Asianet Suvarna News Asianet Suvarna News

Bengaluru: ಗುಣಮಟ್ಟ, ಕಡಿಮೆ ವೆಚ್ಚವಿದ್ದರೆ ಮಾತ್ರ ರ‍್ಯಾಪಿಡ್‌ ರಸ್ತೆ ಪರಿಗಣನೆ-ಸಿಎಂ ಬೊಮ್ಮಾಯಿ

ದೇಶದಲ್ಲಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಪ್ರಿ ಕಾಸ್ಟ್ ತಂತ್ರಜ್ಞಾನ ಬಳಸಿ ಪ್ರಾಯೋಗಿಕವಾಗಿ ನಿರ್ಮಿಸಲಾಗುತ್ತಿರುವ ರ‍್ಯಾಪಿಡ್‌ ರಸ್ತೆಗಳ ಗುಣಮಟ್ಟ ಹಾಗೂ ದರಗಳನ್ನು ಪರಿಶೀಲಿಸಿದ ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ಅಳವಡಿಸುವುದಕ್ಕೆ ಪರಿಗಣಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Consider Rapid Road only if there is quality, low cost CM Bommai sat
Author
First Published Dec 8, 2022, 12:08 PM IST

ಬೆಂಗಳೂರು (ಡಿ.8) :  ಪ್ರಿ ಕಾಸ್ಟ್ ತಂತ್ರಜ್ಞಾನ ಬಳಸಿ ನಿರ್ಮಾಣವಾಗುವ ರ‍್ಯಾಪಿಡ್‌ ರಸ್ತೆಗಳ ಗುಣಮಟ್ಟ ಹಾಗೂ ದರಗಳನ್ನು ಪರಿಶೀಲಿಸಿದ ನಂತರ ರಾಜಧಾನಿಯ ಇತರೆ ರಸ್ತೆಗಳಲ್ಲಿ ಅಳವಡಿಸುವುದಕ್ಕೆ ಪರಿಗಣಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಬಿಬಿಎಂಪಿ ವತಿಯಿಂದ ಸಿ.ವಿ.ರಾಮನ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ನಿರ್ಮಿಸಿರುವ ರ‍್ಯಾಪಿಡ್‌ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು. ಉತ್ತಮ ರಸ್ತೆ ಗಳ ಜೊತೆಗೆ ವೆಚ್ಚವೂ ಕಡಿಮೆಯಿರುವುದು ಬಹಳ ಮುಖ್ಯ. ಈ ಕುರಿತು ವರದಿಗಳು ಬಂದ ನಂತರ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು ಎಂದರು. ಬೆಂಗಳೂರಿನ ರಸ್ತೆ ನಿರ್ಮಾಣ ಮಾಡುವ ಸಂದರ್ಭಗಳಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೆವು. ವೈಟ್ ಟಾಪಿಂಗ್ ಮಾಡುವುದು ಬಹಳ ಸಮಯ ತೆಗೆದುಕೊಳ್ಳುತ್ತದೆ. ಸಂಚಾರ ವ್ಯವಸ್ಥೆ ಯನ್ನು ಬದಲಾಯಿಸುವುದು, ದಟ್ಟಣೆಯಾಗುವುದು ಹೆಚ್ಚು. ಒಂದು ಬಾರಿ ವೈಟ್ ಟಾಪಿಂಗ್ ಆದ ನಂತರ ಸಮಸ್ಯೆ ಉಂಟಾದಲ್ಲಿ ಪುನಃ ಅದನ್ನು ಒಡೆದು ತೆಗೆಯುವುದು ದೊಡ್ಡ ಆತಂಕದ ಕೆಲಸ. ಅದಕ್ಕೆಂದೇ ರ‍್ಯಾಪಿಡ್‌ ರಸ್ತೆ ತಂತ್ರಜ್ಞಾನ ಬಂದಿದೆ ಎಂದರು.

