ಇಡೀ ಮನುಕುಲವನ್ನೇ ನಡುಗಿಸಿದ, ಸುಮಾರು 8 ಕೋಟಿ ಜನರ ಸಾವು-ನೋವು, ನಷ್ಟಕ್ಕೆ ಕಾರಣವಾದ 2ನೇ ಮಹಾಯುದ್ಧ ಅಂತ್ಯಗೊಂಡು ಇಂದಿಗೆ 75 ವರ್ಷ. ಈ ಹಿನ್ನೆಲೆಯಲ್ಲಿ 2ನೇ ಮಹಾಯುದ್ಧದ ಹಿನ್ನೆಲೆ, ಪರಿಣಾಮ ಹಾಗೂ 2ನೇ ವಿಶ್ವಯುದ್ಧದಲ್ಲಿ ಭಾಗವಹಿಸಿದ್ದ ಕರ್ನಾಟಕದ ಯೋಧರ ನೆನಪುಗಳ ಮೆಲುಕು ಇಲ್ಲಿದೆ.
ಇಡೀ ಮನುಕುಲವನ್ನೇ ನಡುಗಿಸಿದ, ಸುಮಾರು 8 ಕೋಟಿ ಜನರ ಸಾವು-ನೋವು, ನಷ್ಟಕ್ಕೆ ಕಾರಣವಾದ 2ನೇ ಮಹಾಯುದ್ಧ ಅಂತ್ಯಗೊಂಡು ಇಂದಿಗೆ 75 ವರ್ಷ. ಈ ಹಿನ್ನೆಲೆಯಲ್ಲಿ 2ನೇ ಮಹಾಯುದ್ಧದ ಹಿನ್ನೆಲೆ, ಪರಿಣಾಮ ಹಾಗೂ 2ನೇ ವಿಶ್ವಯುದ್ಧದಲ್ಲಿ ಭಾಗವಹಿಸಿದ್ದ ಕರ್ನಾಟಕದ ಯೋಧರ ನೆನಪುಗಳ ಮೆಲುಕು ಇಲ್ಲಿದೆ.
1 ಸೆಪ್ಟೆಂಬರ್ 1939- 2 ಸೆಪ್ಟೆಂಬರ್ 1945
undefined
8 ಕೋಟಿ- ಯುದ್ದದಲ್ಲಿ ಬಲಿಯಾದ ಜನ
10 ಕೋಟಿ-ಯುದ್ಧದಲ್ಲಿ ಪಾಲ್ಗೊಂಡವರು
ಇಡೀ ಜಗತ್ತೇ 2 ಹೋಳು
ಮನುಕುಲ ಇತಿಹಾಸ ಕಂಡ ಅತ್ಯಂತ ಬೀಭತ್ಸ ಜಾಗತಿಕ ಯುದ್ಧ ಆರಂಭವಾಗಿದ್ದು 1939 ಸೆಪ್ಟೆಂಬರ್ 1ರಂದು. ಎಲ್ಲಾ ಅಂತಾರಾಷ್ಟ್ರೀಯ ವ್ಯಾಜ್ಯಗಳೂ ಶಾಂತಿಯುತ ಮಾರ್ಗದ ಮೂಲಕವೇ ಪರಿಹರಿಸಿಕೊಳ್ಳಬೇಕೆಂದು ಮೊದಲನೇ ಮಹಾಯುದ್ಧದ ನಂತರದಲ್ಲಿ ವರ್ಸೇಲ್ಸ್ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಈ ಒಪ್ಪಂದದ ಆಶಯವನ್ನು ಜರ್ಮನಿ, ಇಟಲಿ, ಜಪಾನ್ ಉಲ್ಲಂಘಿಸಿ ಬಲಪ್ರಯೋಗದ ಮೂಲಕ ತಮ್ಮ ಸಾಮ್ರಾಜ್ಯ (ವಸಾಹತು) ವಿಸ್ತರಣೆಯಲ್ಲಿ ತೊಡಗಿದವು.
