ವಿರುದ್ಧವಾಗಿರುವ ಜನಾಭಿಪ್ರಾಯ ಮತಗಳಾಗಿ ಪರಿವರ್ತನೆಗೊಂಡರೆ ಮೂರು ಕ್ಷೇತ್ರಗಳಲ್ಲಿ ಆಡಳಿತ ಪಕ್ಷ ಸೋಲಬೇಕು, ನೋಡೋಣ. ಹಣ ಬಲ, ಅಧಿಕಾರ ಬಲ, ಕಾಂಗ್ರೆಸ್ ಪಾರ್ಟಿ ಜೊತೆಗೆ ಇದೆ. ಎನ್‌ಡಿಎ ಜೊತೆ ಇರೋದು ಜನಬಲ ಮಾತ್ರ: ಮಾಜಿ ಸಚಿವ ಹಾಗೂ ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ
ಹಾಸನ(ನ.01): ಜನಾಭಿಪ್ರಾಯ ಸಾರ್ವತ್ರಿಕವಾಗಿ ಈ ಸರ್ಕಾರದ ಪರ ಇಲ್ಲ. ಆಳುವ ಕಾಂಗ್ರೆಸ್ ಸರ್ಕಾರದ ಪರ ಇಲ್ಲ. ಪಂಚ ಗ್ಯಾರಂಟಿಗಳು ಪಂಚರ್ ಆಗಿಬಿಟ್ಟಿವೆ. ಜನರಿಗೆ ಚುನಾವಣೆ ಪೂರ್ವದಲ್ಲಿ ಕೊಟ್ಟ ಪಂಚ ಗ್ಯಾರಂಟಿ ಭರವಸೆಗಳು ತಲುಪುತ್ತಿಲ್ಲ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಮೂರು ಕ್ಷೇತ್ರಗಳ ಉಪಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಶುಕ್ರವಾರ) ಹಾಸನಾಂಬೆ ದೇವಿ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿ.ಟಿ.ರವಿ, ನಿರುದ್ಯೋಗಿ ಯುವಕರಿಗೆ ಮೂರು ಸಾವಿರ ಕೊಡ್ತಿನಿ ಅಂದ್ರು, ಇವತ್ತಿನವರೆಗೂ ಮೂರು ಸಾವಿರ ಬರಲಿಲ್ಲ, ಮೂರು ನಾಮ ಹಾಕಿದ್ರು. ಎಲ್ಲೂ, ಯಾವ ನಿರುದ್ಯೋಗಿ ಯುವಕರಿಗೂ ತಲುಪಿಲ್ಲ. ಪ್ರತಿ ಕುಟುಂಬಕ್ಕೆ ಎರಡು ಸಾವಿರ ಪ್ರತಿ ತಿಂಗಳು ಬರುತ್ತೆ ಅಂದ್ರು, ಎರಡು ತಿಂಗಳು ಕ್ರಮಬದ್ಧವಾಗಿಲ್ಲ. ಆ ನೆಪದಲ್ಲಿ ಬಿಪಿಎಲ್ ಕಾರ್ಡ್ ರದ್ದು ಪಡಿಸುವ ಕೆಲಸ ವ್ಯವಸ್ಥಿತ ರೂಪದಲ್ಲಿ ನಡೆದಿದೆ. ನನಗೆ ಇರುವ ಮಾಹಿತಿ ಪ್ರಕಾರ 20 ರಿಂದ 25 ಲಕ್ಷ ಬಿಪಿಎಲ್ ಕಾರ್ಡ್ ರದ್ದುಪಡಿಸುವ ಯೋಜನೆ ಮಾಡಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ಕರ್ನಾಟಕದಲ್ಲಿ ಲ್ಯಾಂಡ್ ಜಿಹಾದ್ ಜಾರಿ ಮಾಡಿದ ಸಚಿವ ಜಮೀರ್ ಅಹ್ಮದ್: ಸಿ.ಟಿ.ರವಿ
200 ಯೂನಿಟ್‌ವರೆಗೂ ವಿದ್ಯುತ್ ಫ್ರೀ ಅಂದ್ರು. ಈಗ 12 ಯೂನಿಟ್ ಬಳಕೆ ಮಾಡುತ್ತಿದ್ದವನು 20 ಯೂನಿಟ್ ಬಳಕೆ ಮಾಡಿದ್ರೆ ಡಬಲ್ ಬಿಲ್ ಬರುತ್ತೆ. ಫ್ರೀ ಎಲ್ಲಿ, ಎಲ್ಲಿ ಫ್ರೀ ಇದೆ. ಶಕ್ತಿ ಯೋಜನೆ ಬಗ್ಗೆ ಉಪಮುಖ್ಯಮಂತ್ರಿಗಳೇ ನಿಶ್ಯಕ್ತವಾಗಿದೆ ಅಂತ ವಾದವನ್ನು ಮುಂದಿಟ್ಟಿದ್ದಾರೆ. ಶಕ್ತಿ ಯೋಜನೆ ನೆಪದಲ್ಲಿ ಇದ್ದ ರೂಟ್‌ಗಳನ್ನು ಕಡಿತಗೊಳಿಸಿದ್ದಾರೆ. 10 ಕೆಜಿ ಅಕ್ಕಿ ಎಂದರು ಎಲ್ಲೂ ಹತ್ತು ಕೆಜಿ ಅಕ್ಕಿ ಕೊಡಲಿಲ್ಲ. ಅಕ್ಕಿ ಬದಲಿಗೆ ಹಣ ಕೊಡ್ತಿವಿ ಅಂದ್ರು ಆ ಹಣವೂ ತಲುಪುತ್ತಿಲ್ಲ. ಇದು ಪಂಚ ಗ್ಯಾರೆಂಟಿಗಳು ಪಂಚರ್ ಆಗಿರುವುದಕ್ಕೆ ನಿದರ್ಶನ. ಅವರದ್ದೇ ಪಕ್ಷದ ಶಾಸಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಮಂತ್ರಿಗಳು ಅಸಹನೆಯನ್ನು ತೋಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ವಿರುದ್ಧವಾಗಿರುವ ಜನಾಭಿಪ್ರಾಯ ಮತಗಳಾಗಿ ಪರಿವರ್ತನೆಗೊಂಡರೆ ಮೂರು ಕ್ಷೇತ್ರಗಳಲ್ಲಿ ಆಡಳಿತ ಪಕ್ಷ ಸೋಲಬೇಕು, ನೋಡೋಣ. ಹಣ ಬಲ, ಅಧಿಕಾರ ಬಲ, ಕಾಂಗ್ರೆಸ್ ಪಾರ್ಟಿ ಜೊತೆಗೆ ಇದೆ. ಎನ್‌ಡಿಎ ಜೊತೆ ಇರೋದು ಜನಬಲ ಮಾತ್ರ. ನನಗೆ ವಿಶ್ವಾಸವಿದೆ ಎಷ್ಟೋ ಸರಿ ಉಪಚುನಾವಣೆ ನಡೆದಾಗ ಹಣ, ಅಧಿಕಾರ ಬಲ ಸೋತಿದೆ. ಇಲ್ಲೂ ಅಧಿಕಾರ, ಹಣದ ಬಲ ಸೋಲಬೇಕು. ಸೋಲುತ್ತೆ ಎನ್ನುವ ವಿಶ್ವಾಸವಿದೆ ನೋಡೋಣ ಎಂದಿದ್ದಾರೆ.