು ಶಿರಸ್ತ್ರಾಣ ಧರಿಸದಿರುವ, ಇತರ ವಾಹನಗಳ ಚಾಲಕರು ಮತ್ತು ಸಹ ಪ್ರಯಾಣಿಕರು ಸೀಟ್‌ ಬೆಲ್ಟ… ಹಾಕದಿರುವ, ವಾಹನ ಚಲಾಯಿಸುತ್ತಿರುವಾಗ ಮೊಬೈಲ್‌ನಲ್ಲಿ ಮಾತನಾಡುವ ಪ್ರವೃತ್ತಿ ಅಪಾಯಕಾರಿ ಎಂದು ಗೊತ್ತಿದ್ದರೂ ಕಠಿಣ ಕಾನೂನು ತರುವವರೆಗೂ ಈ ರೀತಿಯ ತಪ್ಪುಗಳನ್ನು ಮಾಡುತ್ತಲೇ ಇರುತ್ತಾರೆ.

ದಂಡ ಕಟ್ಟಿದರೂ ಪರವಾಗಿಲ್ಲ, ತಪ್ಪು ಮಾಡುವುದು ನಮಗೆ ನೀಡಲಾದ ಸ್ವಾತಂತ್ರ್ಯ ಎಂಬಂತೆ ವರ್ತಿಸುತ್ತಾರೆ. ಇಂಥವರಿಗೆ ಮತದಾನದ ಮಹತ್ವ, ಜವಾಬ್ದಾರಿ ಅರಿವಾಗಬೇಕಾದರೆ, ಬಹುಶಃ ಕಡ್ಡಾಯ ಮತ ಚಲಾವಣೆಯ ಕಠಿಣ ಕಾನೂನಿನ ಅಗತ್ಯವಿದೆಯೇನೋ!

ಹೀಗೆ ಮತ ಚಲಾವಣೆಯ ಜವಾಬ್ದಾರಿ ನಿರ್ಲಕ್ಷಿಸುವ ಪ್ರವೃತ್ತಿ ವಿದ್ಯಾವಂತರಲ್ಲಿ, ರಾಜಕೀಯದ ಬಗ್ಗೆ ಬಹಳಷ್ಟುಚರ್ಚಿಸುವವರಲ್ಲಿ ಹೆಚ್ಚು ಎಂಬುದು ಸಾಮಾನ್ಯವಾಗಿ ಕೇಳಿ ಬರುವ ಆಪಾದನೆ. ಆದರೆ ಕಡಿಮೆ ಮತದಾನವಾದ ಕ್ಷೇತ್ರದ ಸಮಗ್ರ ಅಧ್ಯಯನ ನಡೆಸದೆ ಇಂತಹ ತೀರ್ಮಾನಕ್ಕೆ ಬರುವುದು ಸರಿಯಲ್ಲ.

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಚಲಾವಣೆಯಾದ ಮತಗಳ ಪ್ರಮಾಣದಲ್ಲಿ ಒಂದು ಕ್ಷೇತ್ರದಿಂದ ಇನ್ನೊಂದು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಗಾಧ ವ್ಯತ್ಯಾಸವಿರುವುದಕ್ಕೆ ಬೇರೆ ಕಾರಣಗಳೂ ಇರಬಹುದಲ್ಲವೇ? ಈ ಬಾರಿ ಮೇಲ್ನೋಟಕ್ಕೆ ಬೆಂಗಳೂರಿನಲ್ಲಿನ ಕಡಿಮೆ ಮತದಾನಕ್ಕೆ ಮತದಾರರ ಅಸಡ್ಡೆಗಿಂತಲೂ ಬೇರೆ ಕಾರಣಗಳೂ ಇವೆ ಎಂಬುದನ್ನು ಪತ್ರಿಕೆಗಳೂ ವರದಿ ಮಾಡಿವೆ.

