
ಶಾರ್ಕ್ ಟ್ಯಾಂಕ್ ಶೋ ಬಗ್ಗೆ ನಿಮಗೆ ಹೆಚ್ಚೇನು ಹೇಳಬೇಕಾಗಿಲ್ಲ, ಆದರೂ ತಿಳಿಯದಿರುವವರ ಗಮನಕ್ಕಾಗಿ ಶಾರ್ಕ್ ಟ್ಯಾಂಕ್ ಎಂಬುದು ಒಂದು ಉದ್ಯಮಕ್ಕೆ ಸಂಬಂಧಿಸಿದ ಟಿವಿ ಶೋ ಆಗಿದ್ದು, ಹೂಡಿಕೆದಾರರು ಹಾಗೂ ಉದ್ಯಮಿಗಳು ಹಾಗೂ ತೀರ್ಪುದಾರರು ಇರುವ ಒಂದು ಸಮಿತಿಯಾಗಿದೆ. ಇಲ್ಲಿ ಪ್ರಪಂಚದ ಎಲ್ಲೆಡೆಯ ಮಹತ್ವಾಕಾಂಕ್ಷಿ ಉದ್ಯಮಿಗಳು ತಮ್ಮ ವ್ಯವಹಾರದ ಮಾದರಿಗಳನ್ನು ಹೂಡಿಕೆದಾರರ ಮುಂದೆ ವಿವರಿಸಿ ತಿಳಿಸಿ ಅವರ ಈ ಹೊಸ ಅಲೋಚನೆಗೆ ಹಣವನ್ನು ಹೂಡಿಕೆ ಮಾಡಲು ಮನವೊಲಿಸುವ ಪ್ರಯತ್ನ ಮಾಡುತ್ತಾರೆ. ಜಗತ್ತಿನೆಲ್ಲೆಡೆ ಈ ಶೋ ಫೇಮಸ್ ಆಗಿದ್ದು, ಅನೇಕ ಉದ್ಯಮಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಹಾಗೂ ಅನೇಕ ಮಹತ್ವಕಾಂಕ್ಷೆಯುಳ್ಳ ಹಾಗೂ ಉದ್ಯಮದ ಬಗ್ಗೆ ಒಳ್ಳೆ ಐಡಿಯಾ ಇದ್ದು ಹಣದ ಕೊರತೆ ಎದುರಿಸುತ್ತಿರುವ ಯುವ ಉದ್ಯಮಿಗಳು ಈ ಶೋದಲ್ಲಿ ಭಾಗವಹಿಸಿ ತಮ್ಮ ಉದ್ಯಮದ ಅಲೋಚನೆಯ ಬಗ್ಗೆ ಅಲ್ಲಿ ವಿವರಿಸಿ ಏಕಾಗಿ ಇದರ ಮೇಲೆ ಹೂಡಿಕೆದಾರರು ಹಣ ಹೂಡಬೇಕು ಎಂದು ವಿವರಿಸುತ್ತಾರೆ ಹಾಗೂ ಇವರ ಮನವೊಲಿಕೆ ಇಷ್ಟವಾದಲ್ಲಿ ಅನೇಕ ಹೂಡಿಕೆದಾರರು ಈ ಐಡಿಯಾಗಳಿಗೆ ಹಣ ಹೂಡಲು ಮುಂದೆ ಬರುತ್ತಾರೆ. ಬೇರೆ ಬೇರೆ ದೇಶಗಳಲ್ಲಿ ಈ ಶಾರ್ಕ್ ಟ್ಯಾಂಕ್ ಶೋ ನಡೆಯುತ್ತದೆ. ಹಾಗೆಯೇ ಪಾಕಿಸ್ತಾನದಲ್ಲಿ ನಡೆದ ಟಾಕ್‌ಶೋದಲ್ಲಿ ವೃದ್ಧರೊಬ್ಬರು ಉದ್ಯಮದ ಬಗ್ಗೆ ಯಾವುದೇ ನಿಖರ ಐಡಿಯಾಗಳಿಲ್ಲದೇ ಬರೋಬ್ಬರಿ 300 ಕೋಟಿ ಪಾಕಿಸ್ತಾನ ರೂಪಾಯಿಗಳನ್ನು ನೀಡುವಂತೆ ಕೇಳಿದ್ದು, ಇದು ಅಲ್ಲಿದ್ದವರನ್ನು ಅಚ್ಚರಿಗೆ ದೂಡಿದೆ.
