ಮೃತರ ಆಧಾರ್‌, ಪ್ಯಾನ್‌ ಕಾರ್ಡ್‌, ಪಾಸ್‌ಪೋರ್ಟ್‌, ವೋಟರ್‌ ಐಡಿ ದಾಖಲೆಗಳನ್ನು ಏನು ಮಾಡಬೇಕು?

First Published | Nov 28, 2024, 3:56 PM IST

ಆಧಾರ್‌, ಪ್ಯಾನ್‌, ಪಾಸ್‌ಪೋರ್ಟ್‌, ವೋಟರ್‌ ಐಡಿ, ಡ್ರೈವಿಂಗ್‌ ಲೈಸೆನ್ಸ್‌ನಂತಹ ಮಹತ್ವದ ದಾಖಲೆಗಳನ್ನು ಕುಟುಂಬದ ಸದಸ್ಯರ ಸಾವಿನ ನಂತರ ಏನು ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ಈ ಲೇಖನ ಒದಗಿಸುತ್ತದೆ. ಪ್ರತಿಯೊಂದು ದಾಖಲೆಗೂ ನಿರ್ದಿಷ್ಟ ಕಾರ್ಯವಿಧಾನಗಳಿದ್ದು, ಅವುಗಳನ್ನು ಇಲ್ಲಿ ವಿವರಿಸಲಾಗಿದೆ.

ಆಧಾರ್‌ ಕಾರ್ಡ್‌, ಪ್ಯಾನ್‌ ಕಾರ್ಡ್‌, ಪಾಸ್‌ಪೋರ್ಟ್‌ ಹಾಗೂ ವೋಟರ್‌ ಐಡಿ ದೇಶದಲ್ಲಿ ಪ್ರತಿ ವ್ಯಕ್ತಿಗಳ ಬಳಿಯಲ್ಲಿ ಇರಬಹುದಾದದ ಹಾಗೂ ಇರಬೇಕಾದ ಮಹತ್ವದ ದಾಖಲೆಗಳು. ಇದರಲ್ಲಿ ಎಲ್ಲರೂ ಎಲ್ಲವನ್ನೂ ಹೊಂದಿಲ್ಲವಾದರೂ, ಪ್ರತಿಯೊಬ್ಬರೂ ಇದರಲ್ಲಿ ಒಂದು ಐಡಿಯನ್ನಾದರೂ ಹೊಂದಿರುತ್ತಾರೆ.
 

ಭಾರತ ಸರ್ಕಾರದ ಅಧಿಕೃತ ದಾಖಲೆಗಳಿವು. ಆದರೆ, ಕುಟುಂಬದರ ಸಾವಿನ ಬಳಿಕ ಈ ಅಧಿಕೃತ ದಾಖಲೆಗಳನ್ನು ಏನು ಮಾಡಬೇಕು ಅನ್ನೋದರ ಬಗ್ಗೆ ಎಲ್ಲರಲ್ಲೂ ಗೊಂದಲವಿರುತ್ತದೆ. ಅದರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. 

Latest Videos


ಕುಟುಂಬ ಸದಸ್ಯರ ಸಾವಿನ ಬಳಿಕ ಈ ದಾಖಲೆಗಳನ್ನು ಏನು ಮಾಡಬೇಕು ಅನ್ನೋದರ ಬಗ್ಗೆ ನಿಯಮವಿದೆ.ಆದರೆ, ಈ ದಾಖಲೆಗಳನ್ನು ಉಳಿಸಿಕೊಳ್ಳಬೇಕೇ ಅಥವಾ ನಾಶ ಮಾಡಬೇಕೇ ಎನ್ನುವುದರ ಬಗ್ಗೆ ಸಾರ್ವತ್ರಿಕ ಎನಿಸುವಂಥ ನಿಯಮಗಳಿಲ್ಲ. ಅದರೆ ಅವುಗಳಿಗೆ ಅವುಗಳದೇ ಆದ ಕಾರ್ಯವಿಧಾನಗಳಿವೆ.

ಆಧಾರ್‌ ಕಾರ್ಡ್‌: ಸಾಮಾನ್ಯವಾಗಿ ಗುರುತು ಹಾಗೂ ವಿಳಾಸದ ಪುರಾವೆಯಾಗಿ ಇದನ್ನು ಬಳಸುತ್ತಾರೆ. ಆದರೆ, ಇದರಲ್ಲಿ ಮೃತವ್ಯಕ್ತಿಯ ಕಾರ್ಡ್‌ಅನ್ನು ರದ್ದು ಮಾಡುವ, ನಿಷ್ಕ್ರೀಯ ಮಾಡುವ ಯಾವುದೇ ಆಯ್ಕೆಯಿಲ್ಲ. ಜನನ ಹಾಗೂ ಮರಣವನ್ನು ನೋಂದಾಯಿಸಲು ಆಧಾರ್‌ ಕಡ್ಡಾಯವೂ ಅಲ್ಲ. ಕುಟುಂಬ ಸದಸ್ಯರು ಸಾವಿಗೀಡಾದ ಬಳಿಕ ಅವರ ವಾರಸುದಾರರು, ಆಧಾರ್‌ ವೆಬ್‌ಸೈಟ್‌ಗೆ ಭೇಟಿ ನೀಡಿ ಅವರ ಬಯೋಮೆಟ್ರಿಕ್‌ಗಳನ್ನು ಲಾಕ್‌ ಮಾಡಿ ಆಧಾರ್‌ ದುರ್ಬಳಕೆ ಆಗಂದತೆ ತಡೆಯಬಹುದು.
 

ಪ್ಯಾನ್‌ ಕಾರ್ಡ್‌: ದೇಶದ ಆದಾಯ ತೆರಿಗೆ ಇಲಾಖೆಯ ಪ್ರಮುಖ ದಾಖಲೆ ಇದು. ಕುಟುಂಬದವರು ಸಾವು ಕಂಡಾಗ ನೀವು ಇದನ್ನು ಸರೆಂಡರ್‌ ಮಾಡಬಹುದು. ಇದಕ್ಕಾಗಿ ಪ್ಯಾನ್‌ಅನ್ನು ನೋಂದಣಿ ಮಾಡಿದ ಅಧಿಕಾರ ವ್ಯಾಪ್ತಿಯಲ್ಲಿರುವ ಮೌಲ್ಯಮಾಪನ ಅಧಿಕಾರಿಗೆ ಪತ್ರ ಬರೆದು ಈ ಕಾರ್ಡ್‌ಅನ್ನು ಸರೆಂಡರ್‌ ಮಾಡಬಹುದು.
 

ವೋಟರ್‌ ಐಡಿ: 1960ರ ಮತದಾರರ ನೋಂದಣಿ ನಿಯಮಗಳು-ರದ್ದತಿ ಪ್ರಕ್ರಿಯೆ ಅಡಿ ವೃತ ವ್ಯಕ್ತಿಯ ಐಡಿಯನ್ನು ರದ್ದು ಮಾಡಬಹುದು. ಸ್ಥಳೀಯ ಚುನಾವಣಾ ಕಚೇರಿಗೆ ಭೇಟಿ ನೀಡಿ, ಚುನಾವಣಾ ನಿಯಮಗಳ ಅಡಿಯಲ್ಲಿರುವ ಫಾರ್ಮ್‌ 7 ಅನ್ನು ಸಲ್ಲಿಕೆ ಮಾಡಬೇಕು. ಅದರೊಂದಿಗೆ ಮರಣ ಪ್ರಮಾಣಪತ್ರವನ್ನೂ ನೀಡಬೇಕು. ಆ ಬಳಿಕ ಮತದಾರರ ಪಟ್ಟಿಯಿಂದ ಮೃತ ವ್ಯಕ್ತಿಯ ಹೆಸರನ್ನು ತೆಗೆದುಹಾಕಲಾಗುತ್ತದೆ.
 

ಪಾಸ್‌ಪೋರ್ಟ್: ವ್ಯಕ್ತಿಯ ಮರಣದ ನಂತರ ಇದನ್ನು ಅಮಾನ್ಯಗೊಳಿಸುವ ಅಥವಾ ಸರೆಂಡರ್‌ ಮಾಡುವ ಅಗತ್ಯವಿಲ್ಲ. ಪಾಸ್‌ಪೋರ್ಟ್‌ಗೆ ಮಾನ್ಯ ಅವಧಿಗಳು ಇರಲಿದ್ದು, ಆ ವರ್ಷಗಳು ಮುಗಿದ ಬಳಿಕ ಇದು ಅಮಾನ್ಯವಾಗುತ್ತದೆ. ಆದರೂ ಕೆಲವೊಮ್ಮೆ ಇಂಥ ಪಾಸ್‌ಪೋರ್ಟ್‌ಗಳು ಪರಿಶೀಲನೆಯಂಥ ಅನಿರೀಕ್ಷಿತ ಉದ್ದೇಶಗಳಿಗೆ ದಾಖಲೆಯ ರೀತಿಯಲ್ಲೂ ಕೆಲಸ ಮಾಡುತ್ತದೆ.
 

ಡ್ರೈವಿಂಗ್‌ ಲೈಸೆನ್ಸ್‌: ಪ್ರತಿ ರಾಜ್ಯದಲ್ಲೂ ಇದಕ್ಕೆ ಭಿನ್ನ ನಿಯಮಗಳಿವೆ. ಇದಕ್ಕಾಗಿ ಪ್ರಾದೇಶಿಕ ಸಾರಿಗೆ ಕಚೇರಿಗೆ ಭೇಟಿ ನೀಡಬೇಕು. ಕಾನೂನು ವಾರಸುದಾರರು ಆರ್‌ಟಿಒಗೆ ಭೇಟಿ ನೀಡುವ ಮೂಲಕ ಸತ್ತವರ ಹೆಸರಿನಲ್ಲಿ ಇರುವ ವಾಹನಗಳ ಮಾಲೀಕತ್ವವನ್ನು ವರ್ಗಾವಣೆ ಮಾಡಿಸಿಕೊಳ್ಳಲು ಅವಕಾಶವಿದೆ.
 

click me!