ಐಸಿಸಿ ಚಾಂಪಿಯನ್ಸ್ ಟ್ರೋಫಿ ಸಂಪೂರ್ಣವಾಗಿ ಪಾಕಿಸ್ತಾನದಲ್ಲೇ ನಡೆಯಬೇಕೆಂದು ಪಿಸಿಬಿ ಪಟ್ಟುಹಿಡಿದಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ದುಬೈ: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ವಿಚಾರದಲ್ಲಿ ಗೊಂದಲ ಸದ್ಯಕ್ಕೆ ಬಗೆಹರಿಯುವ ಲಕ್ಷಣ ಕಂಡುಬರುತ್ತಿಲ್ಲ. ಟೂರ್ನಿಯನ್ನು ಎಲ್ಲಿ ನಡೆಸಬೇಕು ಎಂಬ ವಿಚಾರದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಶುಕ್ರವಾರ ಕರೆದಿದ್ದ ಸಭೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ನಡುವೆ ಒಮ್ಮತ ಮೂಡಿಲ್ಲ. ಹೀಗಾಗಿ ಸಭೆ ಮುಂದೂಡಿಕೆಯಾಗಿದೆ.
2025ರ ಫೆಬ್ರವರಿ-ಮಾರ್ಚ್‌ನಲ್ಲಿ ಪಾಕಿಸ್ತಾನದಲ್ಲಿ ನಡೆಯಬೇಕಿರುವ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದು ಬಿಸಿಸಿಐ ಈಗಾಗಲೇ ಸ್ಪಷ್ಟಪಡಿಸಿದೆ. ಬದಲಾಗಿ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ಅಂದರೆ ತನ್ನ ಪಂದ್ಯಗಳನ್ನು ಪಾಕಿಸ್ತಾನದಿಂದ ಹೊರಗಡೆ ನಡೆಸಬೇಕು ಎಂದು ಒತ್ತಾಯಿಸುತ್ತಿದೆ. ಶುಕ್ರವಾರ ಸಭೆಯಲ್ಲಿ ಈ ಬಗ್ಗೆ ಐಸಿಸಿ ಪ್ರಸ್ತಾಪಿಸಿದರೂ, ಇದಕ್ಕೆ ಪಿಸಿಬಿ ಒಪ್ಪಿಲ್ಲ. ‘ಟೂರ್ನಿ ಸಂಪೂರ್ಣವಾಗಿ ಪಾಕ್‌ನಲ್ಲಿ ನಡೆಯಬೇಕು. ಯಾವುದೇ ಕಾರಣಕ್ಕೂ ಹೈಬ್ರಿಡ್ ಮಾದರಿಗೆ ಒಪ್ಪಲ್ಲ’ ಎಂದು ಸ್ಪಷ್ಟಪಡಿಸಿದೆ.
undefined
ಚಿನ್ನಸ್ವಾಮಿ ಸ್ಟೇಡಿಯಂ ಖ್ಯಾತಿ ಕುಗ್ಗಿಸಲಿದೆಯೇ ತುಮಕೂರು ಅಂತಾರಾಷ್ಟ್ರೀಯ ಸ್ಟೇಡಿಯಂ!
‘ಇಂದಿನ ಸಭೆ ಮುಕ್ತಾಯಗೊಂಡಿದೆ. ಚಾಂಪಿಯನ್ಸ್ ಟ್ರೋಫಿ ಆಯೋಜನೆಗೆ ಎಲ್ಲಾ ರಾಷ್ಟ್ರಗಳು ಒಗ್ಗಟ್ಟಾಗಿ ಕಾರ್ಯಾಚರಿಸಬೇಕು. ಈ ಹಿನ್ನೆಲೆಯಲ್ಲಿ ಶನಿವಾರವೂ ಸಭೆ ನಡೆಯಲಿದೆ. ಇದು ಮುಂದಿನ ಕೆಲ ದಿನಗಳ ವರೆಗೂ ಮುಂದುವರಿಯುವ ಸಾಧ್ಯತೆಯಿದೆ’ ಎಂದು ಐಸಿಸಿ ಅಧಿಕಾರಿಯೊಬ್ಬರು ಸಭೆ ಬಳಿಕ ಮಾಹಿತಿ ನೀಡಿದ್ದಾರೆ.
ಕೆಲ ದಿನಗಳಿಂದ ದುಬೈನಲ್ಲಿರುವ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಐಸಿಸಿ ಸಭೆಯಲ್ಲಿ ನೇರವಾಗಿ ಪಾಲ್ಗೊಂಡರು. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸೇರಿದಂತೆ ಇತರ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ವರ್ಚುವಲ್ ಆಗಿ ಭಾಗವಹಿಸಿದರು.
ಚಾಂಪಿಯನ್ಸ್ ಟ್ರೋಫಿ ಮುಂದೂಡಿಕೆ ಸಾಧ್ಯತೆ?
ಸದ್ಯ ಬಿಸಿಸಿಐ ಹಾಗೂ ಪಿಸಿಬಿ ಪಟ್ಟು ಸಡಿಲಿಕೆ ಮಾಡುತ್ತಿಲ್ಲ. ಹೀಗಾಗಿ ಐಸಿಸಿ ಟೂರ್ನಿಯನ್ನೇ ಮುಂದೂಡಿಕೆ ಮಾಡುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಲ್ಗೊಳ್ಳುವ 8 ದೇಶಗಳಿಗೆ 2025ರ ಫೆಬ್ರವರಿ-ಮಾರ್ಚ್‌ನಲ್ಲಿ ಮಾತ್ರ ಬಿಡುವು ಇದೆ. ಉಳಿದ ಸಮಯದಲ್ಲಿ ದ್ವಿಪಕ್ಷೀಯ ಸರಣಿಗಳು ನಿಗದಿಯಾಗಿವೆ. ಹೀಗಾಗಿ ಸದ್ಯ ನಿಗದಿಯಾಗಿರುವ ಸಮಯದಲ್ಲೇ ಚಾಂಪಿಯನ್ಸ್ ಟ್ರೋಫಿ ಆಯೋಜಿಸಬೇಕಿದೆ. ಆದರೆ ಟೂರ್ನಿಗೆ ಇನ್ನು 80 ದಿನಗಳು ಮಾತ್ರ ಬಾಕಿಯಿದ್ದು, ಒಂದೆರಡು ದಿನದಲ್ಲೇ ಆತಿಥ್ಯದ ಬಗ್ಗೆ ಐಸಿಸಿ ನಿರ್ಧಾರ ಕೈಗೊಳ್ಳಬೇಕಿದೆ. ಅಲ್ಲದಿದ್ದರೆ ಟೂರ್ನಿ ಅನಿರ್ದಿಷ್ಟಾವಧಿಗೆ ಮುಂದೂಡಕೆಯಾಗಲೂಬಹುದು.
'ಹರಾಜಿನಲ್ಲಿ ನಿರೀಕ್ಷೆಗಿಂತ ಕಡಿಮೆ ಹಣ ಸಿಕ್ತು': ನಿರಾಸೆ ಹೊರಹಾಕಿದ ಕೆಕೆಆರ್ ಸ್ಟಾರ್ ಕ್ರಿಕೆಟಿಗ!
ನಾಳೆಯಿಂದ ಐಸಿಸಿಗೆ ಜಯ್ ಶಾ ಮುಖ್ಯಸ್ಥ!
ಬಿಸಿಸಿಐ ಕಾರ್ಯದರ್ಶಿಯಾಗಿರುವ ಜಯ್ ಶಾ ಡಿ.1ರಿಂದ ಐಸಿಸಿ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಸದ್ಯ ನ್ಯೂಜಿಲೆಂಡ್‌ನ ಕ್ರೆಗ್ ಬಾರ್ಕ್‌ಲೆ ಅಧ್ಯಕ್ಷ ಸ್ಥಾನದಲ್ಲಿದ್ದಾರೆ. ಅವರ ಅವಧಿ ಶನಿವಾರ ಕೊನೆಗೊಳ್ಳಲಿದೆ. ಬಳಿಕ, ಇತ್ತೀಚೆಗಷ್ಟೇ ಮುಖ್ಯಸ್ಥ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿರುವ ಜಯ್ ಶಾ ಅಧಿಕಾರಕ್ಕೇರಲಿದ್ದಾರೆ. ಚಾಂಪಿಯನ್ಸ್ ಟ್ರೋಫಿಯ ಆತಿಥ್ಯ ಬಗ್ಗೆ ಮಹತ್ವದ ಸಭೆ ನಡೆಯುತ್ತಿರುವಾಗಲೇ ಜಯ್ ಶಾ ಮುಖ್ಯಸ್ಥ ಸ್ಥಾನ ಸ್ವೀಕರಿಸುತ್ತಿರುವುದು ಕುತೂಹಲ ಹೆಚ್ಚಿಸಿದೆ.