Aryan Khan's Web Series ಕ್ರೂಸ್‌ನಲ್ಲಿ ಆರ್ಯನ್‌ ಖಾನ್ ಮಾದಕವಸ್ತುವಿನೊಂದಿಗೆ ಸಿಕ್ಕಿಬಿದ್ದ ಆರೋಪ ಎದುರಾದಾಗ ಆ ಪ್ರಕರಣದ ತನಿಖಾಧಿಕಾರಿಯಾಗಿದ್ದ ಸಮೀರ್‌ ವಾಂಖೆಡೆ ಅವರನ್ನೇ ಹೋಲುವ ಪಾತ್ರವನ್ನು ಆರ್ಯನ್ ಖಾನ್ ವೆಬ್‌ ಸರಣಿ ಬಾಸ್ಟರ್ಡ್ಸ್ ಆಫ್ ಬಾಲಿವುಡ್‌ನಲ್ಲಿ ಸೃಷ್ಟಿಸಲಾಗಿದೆ.

ಬಾಸ್ಟರ್ಡ್ಸ್ ಅಫ್ ಬಾಲಿವುಡ್‌ ಬಗ್ಗೆ ಆಕ್ಷೇಪ: ಹೈಕೋರ್ಟ್‌ನಲ್ಲಿ ವಿಚಾರಣೆ

ನವದೆಹಲಿ: ಕಾರ್ಡೆಲಿಯಾ ಕ್ರೂಸ್ ಮಾದಕವಸ್ತು ಪ್ರಕರಣದ ನಂತರ, ಮಾಜಿ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಮತ್ತು ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಮಧ್ಯೆ ಮತ್ತೆ ಸಮರ ಶುರು ಆಗಿದೆ. ಒಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಆರ್ಯನ್ ಖಾನ್ ನಿರ್ದೇಶನದ ವೆಬ್ ಸರಣಿ 'ದಿ ಬಾಸ್ಟರ್ಡ್ಸ್‌ ಆಫ್ ಬಾಲಿವುಡ್' ನಲ್ಲಿ ತಮ್ಮನ್ನು ಹೋಲುವ ಪಾತ್ರವೊಂದನ್ನು ಸೃಷ್ಟಿಸಿದ್ದಕ್ಕೆ ವಾಂಖೆಡೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರ ವಿರುದ್ಧ ಅವರು ನೇರವಾಗಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು.

ಗೌರಿ ಖಾನ್ ಒಡೆತನದ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್, ನೆಟ್‌ಫ್ಲಿಕ್ಸ್‌ಗೆ ನೋಟೀಸ್

ಆರ್ಯನ್ ಖಾನ್ ವೆಬ್‌ ಸರಣಿ ಬಾಸ್ಟರ್ಡ್ಸ್ ಆಫ್ ಬಾಲಿವುಡ್‌ನಲ್ಲಿ, ಕ್ರೂಸ್‌ನಲ್ಲಿ ಆರ್ಯನ್‌ ಖಾನ್ ಮಾದಕವಸ್ತುವಿನೊಂದಿಗೆ ಸಿಕ್ಕಿಬಿದ್ದ ಆರೋಪ ಎದುರಾದಾಗ ಆ ಪ್ರಕರಣದ ತನಿಖಾಧಿಕಾರಿಯಾಗಿದ್ದ ಮಾಜಿ ಎನ್‌ಸಿಬಿ ಅಧಿಕಾರಿ ಸಮೀರ್‌ ವಾಂಖೆಡೆ ಅವರನ್ನೇ ಹೋಲುವ ಪಾತ್ರವನ್ನು ಸೃಷ್ಟಿಸಲಾಗಿದೆ. ಆ ಪಾತ್ರವನ್ನು ನಿರ್ವಹಿಸುವ ನಟ ಕೂಡ ಸಮೀರ್ ವಾಂಖೆಡೆಯಂತೆಯೇ ಕಾಣುತ್ತಾರೆ. ಈ ಚಿತ್ರಣದಿಂದಾಗಿ ತಾನು ಹಾಗೂ ತನ್ನ ಕುಟುಂಬವು ಸಾಕಷ್ಟು ಟ್ರೋಲಿಂಗ್ ಎದುರಿಸುತ್ತಿದೆ ಎಂದು ವಾಂಖೆಡೆ ನ್ಯಾಯಾಲಯದಲ್ಲಿ ದೂರು ನೀಡಿದ್ದರು.. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆದಿದ್ದು, ದೆಹಲಿ ಹೈಕೋರ್ಟ್ ಒಟಿಟಿ ಪ್ಲಾಟ್‌ಫಾರ್ಮ್‌ ನೆಟ್‌ಫ್ಲಿಕ್ಸ್, ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಒಡೆತನದ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ಇತರರ ವಿರುದ್ಧ ನೋಟಿಸ್ ಜಾರಿ ಮಾಡಿದ್ದು, ಏಳು ದಿನಗಳಲ್ಲಿ ಉತ್ತರ ಸಲ್ಲಿಸುವಂತೆ ನಿರ್ದೇಶಿಸಿದೆ. ನಂತರ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 30 ಕ್ಕೆ ಮುಂದೂಡಿದೆ.

