ಬೆಂಗಳೂರು (ಮಾ. 22):  ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮಹಿಳೆಯರನ್ನು ಮತಗಟ್ಟೆಯತ್ತ ಸೆಳೆಯಲು ಗುಲಾಬಿ ಬಣ್ಣದಿಂದ ಕಂಗೊಳಿಸುತ್ತಿದ್ದ ‘ಪಿಂಕ್‌ ಮತಗಟ್ಟೆ’ಗಳು ಲೋಕಸಭಾ ಚುನಾವಣೆಯಲ್ಲಿ ಕಣ್ಮರೆಯಾಗಲಿವೆ!

ಅಂದರೆ, ಕೇವಲ ಮಹಿಳಾ ಮತಗಟ್ಟೆಗಳು ಇರಲಿವೆ. ಆದರೆ ಅವುಗಳಲ್ಲಿ ಪಿಂಕ್‌ ಬಣ್ಣ ಕಾಣಿಸುವುದಿಲ್ಲ. ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಟಿಆರ್‌ಎಸ್‌ ಪಕ್ಷವು ಪ್ರಬಲ ಪ್ರಾದೇಶಿಕ ಪಕ್ಷವಾಗಿದ್ದು, ಪಕ್ಷದ ಚಿಹ್ನೆಯ ಬಣ್ಣ ಗುಲಾಬಿಯಿಂದ ಕೂಡಿರುವುದರಿಂದ ಪಿಂಕ್‌ ಮತಗಟ್ಟೆಗಳನ್ನು ಸ್ಥಾಪನೆ ಮಾಡದಿರುವ ನಿರ್ಧಾರಕ್ಕೆ ಚುನಾವಣಾ ಆಯೋಗ ಬಂದಿದೆ.

ಮತಗಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಆಕರ್ಷಿಸಲು ದೇಶದಲ್ಲಿಯೇ ಮೊದಲ ಬಾರಿ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಪಿಂಕ್‌ ಮತಗಟ್ಟೆಸ್ಥಾಪಿಸಿ ಆಯೋಗ ಮೆಚ್ಚುಗೆ ಪಡೆದುಕೊಂಡಿತ್ತು. ಆದರೆ, ಲೋಕಸಭೆ ಚುನಾವಣೆಯಲ್ಲಿ ಗುಲಾಬಿ ಬಣ್ಣದ ಮಾಯವಾಗಲಿದೆ. ಪಿಂಕ್‌ ಮತಗಟ್ಟೆಗಳನ್ನು ಹೊರತುಪಡಿಸಿ ಇನ್ನುಳಿದ ಸೃಜನಶೀಲ ಪ್ರಯೋಗಗಳನ್ನು ಆಯೋಗವು ಮುಂದುವರಿಸಲಿದೆ. ಪೂರ್ಣಪ್ರಮಾಣದಲ್ಲಿ ಮಹಿಳೆಯರೇ ಕಾರ್ಯನಿರ್ವಹಿಸುವ ಮಹಿಳಾ ಮತಗಟ್ಟೆಯು ಈ ಬಾರಿ ಗುಲಾಬಿ ಬಣ್ಣದಿಂದ ವರ್ಣರಂಜಿತವಾಗಿ ಅಲಂಕಾರಗೊಳ್ಳದೆ ಸಹಜ ಮತಗಟ್ಟೆಯಾಗಿ ರೂಪುಗೊಳ್ಳಲಿದೆ.

ಲೋಕಸಭೆ ಚುನಾವಣೆಗೆ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಟಿಆರ್‌ಎಸ್‌ (ತೆಲಂಗಾಣ ರಾಷ್ಟ್ರೀಯ ಸಮಿತಿ) ಪಕ್ಷವು ಕಣಕ್ಕಿಳಿಯಲಿದೆ. ಈ ಪಕ್ಷದ ಚಿಹ್ನೆ ಗುಲಾಬಿ ಬಣ್ಣದ ಕಾರ್‌ ಆಗಿದೆ. ಅಲ್ಲದೇ, ಗುಲಾಬಿ ಬಣ್ಣದ ಬಾವುಟವನ್ನೂ ಹೊಂದಿದೆ. ಹೀಗಾಗಿ ಮಹಿಳೆಯರ ಮತಗಟ್ಟೆಗಳನ್ನು ಗುಲಾಬಿ ಬಣ್ಣದಿಂದ ಅಲಂಕರಿಸದಿರಲು ಚುನಾವಣಾ ಆಯೋಗವು ನಿರ್ಧರಿಸಿದೆ. ಗುಲಾಬಿ ಬಣ್ಣದ ಮತಗಟ್ಟೆಗಳನ್ನು ಸ್ಥಾಪಿಸಿದರೆ ಪಕ್ಷವೊಂದಕ್ಕೆ ಬೆಂಬಲ ನೀಡುವಂತೆ ಪ್ರೇರಣೆ ನೀಡಿದಂತಾಗುತ್ತದೆ. ಯಾವುದೇ ಪಕ್ಷಕ್ಕೆ ಪ್ರೇರಣೆ ನೀಡುವಂಥದ್ದನ್ನು ಬಳಕೆ ಮಾಡುವುದು ನಿಷಿದ್ಧ.