ಈ ಪರಿಣಾಮ ಹಾಗೂ ಅತಿಯಾದ ರಾಷ್ಟ್ರೀಯತೆ ಮತ್ತು ಕೈಗಾರಿಕೆಗಳ ಮೇಲಿನ ಮೋಹ, ವೈಜ್ಞಾನಿಕ ಸಂಶೋಧನೆಗಳ ಮೇಲೆ ಹಕ್ಕು ಸಾಧಿಸುವುದು ಸೇರಿದಂತೆ ಇತರೆ ಕಾರಣಗಳಿಂದಾಗಿ ಎರಡನೇ ಮಹಾಯುದ್ಧ ಆಸ್ಫೋಟವಾಯಿತು. 2ನೇ ಮಹಾಯುದ್ಧದಲ್ಲಿ ಇಡೀ ಜಗತ್ತೇ ಎರಡು ಹೋಳಾದವು. ಮಿತ್ರ ರಾಷ್ಟ್ರ ಮತ್ತು ಶತ್ರುರಾಷ್ಟ್ರ ಎಂಬ ಎರಡು ಬಣ ರೂಪುಗೊಂಡಿದ್ದವು. 1939ರಿಂದ 1945 ರವರೆಗೆ ನಡೆದ ಈ ಯುದ್ಧದಲ್ಲಿ ಸುಮಾರು 8 ಕೋಟಿ ಜನರು ಸಾವಿಗೀಡಾಗಿದ್ದರು. ಅಂದರೆ 1940 ರ ವೇಳೆಯಲ್ಲಿದ್ದ ಜಗತ್ತಿನ ಒಟ್ಟು ಸಂಖ್ಯೆಯ ಶೇ.3ರಷ್ಟುಮಂದಿ. ಸುದೀರ್ಘ 6 ವರ್ಷಗಳ ವರೆಗೆ ನಡೆದ ಈ ಯುದ್ಧವು ಅಗಾಧ ಸಾವು-ನೋವು, ನಷ್ಟಗಳನ್ನು ಕಂಡು ಸೆ.2, 1945ರಂದು ಪರಾರಯವಸಾನಗೊಂಡಿತು. ಅಲ್ಲದೆ ವಿಶ್ವ ಆರ್ಥಿಕ, ರಾಜಕೀಯ, ಸಾಮಾಜಿಕ, ವೈಜ್ಞಾನಿಕ ಕ್ಷೇತ್ರಗಳಲ್ಲಿಯೂ ಅಗಾಧ ಪರಿವರ್ತನೆಗೂ ಕಾರಣವಾಯಿತು.
ಕೊರೊನಾ ಯುದ್ಧ ಗೆದ್ದ 99 ರ ವೃದ್ಧ, 2 ನೇ ಜಾಗತಿಕ ಮಹಾಯುದ್ಧದ ಯೋಧ
- ಶತ್ರು ಪಡೆ
ಜರ್ಮನಿ, ಇಟಲಿ, ಜಪಾನ್, ಸ್ಲೊವಾಕಿಯಾ, ಹಂಗೇರಿ, ರೊಮಾನಿಯಾ (ನವೆಂಬರ್, 1940ವರೆಗೆ) ಮತ್ತು ಬಲ್ಗೇರಿಯಾ (ಮಾಚ್‌ರ್, 1941ವರೆಗೆ)
- ಮಿತ್ರಪಡೆ
ಬ್ರಿಟನ್, ಅಮೆರಿಕ, ರಷ್ಯಾ(ಯುಎಸ್‌ಎಸ್‌ಆರ್), ಫ್ರಾನ್ಸ್, ಆಸ್ಪ್ರೇಲಿಯಾ(ಕಾಮನ್ವೆಲ್ತ್ ರಾಷ್ಟ್ರ), ಬೆಲ್ಜಿಯಂ, ಬ್ರೆಜಿಲ್, ಕೆನಡಾ (ಕಾಮನ್ವೆಲ್ತ್ ರಾಷ್ಟ್ರ), ಚೀನಾ, ಜೆಕೊಸ್ಲೊವೇಕಿಯಾ, ಡೆನ್ಮಾರ್ಕ್, ಎಸ್ಟೊನಿಯಾ, ಗ್ರಿಸ್, ಭಾರತ (ಬ್ರಿಟನ್ ಸಾಮ್ರಾಜ್ಯದ ಅಧೀನ ರಾಷ್ಟ್ರ), ಲ್ಯಾವಿಯಾ, ಲಿಥುವೇನಿಯಾ, ಮಾಲ್ಟಾ, ನೆದರ್ಲೆಂಡ್, ನಾರ್ವೆ, ಪೋಲೆಂಡ್, ದಕ್ಷಿಣ ಆಫ್ರಿಕಾ, ಯುಗೋಸ್ಲೊವೇಯಾ ಹಾಗೂ ಇತರೆ ರಾಷ್ಟ್ರಗಳು.