ಮಾನಹಾನಿಗೆ 2 ಕೋಟಿ ಪರಿಹಾರ ನೀಡುವಂತೆ ಆಗ್ರಹ

ವಾಂಖೆಡೆ ಸಲ್ಲಿಸಿರುವ ದೂರಿನ ಅರ್ಜಿಯಲ್ಲಿ ಶಾರುಖ್ ಖಾನ್ ಮತ್ತು ಅವರ ಪತ್ನಿ ಗೌರಿ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಕಂಪನಿ ಹಾಗೂ ನೆಟ್‌ಫ್ಲಿಕ್ಸ್ ಮತ್ತು ಇತರರ ಬಗ್ಗೆ ಉಲ್ಲೇಖಿಸಲಾಗಿದೆ. ಈ ವಿಷಯದಲ್ಲಿ ಶಾಶ್ವತ ಮತ್ತು ಕಡ್ಡಾಯ ಆದೇಶವನ್ನು ಸಮೀರ್ ವಾಂಖೇಡೆ ಅವರು ಕೋರಿದ್ದಾರೆ. ಇದು ಮಾತ್ರವಲ್ಲದೆ, ಇದರಿಂದ ತಮಗಾದ ಮಾನಹಾನಿಗೆ ತಲಾ 2 ಕೋಟಿ ರೂ. ಪರಿಹಾರವನ್ನೂ ಅವರು ಕೋರಿದ್ದಾರೆ. ಈ ಮೊತ್ತವನ್ನು ಟಾಟಾ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆಗೆ ದೇಣಿಗೆ ನೀಡುವುದಾಗಿಯೂ ಅವರು ಸ್ಪಷ್ಟಪಡಿಸಿದ್ದಾರೆ.

ಆರ್ಯನ್ ಖಾನ್ ನಿರ್ದೇಶನದ ಬಾಸ್ಟರ್ಡ್ಸ್‌ ಆಫ್ ಬಾಲಿವುಡ್ ವೆಬ್ ಸರಣಿಯು ಮಾದಕ ವಸ್ತುಗಳ ವಿರುದ್ಧ ಕೆಲಸ ಮಾಡುವ ಸಂಸ್ಥೆಗಳನ್ನು ದಾರಿತಪ್ಪಿಸುವ ಮತ್ತು ನಕಾರಾತ್ಮಕ ರೀತಿಯಲ್ಲಿ ಚಿತ್ರಿಸುತ್ತದೆ. ಇದು ಅಂತಹ ಸಂಸ್ಥೆಗಳ ಮೇಲಿನ ಸಾರ್ವಜನಿಕರ ನಂಬಿಕೆಯನ್ನು ಕುಗ್ಗಿಸುತ್ತದೆ. ಈ ಸರಣಿಯಿಂದಾಗಿ, ನಾನು, ನನ್ನ ಹೆಂಡತಿ ಮತ್ತು ಸಹೋದರಿ ಟ್ರೋಲಿಂಗ್ ಎದುರಿಸುತ್ತಿದ್ದೇವೆ. ಇದು ಅತ್ಯಂತ ಆಘಾತಕಾರಿ ಮತ್ತು ಅವಮಾನಕರ ಎಂದು ಸಮೀರ್ ವಾಂಖೆಡೆ ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದ್ದಾರೆ. ಈ ಸರಣಿಯ ಸ್ಟ್ರೀಮಿಂಗ್ ಮತ್ತು ವಿತರಣೆಯನ್ನು ನಿಲ್ಲಿಸಲು ಮತ್ತು ಈ ವಿಚಾರವನ್ನು ಮಾನನಷ್ಟಕರವೆಂದು ಘೋಷಿಸಲು ಅವರು ನ್ಯಾಯಾಲಯವನ್ನು ಕೋರಿದ್ದಾರೆ.