ಪಾಕಿಸ್ತಾನದ ಶಾರ್ಕ್ ಟ್ಯಾಂಕ್ ಶೋದಲ್ಲಿ ಕೇವಲ 3% ಈಕ್ವಿಟಿಗೆ ಬದಲಾಗಿ300 ಕೋಟಿ ಪಾಕಿಸ್ತಾನ ರೂಪಾಯಿ ನೀಡುವಂತೆ ವಯಸ್ಸಾದ ವ್ಯಕ್ತಿಯೊಬ್ಬರು ಅಸಂಬದ್ಧವಾದ ಬೇಡಿಕೆ ಅಲ್ಲಿದ್ದ ಶೋದ ತೀರ್ಪುಗಾರರು ಹಾಗೂ ನೆಟ್ಟಿಗರನ್ನು ಅಚ್ಚರಿಗೆ ದೂಡಿದೆ. ಈ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದೆ. @startuppakistansp ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ವೈರಲ್ ಆಗಿದ್ದು, ವ್ಯಕ್ತಿಯೊಬ್ಬರು ತುಂಬು ವಿಶ್ವಾಸದಿಂದ 300 ಕೋಟಿ ರೂಪಾಯಿ (ಭಾರತದ 91 ಕೋಟಿ ರೂಪಾಯಿ) ಹಣ ನೀಡುವಂತೆ ಕೇಳಿದ್ದಾರೆ. ಇವರ ಈ ಬೇಡಿಕೆ ಶೋದ ತೀರ್ಪುಗಾರರನ್ನು ಶಾಕ್ ಆಗುವಂತೆ ಮಾಡಿದೆ. ಇದೇ ವೇಳೆ ಹೂಡಿಕೆದಾರರು ಅವರ ಬಳಿ ಅವರು ನೀಡಲು ಸಿದ್ಧವಿರುವ ಈಕ್ವಿಟಿ ಬಗ್ಗೆ ಕೇಳಿದಾಗ ಅವರು ಕೇವಲ 3% ಅಂತ ಹೇಳಿದ್ದಾರೆ ಇದರಿಂದ ಪ್ಯಾನೆಲ್‌ನಲ್ಲಿ ಕುಳಿತಿದ್ದವರು ಮತ್ತಷ್ಟು ಶಾಕ್ ಆಗಿದ್ದಾರೆ.
ಇದೇ ವೇಳೆ ಆ ವ್ಯಕ್ತಿಗೆ ಅವರ ಉದ್ಯಮದ ಐಡಿಯಾಗಳಿಂದ ಸಿಗುವ ಆದಾಯದ ಬಗ್ಗೆ ಅವರನ್ನು ಶೋದ ತೀರ್ಪುಗಾರರು ಪ್ರಶ್ನಿಸಿದರೆ ಅವರ ಬಳಿ ಸಮರ್ಪಕ ಉತ್ತರವಿರಲಿಲ್ಲ, ಇದರಿಂದ ಈ ಶೋ ಪೂರ್ತಿ ನಗೆಪಾಟಲೀಗೀಡಾಗಿದೆ. ಆದರೆ ಆ ವ್ಯಕ್ತಿ ಮಾತ್ರ ಕೊನೆವರೆಗೂ ತಮ್ಮ ನಿಲುವಿಗೆ ಬದ್ಧರಾಗಿದ್ದಂತೆ ಕಂಡು ಬಂದಿದ್ದಲ್ಲದೇ ಒಂದು ವೇಳೆ ತನ್ನ ಬಳಿ ಹಣ ಇದ್ದರೆ ನಿಮ್ಮ ಬಳಿ ಹೀಗೆ ಕೇಳುವ ಬದಲು ನಾನೇ ಶೋದ ಶಾರ್ಕ್‌ಗಳಂತೆ ಹೂಡಿಕೆದಾರನಾಗುತ್ತಿದ್ದೆ ಎಂದು ಹೇಳುವ ಮೂಲಕ ಶೋದಲ್ಲಿದ್ದವರಿಗೆ ಶಾಕ್ ನೀಡಿದ್ದಾರೆ. ಅಲ್ಲದೇ ತಾನು ಕೇಳಿದ ಮೊತ್ತ ಕೇವಲ ನಮ್ಮ ದೇಶದಲ್ಲಿ ಕಡ್ಲೆಬೀಜದಷ್ಟೇ ಮೌಲ್ಯದ್ದು ಎಂದಿದ್ದಾರೆ.
ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಪಾಕಿಸ್ತಾನದಲ್ಲಿ ನಡೆದ ಈ ಶೋದ ಬಗ್ಗೆ ವ್ಯಂಗ್ಯವಾಡಿದ್ದಾರೆ, ಅವರು ಶಾರ್ಕ್ ಟ್ಯಾಂಕ್‌ನಂತಹ ಗಂಬೀರ ಶೋವನ್ನು ಕೂಡ ಕಾಮಿಡಿ ಶೋ ಮಾಡಿದ್ದಾರೆ. ಇಂಡಿಯಾ ಗಾಟ್ ಲ್ಯಾಟೆಂಟ್‌ಗೆ ಕಠಿಣ ಸ್ಪರ್ಧೆ ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ. ಚಾಚು ತಮಾಷೆ ಮಾಡ್ತಿಲ್ಲ ಆದರೆ ಅವರಿಗೆ ಜ್ಞಾನದ ಕೊರತೆ ಇದೆ ಹಾಗೂ ಅವರು ಆತನಿಗೆ ದ್ರೋಹ ಬಗೆದರು ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೆ ಕೆಲವರು ಶೋದ ಸತ್ಯಾಸತ್ಯತೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಈ ವೀಡಿಯೋವನ್ನು 3.5 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ಇದನ್ನು ಓದಿ:ಭವಿಷ್ಯದ ಕನಸು ಕಂಡು ಊರು ಬಿಟ್ಟು ಇನ್ಫೋಸಿಸ್ ಸರ್ವಿಸ್ ಬಾಯ್ ಆಗಿ ದುಡಿದಾತ ಇಂದು ಎರಡು ಕಂಪೆನಿ ಒಡೆಯ!
ಇದನ್ನು ಓದಿ: ದೆಹಲಿ ಪ್ರವಾಹ; ಮೆಟ್ರೋ ಸವಾರಿಯಲ್ಲಿ ಕಚೇರಿಗೆ ತೆರಳಿದ ಶಾರ್ಕ್ ಟ್ಯಾಂಕ್‌ನ ರಾಧಿಕಾ ಗುಪ್ತಾಗೆ ಮೆಚ್ಚುಗೆ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.