ಆಧಾರ್‌ ಜೋಡಣೆಯ ಪರಿಹಾರ

ಬೆಂಗಳೂರಿನ ಜನಸಂಖ್ಯೆಯಲ್ಲಿ ನಿಜವಾಗಿಯೂ ಕನ್ನಡಿಗರ ಸಂಖ್ಯೆ 34%ಕ್ಕಿಂತಲೂ ಕಡಿಮೆ. ಉಳಿದವರು ಪಕ್ಕದ ರಾಜ್ಯ ಮತ್ತು ಉತ್ತರ ಭಾರತದವರು ಎಂಬುದಾಗಿ ಅಂಕಿಅಂಶಗಳು ಹೇಳುತ್ತವೆ. ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾದರೂ, ಮತ ಚಲಾವಣೆ ವಿಷಯದಲ್ಲಿ ಅವರ ಮೊದಲ ಆದ್ಯತೆ ಅವರ ಸ್ವಂತ ರಾಜ್ಯದ ಮತಕ್ಕೆ. ಆದ್ದರಿಂದ ಅವರು ಇಲ್ಲಿನ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ನಿಜವಾದ ಮತದಾರರ ಸಂಖ್ಯೆಯೇ ಸಮರ್ಪಕವಿಲ್ಲದಿರುವಾಗ ಮತಚಲಾವಣೆಯ ಪ್ರಮಾಣ ಕುಸಿದಿದೆಯೆಂದು ಪ್ರತಿಪಾದಿಸುವುದೇ ತಪ್ಪಲ್ಲವೇ? ಇಂತಹ ಅಧ್ವಾನಗಳ ನಿವಾರಣೆಗೆ ಮತದಾರರ ಹೆಸರನ್ನು ಆಧಾರ್‌ ಜತೆಗೆ ಜೋಡಿಸುವುದು ಪರಿಹಾರವಾಗಬಹುದು.

ಸರ್ಕಾರಿ ಸಿಬ್ಬಂದಿಯೂ ವಂಚಿತರು

ಇನ್ನೊಂದು ವರ್ಗದ ಮತ ವಂಚಿತರೆಂದರೆ ಉದ್ಯೋಗ ನಿಮಿತ್ತ ಊರಿನಿಂದ ದೂರ ಇರುವವರು. ಉದ್ಯೋಗ ನಿಮಿತ್ತ ದೂರದೂರಿನಲ್ಲಿ, ದೂರದೇಶಗಳಲ್ಲಿ ಇರುವವರಿಗೆ ರಜೆಯ ಅಲಭ್ಯತೆ ಮತ್ತು ದೊಡ್ಡ ಮೊತ್ತದ ಪ್ರಯಾಣ ವೆಚ್ಚ ಭರಿಸಿ ಮತ ಚಲಾವಣೆಗೆ ಆಗಮಿಸುವುದು ತ್ರಾಸದಾಯಕ. ಇನ್ನು ಅವಶ್ಯಕ ಸೇವೆಗಳಾದ, ಅಗ್ನಿಶಾಮಕ, ಪೋಲಿಸ್‌ ಮುಂತಾದ ಇಲಾಖೆಯ ನೌಕರರು, ಬ್ಯಾಂಕುಗಳಲ್ಲಿ, ಸಾರಿಗೆ ಸಂಸ್ಥೆಗಳಲ್ಲಿ, ಆಸ್ಪತ್ರೆ ಮುಂತಾದೆಡೆ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳು ನಿರಂತರ ಕಾರ್ಯ ನಿರ್ವಹಿಸಬೇಕಾದ ಕಾರಣ, ಪಕ್ಕದ ಜಿಲ್ಲೆಯ ಮತಪಟ್ಟಿಯಲ್ಲಿ ಹೆಸರಿದ್ದರೂ ಮತ ಚಲಾವಣೆ ಸಾಧ್ಯವಾಗುವುದಿಲ್ಲ.