ಈ ತಂತ್ರಜ್ಞಾನ ಪ್ರಿ ಕಾಸ್ಟ್ ಸ್ಲ್ಯಾಬ್ ಗಳನ್ನು ತಯಾರಿಸಿ, ಆಂತರಿಕ ಜಾಯಿಂಟ್ ಹಾಕಿ, ಬಲಗೊಳಿಸಿ, ರಸ್ತೆಯನ್ನು ಪ್ರಾಯೋಗಿಕವಾಗಿ 500 ಮೀ. ಪೈಕಿ 375 ಮೀಟರ್ ಉದ್ದದ ರಸ್ತೆ ನಿರ್ಮಾಣ ವಾಗಿದೆ. ಅದನ್ನು ಪರಿಶೀಲಿಸಲು ಬಂದಿದ್ದು, ಹಲವಾರು ಸೂಚನೆಗಳನ್ನು ನೀಡಿದ್ದೇನೆ. 20 ಟನ್ ಮೇಲಿರುವ ವಾಹನಗಳನ್ನು ಸತತವಾಗಿ ಸಂಚಾರ ಮಾಡಿಸಿ, ವಿಶ್ಲೇಷಣೆ ಮಾಡಬೇಕಿದೆ. ಭಾರಿ ವಾಹನಗಳ ಚಲನೆಯಿಂದ ಆಗುವ ಪರಿಣಾಮಗಳ ಬಗ್ಗೆ ಸಂಪೂರ್ಣ ವರದಿ ಬೇಕೆಂದು ಸೂಚಿಸಿದ್ದೇನೆ. ಇಲ್ಲಿಯ ಜಾಯಿಂಟ್ ಗಳು, ಟೆನ್ಸಾಯಿಲ್ ಶಕ್ತಿ ಏನಿದೆ, ತಾಂತ್ರಿಕ ವಿವರಗಳನ್ನು ಸಲ್ಲಿಸಲು ಸೂಚಿಸಲಾಗಿದೆ. ಅಂತಿಮವಾಗಿ ಕಾಮಗಾರಿಯು ಕ್ಷಿಪ್ರವಾಗಿ ಆಗಬೇಕು,  ಗುಣಮಟ್ಟ ಇರಬೇಕು ಹಾಗೂ ವೆಚ್ಚವೂ ಸೂಕ್ತವಾಗಿರಬೇಕು ಎಂದು ಸೂಚಿಸಿದ್ದೇನೆ ಎಂದರು. 

ಬಿಬಿಎಂಪಿಯಿಂದ ದೇಶದಲ್ಲಿ ಮೊಟ್ಟ ಮೊದಲ ರ‍್ಯಾಪಿಡ್ ರಸ್ತೆ ನಿರ್ಮಾಣ

ಎಸ್.ಆರ್. ದರಗಳಿಗೆ ಹೊಂದುವಂತಿರಬೇಕು: ಪ್ರಾಯೋಗಿಕವಾಗಿ ಈ ಯೋಜನೆ ಅನುಷ್ಠಾನಗೊಂಡಿದ್ದು, ಕಡಿಮೆ ವೆಚ್ಚದಲ್ಲಿ ಆಗುವುದಾದರೆ, ಬೆಂಗಳೂರಿನಲ್ಲಿ ಎಲ್ಲೆಲ್ಲಿ ವೈಟ್ ಟಾಪಿಂಗ್, ಸಂಚಾರ ದಟ್ಟಣೆಯುಳ್ಳ,  ಕ್ಷಿಪ್ರವಾಗಿ ರಸ್ತೆಯಾಗಬೇಕಿರುವ ಸ್ಥಳಗಳಲ್ಲಿ ಇದನ್ನು ಅಳವಡಿಸಬಹುದು. ಈ ರಸ್ತೆಗಳಿಗೆ ವೈಟ್ ಟಾಪಿಂಗ್ ಗಿಂತ ಶೇ.30 ರಷ್ಟು ಹೆಚ್ಚು ವೆಚ್ಚವಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಆದರೆ, ನಮ್ಮ ಎಸ್.ಆರ್. ದರಗಳಿಗೆ ಹೊಂದುವಂತಿದ್ದರೆ ಮಾತ್ರ ಇದನ್ನು ಪರಿಗಣಿಸಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸ್ಪಷ್ಟವಾಗಿ ತಿಳಿಸಿದ್ದೇನೆ ಎಂದರು. 

ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್,  ಶಾಸಕ  ಎಸ್.ರಘು, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ಆಡಳಿತಾಧಿಕಾರಿ ರಾಕೇಶ್ ಸಿಂಗ್, ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ರ‍್ಯಾಪಿಡ್‌ ರಸ್ತೆ  ನಿರ್ಮಾಣ ಕ್ರಮಗಳು: ಬೆಂಗಳೂರು ನಗರದ ವಾಹನ ವೈಟ್‌ ಟಾಪಿಂಗ್ ಕಾಮಗಾರಿಯಿಂದ ವಿಳಂಬ ಆಗುತ್ತಿದ್ದು, ವಾಹನ ಸವಾರರಿಗೆ ಆಗುತ್ತಿರುವ ಕಿರಿಕಿರಿ ಮತ್ತು ತೊಂದರೆಯನ್ನು ನಿವಾರಿಸುವಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ವೈಟ್ ಟಾಪಿಂಗ್ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ಸೂಕ್ತ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕನಿಷ್ಠ ಸಮಯದಲ್ಲಿ ಮತ್ತು ದೀರ್ಘ ಬಾಳಿಕೆಯ ರಸ್ತೆಯನ್ನು ನಿರ್ಮಿಸುವಂತೆ ಸೂಚನೆ ನೀಡಿದ್ದರು. ಸದರಿ ನಿರ್ದೇಶನದಂತೆ ಬಿಬಿಎಂಪಿ ಅಲ್ಟ್ರಾ ಟೆಕ್‌ ಲಿ. (M/s.Ultra Tech Ltd) ಸಂಸ್ಥೆಯೊಂದಿಗೆ ಸಮನ್ವಯವನ್ನು ಸಾಧಿಸಿ 'ಸ್ಥಳದಲ್ಲಿಯೇ ಕಾಂಕ್ರೀಟ್ ಸುರಿಯುವ ಮತ್ತು 21 ದಿನಗಳ ನೀರುಣಿಸಿ ಹದಗೊಳಿಸುವ ಕ್ರಮವನ್ನು ಕೈಬಿಟ್ಟು ಕಾರ್ಖಾನೆಯಲ್ಲಿ ಪ್ರೀ ಕಾಸ್ಟ್ ರೇನ್‌ ಫೋರ್ಸಡ್ ಸಿಮೆಂಟ್ ಸ್ಲ್ಯಾಬ್ (Pre-cast Reinforced Cement Concrete slab)ಗಳನ್ನು ತಯಾರಿಸಿ ಅಳವಡಿಸುವ ತಂತ್ರಜ್ಞಾನ ಬಳಸಲಾಗಿದೆ. ಸದರಿ ಸ್ಲಾಬ್‌ಗಳನ್ನು ಅಂಕುಡೊಂಕಾದಂತೆ ಭದ್ರವಾಗಿ ಹಿಡಿದಿಟ್ಟುಕೊಳ್ಳಲು ಮೇಲೇತುವೆಗಳಿಗೆ (Flyover) ಬಳಸುವ Post Tensioned ತಂತ್ರಜ್ಞಾನವನ್ನು ಬಳಸಿ ರಸ್ತೆ ನಿರ್ಮಿಸುವುದು ಸೂಕ್ತವೆಂದು ಯೋಜನೆಗೆ ರಾಪಿಡ್ ರಸ್ತೆ ನಿರ್ಮಾಣವೆಂದು ಹೆಸರಿಸಲಾಯಿತು.

ಬೆಂಗಳೂರು: ರಸ್ತೆ ನಿರ್ಮಾಣಕ್ಕೂ ಬಂತು ‘ರ‍್ಯಾಪಿಡ್‌’ ತಂತ್ರಜ್ಞಾನ..!

ವೈಟ್‌ ಟಾಪಿಂಗ್‌ ಅಪ್‌ಗ್ರೇಡ್‌ ರಸ್ತೆ: ಕ್ಯಾಪಿಡ್ ರಸ್ತೆಯು ಒಂದು ವೈಟ್ ಟಾಪಿಂಗ್ ಕಾಮಗಾರಿಯ ಉತ್ಕೃಷ್ಟವಾದ ಭಾಗವಾಗಿದ್ದು (Upgraded version of White Topping) ಸದರಿ ರ್ಯಾಪಿಡ್ ರಸ್ತೆ ನಿರ್ಮಾಣಕ್ಕೆ ಉಕ್ಕಿನ ಸರಳುಗಳನ್ನು ಬಳಸಲಾಗಿರುತ್ತದೆ. ಕಾಂಕ್ರೀಟ್ ಸ್ಲಾಬ್‌ಗಳನ್ನು ತಯಾರಿಸಿ ಅದರೊಳಗೆ ರಂದ್ರಗಳನ್ನು ಅಳವಡಿಸಿ ಪೋಸ್ಟ್‌ ಟೆನ್ಸ್ಡ್ ಮಾಡಲಾಗುತ್ತದೆ. ಪ್ರೀ ಕಾಸ್ಟ್ ರೇನ್‌ ಫೋರ್ಸಡ್ ಸಿಮೆಂಟ್ ಸ್ಲ್ಯಾಬ್ ಗಳನ್ನು 1.50ಮೀ x 6.00ಮೀ ಗಳಿಗೆ ತಯಾರಿಸಿ ರಸ್ತೆಯಲ್ಲಿ ಜೋಡಣೆ ಮಾಡಿ ರೇನ್ ಫೋರ್ಸ್ಡ್ ಸಿಮೆಂಟ್‌ ಕಾಂಕ್ರೀಟ್‌ ರೋಡ್ (ರ್ಯಾಪಿಡ್ ರೋಡ್‌) ಗಳನ್ನು ನಿರ್ಮಿಸಲಾಗಿರುತ್ತದೆ. ಈ ರಸ್ತೆಯನ್ನು ಭಾರಿ ವಾಹನಗಳಿಗೆ ಓಡಾಡಲು ಅನುವು ಮಾಡಿಕೊಟ್ಟು ಪರೀಕ್ಷೆಗೆ ನ.22ರಿಂದ 03 ದಿನಗಳಲ್ಲಿ 375ಮೀಟರ್ ಉದ್ದದ ಪ್ರೀಕಾಸ್ಟ್ ಮಾದರಿಯಲ್ಲಿ ಒಟ್ಟು 666 ಸ್ಲಾಬ್‌ಗಳನ್ನು ಬಳಸಿ 1 ಕಿ.ಮೀ ಅನ್ನು ಪೂರ್ಣಗೊಳಿಸಲಾಗಿದೆ. ಸಮಾನ್ಯ ವೈಟ್ ಟಾಪಿಂಗ್ ರಸ್ತೆಯು 1 ಕಿ.ಮೀ ಉದ್ದದ ರಸ್ತೆ ನಿರ್ಮಿಸಲು ಕನಿಷ್ಠ 36 ದಿನಗಳು ಬೇಕಾಗುತ್ತಿರುತ್ತದೆ. ಸದರಿ ರ್ಯಾಪಿಡ್ ರಸ್ತೆಗಳನ್ನು ಶೀಘ್ರದಲ್ಲಿ ನಿರ್ಮಿಸಲು ಸಾಧ್ಯವಾಗುವುದರಿಂದ ಮತ್ತು ದೀರ್ಘ ಬಾಳಿಕೆ ಇರುವುದರಿಂದ ರಸ್ತೆ ನಿರ್ಮಾಣದಲ್ಲಿ ಶೇ.40 ರಿಂದ 43ರಷ್ಟು ವೆಚ್ಚ ಹೆಚ್ಚು ಆದರೂ ಸಾರ್ವಜನಿಕರಿಗೆ ಟ್ರಾಫಿಕ್ ಕಿರಿಕಿರಿಯನ್ನು ತಪ್ಪಿಸಬಹುದಾಗಿರುತ್ತದೆ.

Follow Us:
Download App:
  • android
  • ios