Aug 29, 2021, 9:34 PM IST
ಕಾರವಾರ(ಆ. 29) ರಾಜ್ಯದ ಕರಾವಳಿಯನ್ನು ಉತ್ತರಕರ್ನಾಟಕ ಭಾಗಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲಿ ಕುಮಟಾ-ಶಿರಸಿ ಹೆದ್ದಾರಿಯೂ ಒಂದು. ಈ ಹೆದ್ದಾರಿಯನ್ನು ಚತುಷ್ಪಥಕ್ಕೇರಿಸುವ ನಿಟ್ಟಿನಲ್ಲಿ ಕಳೆದೊಂದು ವರ್ಷದಿಂದ ಪ್ರಾರಂಭಿಸಲಾದ ಅಗಲೀಕರಣ ಕಾಮಗಾರಿ ಇನ್ನೂ ಕೂಡಾ ಪ್ರಗತಿಯಲ್ಲಿದೆ. ಆದ್ರೆ, ಕಳೆದ ತಿಂಗಳು ಕಾಣಿಸಿಕೊಂಡಿದ್ದ ನೆರೆ ನಡುವೆಯೂ ಭಾರೀ ಸರಕು ಸಾಗಣೆ ಲಾರಿಗಳು ಇಲ್ಲಿ ಸಂಚರಿಸಿದ್ದ ಪರಿಣಾಮ ರಸ್ತೆಯ ಸ್ಥಿತಿ ಹದಗೆಟ್ಟಿದೆ. ಇದರಿಂದಾಗಿ ಲಘುವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸಲು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ..
ಒಂದೆಡೆ ಎಲ್ಲೆಂದರಲ್ಲಿ ಅಗೆದು ಹಾಕಿರುವ ರಸ್ತೆ, ಇನ್ನೊಂದೆಡೆ ಹೊಂಡ-ಗುಂಡಿಯಿಂದ ತುಂಬಿರುವ ಹೆದ್ದಾರಿಯಲ್ಲೇ ಎರ್ರಾಬಿರ್ರಿಯಾಗಿ ಸಾಗುತ್ತಿರುವ ಬಸ್ ಚಾಲಕರು. ಮತ್ತೊಂದೆಡೆ ಇಂತಹ ರಸ್ತೆಯಲ್ಲಿ ಎಲ್ಲಿ ಏನಾಗುತ್ತೋ ಅನ್ನೋ ಆತಂಕದಲ್ಲಿ ಆಮೆನಡಿಗೆಯಲ್ಲಿ ಸಾಗುತ್ತಿರುವ ಕಾರುಗಳು. ಇಂತಹ ಸ್ಥಿತಿ ಕಂಡುಬಂದಿರೋದು ಉತ್ತರಕನ್ನಡ ಜಿಲ್ಲೆಯ ಕುಮಟಾ-ಶಿರಸಿ ನಡುವಿನ ರಾಜ್ಯ ಹೆದ್ದಾರಿ 69ರಲ್ಲಿ. ರಾಜ್ಯದ ಕರಾವಳಿ ಭಾಗವನ್ನು ಉತ್ತರಕರ್ನಾಟಕ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲಿ ಕುಮಟಾ ಶಿರಸಿ ರಾಜ್ಯ ಹೆದ್ದಾರಿ ಕೂಡಾ ಒಂದು.
