ಕೊರೋನಾ ಭೀತಿಯಲ್ಲಿ ಶಾಲೆಗೆ ರಜೆ: ಮಕ್ಕಳ ನಿಭಾಯಿಸೋದೆ ಅಮ್ಮನ ಹೊಸ ಸವಾಲು

By Suvarna NewsFirst Published Mar 14, 2020, 12:21 PM IST
Highlights

ಕೊರೋನಾ ಹಿನ್ನೆಲೆ ಶಾಲೆಗಳಿಗೆ ರಜೆಯನ್ನೇನೋ ಘೋಷಿಸಿಯಾಗಿದೆ. ಮಕ್ಕಳ ಕಥೆ ಏನು..? ಸಮ್ಮರ್ ಕ್ಯಾಂಪ್‌ಗಳೂ ನಡೆಯದು. ದುಬಾರಿ  ಫೀಸ್‌ ಕೇಳುವ ಸಮ್ಮರ್ ಕ್ಯಾಂಪ್‌, ಪ್ಲೇ ಸ್ಕೂಲ್‌ಗಳನ್ನು ಬೈಯುತ್ತಲೇ, ಪೋಷಕರು ಮಕ್ಕಳನ್ನು ಅಲ್ಲಿ ಬಿಡುತ್ತಿದ್ದರು. ಆದರೆ ಈ ಬಾರಿ ಆ ಆಪ್ಶನ್ ಕಟ್. ಮಕ್ಕಳನ್ನು ಎಲ್ಲಿ ಕಳುಹಿಸಿವುದೂ ಸ್ವಲ್ಪ ಮಟ್ಟಿಗೆ  ರಿಸ್ಕ್ ವಿಚಾರವೇ. ಈಗ ಕೊರೋನಾಗಿಂತ ದೊಡ್ಡ ತಲೆ ನೋವು ಏನಪ್ಪಾ ಅಂದ್ರೆ ಅವಧಿಗೂ ಮುನ್ನವೇ ಮಕ್ಕಳಿಗೆ ಸಿಕ್ಕಿರುವ ಬೇಸಗೆ ರಜೆ..!

ಕೊರೋನಾ ವೈರಸ್‌ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕರ್ನಾಟಕದಲ್ಲಿ ಈಗಾಗಲೇ ಕೊರೋನಾ ವೈರಸ್‌ ಬಾಧಿಸಿ ಕಲಬುರಗಿ ಮೂಲದ ವ್ಯಕ್ತಿ ಮೃತಪಟ್ಟಿದ್ದು, ಆರೋಗ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರ ತುರ್ತಾಗಿ ರಾಜ್ಯಾದ್ಯಂತ ಬಂದ್ ಘೋಷಿಸಿದೆ. ಶಾಲೆ,ಕಾಲೇಜುಗಳಿಗೆ ರಜೆಯನ್ನೂ ನೀಡಲಾಗಿದೆ. ಸ್ವಲ್ಪ ದಿನದ ಮಟ್ಟಿಗೆ ವ್ಯವಸ್ಥೆಯೇ ಸ್ಥಬ್ಧವಾದ ರೀತಿ ಭಾಸವಾದರೂ ಅಚ್ಚರಿ ಪಡಬೇಕಿಲ್ಲ.