ಯುದ್ಧಕ್ಕೆ ಮೂಲ ಕಾರಣ ಏನು?
ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ 2ನೇ ಮಹಾಯುದ್ಧಕ್ಕೆ ಮೂಲ ಕಾರಣವೇ ಅತ್ಯುಗ್ರ ರಾಷ್ಟ್ರೀಯತೆ. ಹೌದು ಆ ಸಂದರ್ಭದಲ್ಲಿ ಯೂರೋಪ್‌ನಲ್ಲಿ ತಮ್ಮ ದೇಶಕ್ಕಾಗಿ ಹೋರಾಡುವುದು ಅತ್ಯಂತ ಪವಿತ್ರ ಕೆಲಸವೆಂದು ಜನ ಭಾವಿಸಿದ್ದರು ಮತ್ತು ವಸಾಹತುಗಳನ್ನು ಹೊಂದುವುದು ರಾಷ್ಟ್ರದ ಘನತೆಯ ಪ್ರತೀಕ ಎಂದು ತಿಳಿದಿದ್ದರು. ಜೊತೆಗೆ ಪ್ರತಿಸ್ಪರ್ಧೆಯ ಮೈತ್ರಿಕೂಟಗಳ ಪದ್ಧತಿ ಸಹ ಯುದ್ಧಕ್ಕೆ ಕುಮ್ಮಕ್ಕು ನೀಡಿತ್ತು. 19ನೇ ಶತಮಾನದ ಅಂತ್ಯದಲ್ಲಿ ಯೂರೋಪಿನ ರಾಷ್ಟ್ರಗಳು ತಮ್ಮ ಆರ್ಥಿಕ ಮತ್ತು ರಾಜಕೀಯ ಆಸಕ್ತಿಯನ್ನು ಕಾಪಾಡಲು ರಕ್ಷಣಾತ್ಮಕ ಒಪ್ಪಂದಗಳನ್ನು ಜಾರಿಗೆ ತಂದವು.
ಮೂರನೇ ಮಹಾಯುದ್ಧದ ಹೊಸ್ತಿಲಲ್ಲಿ ಜಗತ್ತು: ಭಾಗವತ್ ಎಚ್ಚರಿಕೆ ಕಡೆಗಣಿಸದರೆ ಆಪತ್ತು!
