Aug 6, 2022, 2:02 PM IST
ರಾಜ್ಯದಲ್ಲಿ ಮಳೆಯ ಆರ್ಭಟ ಕೊಂಚ ಕಡಿಮೆಯಾಗಿದ್ದರೂ, ಅದರ ಪರಿಣಾಮ ಮಾತ್ರ ನಿಂತಿಲ್ಲ. ಅನಾಹುತಗಳು ಸಂಭವಿಸುತ್ತಲೇ ಇವೆ. ಶುಕ್ರವಾರ ಮಳೆ ಸಂಬಂಧಿ ಅನಾಹುತಕ್ಕೆ ನಾಲ್ವರು ಬಲಿಯಾಗಿದ್ದು, ಗೋಡೆ ಕುಸಿದು ಬಿದ್ದು ಜಾನುವಾರು ಕೂಡ ಮೃತಪಟ್ಟಿವೆ. ಈ ನಡುವೆ, ಮಲೆನಾಡು ಹಾಗೂ ಕರಾವಳಿ ಭಾಗಕ್ಕೆ ಹವಾಮಾನ ಇಲಾಖೆ ‘ರೆಡ್ ಅಲರ್ಟ್’ ಸಾರಿರುವುದರಿಂದ ಆತಂಕ ಮುಂದುವರಿದಿದೆ.
ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿ ಸಮೀಪದ ಹೆಗ್ಗವಾಡಿಪುರ ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ಆಲದ ಮರದ ರೆಂಬೆ ಬಿದ್ದು ತಂದೆ-ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಂತೇಮರಹಳ್ಳಿಯ ರಾಘವೇಂದ್ರ ಬಡಾವಣೆಯ ಎಚ್.ಪಿ.ರಾಜು(49) ಹಾಗೂ ಪುತ್ರ ಶರತ್ (15) ಮೃತರು. ರಾಜ್ಯದ 14 ಜಿಲ್ಲೆಗಳಲ್ಲಿ ಮಳೆ ತೀವ್ರತೆ ಹೆಚ್ಚಿದ್ದು, 600 ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಕುಸಿದಿದ್ದು, 2,312 ಮನೆಗಳು ಹೆಚ್ಚಿನ ಹಾನಿಯಾಗಿದ್ದರೆ, 14,575 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 21431 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಭೂಮಿಗೆ ನೀರು ನುಗ್ಗಿ ಬೆಳೆ ಹಾನಿ ಆಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬುಧವಾರ ಉತ್ತಮ ಮಳೆಯಾಗಿದೆ. ಮಳೆ ಸಂಬಂಧಿ ಕಾರಣಗಳಿಗೆ ಮತ್ತೆ ನಾಲ್ವರು ಬಲಿಯಾಗಿದ್ದಾರೆ. ರಾಯಚೂರು, ಕಲಬುರಗಿಗಳಲ್ಲಿ ರೈತರ ಹೊಲಗಳಿಗೆ ನೀರು ನುಗ್ಗಿ ಹತ್ತಿ, ತೊಗರಿ, ಹೆಸರು, ಸಬಸ್ಸಿಗೆ, ಮೆಂತೆ, ಈರುಳ್ಳಿ, ಬದನೆ, ಮೆಣಸು ಬೆಳೆಗಳು ಹಾನಿಯಾಗಿದೆ.