Feb 16, 2023, 6:15 PM IST
ಕೋಲಾರ (ಫೆ.16): ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸೂಕ್ತ ಕ್ಷೇತ್ರದ ಹುಡುಕಾಟವನ್ನು ಮುಗಿಸಿ ಅಂತಿಮವಾಗಿ ಕೋಲಾರ ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, ಇಲ್ಲಿ ಗೆಲುವು ಸಾಧಿಸಲು ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಅವರು ಸಾಥ್ ಕೊಟ್ಟರಷ್ಟೇ ಸಾಧ್ಯವೆಂದು ಗ್ರೌಂಡ್ ರಿಪೋರ್ಟ್ ಹೇಳಿದೆ.
ಈ ಹಿನ್ನೆಲೆಯಲ್ಲಿ ಬೆದರಿದ ಮಾಜಿ ಸಿಎಂ ಸಿದ್ದರಾಮಯ್ಯ ಏಕಾಏಕಿ ಮುನಿಯಪ್ಪ ಅವರ ಮನೆಗೆ ಭೇಟಿ ನೀಡಿ ಮುಖಾಮುಖಿಯಾಗಿ ತಮ್ಮ ಗೆಲುವಿಗೆ ಸಂಪೂರ್ಣ ಸಹಕಾರ ನೀಡುವಂತೆ ಮನವಿ ಮಾಡಿ ಬಂದಿದ್ದಾರೆ. ಆದರೆ, ಈ ಮೊದಲೇ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮದೇ ನಿರಾಯಾಸ ಗೆಲುವು ಎಂದು ನಿರೀಕ್ಷೆ ಮಾಡಿದ್ದ ಸಿದ್ದರಾಮಯ್ಯ ಅವರಿಗೆ ಗೆಲುವು ಸುಲಭದ ತುತ್ತು ಅಲ್ಲ ಎಂದು ಹಲವು ಗ್ರೌಂಡ್ ರಿಪೋರ್ಟ್ಗಳು ಹೇಳಿದ್ದವು. ಇದನ್ನು ಸಾರಾಸಗಟಾಗಿ ನಿರಾಕರಿಸಿದ್ದ ಸಿದ್ದರಾಮಯ್ಯ ಅವರಿಗೆ ಈಗ ತಾವೇ ಮಾಡಿಸಿದ ವರದಿಯಿಂದ ಈ ಸತ್ಯ ತಿಳಿಸಿದೆ. ಈಗ ಕ್ಷೇತ್ರಕ್ಕೆ ದೌಡಾಯಿಸಿ ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದಾರೆ.