ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿಗೆ ರಿಂಗರ್ ಲ್ಯಾಕ್ಟೇಟ್ ಸಲ್ಯೂಷನ್ ಕಾರಣವಾಗಿರುವುದು ಕಂಡುಬಂದರೆ ಅದನ್ನು ಪೂರೈಸಿರುವ ಕಂಪನಿಯ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು(ನ.30): ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ನಾಲ್ವರು ಬಾಣಂತಿಯರ ಸಾವಿಗೆ ಗ್ಲುಕೋಸ್ ('ರಿಂಗರ್‌ಲ್ಯಾಕ್ಟೇಟ್ ಸಲ್ಯೂಷನ್') ಕಾರಣವಾಗಿರಬಹುದು ಎನ್ನುವ ಶಂಕೆ ವ್ಯಕ್ತಪಡಿಸಿರುವ ಆರೋಗ್ಯ ಇಲಾಖೆ, ಅದನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದೆ.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿಗೆ ರಿಂಗರ್ ಲ್ಯಾಕ್ಟೇಟ್ ಸಲ್ಯೂಷನ್ ಕಾರಣವಾಗಿರುವುದು ಕಂಡುಬಂದರೆ ಅದನ್ನು ಪೂರೈಸಿರುವ ಕಂಪನಿಯ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸರಣಿ ಬಾಣಂತಿಯರ ಸಾವು 3ಕ್ಕೇರಿಕೆ!
ನಗರದಲ್ಲಿ ಮಾತನಾಡಿದ ಅವರು, ರಾಜೀವ್ ಗಾಂಧಿ ವಿಶ್ವವಿದ್ಯಾಲಯ ತಜ್ಞರ ತಂಡದ ಪರಿಶೀಲನೆಯಲ್ಲಿ ಆಸ್ಪತ್ರೆ ವೈದ್ಯರ ತಂಡದಿಂದ ಲೋಪ ಆಗಿಲ್ಲ ಎನ್ನುವುದು ಗೊತ್ತಾಗಿದೆ. ಆದರೆ, ಚಿಕಿತ್ಸೆಗೆ ಬಳಸಿರುವ ರಿಂಗರ್ ಲ್ಯಾಕ್ಟೇಟ್ ಸಲ್ಯೂಷನ್ ಮೇಲೆ ಶಂಕೆ ಇದೆ. ಅದರ ಗುಣಮಟ್ಟ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಒಂದು ವಾರದಲ್ಲಿ ವರದಿ ಬರುತ್ತದೆ. ದೋಷ ಕಂಡುಬಂದರೆ ಕ್ರಮ ಕೈಗೊಳ್ಳಲಾಗುತ್ತದೆ. ಪ್ರಕರಣವನ್ನು ಮುಚ್ಚಿ ಹಾಕುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಏನಿದು ರಿಂಗರ್ ಔಷಧಿ?, ಬಳ್ಳಾರಿಯಲ್ಲಿ ಏನಾಗಿದೆ?
ಆಪರೇಷನ್ ವೇಳೆ ರೋಗಿಗಳ ದೇಹದಲ್ಲಿ ದ್ರಾವಣದ ಕೊರತೆ ಉಂಟಾದಾಗ ಸರಿಯಾದ ರಕ್ತ ಪರಿಚಲನೆ ಮತ್ತು ರಕ್ತದೊತ್ತಡ ನಿರ್ವಹಣೆಗಾಗಿ ರಿಂಗರ್ ಲ್ಯಾಕ್ಟೇಟ್ ಸಲ್ಯೂಷನ್ ಅರ್ಥಾತ್ ಗ್ಲುಕೋಸ್ ನೀಡಲಾಗುತ್ತದೆ. ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ 3 ದಿನಗಳಲ್ಲಿ ನಡೆದಿರುವ 34 ಸೀಸೇರಿಯನ್ ಆಪರೇಷನ್ ಗಳ ಪೈಕಿ 7 ಆಪರೇಷನ್‌ಗಳಲ್ಲಿ ಸಮಸ್ಯೆ ಉದ್ಭವವಾಗಿದ್ದವು. ಇದರಲ್ಲಿ ಬಾಣಂತಿಯರಿಗೆ ಕಿಡ್ನಿ ಸಮಸ್ಯೆ, ಬಹು ಅಂಗಾಂಗ ವೈಫೈಲಗಳು ಸೇರಿವೆ. ಏಳು ಜನರಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಉಳಿದ ಮೂವರ ಪೈಕಿ ಒಬ್ಬರು ಬಳ್ಳಾರಿ ವಿಮ್ಸ್‌ನಲ್ಲಿ ಚೇತರಿಸಿಕೊಳ್ಳುತ್ತಿದ್ದು, ಉಳಿದಿಬ್ಬರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ನಾಲ್ವರು ಬಾಣಂತಿಯರ ಸಾವಿಗೆ ಸಂಬಂಧಿಸಿ ದಂತೆ ನಡೆಸಿರುವ ಪ್ರಾಥಮಿಕ ತನಿಖೆಯಲ್ಲಿ ಆಸ್ಪತ್ರೆಯ ಲೋಪ ಕಂಡುಬಂದಿಲ್ಲ. ಸ್ವತಂತ್ರ ವಾಗಿ ವಿವರವಾದ ತನಿಖೆಯನ್ನು ಪ್ರತ್ಯೇಕವಾಗಿ ನಡೆಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ಶಿವಕುಮಾರ್ ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ 10 ದಿನದಲ್ಲಿ 5 ಬಾಣಂತಿಯರ ಸಾವಿನ ವರದಿ ಮುಚ್ಚಿಟ್ಟ ಸರ್ಕಾರ; ಆರ್. ಅಶೋಕ್!