ನಟಿ ಸಮೀರಾ ರೆಡ್ಡಿಯನ್ನೂ ಕಾಡಿತ್ತಂತೆ ಈ ಪ್ರಾಬ್ಲಂ

ಶಾಲೆಗಳಿಗೆ ರಜೆಯನ್ನೇನೋ ಘೋಷಿಸಿಯಾಗಿದೆ. ಮಕ್ಕಳ ಕಥೆ ಏನು..? ಸಮ್ಮರ್ ಕ್ಯಾಂಪ್‌ಗಳೂ ನಡೆಯದು. ದುಬಾರಿ  ಫೀಸ್‌ ಕೇಳುವ ಸಮ್ಮರ್ ಕ್ಯಾಂಪ್‌, ಪ್ಲೇ ಸ್ಕೂಲ್‌ಗಳನ್ನು ಬೈಯುತ್ತಲೇ, ಬೇರೆ ಮಾರ್ಗವಿಲ್ಲದೆ ಮಕ್ಕಳನ್ನು ಅಲ್ಲಿ ಬಿಡುತ್ತಿದ್ದರು. ಆದರೆ ಈ ಬಾರಿ ಆ ಆಪ್ಶನ್ ಕಟ್. ಮಕ್ಕಳನ್ನು ಎಲ್ಲಿ ಕಳುಹಿಸಿವುದೂ ಸ್ವಲ್ಪ ಮಟ್ಟಿಗೆ  ರಿಸ್ಕ್ ವಿಚಾರವೇ. ಈಗ ಕೊರೋನಾಗಿಂತ ದೊಡ್ಡ ತಲೆ ನೋವು ಏನಪ್ಪಾ ಅಂದ್ರೆ ಅವಧಿಗೂ ಮುನ್ನವೇ ಮಕ್ಕಳಿಗೆ ಸಿಕ್ಕಿರುವ ಬೇಸಗೆ ರಜೆ.

ಮಕ್ಕಳನ್ನು ನೋಡಿಕೊಳ್ಳಲು ಆಯಾ ಸಿಗೋದು ಕಷ್ಟ

ಮುಂಜಾನೆ ಮಗುವನ್ನು ಶಾಲೆಗೆ ಕಳುಹಿಸಿ ನೆಮ್ಮದಿಯಾಗಿ ಕೆಲಸಕ್ಕೆ ತೆರಳುತ್ತಿದ್ದ ಪೋಷಕರೀಗ ಚಿಂತೆಗೆ ಬಿದ್ದಿದ್ದಾರೆ. ವೈರಸ್ ಭೀತಿಯಲ್ಲಿ ಖಾಸಗಿ  ಕಂಪನಿ ಉದ್ಯೋಗಿಗಳೆಲ್ಲ ವರ್ಕ್ ಫ್ರಂ ಹೋಂ ಮಾಡಿದರೆ, ಅಮ್ಮಂದಿರಿಗೆ ದೊಡ್ಡದೊಂದು ಕೆಲಸ ಮನೆಯಲ್ಲಿ ಕಾದು ಕುಳಿತಿದೆ. ಈಗಾಗಲೇ ಸುಮಾರು ಜನ ಬೆಂಗಳೂರಿಗೆ ತತ್ಕಾಲಿಕ ಬೈ ಹೇಳಿ ಊರಿನ ಕಡೆ ಮುಖ ಮಾಡಿದ್ದು, ಮಕ್ಕಳನ್ನು ನೋಡಿಕೊಳ್ಳಲು ಆಯಾಗಳು ಸಿಗುವುದು ದೂರದ ಮಾತು. ಮತ್ತೇನು ಮಾಡುವುದು..?  ಹೋಗಲಿ. ಫ್ಯಾಮಿಲಿ ಟೂರ್ ಆದ್ರೂ ಹೋಗಿ ಬರೋಣ ಎಂದರೆ ಪ್ರಯಾಣವೂ ಅಸುರಕ್ಷಿತ. ನಾಲ್ಕು ಗೋಡೆ ಮಧ್ಯೆ ತುಂಟ ಮಕ್ಕಳನ್ನು ಸಂಭಾಳಿಸುತ್ತಾ, ಹೆಚ್ಚಿಗೆ ಅಡುಗೆಯನ್ನೂ ಮಾಡಿ, ಆಫೀಸ್‌ ಕೆಲಸವನ್ನೂ ಮನೆಯಲ್ಲೇ ಮುಗಿಸಬೇಕು ಎಂದಾದರೆ ಇದು ಸವಾಲಿನ ಕೆಲಸವೇ ಸರಿ.