ಚುನಾವಣೆ ದಿನ ವೇತನ ಸಹಿತ ರಜೆ ನೀಡಬೇಕೆಂದು ಸರ್ಕಾರ ಆದೇಶ ಹೊರಡಿಸಿದರೂ, ಇಂತಹ ಸಂಸ್ಥೆಗಳ ಆಡಳಿತ ಮುಖ್ಯಸ್ಥರು ಪರ್ಯಾಯ ವ್ಯವಸ್ಥೆ ಮಾಡಿ ಮತ ಚಲಾವಣೆಗೆ ಅನುವು ಮಾಡಿಕೊಡುವಂತಹ ವಿಶಾಲ ಮನೋಭಾವ ತೋರಿಸಿದರೆ ಒಂದಿಷ್ಟುಉಪಯೋಗವಾಗಬಹುದು. ಆದರೂ ಈಗಿನ ಸಾಮಾಜಿಕ ವ್ಯವಸ್ಥೆಯಲ್ಲಿ ಇಂತಹ ಉದಾತ್ತ ಮನಸ್ಥಿತಿ ಕನಸೇ ಸರಿ. ತೋರಿಕೆಗೆ ಈ ಎಲ್ಲ ಸಿಬ್ಬಂದಿ ಸಂಖ್ಯೆ ಸಣ್ಣದಾಗಿ ಕಾಣಬಹುದು. ಆದರೆ ಹನಿಗೂಡಿ ಹಳ್ಳವೆಂಬಂತೆ ಒಟ್ಟು ಪರಿಣಾಮ ಗಂಭೀರವಾಗಿಯೇ ಇರುತ್ತದೆ.

ಅಗತ್ಯವಿದೆ ಪರಾರ‍ಯಯ ವ್ಯವಸ್ಥೆ

ಮೇಲಿನ ಎಲ್ಲಾ ಪ್ರಕರಣಗಳಿಗೆ ಅನ್ವಯಿಸುವುದೋ ಇಲ್ಲವೋ ಗೊತ್ತಿಲ್ಲ. ಆದರೆ ಅನಿವಾಸಿ ಭಾರತೀಯರಿಗೆ ಮತ ಚಲಾವಣೆಗೆ ಅವಕಾಶ ಮಾಡಿಕೊಡುವ ‘ಪ್ರಾತಿನಿಧಿಕ ಮತಚಲಾವಣೆ’ ಮಸೂದೆ ಲೋಕಸಭೆಯಲ್ಲಿ ಅನುಮೋದನೆ ಪಡೆದು ರಾಜ್ಯ ಸಭೆಯಲ್ಲಿ ಬಾಕಿ ಉಳಿದಿದೆ ಎಂದು ಓದಿದ ನೆನಪು. ಈಗಿನ ತಂತ್ರಜ್ಞಾನದಲ್ಲಿ ಅಂತರ್ಜಾಲ ಮತ ಚಲಾವಣೆ ವ್ಯವಸ್ಥೆ ಕೂಡಾ ಕಷ್ಟವೇನಲ್ಲ. ಆದರೆ ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಪದೇ ಪದೇ ತಕರಾರು ಎತ್ತುವ ಈಗಿನ ವಿಪಕ್ಷಗಳ ಮನಸ್ಥಿತಿ ಇಂತಹ ಕ್ರಾಂತಿಕಾರಿ ವ್ಯವಸ್ಥೆಯನ್ನು ಒಪ್ಪುತ್ತದೆ ಎಂದು ನಂಬಲಾಗದು. ಆದರೂ ಪರ್ಯಾಯ ವ್ಯವಸ್ಥೆಯ ಅಗತ್ಯವಿದೆ.

ಇನ್ನುಳಿದಂತೆ, ಬದಲಾಗುತ್ತಿರುವ ಪೀಳಿಗೆಯ ಅಂತರ, ಯುವಜನತೆಯ ಮನಸ್ಥಿತಿ, ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲಿಸಿ ದೃಢಪಡಿಸಿಕೊಳ್ಳಲು ಸಾಕಷ್ಟುಪ್ರಚಾರ ನೀಡಿದರೂ ನಿರಾಸಕ್ತಿ ತೋರುವಿಕೆ, ಅಂತಿಮ ಹಂತದ ಪಟ್ಟಿಯಲ್ಲಿ ಹೆಸರಿದ್ದರೂ ಕಾಣದ ಕೈಗಳ ಕೈವಾಡದಿಂದ ಕೊನೆಯ ಕ್ಷಣದಲ್ಲಿ ಏಕಾಏಕಿ ಹೆಸರು ಬಿಟ್ಟು ಹೋಗುವುದು ಇಂತಹ ಅಧ್ವಾನಗಳೂ ಮತ ಚಲಾವಣೆ ಪ್ರಮಾಣದಲ್ಲಿನ ಕೊರತೆಗೆ ಕಾರಣವೆನ್ನಬಹುದು. ಹೀಗೆ ಪಟ್ಟಿಮಾಡುತ್ತಾ ಹೋದರೆ ಮತವಂಚಿತರ ಪಟ್ಟಿದೊಡ್ಡದಾಗುತ್ತಾ ಹೋಗುತ್ತದೆ.