ವೆಬ್ ಸಿರೀಸ್‌ನಲ್ಲಿ ಏನಿದೆ?

ಆರ್ಯನ್ ಖಾನ್ ನಿರ್ದೇಶನದ ಈ 8 ಎಪಿಸೋಡ್‌ಗಳ ಸರಣಿ ಸೆಪ್ಟೆಂಬರ್ 18 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. 'ಬಾಸ್ಟರ್ಡ್ಸ್ ಡ್ಸ್ ಆಫ್ ಬಾಲಿವುಡ್' ನ ಮೊದಲ ಕಂತಿನಲ್ಲಿ ಸಮೀರ್ ವಾಂಖೆಡೆಯಂತೆಯೇ ಕಾಣುವ ಅಧಿಕಾರಿಯೊಬ್ಬರು ಮಾದಕ ವಸ್ತುಗಳ ವಿರುದ್ಧ ಧ್ವನಿ ಎತ್ತುವುದನ್ನು ತೋರಿಸಲಾಗಿದೆ. 'ಡ್ರಗ್ಸ್ ವಿರುದ್ಧ ಯುದ್ಧ' ಮತ್ತು 'ಎನ್‌ಸಿಬಿ'ಯ ಭಾಗವಾಗಿರುವುದಾಗಿ ಹೇಳಿಕೊಂಡು, ಅವರು ಬಾಲಿವುಡ್ ಪಾರ್ಟಿಯ ಮೇಲೆ ದಾಳಿ ಮಾಡುತ್ತಾರೆ. ಬಾಲಿವುಡ್ ಉದ್ಯಮದಲ್ಲಿ ಮಾದಕ ವಸ್ತುಗಳ ಬಳಕೆಯ ಬಗ್ಗೆ ಅವರು ಕೂಗುತ್ತಾರೆ. ಇದೆಲ್ಲವೂ ಸಮೀರ್ ವಾಂಖೆಡೆ ಮತ್ತು ಅವರು ಆರ್ಯನ್ ವಿರುದ್ಧ ತೆಗೆದುಕೊಂಡ ಕ್ರಮಕ್ಕೆ ಸಂಬಂಧಿಸಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ನೆಟಿಜನ್‌ಗಳು ಕಾಮೆಂಟ್ ಮಾಡಿದ್ದಾರೆ. ಇದರ ಬಗ್ಗೆ ಅನೇಕ ಮೀಮ್‌ಗಳು ಸಹ ವೈರಲ್ ಆಗಿವೆ. ಸಮೀರ್ ವಾಂಖೆಡೆ 2021 ರಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ನನ್ನು ಬಂಧಿಸಿದ್ದರು.

ಇದನ್ನೂ ಓದಿ: ಅಬುಧಾಬಿ ಟೂರಿಸಂ ಜಾಹೀರಾತಿಗಾಗಿ ಹಿಜಾಬ್ ಧರಿಸಿದ ದೀಪಿಕಾ ಪಡುಕೋಣೆ

ಇದನ್ನೂ ಓದಿ: ಬೀದಿ ನಾಯಿ ಕಡಿತದ ಬಳಿಕ ರೇಬೀಸ್‌: 2 ವರ್ಷದ ಮಗು ಸಾವು