ವರ್ಕ್‌ ಫ್ರಂ ಹೋಂ ಮಾಡೋದು ಕಷ್ಟ

ಗ್ಯಾಸ್‌, ಫ್ರಿಡ್ಜ್, ಲಕ್ಸುರಿ ಟಿವಿ, ಒಂದೂ ಕಲೆಯಾಗದ ಗೋಡೆ ಮಧ್ಯೆ ಮಕ್ಕಳನ್ನು ಬಿಟ್ಟು ಹೋಗುವುದು ಎಷ್ಟು ರಿಸ್ಕಿ ಎಂದುಬನ್ನು ಒಬ್ಬ ಅಮ್ಮ ಮಾತ್ರ ಯೋಚಿಸಬಲ್ಲಳು. ಮಗುವನ್ನು ಆಡಲು ಬಿಟ್ಟು  ಕೆಲಸ ಮಾಡಿಕೊಳ್ಳುವುದೂ ಸಾಧ್ಯವಿಲ್ಲ. ಆಡಿ, ಕುಣಿದು ಮಗು ಎಲ್ಲೆಲ್ಲಿ ಹೋಗುತ್ತದೋ, ಟೆರೇಸ್ ಕಡೆಗೇನಾದರೂ ಹೋದರೆ, ಗ್ಯಾಸ್‌ ಬಳಿಗೆ ತಲುಪಿರಬಹುದಾ..? ಅಡುಗೆ ಮನೆಯಲ್ಲಿ ನೀರು ಚೆಲ್ಲಿರಬಹುದುದಾ...? ಹೀಗೆ ನೂರು ಭಯ.

ಇನ್‌ಫೆಕ್ಷನ್‌ನಿಂದ ದೂರವಿರಲು ಬಳಸಬಹುದಾದ ಐದು ವಸ್ತುಗಳು!

ಈ ನಡುವೆ ಆಫೀಸ್ ಕೆಲಸವನ್ನೂ ಮನೆಯಲ್ಲೇ ಕುಳಿತು ಮಾಡುತ್ತಾ, ಮೂರು ಹೊತ್ತು ಅಡುಗೆಯನ್ನೂ ಮಾಡಿ, ಮಕ್ಕಳನ್ನು ನೋಡಿಕೊಳ್ಳುತ್ತಾ, ಕೊರೋನಾ ಭಯದಿಂದ ಸ್ವಚ್ಛತೆಗೆ ಸ್ವಲ್ಪ ಹೆಚ್ಚು ಒತ್ತು ಕೊಡಬೇಕಾದ ಅನಿವಾರ್ಯತೆ ಅಮ್ಮನಿಗಿದೆ.

ಈ ಬಾರಿಯ ರಜೆಯಲ್ಲಿ ಅಮ್ಮಂದಿರಿಗೆ ದೊಡ್ಡ ಸವಾಲು

ಬೇಸಗೆ ರಜೆಯಲ್ಲಿ ಮಕ್ಕಳನ್ನು ಊರಿಗೆ ಕಳುಹಿಸಿ ಅಜ್ಜನ ಮನೆಗೆ ಬಿಟ್ಟು ನೆಮ್ಮದಿಯಾಗಿರುವುದೂ ಸಾಧ್ಯವಿಲ್ಲ. ಅಲ್ಲೇನು ಮಾಡುವರೋ..? ಯಾರ್ಯಾರ ಜೊತೆ ಬೆರೆಯುತ್ತಾರೋ ಎನ್ನುವ ಭಯ.  ಮಕ್ಕಳನ್ನು ಯಾವುದಾದರೂ ಕ್ಲಾಸ್‌ಗಳಿಗೆ ಬಿಟ್ಟು ಆರಾಮವಾಗಿರುತ್ತಿದ್ದ ಅಮ್ಮಂದಿರಿಗೀಗ ಸದ್ಯ ಮಕ್ಕಳನ್ನು ಸಂಭಾಳಿಸುವುದಕ್ಕಿಂತ ದೊಡ್ಡ ತಲೆ ನೋವು ಬೇರೆ ಇಲ್ಲ.

ಹಳ್ಳಿಗಳಂತಲ್ಲ ನಗರ:

ಹಳ್ಳಿಗಳಲ್ಲಿ ಬೇಸಗೆ ರಜೆ ಬಂದರೆ ಮಕ್ಕಳಿಗಾಗಿ ಮಾಡುವುದಕ್ಕೆ ಬೇಕಾದಷ್ಟು ಕೆಲಸಗಳಿರುತ್ತವೆ. ಅಡಕೆ ಹೆಕ್ಕುವುದು, ಕಾಯಿ ಹೆಕ್ಕುವುದು, ಹುಲ್ಲು ಕೀಳುವುದು, ತೋಟದ ಸಣ್ಣಪುಟ್ಟ ಕೆಲಸ.. ಹೀಗೆ ಹಳ್ಳಿಯ ಮಕ್ಕಳ ರಜೆ ಮುಗಿಯುವುದು ದೊಡ್ಡ ಕೆಲಸವಲ್ಲ.ಆದರೆ ತಲೆ ನೋವು ನಗರದ ತಾಯಂದಿರಿಗೆ. ಅವರಿಗಿದ್ದ ಏಕೈಕ ನಂಬಿಕೆ ಪ್ಲೇ ಹೋಂ, ಸಮ್ಮರ್ ಕ್ಯಾಂಪ್. ಇದೂ ರದ್ದಾದರೆ ಅಮ್ಮಂದಿರಿಗೆ ಮಕ್ಕಳನ್ನು ನೋಡಿಕೊಳ್ಳುವುದೇ ಸಾಹಸ.

ಮಕ್ಕಳನ್ನು ಊರಿಗೆ ಕಳಿಸೋ ಪ್ಲಾನ್

ಸಿಟಿಯಲ್ಲಿ ಕೊರೋನಾ ಭೀತಿ ಹೆಚ್ಚಿದ್ದು, ಮಕ್ಕಳನ್ನು ಹಳ್ಳಿಗೆ ಕಳುಹಿಸೋ ಯೋಚನೆ ಮಾಡಿದ್ದೆ. ಆದರೆ ಮಲೆನಾಡಿನಲ್ಲಿ ಮಂಗನ ಕಾಯಿಲೆ ಭೀತಿ ಇದ್ದು, ಸ್ವಲ್ಪ ಹಿಂಜರಿಕೆ ಆಗಿದೆ. ಆದರೆ ಇಲ್ಲಿ ಸಮ್ಮರ್ ಕ್ಯಾಂಪ್‌ಗಳೆಲ್ಲ ಕ್ಯಾನ್ಸ್‌ಲ್ ಆಗಿರೋದ್ರಿಂದ ಅನಿವಾರ್ಯವಾಗಿ ಮಕ್ಕಳನ್ನು ಊರಿಗೆ ಕಳುಹಿಸೋದಕ್ಕೆ ನಿರ್ಧರಿಸಿದ್ದೇನೆ ಎನ್ನುತ್ತಾರೆ ಬೆಂಗಳೂರಿನ ಐಟಿ ಉದ್ಯೋಗಿ ರಾಧಾ.

ಪೈಂಟಿಗ್ ಕೊಟ್ಟು ಕೂರಿಸಿ ಬಿಡ್ತೀನಿ

ಕೊರೋನಾ ಭೀತಿಯಿಂದ ವರ್ಕ್ ಫ್ರಂ ಹೋಂ ಅನಿವಾರ್ಯವಾಗಿದೆ. ಪೇಂಟಿಂಗ್ ಡಬ್ಬ, ಪೇಪರ್ ಕೊಟ್ಟು ಮಕ್ಕಳನ್ನು ಕೂರಿಸಿಬಿಡುತ್ತೇನೆ. ಕಾಗದದಲ್ಲಿ ತುಂಬಬೇಕಾದ ಬಣ್ಣ ಕೆಲವೊಮ್ಮೆ ಗೋಡೆಯನ್ನೂ ತುಂಬುತ್ತದೆ. ಆದರೂ ಸಹಿಸಿಕೊಳ್ಳಲೇ ಬೇಕು. ಹೊರಗೆ ಆಡುವುದಕ್ಕಿಂತ ಇದುವೇ ವಾಸಿ ಎನಿಸುತ್ತದೆ ಎನ್ನುತ್ತಾರೆ ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿ ಸ್ಮಿತಾ.

