Asianet Suvarna News Asianet Suvarna News

ಕಳಪೆ ಕಟ್ಟಡ ನಿರ್ಮಾಣ ಮಟ್ಟಹಾಕಲೇ ಬೇಕು

ಪ್ರಾಮಾಣಿಕ ಅಧಿಕಾರಿಗಳಿಂದ ಕೂಡಿದ ಜನಪರ­ವಾಗಿರುವ ಆಡಳಿತ ಮಾತ್ರವೇ ಕಟ್ಟಡ ನಿರ್ಮಾಣದಲ್ಲಿನ ಹಲವು ಲೋಪಗಳನ್ನು ತಡೆಯಬಲ್ಲುದು.

editorial 10 oct 2016

ಬೆಂಗಳೂರಿನಲ್ಲಿ ಕಳೆದ ವಾರ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು ಬಿದ್ದು ಆರು ಜನ ಕಾರ್ಮಿಕರು ಸಾವಿಗೀಡಾದ ದುರಂತ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನಗರ ಬೆಳೆಯುತ್ತಿದ್ದಂತೆ ವಸತಿ ಸಮಸ್ಯೆಯೂ ಹೆಚ್ಚು­ತ್ತದೆ. ಅದರ ಜೊತೆಯಲ್ಲಿ ಹಲವು ಮೂಲಭೂತ ಸೌಕರ್ಯಗಳ ಅಗ­ತ್ಯವೂ ತಲೆದೋರುತ್ತದೆ. ಹೆಚ್ಚುತ್ತಿರುವ ವಸತಿ ಬೇಡಿಕೆ ಪೂರೈಸಲು ನಗರಕ್ಕೆ ಹೊಂದಿಕೊಂಡಂತೆ ಅನೇಕ ಬಡಾವಣೆಗಳು ನಿರ್ಮಾಣಗೊಳ್ಳುತ್ತವೆ. ಇವುಗಳಲ್ಲಿ ಎಷ್ಟೋ ಬಡಾವಣೆಗಳು ಅನಧಿಕೃತವಾಗಿರುತ್ತವೆ. ಸಿದ್ಧ ಮಾನದಂಡಗಳನ್ನು ಅವು ಪೂರೈಸಿಯೇ ಇರುವುದಿಲ್ಲ. ಮನೆ ಕೊಳ್ಳುವ ಧಾವಂತದಲ್ಲಿರುವವರು ಇವಾವು­ದನ್ನೂ ಗಮನಿಸದೆ ಮೋಸಹೋಗುತ್ತಾರೆ. ದಾಖಲೆಗಳಲ್ಲಿ ಮೋಸ ಮಾಡುವುದು ಒಂದು ರೀತಿಯಾದರೆ ನಿರ್ಮಾಣವನ್ನೇ ಕಳಪೆ ಮಾಡಿ ಮೋಸಗೊಳಿಸುವುದು ಮತ್ತೊಂದು ರೀತಿ. ಇಂಥ ಕಳಪೆ ನಿರ್ಮಾಣದ ಉದಾಹರಣೆಯೇ ಕಳೆದ ವಾರ ಸಂಭವಿಸಿದ ದುರಂತ. ನಿರ್ಮಾಣ ಹಂತದಲ್ಲಿದ್ದಾಗಲೇ ಅದು ಕುಸಿದುಬಿದ್ದಿರು­ವುದರಿಂದ ಸಾವಿನ ಸಂಖ್ಯೆ ಆರಕ್ಕೇ ಸೀಮಿತವಾಗಿದೆ. ಒಂದು ವೇಳೆ ನಿರ್ಮಾಣ ಮುಗಿದು ಅದರಲ್ಲಿ ಜನರು ವಾಸಿಸುತ್ತಿದ್ದಾಗ ಹೀಗೇನಾದರೂ ಆಗಿದ್ದರೆ ಆಗಬ­ಹು­ದಾಗಿದ್ದ ಅನಾಹುತ ಊಹೆಗೂ ನಿಲುಕದ್ದು. ಇನ್ನು ಇಂಥ ಕಟ್ಟಡಗಳನ್ನು ಸಾಲ ಮಾಡಿ ಖರೀದಿಸಿದವರ ಗತಿಯೇನು?
ಕಳೆದ ವಾರ ಸಂಭವಿಸಿದ ದುರಂತ ಸ್ಪಷ್ಟವಾಗಿ ನಿಯಮಗಳ ಉಲ್ಲಂಘನೆಯ ಪರಿಣಾಮ ಎಂದು ಪ್ರಥಮ ಮಾಹಿತಿಯಿಂದ ಗೊತ್ತಾಗಿದೆ. ಮೂರು ಅಂತಸ್ತಿಗೆ ಪರವಾನಗಿ ಪಡೆದು ಆರು ಅಂತಸ್ತನ್ನು ನಿರ್ಮಿಸಲು ಹೊರಟಿದ್ದು ಮಾಲೀಕರ ದುರಾಸೆಯೇ ಸರಿ. ಆರು ಅಂತಸ್ತನ್ನು ನಿರ್ಮಿಸಲು ಬೇಕಾದ ಅಡಿಪಾಯ, ಕಂಬ­ಗಳನ್ನು ಯಾವ ಗಾತ್ರದಲ್ಲಿ ನಿರ್ಮಿಸಬೇಕು, ಅದಕ್ಕೆ ಯಾವ ಸಾಮರ್ಥ್ಯದ ಕಬ್ಬಿಣವನ್ನು ಬಳಸಬೇಕು ಎಂಬುದನ್ನೆಲ್ಲ ನಿರ್ಲಕ್ಷಿಸಲಾಗಿದೆ. ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿಯುತ್ತಿರುವುದು ಇದೇ ಮೊದಲ ಪ್ರಕರಣ­ವೇನಲ್ಲ. ಪ್ರಕರಣದ ಬಿಸಿ ಆರುವವರೆಗೆ ಸಂಬಂಧಿಸಿದ ಅಧಿಕಾರಿಗಳು ಉಸಿರು ಬಿಗಿಹಿಡಿದು ಕುಳಿತಿರುತ್ತಾರೆ. ಕಾಲ ಸರಿದ ಬಳಿಕ ಮತ್ತೆ ಹಳೆಯ ಚಾಳಿ ಮರುಕಳಿ­ಸುತ್ತದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾದರೆ ಈ ರೀತಿ ಮಾಡುವವರು ಸ್ವಲ್ಪ ಅಂಜುತ್ತಿದ್ದರೇನೋ? ದುರಂತ ಸಂಭವಿಸಿದಾಗ ದೊಡ್ಡದಾಗಿ ಪ್ರಚಾರ ನೀಡುವ ಮಾಧ್ಯಮಗಳು ಆರೋಪಿಗಳಿಗೆ ಶಿಕ್ಷೆಯಾದಾಗ ಅದೇ ಪ್ರಮಾಣದಲ್ಲಿ ಪ್ರಚಾರ ನೀಡುವುದಿಲ್ಲ. ಕಟ್ಟಡ ನಿರ್ಮಾಣ­ಮಾಡುವಾಗ ಅದರ ಗುಣಮಟ್ಟಪರೀಕ್ಷೆ ಮಾಡುವ ವ್ಯವಸ್ಥೆ ಸರ್ಕಾರಿ ಮಟ್ಟದಲ್ಲಿ ಇದ್ದಹಾಗೆ ಇಲ್ಲ. ಕಟ್ಟಡ ನಿರ್ಮಾಣ ಮುಗಿದ ಮೇಲೆ ಸಂಬಂಧಿಸಿದ ಸರ್ಕಾರಿ ಕಚೇರಿಯಿಂದ ಪ್ರಮಾಣಪತ್ರವನ್ನು ಪಡೆಯಬೇಕಾ­ಗು­ತ್ತದೆ. ಆಗ ಕಟ್ಟಡದ ಗುಣಮಟ್ಟಪರೀಕ್ಷಿ­ಸಬಹುದಾಗಿದೆ. ಆದರೆ ನಿರ್ಮಾಣವಾ­ಗು­ತ್ತಿ­ದ್ದಾಗಲೇ ಇದನ್ನು ತಡೆಯುವುದು ಹೇಗೆ? ಅಕ್ಕಪಕ್ಕದ ನಿವಾಸಿಗಳು ಇದನ್ನು ಗಮನಿಸಿದರೆ ಇಲಾ­ಖೆಯ ಗಮನಕ್ಕೆ ತರಬಹುದು. ಇಂದಿನ ಭ್ರಷ್ಟವ್ಯವಸ್ಥೆಯಲ್ಲಿ ಇದು ಅಧಿಕಾರಿಗಳು ಹಣ ಮಾಡಲು ದಾರಿಯಾ­ಗಬಹುದು. ನಿರ್ಮಾಣ ಹಂತದ ಕಟ್ಟಡ ಕುಸಿದಾಗ ಸಾವಿಗೀಡಾಗು­ವವರು ಅಮಾಯಕ ಕಾರ್ಮಿಕರು. ಹೊಟ್ಟೆಪಾಡಿಗಾಗಿ ದೂರದ ಊರಿನಿಂದ ಕೆಲಸಕ್ಕಾಗಿ ಬಂದಿರುತ್ತಾರೆ. ದುರಂತ ಸಂಭವಿಸಿದಾಗ ಅವರಿಗೆ ಸೂಕ್ತ ಪರಿಹಾರ ಕೂಡ ಬಹಳ ಸಲ ದೊರೆಯುವುದಿಲ್ಲ. ನಿತ್ಯದ ಹೊಟ್ಟೆಪಾಡಿಗೆ ಹೋರಾಡ­ಬೇಕಾದ ಅವರು ಕಾನೂನಿನ ಹೋರಾಟವನ್ನು ಎಲ್ಲಿ ನಡೆಸುತ್ತಾರೆ? ಇಲ್ಲೆಲ್ಲ ಕಾರ್ಮಿಕ ಕಾನೂನಿನ ಉಲ್ಲಂಘನೆಯಾಗುತ್ತಿರುತ್ತದೆ. ಪ್ರಾಮಾಣಿಕ ಅಧಿಕಾರಿಗಳಿಂದ ಕೂಡಿದ ಜನಪರ­ವಾಗಿರುವ ಎಚ್ಚೆತ್ತ ಆಡಳಿತ ಮಾತ್ರ ಇಂಥ ಲೋಪಗಳನ್ನು ತಡೆಯಬಲ್ಲುದು.