ಆದರೆ, ಮಹಿಳೆಯರನ್ನು ಸಬಲೀಕರಣಗೊಳಿಸಿ ಮತದಾನ ಪ್ರಕ್ರಿಯೆಯಲ್ಲಿ ಅವರ ಭಾಗವಹಿಸುವಿಕೆ ಹೆಚ್ಚಿಸಲು ಪ್ರತ್ಯೇಕ ಮಹಿಳಾ ಮತಗಟ್ಟೆಯನ್ನು ರೂಪಿಸಲಾಗುತ್ತದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದೆಲ್ಲೆಡೆ 600 ಪಿಂಕ್‌ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿತ್ತು. ಅಲ್ಲದೇ, ಲೋಕಸಭೆ ಮತ್ತು ವಿಧಾನಸಭೆ ಉಪಚುನಾವಣೆ ವೇಳೆಯಲ್ಲಿಯೂ ಸಹ 57 ಪಿಂಕ್‌ ಮತದಾನ ಕೇಂದ್ರಗಳನ್ನು ಮಾಡಲಾಗಿತ್ತು. ಆದರೆ, ಈ ಬಾರಿ ಮಹಿಳೆಯರ ಮತಗಟ್ಟೆಗಳು ಮಹಿಳೆಯರನ್ನು ಒಳಗೊಂಡ ಸಖಿ ಮತಕೇಂದ್ರಗಳಾಗಲಿವೆ. ಇವುಗಳನ್ನು ಹೇಗೆ ಸಿಂಗರಿಸಬೇಕು ಎಂಬುದರ ಕುರಿತು ಆಯೋಗದ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ಸಾಂಪ್ರದಾಯಿಕ ಮತಗಟ್ಟೆಗಳ ಸ್ಥಾಪನೆ

ವಿಧಾನಸಭೆ ಚುನಾವಣೆಯಲ್ಲಿ ಮಾಡಲಾಗಿದ್ದ ಸಾಂಪ್ರದಾಯಿಕ ಮತಗಟ್ಟೆಗಳನ್ನು ಲೋಕಸಭೆ ಚುನಾವಣೆಯಲ್ಲಿಯೂ ಸ್ಥಾಪನೆ ಮಾಡಲು ಆಯೋಗವು ಚಿಂತನೆ ನಡೆಸಿದ್ದು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಮೂಲಗಳು ತಿಳಿಸಿವೆ. ಚಾಮರಾಜನಗರ, ಉಡುಪಿ, ಕೊಡಗು, ಉತ್ತರಕನ್ನಡ, ಮೈಸೂರು, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಸೇರಿದಂತೆ 8 ಜಿಲ್ಲೆಯಲ್ಲಿ 28 ಮತಗಟ್ಟೆಗಳನ್ನು ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಿಸಲಾಗಿತ್ತು. ಬುಡಕಟ್ಟು ಜನಾಂಗದವರು ತಮ್ಮ ಸಾಂಪ್ರದಾಯಿಕ ಉಡುಗೆ-ತೊಡುಗೆಯಲ್ಲಿಯೇ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುವಂತೆ ಪ್ರೇರೇಪಿಸಲಾಗಿತ್ತು. ಇದರಿಂದ ಬುಡಕಟ್ಟು ಪ್ರದೇಶದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾನವಾಗುವಂತೆ ಕ್ರಮ ಕೈಗೊಳ್ಳಲು ಸಾಧ್ಯ ಎಂಬುದು ಆಯೋಗದ ಯೋಜನೆಯಾಗಿದೆ.

ಲೋಕಸಭೆ ಚುನಾವಣೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತಚಲಾಯಿಸುವಂತೆ ಪ್ರೇರೇಪಿಸಲು ಪ್ರತ್ಯೇಕ ಮಹಿಳಾ ಮತಗಟ್ಟೆಗಳನ್ನು ರೂಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಪಿಂಕ್‌ ಮತಗಟ್ಟೆಗಳನ್ನು ಸ್ಥಾಪನೆ ಮಾಡುವುದಿಲ್ಲ. ಅದು ಪಕ್ಷವೊಂದರ ಬಣ್ಣವಾಗಿರುವ ಕಾರಣ ಪಿಂಕ್‌ ಮತಗಟ್ಟೆನಿರ್ಮಿಸುವುದಿಲ್ಲ.

- ಸಂಜೀವ್‌ ಕುಮಾರ್‌, ಮುಖ್ಯ ಚುನಾವಣಾಧಿಕಾರಿ