ಬೆಂಗಳೂರು: ಬಳ್ಳಾರಿ ಆಸ್ಪತ್ರೆಯಲ್ಲಿ ಹಾಗೂ ಬಿಮ್ಸ್ ಆಸ್ಪತ್ರೆಯಲ್ಲಿ ಹೆರಿಗೆಗೆ ಬಂದಿದ್ದ ಗರ್ಭಿಣಿಯರ ಪೈಕಿ 10 ದಿನಗಳಲ್ಲಿ 5 ಬಾಣಂತಿಯರು ಸಾವನ್ನಪ್ಪಿದ ಬಗ್ಗೆ ತನಿಖಾ ವರದಿಯನ್ನು ರಾಜ್ಯ ಸರ್ಕಾರ ಮರೆಮಾಚಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪ ಮಾಡಿದ್ದರು.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, 'ಬಳ್ಳಾರಿಯ ಜಿಲ್ಲಾಸ್ಪತ್ರೆ ಹಾಗು ಬಿಮ್ಸ್ ಆಸ್ಪತ್ರೆಯಲ್ಲಿ ಕಳೆದ 10 ದಿನಗಳಲ್ಲಿ 5 ಬಾಣಂತಿ ಮಹಿಳೆಯರ ಸಾವಾಗಿದ್ದು, ಈ ಬಗ್ಗೆ ತಜ್ಞರ ತಂಡ ತನಿಖೆ ಮಾಡಿ ನೀಡಿರುವ ವರದಿಯನ್ನ ಕಾಂಗ್ರೆಸ್ ಸರ್ಕಾರ ಗೌಪ್ಯವಾಗಿ ಮುಚ್ಚಿಟ್ಟಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಸರಣಿ ಸಾವಿನ ಬೆನ್ನಲ್ಲೇ, ನವೆಂಬರ್ 16ನೆ ತಾರೀಖಿನಂದು ಖಾಸಗಿ ಕಂಪನಿಯೊಂದು ಸರಬರಾಜು ಮಾಡಿರುವ Ringer Lactate Infusion ಔಷದಿಯನ್ನ ಬಳಕೆ ಮಾಡದಂತೆ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಸುತ್ತೋಲೆ ಹೊರಡಿಸಿದೆ.
ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು; ಹಸುಗೂಸು ಮಗುವಿನೊಂದಿಗೆ ಕುಟುಂಬಸ್ಥರು ಪ್ರತಿಭಟನೆ
ಬಳ್ಳಾರಿಯಲ್ಲಿ ಸಂಭವಿಸಿರುವ ಬಾಣಂತಿಯರ ಸಾವಿಗೂ ಈ ಸುತ್ತೋಲೆಗೂ ಏನಾದರೂ ಸಂಬಂಧವಿದೆಯೇ? ಈ ಕಳಪೆ ಗುಣಮಟ್ಟದ ಔಷಧಿ ಪೂರೈಕೆಗೆ, ಬಳಕೆಗೆ ಹೊಣೆ ಯಾರು? ಸರ್ಕಾರ ವರದಿಯನ್ನ ಮುಚ್ಚಿಡುವ ಮೂಲಕ ಯಾರನ್ನು ರಕ್ಷಿಸುತ್ತಿದೆ? ಇಡೀ ಕರ್ನಾಟಕವೇ ಬೆಚ್ಚಿ ಬೀಳುವ ಇಂತಹ ಆಘಾತಕಾರಿ ಘಟನೆ ನಡೆದಿದ್ದರೂ ಸಿಎಂ ಸಿದ್ದರಾಮಯ್ಯ ಅವರಾಗಲಿ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರಾಗಲಿ ಇದರ ಬಗ್ಗೆ ಕ್ರಮ ಕೈಗೊಳ್ಳುವುದಿರಲಿ, ಕನಿಷ್ಠ ಪಕ್ಷ ಸಂತಾಪ ಕೂಡ ಸೂಚಿಸಿಲ್ಲ. ಇನ್ನು ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್ ಆಹಮದ್ ಖಾನ್ ಅವರು ಈವರೆಗೂ ಜಿಲ್ಲೆಗೆ ಭೇಟಿ ನೀಡುವ ಗೋಜಿಗೂ ಹೋಗಿಲ್ಲ.
ಈ ಪ್ರಕರಣದ ನೈತಿಕೆ ಹೊಣೆ ಹೊತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು ಕೂಡಲೇ ರಾಜೀನಾಮೆ ನೀಡಬೇಕು. ಈ ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರನ್ನ ಒತ್ತಾಯಿಸುತ್ತೇನೆ' ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.