ಏನೇನು ಮಾಡಬಹುದು..?

*ಮಾಮೂಲು ವಿಡಿಯೋ ಗೇಮ್, ಯೂಟ್ಯೂಬ್ ಕಾರ್ಟೂನ್ ಬಿಟ್ಟು ಹಳ್ಳಿ ಭಾಗದ ಹಳೆಯ ಆಟಗಳನ್ನು ಪರಿಚಯಿಸಿ. ವಿಡಿಯೋ ಗೇಮ್ ಬೋರ್ ಹೊಡೆಸಿದಷ್ಟು ಚೆನ್ನೆಮಣೆಯಂತ ಹಳ್ಳಿ ಆಟಗಳು ಬೋರ್ ಆಗಲಾರವು. ಹೊಸ ಆಟವಾದ್ದರಿಂದ ಮಕ್ಕಳ ಗಮನ ಅಲ್ಲೇ ಉಳಿಯುತ್ತದೆ.

*ಸುಂದರ ಚಿತ್ರಗಳನ್ನು ಒಳಗೊಂಡ ಕಥೆ ಪುಸ್ತಕಗಳನ್ನು ತಂದುಕೊಡಿ. ಚಿತ್ರಗಳೇ ಇಲ್ಲದ ದಪ್ಪ ಪುಸ್ತಕ ತಂದುಕೊಟ್ಟರೆ ಅದನ್ನು ನೀವೇ ಓದಬೇಕಷ್ಟೆ. ಮಕ್ಕಳು ಮುಟ್ಟಿಯೂ ನೋಡಲಾರರು.

ಈ ಟಿಪ್ಸ್ ಪಾಲಿಸಿದ್ರೆ ಕೊರೋನಾ ಸೋಂಕು ಮಕ್ಕಳನ್ನು ತಾಕದು!

*ಕೊರೋನಾ ಭೀತಿಯಿಂದ ಸ್ವಚ್ಛತೆ ಬಗ್ಗೆಯೂ ಕಾಳಜಿ ವಹಿಸಬೇಕು. ಹಾಗಾಗಿ ಮಕ್ಕಳಿಗೆ ಅವರ ಕೊಠಡಿ, ಡೆಸ್ಕ್‌ಗಳನ್ನು ಸ್ವಚ್ಛ ಮಾಡುವುದನ್ನು ಹೇಳಿಕೊಡಿ. ನೀವು ಮಾಡುವ ಕೆಲಸಗಳಲ್ಲಿ ಅವರನ್ನೂ ಸೇರಿಸಿಕೊಂಡರೆ ಆ ಬಗ್ಗೆ ಅವರ ಆಸಕ್ತಿ ಹೆಚ್ಚುತ್ತದೆ.

*ಸಿಂಪಲ್ ಜ್ಯೂಸ್ ಮಾಡುವುದು, ಬೆಂಕಿ ಇಲ್ಲದೆ ತಯಾರಿಸಬಹುದಾದ ಅಡುಗೆ ಹೇಳಿಕೊಡಿ. ಹೆಚ್ಚಿನ ಮಕ್ಕಳಿಗೆ ಇದು ಆಸಕ್ತಿಯ ವಿಷಯ.

* ಸಮ್ಮರ್ ಕ್ಯಾಂಪ್‌ಗಳಲ್ಲಿ ಮಾಡುವಂತಹ ಡ್ರಾಯಿಂಗ್, ಪೇಂಟಿಂಗ್, ಪೇಪರ್ ಆರ್ಟ್, ಕ್ಲೇ ಆರ್ಟ್‌ಗಳನ್ನು ಮಾಡಲು ಹೇಳಿಕೊಡಿ. ಕ್ರಿಯೇಟಿವ್‌ ಕೆಲಸಗಳ ಬಗ್ಗೆಯೂ ಮಕ್ಕಳಿಗೆ ವಿಶೇಷ ಇಂಟ್ರೆಸ್ಟ್ ಇರುತ್ತದೆ.

click me!