
ಮುಂಬೈ: ಗಾಯಕ ಅರ್ಜಿತ್ ಸಿಂಗ್ ಹಾಡು ಕೇಳದವರಿಲ್ಲ. ಅರ್ಜಿತ್ ಸಿಂಗ್ ಹಾಡುಗಳು ಬಹುತೇಕ ನೆಚ್ಚಿನ ಗೀತೆಗಳ ಪಟ್ಟಿಯಲ್ಲಿರುತ್ತವೆ. ರಿಯಾಲಿಟಿ ಶೋದಿಂದ ವೃತ್ತಿ ಜೀವನ ಆರಂಭಿಸಿದ ಅರ್ಜಿತ್ ಸಿಂಗ್ ಬಾಲಿವುಡ್ ಅಂಗಳದ ಬಹುಬೇಡಿಕೆಯ ಗಾಯಕ. ರೊಮ್ಯಾಂಟಿಕ್ ಮೆಲೋಡಿಯುಳ್ಳ ಹಾಡುಗಳಿಗೆ ಅರ್ಜಿತ್ ಸಿಂಗ್ ಮೊದಲ ಆಯ್ಕೆಯಾಗಿರುತ್ತದೆ. ಅಷ್ಟು ಮಾತ್ರವಲ್ಲ ಅರ್ಜಿತ್ ಸಿಂಗ್ ಅವರ ಲೈವ್ ಕನ್ಸರ್ಟ್ ಟಿಕೆಟ್‌ಗಳು ಕ್ಷಣಾರ್ಧದಲ್ಲಿ ಮಾರಾಟವಾಗುತ್ತದೆ. ಲೈವ್ ಕನ್ಸರ್ಟ್‌ಗಳಲ್ಲಿ ಅರ್ಜಿತ್ ಸಿಂಗ್ ಹಾಡಿದ ಹಾಡುಗಳ ವಿಡಿಯೋ ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತವೆ. ಅದರಲ್ಲಿಯೂ ಗಿಟಾರ್ ಹಿಡಿದು ಹಾಡುತ್ತಾ ನಿಂತರೆ ಕೇಳುಗರು ತಮ್ಮನ್ನೇ ತಾವೇ ಮರೆತು ಹೋಗುವಂತೆ ಮೈಮರೆಯುತ್ತಾರೆ.
ಅರ್ಜಿತ್ ತುಂಬಾ ಸಂಕೋಚದವರು, ಮಾತು ಕಡಿಮೆ ಎಂಬುವುದು ಅವರ ಆಪ್ತರು ಹೇಳುವ ಮಾತು. ಹಾಗೆಯೇ ಅರ್ಜಿತ್ ಸಿಂಗ್ ತಮ್ಮ ಖಾಸಗಿ ಜೀವನದ ವಿಷಯಗಳಿಂದಲೂ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಇದೀಗ ಅರ್ಜಿತ್ ಸಿಂಗ್ ಅವರ ಲೈವ್ ಕನ್ಸರ್ಟ್ ವೊಂದರ ವಿಡಿಯೋ ಕ್ಲಿಪ್ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಅರ್ಜಿತ್ ಸಿಂಗ್ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗಾದ್ರೆ ಈ ವಿಡಿಯೋದಲ್ಲಿ ಏನಿದೆ ಗೊತ್ತಾ?
ಲೈವ್ ಕನ್ಸರ್ಟ್ ಅಂದ್ರೆ ವೇದಿಕೆಯ ಮೂರು ಭಾಗದಲ್ಲಿಯೂ ಅಭಿಮಾನಿಗಳು ಸುತ್ತುವರೆದಿರುತ್ತಾರೆ. ವೇದಿಕೆ ಮೇಲೆ ತಮ್ಮ ನೆಚ್ಚಿನ ಗಾಯಕರು ವೇದಿಕೆ ಮೇಲೆ ಬಂದು ಹಾಡು ಹೇಳಲು ಆರಂಭಿಸುತ್ತಿದ್ದಂತೆ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಾರೆ. ಇನ್ನು ಅರ್ಜಿತ್ ಸಿಂಗ್ ಬಂದರಂತೂ ಅಭಿಮಾನಿಗಳ ಹರ್ಷೋದ್ಘಾರ ಹೇಗಿರುತ್ತೆ ಅಂತ ಒಮ್ಮೆ ನೀವೇ ಊಹಿಸಿಕೊಳ್ಳಿ.