ಆಸ್ಪತ್ರೆಯಲ್ಲಿ ಗಂಭೀರವಾದ ಚಿಕಿತ್ಸೆ ಪಡೆಯಲು ದಾಖಲಾಗುವವರನ್ನು ಹೊರತುಪಡಿಸಿದರೂ ಸಾಮಾನ್ಯ ಚಿಕಿತ್ಸೆಗೆ ದಾಖಲಾಗುವವರನ್ನು, ಅವರ ಸಹಾಯಕರನ್ನು, ವಿಚಾರಣಾಧೀನ ಕೈದಿಗಳನ್ನು ಮತ್ತು ಜಾಮೀನಿನ ಮೇಲಿರುವವರನ್ನು ಮತ ಚಲಾಯಿಸುವ ಹಕ್ಕಿನಿಂದ ವಂಚಿತರನ್ನಾಗಿಸುವುದು ಸರಿಯೇ? (ವಿಚಾರಣಾಧೀನ ಮತ್ತು ಜಾಮೀನಿನ ಮೇಲಿರುವ ರಾಜಕಾರಣಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಇದೆ).

ಹೆಚ್ಚಳಕ್ಕೆ ಏನು ಮಾಡಬಹುದು?

ಚುನಾವಣೆ ಘೋಷಣೆಯಾದ ನಂತರ ಮತ ಚಲಾವಣೆಯನ್ನು ಉತ್ತೇಜಿಸಲು ಸರ್ಕಾರದ ವತಿಯಿಂದ ವಿವಿಧ ರೀತಿಯಲ್ಲಿ ಪ್ರಚಾರ ನೀಡಲಾಗುತ್ತದೆ. ಅದನ್ನೇ ಮುಂದುವರಿಸಿ ಚುನಾವಣೆ ಮುಗಿದ ನಂತರವೂ ವಿವಿಧ ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಗಳ ಪ್ರಮಾಣದ ಬಗ್ಗೆ ವಿವರವಾದ ಅಧ್ಯಯನ ನಡೆಸಿ, ಕಡಿಮೆ ಮತದಾನದ ಕಾರಣಗಳನ್ನು ವಿಶ್ಲೇಷಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬಹುದಲ್ಲ? ಸಣ್ಣಪುಟ್ಟಕಾರಣಗಳಿಗೆ ಹೊಸ ನೋಂದಣಿ, ವರ್ಗಾವಣೆ ಅರ್ಜಿಗಳನ್ನು ಪದೇಪದೇ ತಿರಸ್ಕರಿಸಿ ಕೈತೊಳೆದುಕೊಳ್ಳುವ ಬದಲು ಸೂಕ್ತ ಮಾರ್ಗದರ್ಶನ ನೀಡುವ ವ್ಯವಸ್ಥೆ ಬೇಕು. ಈ ಪ್ರಕ್ರಿಯೆಗಳು ನಿರಂತರವಾಗಿ, ಪಕ್ಷಾತೀತವಾಗಿ ಆಗುವಲ್ಲಿ ಸ್ವಯಂ ಸೇವಾ ಸಂಸ್ಥೆಗಳೂ ಕೈಜೋಡಿಸಬೇಕು.

- ಮೋಹನ್ ದಾಸ್ ಕಿಣಿ, ಕಾಪು, ಉಡುಪಿ 

Follow Us:
Download App:
  • android
  • ios