ಜರ್ಮನಿ,ಅಸ್ಟ್ರಿಯಾ, ಹಂಗೇರಿ ಮತ್ತು ಇಟಲಿ ಸೇರಿ ಒಂದು ಒಕ್ಕೂಟ ಸ್ಥಾಪಿಸಿದರೆ, ಇಂಗ್ಲೆಂಡ್, ಫ್ರಾನ್ಸ್, ರಷ್ಯಾ ಸೇರಿ ಇನ್ನೊಂದು ಒಕ್ಕೂಟ ಸ್ಥಾಪಿಸಿದ್ದವು. ಇನ್ನೊಂದೆಡೆ ಈ ಬಣಗಳ ನಡುವೆ ಶಸ್ತ್ರಾಸ್ತ್ರಗಳ ಪೈಪೋಟಿ ಎದ್ದಿತ್ತು. ಈ ಎಲ್ಲಾ ಅಂಶಗಳು ಆಸ್ಫೋಟಗೊಂಡು 1939ರ ಸೆಪ್ಟೆಂಬರ್ 1ರಂದು ಜರ್ಮನಿ ಸರ್ವಾಧಿಕಾರಿ ಹಿಟ್ಲರ್, ಪೋಲೆಂಡ್ ಮೇಲೆ ದಾಳಿ ಮಾಡುವುದರೊಂದಿಗೆ ಯುದ್ಧ ಅಧಿಕೃತವಾಗಿ ಆರಂಭವಾಯಿತು. ಇದಾದ ಎರಡು ದಿನಗಳ ಬಳಿಕ ಫ್ರಾನ್ಸ್ ಮತ್ತು ಬ್ರಿಟನ್‌ಗಳೆರಡೂ ಜರ್ಮನಿ ಮೇಲೆ ಯುದ್ಧ ಸಾರಿದವು. ಹೀಗೆ ಯುದ್ಧ ಆರಂಭವಾಗುತ್ತಿದ್ದಂತೆ ಬಲಾಢ್ಯ ರಾಷ್ಟ್ರಗಳು ಒಂದೊಂದು ಬದಿಗೆ ಸರಿಯುತ್ತ ಎರಡು ವೈರಿ ಪಡೆಗಳ ಒಕ್ಕೂಟವೇ ನಿರ್ಮಾಣವಾಯಿತು. ಬಹುತೇಕ ರಾಷ್ಟ್ರಗಳು ಶತ್ರು ಅಥವಾ ಮಿತ್ರ ಪಾಳೆಯದಲ್ಲಿ ಗುರುತಿಸಿಕೊಂಡವು. 1941ರಲ್ಲಿ ಜಪಾನ್ ಕೂಡ ಯುದ್ಧದಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿತು. ಸುಮಾರು 30 ರಾಷ್ಟ್ರಗಳ 10 ಕೋಟಿಗೂ ಹೆಚ್ಚು ಜನರು ಈ ಯುದ್ಧದಲ್ಲಿ ಪಾಲ್ಗೊಂಡಿದ್ದರು.
ಶತ್ರುಪಡೆಗಳಿಗೆ ಸರಣಿ ಸೋಲು
ವೈಮಾನಿಕ ಸಮೀಕ್ಷೆ, ವಿಮಾನದಿಂದ ಬಾಂಬ್ ದಾಳಿ ಮತ್ತು ಸಮರ ಟ್ಯಾಂಕರ್ ಮುಂತಾದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಯುದ್ಧದಲ್ಲಿ ಬಳಕೆಯಾಗಿದ್ದವು. ಈ ನಡುವೆ 1942ರಲ್ಲಿ ನಡೆದ ಹವಾಯಿಯ ಬ್ಯಾಟಲ್ ಆಫ್ ಮಿಡ್‌ವೇನಲ್ಲಿ ಜಪಾನ್‌ನ ಓಟಕ್ಕೆ ಬ್ರೆಕ್ ಬಿತ್ತು. ಇತ್ತ ಉತ್ತರ ಆಫ್ರಿಕಾ ಹಾಗೂ ಸೋವಿಯತ್ ಯುನಿಯನ್ ವಿರುದ್ಧದ ದಾಳಿಯಲ್ಲಿ ಜರ್ಮನಿ ಸೋಲೊಪ್ಪಬೇಕಾಯಿತು. 1943ರಲ್ಲಿ ಸಂಭವಿಸಿದ ಸರಣಿ ಸೋಲುಗಳು ಜರ್ಮನಿಯನ್ನು ದಿಕ್ಕೆಡುವಂತೆ ಮಾಡಿದವು. ಇತ್ತ ಮಿತ್ರ ಪಡೆಗಳು ಸಿಸಿಲಿ ಯುದ್ಧದಲ್ಲಿ ಗೆಲ್ಲುವ ಮೂಲಕ ಇಟಲಿಯನ್ನು ಶರಣಾಗುವಂತೆ ನೋಡಿಕೊಂಡವು.