ಇದನ್ನೂ ಓದಿ: 1 ಹಿಟ್, 4 ಎವರೇಜ್, 2 ಫ್ಲಾಪ್, 2 ಡಿಜಾಸ್ಟರ್; ಪ್ರೊಡಕ್ಷನ್ ಮಾರಾಟದ ಹಿಂದಿನ ರಹಸ್ಯ ಏನು? ಕರಣ್ ಸಂಕಷ್ಟಕ್ಕೇನು ಕಾರಣ?
ವೈರಲ್ ವಿಡಿಯೋದಲ್ಲಿ ಅರ್ಜಿತ್ ಸಿಂಗ್ ಹಾಡು ಹೇಳುತ್ತಿರೋದನ್ನು ನೀವು ನೋಡಬಹುದು. ಅರ್ಜಿತ್ ಹಾಡು ಹೇಳುತ್ತಿರುವ ಸಂದರ್ಭದಲ್ಲಿ ಮುಂದೆ ನಿಂತಿರುವ ಕೆಲ ಅಭಿಮಾನಿಗಳು ಪಿಜ್ಜಾ ತಿಂದ ಬಾಕ್ಸ್ ಮತ್ತು ಪಾನೀಯದ ಟಿನ್ ವೇದಿಕೆಯ ಅಂಚಿನಲ್ಲಿಡುತ್ತಾರೆ. ಇದನ್ನು ಗಮನಿಸಿದ ಅರ್ಜಿತ್ ಸಿಂಗ್, ಪಿಜ್ಜಾ ಬಾಕ್ಸ್ ಮತ್ತು ಟಿನ್ ಎತ್ತಿಕೊಂಡು ಪಕ್ಕದ ಬದಿಯಲ್ಲಿದ್ದ ತಮ್ಮ ಸಹಾಯಕರಿಗೆ ನೀಡುತ್ತಾರೆ. ಆನಂತರ ವೇದಿಕೆ ನಮಗೆ ದೇವಸ್ಥಾನ. ಹಾಗಾಗಿ ಇಲ್ಲಿ ಕಸ ಇರಿಸೋದು ನನಗೆ ಇಷ್ಟವಾಗಿಲ್ಲ ಎಂದು ಹೇಳಿದ ನಂತರ ಹಾಡನ್ನು ಮಧ್ಯದಲ್ಲಿ ನಿಲ್ಲಿಸಿದ್ದಕ್ಕೆ ಕ್ಷಮೆ ಸಹ ಕೇಳುತ್ತಾರೆ. ನಂತರ ಅರ್ಜಿತ್ ಸಿಂಗ್ ತಮ್ಮ ಹಾಡು ಮುಂದುವರಿಸುತ್ತಾರೆ.
ಅರ್ಜಿತ್ ಈ ರೀತಿ ಹೇಳುತ್ತಿದ್ದಂತೆ ನೆರೆದಿದ್ದ ಅಭಿಮಾನಿಗಳು ಜೋರಾಗಿ ಕೂಗುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಮಿಂಚಿನಂತೆ ಹರಿದಾಡುತ್ತಿದೆ. ವೇದಿಕೆಗೆ ಗೌರವ ನೀಡುತ್ತಿರೋದರಿಂದ ಆ ವೇದಿಕೆ ಇಂದಿಗೂ ನಿಮ್ಮನ್ನು ಉಳಿಸಿಕೊಂಡಿದೆ ಎಂದು ನೆಟ್ಟಿಗರು ಕಮೆಂಟ್ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಿಮ್ಮ ಸರಳತೆಗೆ ನಮ್ಮ ಸಲಾಂ, ಸೂಪರ್, ನೀವು ನನ್ನ ನೆಚ್ಚಿನ ಗಾಯಕ ಎಂದು ನೂರಾರು ಕಮೆಂಟ್‌ಗಳು ವಿಡಿಯೋಗೆ ಬಂದಿವೆ.
ಇದನ್ನೂ ಓದಿ: ಹಾಡು ಕೇಳುತ್ತಲೆ ಭಾವುಕಳಾದ ಅಭಿಮಾನಿಗೆ ಕಣ್ಣೀರು ಒರೆಸಿ ನಗಲು ಸೂಚಿಸಿದ ಗಾಯಕ ಅರ್ಜಿತ್ ಸಿಂಗ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.