ಭಾರೀ ಗೊಂದಲಕ್ಕೆ ಕಾರಣವಾದ ಗೋವಾ ನಿಯಮ
ಅದರಲ್ಲೂ ಭಾರೀ ಮಳೆಯಿಂದಾಗಿ ಜಿಲ್ಲೆಯ ಅರಬೈಲ್ ಹಾಗೂ ಅಣಶಿ ಘಟ್ಟದಲ್ಲಿ ಗುಡ್ಡ ಕುಸಿತ ಉಂಟಾದ ಸಂದರ್ಭದಲ್ಲಿ ಈ ರಸ್ತೆಯೊಂದೇ ಸಂಪರ್ಕ ಕೊಂಡಿಯಾಗಿತ್ತು. ಬೇರೆ ಮಾರ್ಗವಿಲ್ಲದ ಕಾರಣದಿಂದಾಗಿ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದ ದೇವಿಮನೆ ಘಟ್ಟ ರಸ್ತೆಯಲ್ಲಿಯೇ ಭಾರೀ ವಾಹನಗಳು ಸಂಚಾರ ನಡೆಸಿದ್ದವು. ಆದ್ರೆ, ಕಾಮಗಾರಿಗಾಗಿ ರಸ್ತೆಯನ್ನು ಕಿತ್ತು ಹಾಕಲಾಗಿದ್ದು, ಮಳೆಯೂ ಕೂಡಾ ಹೆಚ್ಚಾಗಿದ್ದರಿಂದ ರಸ್ತೆಯ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಇದರಿಂದಾಗಿ ಸಣ್ಣ ವಾಹನಗಳು ಓಡಾಡುವುದೇ ಅಸಾಧ್ಯ ಎನ್ನುವಂತಾಗಿತ್ತು. ಇದೀಗ ಭಾರೀ ವಾಹನಗಳನ್ನು ಈ ಹೆದ್ದಾರಿಯಲ್ಲಿ ನಿಷೇಧಿಸಲಾಗಿದೆಯಾದ್ರೂ ಕಾರು, ಬೈಕ್‌ನಂತಹ ಲಘು ವಾಹನಗಳು ಹರಸಾಹಸಪಟ್ಟುಕೊಂಡು ಓಡಾಡಬೇಕಾದ ಸ್ಥಿತಿ ಇದೀಗ ನಿರ್ಮಾಣವಾಗಿದೆ.
ಇನ್ನು ಈ ದೇವಿಮನೆ ಘಟ್ಟದ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ. ಶಿರಸಿ ಭಾಗದಿಂದ ಕುಮಟಾ, ಭಟ್ಕಳ, ಮಂಗಳೂರು, ಧರ್ಮಸ್ಥಳ ಭಾಗಗಳಿಗೆ ಸಾರಿಗೆ ಬಸ್‌ಗಳು ಕೂಡಾ ಇದೇ ಹೆದ್ದಾರಿಯಲ್ಲಿ ಸಂಚರಿಸುತ್ತವೆ. ಅಲ್ಲದೇ, ಕರಾವಳಿ ಭಾಗದಿಂದ ಹುಬ್ಬಳ್ಳಿ, ದಾವಣಗೆರೆ, ಬೆಳಗಾವಿ, ಶಿವಮೊಗ್ಗ, ಬೆಂಗಳೂರು ಭಾಗಗಳಿಗೆ ಸಂಚರಿಸಲು ಕೂಡಾ ಇದು ಪ್ರಮುಖ ಮಾರ್ಗವಾಗಿದೆ. ಆದ್ರೆ, ಕಳೆದೊಂದು ವರ್ಷದಿಂದ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಕುಮಟಾ ಶಿರಸಿ ನಡುವಿನ 60 ಕಿಲೋ ಮೀಟರ್ ಮಾರ್ಗದ ಸುಮಾರು 20 ಕಿಲೋ ಮೀಟರ್ ರಸ್ತೆಯನ್ನು ಅಗಲೀಕರಣಕ್ಕಾಗಿ ತೆರವುಗೊಳಿಸಲಾಗಿದೆ. ಹೀಗಾಗಿ ರಸ್ತೆಯ ಮೇಲೆ ಕಲ್ಲು, ಮಣ್ಣು ಹಾಕಲಾಗಿದ್ದು, ಲಘು ವಾಹನಗಳು ಸಂಚರಿಸಲು ತೊಂದರೆ ಅನುಭವಿಸುವಂತಾಗಿದೆ. ಇನ್ನು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಕೇಳಿದ್ರೆ, ಅರಬೈಲ್ ಘಟ್ಟದಲ್ಲಿ ಸದ್ಯ ಸರಕುಸಾಗಣೆ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಮಳೆ ಕಡಿಮೆಯಾದ ಬಳಿಕ ಘಟ್ಟಪ್ರದೇಶದ ರಿಪೇರಿಕಾರ್ಯ ಪೂರ್ಣಗೊಳ್ಳಲಿದೆ. ತದನಂತರ ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ತಿಳಿಸಿದ್ದಾರೆ.