ಬಳಿಕ ಪೆಸಿಫಿಕ್ ಪ್ರದೇಶ ವ್ಯಾಪ್ತಿಯಲ್ಲಿ ಮಿತ್ರ ಪಡೆಗಳಿಗೆ ಜಯ ದೊರೆಯಿತು. ಜರ್ಮನಿಗೆ ಕಳೆದುಕೊಂಡಿದ್ದ ಭೂಪ್ರದೇಶದ ಮೇಲೆ ಸೋವಿಯತ್ ಯುನಿಯನ್ 1944ರಲ್ಲಿ ಮತ್ತೆ ನಿಯಂತ್ರಣ ಸಾಧಿಸಿತು. 1944 ಮತ್ತು 1945ರ ಅವಧಿಯಲ್ಲಿ ಅತಿ ದೊಡ್ಡ ಹೊಡೆತ ಬಿದ್ದಿದ್ದು ಜಪಾನ್ ಮೇಲೆ. ಅದು ವಶಪಡಿಸಿಕೊಂಡಿದ್ದ ಏಷ್ಯಾದ ಸೌತ್ ಸೆಂಟ್ರಲ್ ರಾಷ್ಟ್ರಗಳಾದ ಚೀನಾ, ಬರ್ಮಾದಲ್ಲಿ ಸೋಲು ಅನುಭವಿಸಿತು.
ಯುದ್ಧಕ್ಕೂ ಚಿನ್ನಕ್ಕೂ ಏನ್ರಿ ಸಂಬಂದ?; ಬಂದೂಕಿನೊಂದಿಗೆ ಇಳಿಕೆಯ ಅನುಬಂಧ!
- ಸೋತು ಶರಣಾದ ಜರ್ಮನಿ
ಸೋವಿಯತ್ ಯುನಿಯನ್ ಮತ್ತು ಮಿತ್ರ ಪಡೆಗಳ ದಾಳಿಗೆ ತತ್ತರಿಸಿದ ಜರ್ಮನಿ ಸೋತು ಶರಣಾಯಿತು. ಬರ್ಲಿನ್ ನಗರವನ್ನು ಸೋವಿಯತ್ ಯುನಿಯನ್, ಪೋಲೆಂಡ್ ಪಡೆಗಳು ತಮ್ಮ ತೆಕ್ಕೆಗೆ ತೆಗೆದುಕೊಂಡ ಪರಿಣಾಮ 1945 ಮೇ 8ರಂದು ಜರ್ಮನಿ ಬೇಷರತ್ತಾಗಿ ತನ್ನ ಸೋಲು ಒಪ್ಪಿಕೊಂಡಿತು. ಇದರೊಂದಿಗೆ ಯುರೋಪ್‌ನಲ್ಲಿನ ಯುದ್ಧ ಮುಕ್ತಾಯಗೊಂಡಿತು. ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಯುಗದ ಅಂತ್ಯವೂ ಆಯಿತು.
ಹಿರೋಶಿಮಾ, ನಾಗಸಾಕಿ ಮೇಲೆ ಅಣು ಬಾಂಬ್ ದಾಳಿ!
ಜರ್ಮನಿ ಸೋತು ಶರಣಾಗಿತ್ತು, 1945 ಜುಲೈ 26ರಂದು ಜಪಾನ್‌ಗೆ ಶರಣಾಗಲು ಸೂಚಿಸಲಾಗಿತ್ತು. ಆದರೆ, ಜಪಾನ್ ಶರಣಾಗತಿಗೆ ನಿರಾಕರಿಸಿತು. 1941ರಲ್ಲಿ ಪಲ್‌ರ್ ಹಾರ್ಬರ್ ಮೇಲೆ ದಾಳಿ ನಡೆಸಿದ್ದ ಜಪಾನ್ ವಿರುದ್ಧ ಸೇಡು ತೀರಿಸಿಕೊಳ್ಳಲು ಅಮೆರಿಕ ಕಾಯುತ್ತಿತ್ತು. ಇದೇ ಸಂದರ್ಭವನ್ನು ಬಳಸಿಕೊಂಡು ಅದು ಜಪಾನ್ ಪ್ರಮುಖ ನಗರಗಳಾದ ಹಿರೋಶಿಮಾ ಮತ್ತು ನಾಗಾಸಾಕಿಗಳ ಮೇಲೆ ಕ್ರಮವಾಗಿ ಆಗಸ್ಟ್ 6 ಮತ್ತು 9ರಂದು ಅಣು ಬಾಂಬ್ ದಾಳಿ ನಡೆಸಿತು. ಪರಿಣಾಮ ಕ್ಷಣಾರ್ಧದಲ್ಲಿ ಎರಡೂ ನಗರಗಳು ಅಕ್ಷರಶಃ ಛಿದ್ರವಾಗಿ ಹೋದವು. ಲಕ್ಷಾಂತರ ಜನರು ಸಾವನ್ನಪ್ಪಿದ್ದರು. ಕೊನೆಗೂ 1945 ಆಗಸ್ಟ್ 15ರಂದು ಜಪಾನ್ ಸೋಲು ಒಪ್ಪಿಕೊಂಡಿತು. ಅಲ್ಲಿಗೆ ಏಷ್ಯಾದಲ್ಲೂ ಯುದ್ಧ ಮುಕ್ತಾಯವಾಯಿತು. ಅಂತಿಮವಾಗಿ, 2 ಸೆಪ್ಟೆಂಬರ್ 1945ರಂದು ಎರಡನೇ ಮಹಾಯುದ್ಧ ಅಧಿಕೃತವಾಗಿ ಅಂತ್ಯವಾಯಿತು. ಹಿರೋಶಿಮಾ, ನಾಗಾಸಾಕಿ ಬಾಂಬ್ ದಾಳಿಯ ತೀವ್ರತೆ ಎಷ್ಟಿತ್ತೆಂದರೆ ಹಲವಾರು ವರ್ಷಗಳ ಕಾಲ ಅಲ್ಲಿ ಅಂಗವೈಕಲ್ಯ ಮಕ್ಕಳು ಜನಿಸಿದರು. ಅಣುಬಾಂಬ್ ನಡೆದ ಸ್ಥಳ ಅಕ್ಷರಶಃ ಏನೂ ಬೆಳೆಯದ ಮರುಭೂಮಿಯಂತಾಗಿತ್ತು.
ಅಂತಾರಾಷ್ಟ್ರೀಯ ವ್ಯಾಜ್ಯ ಪರಿಹಾರಕ್ಕೆ ವಿಶ್ವಸಂಸ್ಥೆ ಸ್ಥಾಪನೆ
2ನೇ ಮಹಾಯುದ್ಧ ಅಪಾರ ಸಾವು-ನೋವುಗಳನ್ನು ಉಂಟುಮಾಡಿದ್ದು ಮಾತ್ರವಲ್ಲದೆ ವಿಶ್ವ ಆರ್ಥಿಕ, ರಾಜಕೀಯ, ಸಾಮಾಜಿಕ, ವೈಜ್ಞಾನಿಕ ಕ್ಷೇತ್ರಗಳಲ್ಲಿ ಅಗಾಧ ಪರಿವರ್ತನೆಗೂ ಕಾರಣವಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ಯುದ್ಧದ ಮುಕ್ತಾಯದೊಂದಿಗೆ ಸಾಮಾಜಿಕ, ರಾಜಕೀಯ ಸಂರಚನೆ ಬದಲಾಯಿತು. ಭವಿಷ್ಯದಲ್ಲಿ ಇಂಥ ಕರಾಳ ಯುದ್ಧಗಳು ಸಂಭವಿಸದಿರಲೆಂದು ಅಂತಾರಾಷ್ಟ್ರೀಯ ವ್ಯಾಜ್ಯ ಪರಿಹಾರಕ್ಕೆ ‘ವಿಶ್ವ ಸಂಸ್ಥೆ’ ಎಂಬ ಬಲಿಷ್ಠ ಸಂಸ್ಥೆಯ ಉಗಮವಾಯಿತು. ಅದರ ಬೆನ್ನಲ್ಲೇ ಏಷ್ಯಾ ಮತ್ತು ಆಫ್ರಿಕಾ ಖಂಡಗಳ ಬಹುತೇಕ ರಾಷ್ಟ್ರಗಳು ವಸಹಾತುಶಾಹಿಯಿಂದ ಹೊರ ಬಂದವು. ಭಾರತವೂ 1947ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಿತು.